ಬುಧವಾರ, ನವೆಂಬರ್ 13, 2019
23 °C

ಮೊದಲ ಪಟ್ಟಿಗೆ ಮೋಕ್ಷ

Published:
Updated:

ನವದೆಹಲಿ: ವಿಧಾನಸಭೆ ಟಿಕೆಟ್ ಆಕಾಂಕ್ಷಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ಕಾಂಗ್ರೆಸ್ ಶುಕ್ರವಾರ 177 ಅಭ್ಯರ್ಥಿಗಳ ಮತ್ತು ಆಡಳಿತಾರೂಢ ಬಿಜೆಪಿ 140 ಅಭ್ಯರ್ಥಿಗಳನ್ನು ಒಳಗೊಂಡ ಮೊದಲ ಪಟ್ಟಿ ಬಿಡುಗಡೆ ಮಾಡಿವೆ. ಕಗ್ಗಂಟಾಗಿರುವ 47 ಕ್ಷೇತ್ರಗಳ ಹೆಸರನ್ನು ಅಂತಿಮಗೊಳಿಸಲು ಸೋನಿಯಾ ಗಾಂಧಿ ಬಳಗಕ್ಕೆ ಇನ್ನೂ ಸಾಧ್ಯವಾಗಿಲ್ಲ. ಜೆಡಿಎಸ್ 122 ಕ್ಷೇತ್ರಗಳಿಗೆ ಪಟ್ಟಿ ಬಿಡುಗಡೆ ಮಾಡಿದೆ.ರಾಜ್ಯದ ಈ ಮೂರು ಪಕ್ಷಗಳೂ ಒಂದೇ ದಿನ ಪಟ್ಟಿ ಬಿಡುಗಡೆ ಮಾಡಿರುವುದು ಕಾಕತಾಳೀಯ ಇರಲಾರದು. ದೆಹಲಿಯಲ್ಲಿ ಶುಕ್ರವಾರ ಸೇರಿದ್ದ ಬಿಜೆಪಿ ಚುನಾವಣಾ ಸಮಿತಿ 140 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ, ಎಐಸಿಸಿ ಕಚೇರಿ ಪೈಪೋಟಿಗೆ ಬಿದ್ದಂತೆ 177 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತು. ಇದಕ್ಕೂ ಮೊದಲೇ ಜೆಡಿಎಸ್ ತನ್ನ ಅಭ್ಯರ್ಥಿಗಳ ಹೆಸರು ಘೋಷಿಸಿತು.ನಿರೀಕ್ಷೆಯಂತೆ ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೀಶ್ವರ್ ಸೇರಿದಂತೆ `ಆಪರೇಷನ್ ಕಮಲ' ಕಾರ್ಯಾಚರಣೆಗೆ ಬಲಿಯಾದ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಲಾಗಿದೆ. ಆದರೆ, ವಿಧಾನಸಭೆಯಿಂದ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪಕ್ಕೆ ಒಳಗಾಗಿರುವ ಶಾಸಕರು ಮತ್ತು ಕಳೆದ ಚುನಾವಣೆಯಲ್ಲಿ 20 ಸಾವಿರಕ್ಕಿಂತ ಹೆಚ್ಚು ಮತಗಳ ಅಂತರದಿಂದ ಸೋತ ಕೆಲವರಿಗೆ ಪುನಃ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಚುನಾವಣಾ ಸಮಿತಿ ಇಂಥವರಿಗೆ ಟಿಕೆಟ್ ನೀಡಬಾರದು ಎನ್ನುವ ಮಹತ್ವದ ತೀರ್ಮಾನ ಮಾಡಿತ್ತು. ಆದರೆ, ಅಡ್ಡ ಮತದಾನದಲ್ಲಿ ಭಾಗಿಯಾದವರಿಗೆ `ಕ್ಷಮಾದಾನ' ನೀಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ಗುರುವಾರ ಖಚಿತಪಡಿಸಿದ್ದವು.ಬಿಜೆಪಿ ಪಟ್ಟಿಯಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ (ಹುಬ್ಬಳ್ಳಿ ಧಾರವಾಡ ಸೆಂಟ್ರಲ್) ಉಪ ಮುಖ್ಯಮಂತ್ರಿಗಳಾಗಿರುವ ಕೆ.ಎಸ್. ಈಶ್ವರಪ್ಪ (ಶಿವಮೊಗ್ಗ), ಆರ್. ಅಶೋಕ (ಪದ್ಮನಾಭನಗರ) ಹೆಸರಿದೆ.  ಬಿಜೆಪಿಯಲ್ಲೇ ಉಳಿಯಬೇಕೇ ಅಥವಾ ಕೆಜೆಪಿಗೆ ಹೋಗಬೇಕೇ ಎನ್ನುವ ಗೊಂದಲದಲ್ಲಿದ್ದ ಸಚಿವರಾದ ಮುರುಗೇಶ ನಿರಾಣಿ ಅವರಿಗೆ ಬೀಳಗಿ ಮತ್ತು ಉಮೇಶ ಕತ್ತಿ ಅವರಿಗೆ ಹುಕ್ಕೇರಿಯಿಂದ ಟಿಕೆಟ್ ಕೊಡಲಾಗಿದೆ.ಬಿಜೆಪಿ ಮೊದಲ ಪಟ್ಟಿಯಲ್ಲಿ ಇಲ್ಲದ ಕಟ್ಟಾ: ಆದರೆ, ಬೆಂಗಳೂರಿನ ವಿಜಯನಗರ, ಗೋವಿಂದರಾಜನಗರ ಮತ್ತು ಹೆಬ್ಬಾಳ ಸೇರಿದಂತೆ ಕೆಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಅಂತಿಮಗೊಳಿಸಿಲ್ಲ. ಮೊದಲ ಎರಡರ ಪೈಕಿ ಯಾವುದಾದರೂ ಒಂದರಲ್ಲಿ ಸಚಿವ ವಿ. ಸೋಮಣ್ಣ ಕಣಕ್ಕಿಳಿಯಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಭೂಹಗರಣದಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು (ಹೆಬ್ಬಾಳ) ಅವರ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲ.ಬಿಎಸ್‌ವೈ ನಿಷ್ಠರಿಗೆ ಟಿಕೆಟ್: ಕೃಷ್ಣಯ್ಯ ಶೆಟ್ಟಿ ಪ್ರತಿನಿಧಿಸುತ್ತಿರುವ ಮಾಲೂರು ಕ್ಷೇತ್ರಕ್ಕೂ ಹೆಸರು ಪ್ರಕಟಿಸಿಲ್ಲ. ಬಿ.ಎಸ್.ಯಡಿಯೂರಪ್ಪ ನಿಷ್ಠ ಬಣದ ಬಹುಪಾಲು ಸಚಿವರಿಗೆ ಟಿಕೆಟ್ ದೊರೆತಿದೆ. ಹುಬ್ಬಳ್ಳಿ- ಧಾರವಾಡ ಪಶ್ಚಿಮದಿಂದ ಹಿರಿಯ ರಾಜಕಾರಣಿ ಚಂದ್ರಕಾಂತ ಬೆಲ್ಲದ ಅವರ ಪುತ್ರ ಅರವಿಂದ ಬೆಲ್ಲದ ಅವರಿಗೆ ಅವಕಾಶ ನೀಡಲಾಗಿದೆ.ರಘುಪತಿ ಭಟ್‌ಗೆ ಕಂಟಕವಾದ ಸಿ.ಡಿ: ಅಕ್ರಮ ಗಣಿಗಾರಿಕೆ ಆರೋಪಕ್ಕೆ ಒಳಗಾಗಿ ಜೈಲು ಸೇರಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಸೋದರ ಕರುಣಾಕರ ರೆಡ್ಡಿ ಪುನಃ ಹರಪನಹಳ್ಳಿಯಿಂದ ಬಿಜೆಪಿ ಅಭ್ಯರ್ಥಿ. ಉಡುಪಿಯಿಂದ `ಅಶ್ಲೀಲ ಸಿಡಿ ಹಗರಣ'ದ ವಿವಾದದಲ್ಲಿ ಸಿಕ್ಕಿರುವ ಶಾಸಕ ರಘುಪತಿ ಭಟ್ ಅವರನ್ನು ಕೈಬಿಟ್ಟು ಸುಧಾಕರ ಶೆಟ್ಟಿ ಅವರನ್ನು ಸ್ಪರ್ಧೆಗಿಳಿಸಲಾಗುತ್ತಿದೆ.ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಕೆ. ರೆಹಮಾನ್ ಖಾನ್, ಕೆ.ಎಚ್. ಮುನಿಯಪ್ಪ ಅವರ ಮಕ್ಕಳು ಟಿಕೆಟ್ ಬಯಸಿರುವ ಚಿತ್ತಾಪುರ, ಜಯನಗರ ಮತ್ತು ಕೆಜಿಎಫ್ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿಲ್ಲ. ಮೂರು ಕ್ಷೇತ್ರಗಳಿಂದ ಕ್ರಮವಾಗಿ ಪ್ರಿಯಾಂಕ ಖರ್ಗೆ, ರೂಪಾ ಶಶಿಧರ್ ಹಾಗೂ ಮನ್ಸೂರ್ ಅಲಿಖಾನ್ ಸ್ಪರ್ಧೆ ಬಯಸಿದ್ದಾರೆ. ಸಚಿವರ ಮಕ್ಕಳಿಗೆ ಟಿಕೆಟ್ ಕೊಡಬಾರದೆಂದು ಹೈಕಮಾಂಡ್ ನಿಲುವು ಕೈಗೊಂಡಿದ್ದು, ವಿದೇಶದಲ್ಲಿರುವ ಸೋನಿಯಾ ಅವರು ವಾಪಸು ಬಂದ ಬಳಿಕ ಈ ಮೂವರ ಭವಿಷ್ಯ ತೀರ್ಮಾನವಾಗಲಿದೆ.ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ಅಜಯ್‌ಸಿಂಗ್ ಟಿಕೆಟ್ ಕೇಳಿರುವ ಜೇವರ್ಗಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅವರ ಸೋದರ ಬಿ.ಕೆ. ಶಿವರಾಂ ಸ್ಪರ್ಧೆ ಬಯಸಿರುವ ಮಲ್ಲೇಶ್ವರ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿಲ್ಲ. ಹಿರಿಯ ಕಾಂಗ್ರೆಸ್ ನಾಯಕರಾದ ಅಲ್ಲಂ ವೀರಭದ್ರಪ್ಪ, ವಿ.ಎಸ್. ಕೌಜಲಗಿ, ರಾಣಿ ಸತೀಶ್ ಸೇರಿದಂತೆ ಹಲವರು ಕಣ್ಣಿಟ್ಟಿದ್ದ ರಾಜಾಜಿನಗರದಿಂದ ನಿರೀಕ್ಷೆಯಂತೆ ಮಂಜುಳಾ ನಾಯ್ಡು ಅವರಿಗೆ ಟಿಕೆಟ್ ನೀಡಲಾಗಿದೆ.ಅರಬಾವಿಯಿಂದ ವಿ.ಎಸ್. ಕೌಜಲಗಿ ಅವರಿಗಾಗಲೀ ಅಥವಾ ಅವರ ಪುತ್ರನಿಗಾಗಲೀ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಇಲ್ಲಿಂದ ರಾಮಪ್ಪ ಉಟಗಿ ಅವರಿಗೆ ಟಿಕೆಟ್ ನೀಡಿ ಒತ್ತಡದ ತಂತ್ರಗಳಿಗೆ ಮಣಿಯುವುದಿಲ್ಲವೆಂಬ ಕಟ್ಟುನಿಟ್ಟಿನ ಸಂದೇಶವನ್ನು ಹಿರಿಯ ನಾಯಕರಿಗೆ ನೀಡಿದೆ.ಮೋಟಮ್ಮಗೆ ಮಣಿಯದೆ ಚಂದ್ರಪ್ಪಗೆ ಟಿಕೆಟ್: ತೀವ್ರ ವಿವಾದ ಹುಟ್ಟುಹಾಕಿರುವ ಬೆಂಗಳೂರಿನ ಸಿ.ವಿ. ರಾಮನ್‌ನಗರ, ಪದ್ಮನಾಭನಗರ, ಜಯನಗರ, ಹೆಬ್ಬಾಳ ಹಾಗೂ ದಾವಣಗೆರೆ ದಕ್ಷಿಣ, ಬಳ್ಳಾರಿ ಸಾಮಾನ್ಯ ಕ್ಷೇತ್ರಗಳಿಗೂ ಅಭ್ಯರ್ಥಿಗಳು ಯಾರು ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ. ಮೂಡಿಗೆರೆಯಲ್ಲಿ ಪರಿಷತ್ ಸದಸ್ಯೆ ಮೋಟಮ್ಮ ಅವರ ಒತ್ತಡಕ್ಕೆ ಮಣಿಯದ ಕಾಂಗ್ರೆಸ್, ಚಂದ್ರಪ್ಪ ಅವರಿಗೆ ಪುನಃ ಟಿಕೆಟ್ ನೀಡಿದೆ.ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರು ಸ್ಪರ್ಧೆ ಮಾಡಬಹುದೆಂದು ನಿರೀಕ್ಷಿಸಲಾಗಿದ್ದ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಚಿತ್ರ ನಟಿ ಉಮಾಶ್ರೀ ಅವರಿಗೇ ಕಾಂಗ್ರೆಸ್ ಟಿಕೆಟ್ ನೀಡಿದೆ. ವೀರಶೈವ ಸಮಾಜದ ಪ್ರಮುಖ ಮುಖಂಡ ಶಾಮನೂರು ಶಿವಶಂಕರಪ್ಪ ಕೇಳಿರುವ ದಾವಣಗೆರೆ ದಕ್ಷಿಣಕ್ಕೂ ಅಭ್ಯರ್ಥಿಯನ್ನು ಹೆಸರಿಸದೇ ಇರುವುದು ಅಚ್ಚರಿ ಮೂಡಿಸಿದೆ.ಟಿಕೆಟ್ ವಂಚಿತ ಮಹಿಮಾ: ಚನ್ನಗಿರಿಯಿಂದ ಸ್ಪರ್ಧಿಸಲು ಹರಸಾಹಸ ಮಾಡಿದ್ದ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲರ ಪುತ್ರ ಮಹಿಮಾ ಪಟೇಲರಿಗೂ ಕಾಂಗ್ರೆಸ್ ಟಿಕೆಟ್ ಕೈತಪ್ಪಿದೆ. ಈ ಕ್ಷೇತ್ರದಿಂದ ನಿರೀಕ್ಷೆಯಂತೆ ವಡ್ನಾಳ್ ರಾಜಣ್ಣ ಅವರಿಗೆ ಹಸಿರು ನಿಶಾನೆ ತೋರಲಾಗಿದೆ.  ಟಿಕೆಟ್ ಸಿಗುವುದು ಕಷ್ಟವೆಂದು ಭಾವಿಸಲಾಗಿದ್ದ ಬಿ.ಸಿ. ಪಾಟೀಲ ಕಾಂಗ್ರೆಸ್ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಣಿ ಉದ್ಯಮಿ ಸಂತೋಷ್ ಲಾಡ್ ಟಿಕೆಟ್ ಬಯಸಿರುವ ಕಲಘಟಗಿ ಕ್ಷೇತ್ರದ ಅಭ್ಯರ್ಥಿ ಯಾರೆಂದು ಇನ್ನೂ ನಿಶ್ಚಯವಾಗಿಲ್ಲ. ಪಕ್ಷೇತರರಲ್ಲಿ ಇಬ್ಬರಿಗೆ ಮಾತ್ರ ಟಿಕೆಟ್ ದೊರೆತಿದೆ. ಪಿ.ಎಂ.ನರೇಂದ್ರಸ್ವಾಮಿ ಮತ್ತು ಉಳಿದ ಇಬ್ಬರನ್ನು ಕಾಯುವಂತೆ ಮಾಡಿದೆ.ಜೆಡಿಎಸ್‌ನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಅವಕಾಶ: ಜೆಡಿಎಸ್ ಲೋಕಸಭಾ ಸದಸ್ಯರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಮನಗರ ಹಾಗೂ ಎನ್. ಚೆಲುವರಾಯಸ್ವಾಮಿ ನಾಗಮಂಗಲದಿಂದ ವಿಧಾನಸಭೆಗೆ ಸ್ಪರ್ಧೆ ಮಾಡಲಿದ್ದಾರೆ. ದೇವೇಗೌಡರ ಪಕ್ಷ ಹಾಸನ ಜಿಲ್ಲೆ ಅಭ್ಯರ್ಥಿಗಳ ಹೆಸರನ್ನು ಇನ್ನೂ ಅಂತಿಮಗೊಳಿಸಿಲ್ಲ. ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಜೆಡಿಎಸ್ ಅವಕಾಶ ನೀಡಿದೆ.

  

 

ಪ್ರತಿಕ್ರಿಯಿಸಿ (+)