ಮಂಗಳವಾರ, ನವೆಂಬರ್ 19, 2019
29 °C

ಮೊದಲ ಜಯದ ಕನವರಿಕೆ

Published:
Updated:

ಕೋಲ್ಕತ್ತ (ಪಿಟಿಐ/ಐಎಎನ್‌ಎಸ್): ಮೊದಲ ಪಂದ್ಯದಿಂದಲೇ ಗೆಲುವಿನ ಯಾತ್ರೆ ಆರಂಭಿಸಬೇಕು ಎನ್ನುವುದು ಕೋಲ್ಕತ್ತ ನೈಟ್ ರೈಡರ್ಸ್‌ನ ಗುರಿ. ಆದರೆ, ಗಾಯಗೊಂಡಿರುವ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ `ಯುವಪಡೆ'ಯನ್ನು ಕಟ್ಟಿಕೊಂಡು ಹಾಲಿ ಚಾಂಪಿಯನ್ನರಿಗೆ ಸೋಲುಣಿಸಬೇಕು ಎಂಬುದು ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಲೆಕ್ಕಾಚಾರ.ಐಪಿಎಲ್ ಆರನೇ ಆವೃತ್ತಿಯ ಉಭಯ ತಂಡಗಳ ನಡುವಿನ ಮೊದಲ ಹಣಾಹಣಿಗೆ `ಸಿಟಿ ಆಫ್ ಜಾಯ್' ಖ್ಯಾತಿಯ ಕೋಲ್ಕತ್ತ ನಗರ ಸಾಕ್ಷಿಯಾಲಿದೆ. ಈ ಪಂದ್ಯ ಬುಧವಾರ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ರಾತ್ರಿ 8 ಗಂಟೆಗೆ ನಡೆಯಲಿದೆ. ಅನುಭವಿಗಳ ಹೆಚ್ಚಿನ ಬಲವಿಲ್ಲದಿದ್ದರೂ, ಗೆಲುವಿನ ಖುಷಿ ಅನುಭವಿಸುವ ಗುರಿ ಮಾಹೇಲ ಜಯವರ್ಧನೆ ನೇತೃತ್ವದ ಡೆವಿಲ್ಸ್ ತಂಡದ್ದಾಗಿದೆ. ಕೆವಿನ್ ಪೀಟರ್ಸನ್, ಅಲ್ಬೆ ಮಾರ್ಕೆಲ್ ಹಾಗೂ ಜೆಸ್ಸಿ ರೈಡರ್ ಅವರಂತಹ ಅನುಭವಿ ಆಟಗಾರರಿಲ್ಲದೇ ಡೆಲ್ಲಿ ತಂಡ ಪರಡಾಡುತ್ತಿದೆ.ಇದೆಲ್ಲದರ ನಡುವೆಯೂ ವೀರೇಂದ್ರ ಸೆಹ್ವಾಗ್ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಇದು ತಂಡದ ಹಿನ್ನೆಡೆಗೆ ಪ್ರಮುಖ ಕಾರಣ. `ಸೆಹ್ವಾಗ್‌ಗೆ ಬೆನ್ನು ನೋವು ಹೆಚ್ಚಾಗಿದೆ. ಆದ್ದರಿಂದ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಆಡುವುದು ಖಚಿತವಾಗಿಲ್ಲ' ಎಂದು ಡೆವಿಲ್ಸ್ ತಂಡದ ಕೋಚ್ ಎರಿಕ್ ಸಿಮೊನ್ಸ್ ಹೇಳಿದ್ದಾರೆ. ಸ್ಪೋಟಕ ಬ್ಯಾಟ್ಸ್‌ಮನ್ ಆಡದೇ ಹೋದರೆ ಡೆಲ್ಲಿಗೆ ಮತ್ತೊಂದು ಪೆಟ್ಟು ತಪ್ಪಿದ್ದಲ್ಲ.ದಕ್ಷಿಣ ಆಫ್ರಿಕಾದ ದೇಶಿಯ ಟೂರ್ನಿಯಲ್ಲಿ ಆಡುತ್ತಿರುವ ಅಲ್ಬೆ ಮಾರ್ಕೆಲ್ ಕೂಡಾ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹಿಮ್ಮಡಿಯ ನೋವಿನಿಂದ ಬಳಲುತ್ತಿರುವ ಕಾರಣ ಇಂಗ್ಲೆಂಡ್‌ನ ಕೆವಿನ್ ಪೀಟರ್ಸನ್ ಹಾಗೂ ಹಲ್ಲೆಗೊಳಗಾಗಿ ಚೇತರಿಸಿಕೊಳ್ಳತ್ತಿರುವ ನ್ಯೂಜಿಲೆಂಡ್‌ನ ಜೆಸ್ಸಿ ರೈಡರ್ ಸಹ ತಂಡದಲ್ಲಿ ಇಲ್ಲದಿರುವುದು ಡೆಲ್ಲಿ ತಂಡದ ಸಂಕಷ್ಟ ಹೆಚ್ಚಿಸಿದೆ.ಅನುಭವಿ ಆಟಗಾರರ ಅನುಪಸ್ಥಿತಿ ಎದುರಾಳಿಗೆ ಲಾಭವಾಗುವ ಸಾಧ್ಯತೆಯಿದೆ. `ಗೌತಿ' ಪಡೆಗೆ ತವರು ನೆಲದ ಕ್ರಿಕೆಟ್ ಪ್ರಿಯರ ಬೆಂಬಲವೂ ಲಭಿಸಲಿದೆ. ಆದರೂ, ಯುವ ಪಡೆಯ ಸಾಮರ್ಥ್ಯದಿಂದಲೇ ಮೊದಲ ಪಂದ್ಯದಲ್ಲಿ ಗೆಲುವು ಪಡೆಯಬೇಕು ಎಂದು ಜಯವರ್ಧನೆ `ರಣತಂತ್ರ' ರೂಪಿಸುತ್ತಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಉನ್ಮುಕ್ತ್ ಚಾಂದ್ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಆ್ಯಂಡ್ರೆ ರಸೆಲ್ ಡೆಲ್ಲಿ ಗೆಲುವಿನ ಬಲ ತುಂಬವಂತಹ ಆಟವಾಡಬೇಕಿದೆ.ಈ ತಂಡ ಬೌಲಿಂಗ್‌ನಲ್ಲಿ ಬಲಿಷ್ಠವಾಗಿದ್ದು, ಆಶಿಶ್ ನೆಹ್ರಾ, ಉಮೇಶ್ ಯಾದವ್ ಹಾಗೂ ಇರ್ಫಾನ್ ಪಠಾಣ್ ಅವರನ್ನು ಒಳಗೊಂಡಿದೆ. ಉಮೇಶ್ ಹಾಗೂ ಇರ್ಫಾನ್ ಗಾಯದಿಂದ ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದಾರೆ. ಡೆಲ್ಲಿ ತಂಡ ಶಾರುಖ್ ಖಾನ್ ಮಾಲೀಕತ್ವದ ನೈಟ್ ರೈಡರ್ಸ್ ಎದುರು ಹೇಗೆ ಪ್ರದರ್ಶನ ನೀಡುತ್ತದೆ ಎನ್ನುವುದೇ ಈಗ ಕುತೂಹಲ. ಕಳೆದ ಆವೃತ್ತಿಯ ಲೀಗ್ ಪಾಯಿಂಟ್ ಪಟ್ಟಿಯಲ್ಲಿ ಡೆಲ್ಲಿ ಅಗ್ರಸ್ಥಾನ ಪಡೆದಿದ್ದರೆ, ಕೋಲ್ಕತ್ತ ಎರಡನೇ ಸ್ಥಾನದಲ್ಲಿತ್ತು.2010 ಹಾಗೂ 2011ರ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಕಳೆದ ವರ್ಷ ಟ್ರೋಫಿ ಎತ್ತಿ ಹಿಡಿದ ನೈಟ್ ರೈಡರ್ಸ್ ಈ ಸಲವೂ ಪ್ರಶಸ್ತಿಯನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ಗುರಿ ಹೊಂದಿದೆ.

ಇಂದಿನ ಪಂದ್ಯ

ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಡೇರ್‌ಡೆವಿಲ್ಸ್ಸ್ಥಳ: ಈಡನ್ ಗಾರ್ಡನ್ಸ್ (ಕೋಲ್ಕತ್ತ)

ಆರಂಭ: ರಾತ್ರಿ 8 ಗಂಟೆಗೆ

ನೇರ ಪ್ರಸಾರ: ಸೆಟ್‌ಮ್ಯಾಕ್ಸ್ಕೋಲ್ಕತ್ತ ನೈಟ್ ರೈಡರ್ಸ್: ಗೌತಮ್ ಗಂಭೀರ್ (ನಾಯಕ), ಬ್ರಾಡ್ ಹಡಿನ್, ಬ್ರೆಟ್ ಲೀ, ದೇಬಬ್ರತಾ ದಾಸ್, ಎಯೊನ್ ಮಾರ್ಗನ್, ಇಕ್ಬಾಲ್ ಅಬ್ದುಲ್ಲಾ, ಜಾಕ್ ಕಾಲಿಸ್, ಜೇಮ್ಸ ಪ್ಯಾಟಿನ್ಸನ್, ಲಕ್ಷ್ಮಿಪತಿ ಬಾಲಾಜಿ, ಲಕ್ಷ್ಮಿ ರತನ್ ಶುಕ್ಲಾ, ಮನೋಜ್ ತಿವಾರಿ, ಮನ್ವಿಂದರ್ ಬಿಸ್ಲಾ, ಶಮಿ ಅಹ್ಮದ್, ಪ್ರದೀಪ್ ಸಂಗ್ವಾನ್, ರಜತ್ ಭಾಟಿಯಾ, ರ‍್ಯಾನ್ ಮೆಕ್‌ಲಾರೆನ್, ರ‍್ಯಾನ್ ಟೆನ್ ಡಾಶೆಟ್, ಸಚಿತ್ರಾ ಸೇನಾನಾಯಕೆ, ಸರಬ್ಜಿತ್ ಲಡ್ಡಾ, ಸುನಿಲ್ ನಾರಾಯಣ ಮತ್ತು ಯೂಸುಫ್ ಪಠಾಣ್ 

ದೆಹಲಿ ಡೇರ್‌ಡೆವಿಲ್ಸ್: ಮಾಹೇಲ ಜಯವರ್ಧನೆ (ನಾಯಕ), ಅಜಿತ್ ಅಗರ್‌ಕರ್,  ವೀರೇಂದ್ರ ಸೆಹ್ವಾಗ್, ಆ್ಯಂಡ್ರೆ ರಸೆಲ್, ಆಶಿಶ್ ನೆಹ್ರಾ, ಸಿ.ಎಂ. ಗೌತಮ್, ಡೇವಿಡ್ ವಾರ್ನರ್, ಗುಲಾಮ್ ಬೋದಿ, ಇರ್ಫಾನ್ ಪಠಾಣ್, ಜೀವನ್ ಮೆಂಡಿಸ್, ಜೊಹಾನ್ ಬೋಥಾ, ಕೇದಾರ್ ಜಾಧವ್, ಮನ್‌ಪ್ರೀತ್ ಜುನೆಜಾ, ನಮನ್ ಓಜಾ, ಪವನ್ ನೇಗಿ, ರೆಲೋಫ್ ವಾನ್ ಡೆರ್ ಮೆರ್ವ್, ಸಿದ್ಧಾರ್ಥ ಕೌಲ್, ಸುಜಿತ್ ನಾಯಕ್, ಶಾಬಾಜ್ ನದೀಮ್, ಉಮೇಶ್ ಯಾದವ್, ಉನ್ಮುಕ್ತ್ ಚಾಂದ್, ವೇಣುಗೋಪಾಲ ರಾವ್ ಮತ್ತು ಯೋಗೇಶ್ ನಗರ್.

ಪ್ರತಿಕ್ರಿಯಿಸಿ (+)