ಮೊದಲ ದಿನವೇ ದಂತಭಗ್ನ

7

ಮೊದಲ ದಿನವೇ ದಂತಭಗ್ನ

Published:
Updated:
ಮೊದಲ ದಿನವೇ ದಂತಭಗ್ನ

ಬೆಂಗಳೂರು: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಜಗದೀಶ ಶೆಟ್ಟರ್ ಮತ್ತು ಆರ್.ಅಶೋಕ ಸೇರಿದಂತೆ ಅವರ ಬಣದ ಎಲ್ಲ ಶಾಸಕರು ಗೈರುಹಾಜರಾಗುವ ಮೂಲಕ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.ಇದು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದರ ಸಂಕೇತವಾಗಿದ್ದು, ಗೌಡರು ಗುರುವಾರ ಎರಡು ಬಾರಿ ಶೆಟ್ಟರ್ ಬಣವನ್ನು ಮನವೊಲಿಸಲು ಪ್ರಯತ್ನಿಸಿದರೂ ಅದು ಫಲ ನೀಡಿಲ್ಲ.ಹೀಗಾಗಿ ಅವರೊಬ್ಬರೇ ಪ್ರಮಾಣ ವಚನ ಸ್ವೀಕರಿಸಿದ್ದು, ಸಚಿವರು ಯಾರಾಗಬೇಕು? ಯಾವ ಬಣಕ್ಕೆ ಎಷ್ಟು ಸಚಿವ ಸ್ಥಾನ ಎಂಬುದು ಇನ್ನೂ ಅಂತಿಮವಾಗಿಲ್ಲ. ಈ ಕುರಿತು ಸಹಮತ ಮೂಡಿದ ನಂತರ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.`ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲ ಸಚಿವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆದರಿಕೆ ಹಾಕಿದ್ದಾರೆ. ಇದು ನಮ್ಮ ಬಣದ ಅಸಮಾಧಾನ ಹೆಚ್ಚಾಗಲು ಕಾರಣ~ ಎಂದು ಶೆಟ್ಟರ್ ಹೇಳಿದ್ದಾರೆ.ಭಿನ್ನರ ಬಣದ ಶಾಸಕರು ಶೆಟ್ಟರ್ ಮನೆಯಲ್ಲಿ ಉಪಾಹಾರ ಸಭೆಯಲ್ಲಿ ಭಾಗವಹಿಸಿರುವ ವಿಚಾರ ತಿಳಿದು ಸದಾನಂದ ಅವರೇ ನೇರವಾಗಿ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದರು. `ಯಡಿಯೂರಪ್ಪ ಅವರ ನಿರ್ದೇಶನದಂತೆ ಅಧಿಕಾರ ನಡೆಸುವುದಾದರೆ ನಾವ್ಯಾರೂ ಬರುವುದಿಲ್ಲ. ಅವರ ಮನೆಯಲ್ಲಿ ಸಭೆ ಕರೆದರೆ ಭಾಗವಹಿಸುವುದಿಲ್ಲ~ ಎಂದು ತಿಳಿಸಿದ್ದಾರೆ.ಇದರ ನಂತರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ಮನೆಯಲ್ಲೂ ಒಂದು ಸುತ್ತಿನ ಮಾತುಕತೆ ನಡೆದಿದೆ. ಅಲ್ಲಿ ಶೆಟ್ಟರ್, ಅಶೋಕ, ಬಾಲಚಂದ್ರ ಜಾರಕಿಹೊಳಿ ಭಾಗವಹಿಸಿದ್ದರು.`ನಮ್ಮ ಬಣಕ್ಕೆ ಎಷ್ಟು ಸಚಿವ ಸ್ಥಾನ ನೀಡುತ್ತೀರಿ? ಯಾವ ಖಾತೆಗಳು ಎನ್ನುವುದು ಮೊದಲೇ ನಿರ್ಧಾರವಾಗಬೇಕು. ಅಲ್ಲಿಯವರೆಗೂ ಸಂಪುಟ ಸೇರುವ ಪ್ರಶ್ನೆಯೇ ಇಲ್ಲ~ ಎಂಬ ಸಂದೇಶವನ್ನು ಭಿನ್ನರು ಮುಖ್ಯಮಂತ್ರಿಗೆ ನೀಡಿದ್ದಾರೆ ಎಂದು ಗೊತ್ತಾಗಿದೆ.`ಮೊದಲು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬನ್ನಿ. ನಂತರ ಚರ್ಚೆ ಮೂಲಕ ಎಲ್ಲವನ್ನೂ ಬಗೆಹರಿಸಿಕೊಳ್ಳೋಣ~ ಎಂದು ಗೌಡರು ಮನವಿ ಮಾಡಿದರೂ ಯಾವ ಪ್ರಯೋಜನವೂ ಆಗಿಲ್ಲ.`ಯಡಿಯೂರಪ್ಪ ಬಣದವರು ಮುಖ್ಯಮಂತ್ರಿ ಆಗಿರುವುದರಿಂದ ನಮ್ಮ ಬಣಕ್ಕೆ ಸಚಿವ ಸ್ಥಾನಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ನೀಡಬೇಕು. ಪ್ರಮುಖ ಖಾತೆಗಳು ಎರಡೂ ಬಣಕ್ಕೆ ಸಮವಾಗಿ ಹಂಚಿಕೆಯಾಗಬೇಕು.ನಮ್ಮ ಕಡೆ 57 ಮಂದಿ ಶಾಸಕರಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಇಲ್ಲದಿದ್ದರೆ ನಮ್ಮ ಕಡೆಯಿಂದ ಯಾರೂ ಸಂಪುಟ ಸೇರುವುದಿಲ್ಲ~ ಎಂದು ಶೆಟ್ಟರ್ ಬಣ ಹೇಳಿದೆ ಎಂದು ತಿಳಿದುಬಂದಿದೆ.

 

ಈಶ್ವರಪ್ಪ ಸಲಹೆ: ಈಶ್ವರಪ್ಪ ಅವರು ತಲಾ ನಾಲ್ವರನ್ನು ಎರಡೂ ಬಣಗಳಿಂದ ಸಂಪುಟಕ್ಕೆ ಸೇರಿಸಿಕೊಳ್ಳಿ ಎನ್ನುವ ಸಲಹೆ ನೀಡಿದರು. ಯಡಿಯೂರಪ್ಪ ಬಣದಿಂದ ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ, ಡಾ.ವಿ.ಎಸ್.ಆಚಾರ್ಯ ಮತ್ತು ಸಿ.ಎಚ್.ವಿಜಯಶಂಕರ್ ಹಾಗೂ ಶೆಟ್ಟರ್ ಬಣದಿಂದ ಶೆಟ್ಟರ್ ಅಲ್ಲದೆ, ಆರ್.ಅಶೋಕ, ಗೋವಿಂದ ಕಾರಜೋಳ ಮತ್ತು ಬಾಲಚಂದ್ರ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಈಶ್ವರಪ್ಪ ಸೂಚಿಸಿದ್ದರು.ಇದಕ್ಕೆ ಯಡಿಯೂರಪ್ಪ ಒಪ್ಪಲಿಲ್ಲ. ಬದಲಿಗೆ, ಉದಾಸಿ, ಉಮೇಶ ಕತ್ತಿ, ಮುರುಗೇಶ ನಿರಾಣಿ ಅವರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಪಟ್ಟುಹಿಡಿದರು. ಇದಕ್ಕೆ ವಿರೋಧಿ ಬಣದ ಮುಖಂಡರು ಒಪ್ಪಲಿಲ್ಲ. ಮಾತುಕತೆ ನಂತರ ಹೆಚ್ಚಿನ ಶಾಸಕರನ್ನು ಸಂಪುಟಕ್ಕೆ ತೆಗೆದುಕೊಳ್ಳೋಣ. ಮೊದಲು 8 ಮಂದಿ ಸಾಕು ಎಂದರೂ ಕೇಳಲಿಲ್ಲ. ಹೀಗಾಗಿ ಯಾರೂ ಬೇಡ ಎನ್ನುವ ತೀರ್ಮಾನಕ್ಕೆ ಬರಲಾಯಿತು ಎನ್ನಲಾಗಿದೆ.

ಎರಡು ಬಣ: ಪಕ್ಷ ಹೀಗೆ ಎರಡು ಬಣವಾಗಿ ಹೋಳಾಗಿರುವುದು ವರಿಷ್ಠರನ್ನು ಚಿಂತೆಗೀಡು ಮಾಡಿದೆ. ಸಮಾನ ಅವಕಾಶಗಳಿಗಾಗಿ ಭಿನ್ನರಿಂದ ಒತ್ತಡ ಹೆಚ್ಚಿದೆ.ವರಿಷ್ಠರು ಮಧ್ಯಪ್ರವೇಶ: ಸಂಪುಟ ರಚನೆಯ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ವರಿಷ್ಠರು ಮಧ್ಯಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗಿದೆ.ಕೋರ್ ಕಮಿಟಿ:
ಎರಡೂ ಬಣಗಳ ಪ್ರಮುಖರನ್ನು ಒಳಗೊಂಡ ಪ್ರಮುಖರ ಸಮಿತಿಯನ್ನು ಹೊಸದಾಗಿ ರಚಿಸಬೇಕು. ಯಾವುದೇ ಹೊಸ ತೀರ್ಮಾನ ತೆಗೆದುಕೊಳ್ಳುವುದಕ್ಕೂ ಮುನ್ನ ಈ ಸಮಿತಿಯಲ್ಲಿ ಚರ್ಚೆಯಾಗಬೇಕು ಎಂದೂ ಶೆಟ್ಟರ್ ಬಣ ಷರತ್ತು ಹಾಕಿದೆ.

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry