ಸೋಮವಾರ, ಮಾರ್ಚ್ 1, 2021
31 °C
ಕ್ರಿಕೆಟ್: ಇಂದು ಐದನೇ ಏಕದಿನ, ಆತಿಥೇಯರಿಗೆ ‘ಕ್ಲೀನ್‌ ಸ್ವೀಪ್‌’ ಆಸೆ

ಮೊದಲ ಗೆಲುವಿಗೆ ಕೊನೆಯ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊದಲ ಗೆಲುವಿಗೆ ಕೊನೆಯ ಅವಕಾಶ

ಸಿಡ್ನಿ (ಪಿಟಿಐ/ಐಎಎನ್‌ಎಸ್‌): ಸರಣಿ ಗೆಲುವಿನ ಕನಸು ಕಮರಿ ಹೋಗಿದೆ. ಕನಿಷ್ಠ ಒಂದು ಪಂದ್ಯದಲ್ಲಿ ಜಯ ಪಡೆಯುವ ಆಸೆಯಾದರೂ ಈಡೇರಿಸಿಕೊಳ್ಳಬೇಕು ಎಂದು ಭಾರತ ತಂಡ ಕಾಯುತ್ತಿದೆ. ಇದಕ್ಕಾಗಿ ಶನಿವಾರ ವೇದಿಕೆ ಸಿದ್ಧಗೊಂಡಿದೆ.



ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಭಾರತ ತಂಡ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ ಎದುರು ಸರಣಿ ಗೆಲುವಿನ ಆಸೆ ಹೊತ್ತು ಇಲ್ಲಿಗೆ ಬಂದಿತ್ತು. ಆದರೆ ಕಾಡಿದ್ದು ಬರೀ ನಿರಾಸೆ. ಆರಂಭದ ನಾಲ್ಕೂ ಪಂದ್ಯಗಳಲ್ಲಿ ದೋನಿ ಪಡೆ ಸೋತಿತ್ತು.  ಬೌಲಿಂಗ್‌ ವಿಭಾಗದ ದೌರ್ಬಲ್ಯ ಇದಕ್ಕೆ ಕಾರಣವಾಗಿತ್ತು. 



ಮೊದಲ ಎರಡು ಪಂದ್ಯಗಳಲ್ಲಿ ಭಾರತ ಕ್ರಮವಾಗಿ 309 ಮತ್ತು 308 ರನ್‌ಗಳನ್ನು ಗಳಿಸಿತ್ತು. ಮೂರನೇ ಪಂದ್ಯದಲ್ಲಿ 295 ರನ್ ಕಲೆ ಹಾಕಿಯೂ ಸೋತಿತ್ತು. ಕ್ಯಾನ್‌ಬೆರಾದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಸವಾಲಿನ ಗುರಿ ಬೆನ್ನು ಹತ್ತಿ ಮುಗ್ಗರಿಸಿತ್ತು.



ಸ್ಟೀವನ್‌ ಸ್ಮಿತ್‌ ನಾಯಕತ್ವದ ಆತಿಥೇಯ ತಂಡ ನೀಡಿದ್ದ 349 ರನ್‌ ಗುರಿಯನ್ನು ಮುಟ್ಟುವ ಹಾದಿಯಲ್ಲಿ ಎಡವಿದ್ದ ಭಾರತ 323 ರನ್‌ಗೆ ಆಲೌಟ್‌ ಆಗಿತ್ತು. ಶಿಖರ್‌ ಧವನ್‌ ಮತ್ತು ಉಪನಾಯಕ ವಿರಾಟ್‌ ಕೊಹ್ಲಿ ಗಳಿಸಿದ್ದ ಶತಕಗಳೂ ವ್ಯರ್ಥವಾಗಿದ್ದವು. ಆದ್ದರಿಂದ ಐದನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿಯಾದರೂ ಭಾರತಕ್ಕೆ ಮೊದಲ ಗೆಲುವು ಒಲಿಯುವುದೇ ಎನ್ನುವ ಕುತೂಹಲವಿದೆ.



ಬೌಲರ್‌ಗಳ ಕೈಯಲ್ಲಿ ಗೆಲುವು: ಮೊದಲ ಮೂರು ಪಂದ್ಯಗಳಲ್ಲಿ ಭಾರತ ತಂಡ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೆ ಅನನುಭವಿಗಳ ದುರ್ಬಲ ಬೌಲಿಂಗ್‌ ಪದೇ ಪದೇ ಸೋಲಿಗೆ ಕಾರಣವಾಗುತ್ತಿದೆ. ವೇಗಿಗಳಾದ ಉಮೇಶ್‌ ಯಾದವ್, ಭುವನೇಶ್ವರ್‌ ಕುಮಾರ್‌, ಇಶಾಂತ್‌ ಶರ್ಮಾ ಮತ್ತು ರಿಷಿ ಧವನ್‌ ಬಲಿಷ್ಠ ಬ್ಯಾಟಿಂಗ್‌ ಹೊಂದಿರುವ ಆಸ್ಟ್ರೇಲಿಯಾವನ್ನು ಕಟ್ಟಿ ಹಾಕುವಲ್ಲಿ ವಿಫಲರಾಗಿದ್ದಾರೆ.



ನಾಲ್ಕನೇ ಪಂದ್ಯಗಳಿಂದ ಈ ನಾಲ್ವರು ವೇಗಿಗಳು ಸೇರಿ 37 ಓವರ್‌ಗಳಲ್ಲಿ 266 ರನ್‌ ನೀಡಿದ್ದರು. ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ ಮತ್ತು ಗುರುಕೀರತ್‌ ಸಿಂಗ್‌ ಮಾನ್‌ ಅವರ ಬೌಲಿಂಗ್ ಕೂಡ ಬಿಗುವಾಗಿರಲಿಲ್ಲ.



ವೇದಿಕೆ: ವಿಶ್ವ ಟ್ವೆಂಟಿ–20 ಟೂರ್ನಿಗೆ ಸಿದ್ಧಗೊಳ್ಳುವ ನಿಟ್ಟಿನಲ್ಲಿ ಮುಂದಿನ ವಾರ ಆರಂಭವಾಗಲಿರುವ ಮೂರು ಪಂದ್ಯಗಳ ಟ್ವೆಂಟಿ–20 ಸರಣಿ ಭಾರತದ ಪಾಲಿಗೆ ಮಹತ್ವದ್ದೆನಿಸಿದೆ. ಈ ಸರಣಿಯ ಬಳಿಕ ದೋನಿ ಪಡೆ ಶ್ರೀಲಂಕಾ ಎದುರು ಟ್ವೆಂಟಿ–20 ಸರಣಿ ಆಡಲಿದೆ. ನಂತರ ಬಾಂಗ್ಲಾದೇಶದಲ್ಲಿ ಚುಟುಕು ಕ್ರಿಕೆಟ್‌ನ ಏಷ್ಯಾ ಕಪ್‌ ಜರುಗಲಿದೆ.



ಕ್ಲೀನ್‌ ಸ್ವೀಪ್‌ನತ್ತ ಚಿತ್ತ: ಸರಣಿ ಜಯದ ಜೊತೆಗೆ ಸತತ 18 ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಈಗ ‘ಕ್ಲೀನ್ ಸ್ವೀಪ್‌’ನತ್ತ ಕಣ್ಣು ಇಟ್ಟಿದೆ.

ಈ ತಂಡದ ಬೌಲರ್‌ಗಳು ಕೂಡ ಬಿಗುವಿನ ದಾಳಿ ನಡೆಸಿಲ್ಲ. ಆದರೆ ಬ್ಯಾಟ್ಸ್‌ಮನ್‌ಗಳು ಭಾರತಕ್ಕೆ ಗೆಲುವಿನ ಅವಕಾಶವನ್ನೇ ಕೊಟ್ಟಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌, ಆ್ಯರನ್ ಫಿಂಚ್‌, ನಾಯಕ ಸ್ಮಿತ್‌, ಗ್ಲೆನ್ ಮ್ಯಾಕ್ಸ್‌ವೆಲ್‌ ಉತ್ತಮ ಲಯದಲ್ಲಿದ್ದಾರೆ. ಆದ್ದರಿಂದ ಆಸ್ಟ್ರೇಲಿಯಾದಲ್ಲಿ ಉಭಯ ತಂಡಗಳ ನಡುವೆ ನಡೆಯುತ್ತಿರುವ ಚೊಚ್ಚಲ ದ್ವಿಪಕ್ಷೀಯ ಸರಣಿಯ ಕೊನೆಯ ಪಂದ್ಯ ಭಾರತದ ಬೌಲರ್‌ಗಳಿಗೆ  ಸತ್ವಪರೀಕ್ಷೆಯೆನಿಸಿದೆ.



ವದಂತಿ: ಈ ಸರಣಿಯ ಬಳಿಕ ದೋನಿ ಏಕದಿನ ಮಾದರಿಗೆ ವಿದಾಯ ಹೇಳಲಿದ್ದಾರೆ ಎನ್ನುವ ವದಂತಿ ಹಬ್ಬಿದೆ. ಆದ್ದರಿಂದ ದೋನಿ ಮನದಲ್ಲಿ  ಅಡಗಿರುವ ಗುಟ್ಟು ಕೂಡ ಕುತೂಹಲಕ್ಕೆ ಕಾರಣವಾಗಿದೆ.



ತಂಡ ಇಂತಿದೆ: ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ/ವಿಕೆಟ್‌ ಕೀಪರ್), ಶಿಖರ್‌ ಧವನ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಅಜಿಂಕ್ಯ ರಹಾನೆ, ಗುರುಕೀರತ್‌ ಸಿಂಗ್‌ ಮಾನ್‌, ಮನೀಷ್‌ ಪಾಂಡೆ, ಆರ್‌. ಅಶ್ವಿನ್‌, ರವೀಂದ್ರ ಜಡೇಜ, ಇಶಾಂತ್‌ ಶರ್ಮಾ, ಉಮೇಶ್‌ ಯಾದವ್‌, ಬರೀಂದರ್ ಸ್ರಾನ್‌, ಭುವನೇಶ್ವರ್‌ ಕುಮಾರ್‌, ಅಕ್ಷರ್‌ ಪಟೇಲ್‌ ಮತ್ತು ರಿಷಿ ಧವನ್‌.



ಆಸ್ಟ್ರೇಲಿಯಾ:  ಸ್ಟೀವನ್‌ ಸ್ಮಿತ್‌ (ನಾಯಕ), ಆ್ಯರನ್ ಫಿಂಚ್‌, ಡೇವಿಡ್‌ ವಾರ್ನರ್‌,  ಜಾರ್ಜ್‌ ಬೇಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಿಷೆಲ್‌ ಮಾರ್ಷ್‌, ಮ್ಯಾಥ್ಯೂ ವೇಡ್‌ (ವಿಕೆಟ್‌ ಕೀಪರ್‌),  ಜೇಮ್ಸ್‌ ಫಾಕ್ನರ್‌,  ಜೇಮ್ಸ್ ಫಾಕ್ನರ್‌, ಜಾನ್‌ ಹಾಸ್ಟಿಂಗ್ಸ್‌, ಸ್ಕಾಟ್‌ ಬೊಲಾಂಡ್‌,  ಕೇನ್‌ ರಿಚರ್ಡ್‌ಸನ್‌ , ನಥಾನ್‌ ಲಿಯೊನ್‌ ಮತ್ತು ಶಾನ್‌ ಮಾರ್ಷ್‌.



***

ಸೋತರೆ ವಿಶ್ವ ರ‍್ಯಾಂಕಿಂಗ್‌ ಕುಸಿತ

ಭಾರತ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಈಗ ಎರಡನೇ ಸ್ಥಾನದಲ್ಲಿದೆ. ಒಂದು ವೇಳೆ ಶನಿವಾರದ ಪಂದ್ಯದಲ್ಲಿ ಸೋತರೆ ಮೂರನೇ ಸ್ಥಾನಕ್ಕೆ  ಕುಸಿಯಲಿದೆ. ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ರೇಟಿಂಗ್‌ ಪಾಯಿಂಟ್ಸ್ ಹೆಚ್ಚಿಸಿಕೊಳ್ಳಲಿದೆ.



ಮೊದಲ ನಾಲ್ಕೂ ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದೇವೆ. ಕೊನೆಯ ಪಂದ್ಯದಲ್ಲೂ ಗೆದ್ದು ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಗುರಿ ನಮ್ಮದು.

- ಸ್ಟೀವನ್‌ ಸ್ಮಿತ್‌,


ಆಸ್ಟ್ರೇಲಿಯಾ ತಂಡದ ನಾಯಕ

*

ಹಿಂದಿನ ಪಂದ್ಯಗಳಲ್ಲಿ ಸೋತ ಮಾತ್ರಕ್ಕೆ ಮಾನಸಿಕವಾಗಿ ಕುಗ್ಗಿಲ್ಲ. ಮುಂದಿನ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಪಡೆಯುತ್ತೇವೆ.

- ವಿರಾಟ್‌ ಕೊಹ್ಲಿ,


ಭಾರತ ತಂಡದ ಉಪನಾಯಕ

*

ಪಂದ್ಯ ಆರಂಭ: ಬೆಳಿಗ್ಗೆ 8.50 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.