ಬುಧವಾರ, ಜೂನ್ 23, 2021
22 °C
ನಗರಸಭೆ ಅಧ್ಯಕ್ಷರಾಗಿ ಎನ್.ಲಲಿತಮ್ಮ, ಉಪಾಧ್ಯಕ್ಷರಾಗಿ ಸೈಯದ್ ಇಕ್ಬಾಲ್ ಆಯ್ಕೆ

ಮೊದಲ ಬಾರಿ ನಗರಸಭೆಗೆ ದಲಿತ ಮಹಿಳೆ ಅಧ್ಯಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಇಲ್ಲಿನ ನಗರಸಭೆಯ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಎನ್.ಲಲಿತಮ್ಮ ಹಾಗೂ ಸೈಯದ್ ಇಕ್ಬಾಲ್ ಅವರು ಮಂಗಳವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.ಅಧ್ಯಕ್ಷರಾಗಿ ಎನ್.ಲಲಿತಮ್ಮ ಅವಿರೋಧವಾಗಿ ಆಯ್ಕೆಯಾದರು. ಈ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾತಿ ನಿಗಧಿಯಾದ ಕಾರಣ ವಿರೋಧ ಪಕ್ಷದಲ್ಲಿ ಆ ವರ್ಗಕ್ಕೆ ಸೇರಿದ ಚುನಾಯಿತಿ ಪ್ರತಿನಿಧಿಗಳು ಯಾರೂ ಇಲ್ಲದೆ ಇರುವುದರಿಂದ ಅವರ ಆಯ್ಕೆ ಅವಿರೋಧವಾಗಿ ನಡೆಯಿತುನಗರಸಭೆಯಲ್ಲಿ ಒಟ್ಟು 31 ಸ್ಥಾನಗಳಿದ್ದು 24 ಕಾಂಗ್ರೆಸ್, ಬಿಜೆಪಿ 4, ಜೆಡಿಎಸ್ 1, ಕೆಜೆಪಿ 1 ಹಾಗೂ ಪಕ್ಷೇತರ 1 ಸ್ಥಾನ ಬಲ ಪಡೆದಿತ್ತು. ಉಪಾಧ್ಯಕ್ಷ ಚುನಾವಣೆಗೆ ಕಾಂಗ್ರೆಸ್‌ನಿಂದ ಸೈಯದ್ ಇಕ್ಬಾಲ್, ಬಿಜೆಪಿಯಿಂದ ಸಂತೋಷ್ ಆರ್.ಶೇಟ್ ನಾಮಪತ್ರ ಸಲ್ಲಿಸಿದ್ದರು.

ಸೈಯದ್ ಇಕ್ಬಾಲ್ ಅವರಿಗೆ ಜೆಡಿಎಸ್ ಸದಸ್ಯ ಎಸ್.ಎಲ್.ಮಂಜುನಾಥ್, ಕೆಜೆಪಿಯಿಂದ ಆಯ್ಕೆಯಾಗಿರುವ ಜಾಹೀರಾ ಬೇಗಂ ಹಾಗೂ ಪಕ್ಷೇತರ ಸದಸ್ಯ ರವಿ ಜಂಬಗಾರು ಬೆಂಬಲ ಸೂಚಿಸಿದ್ದರಿಂದ ಒಟ್ಟು 27 ಮತ ದೊರಕಿತು.    ಬಿಜೆಪಿಯ ನಾಲ್ಕನೇ ವಾರ್ಡ್‌ನ ಸದಸ್ಯೆ ನಾಗರತ್ನಾ ಚುನಾವಣೆ ನಿಗದಿಯಾದ ಸಮಯಕ್ಕಿಂತ ತಡವಾಗಿ ಸಭೆಗೆ ಆಗಮಿಸಿದ ಕಾರಣ ಅವರಿಗೆ ಚುನಾವಣಾಧಿಕಾರಿ  ಮತ ಚಲಾಯಿಸಲು ಅವಕಾಶ ನೀಡದೆ ಪ್ರವೇಶ ನಿರಾಕರಿಸಿದರು.ಇದರಿಂದಾಗಿ ಬಿಜೆಪಿ ಅಭ್ಯರ್ಥಿ ಸಂತೋಷ್ ಶೇಟ್ ಕೇವಲ 3ಮತಗಳಿಗೆ ತೃಪ್ತಿಪಡಬೇಕಾಯಿತು. ತಡವಾಗಿ ಆಗಮಿಸಿದರು ಎನ್ನುವ ಕಾರಣಕ್ಕೆ ಸಭೆಗೆ ಪ್ರವೇಶವನ್ನೇ ನಿರಾಕರಿಸಿದ ಚುನಾವಣಾಧಿಕಾರಿ ಕ್ರಮಕ್ಕೆ ಸಂತೋಷ್ ಶೇಟ್  ಆಕ್ಷೇಪ ಸಲ್ಲಿಸಿದರು.ಕಾಂಗ್ರೆಸ್ ಆಂತರಿಕ ಒಪ್ಪಂದದ ಪ್ರಕಾರ ಮೊದಲ 15 ತಿಂಗಳು ಎನ್.ಲಲಿತಮ್ಮ ಹಾಗೂ ಸೈಯದ್ ಇಕ್ಬಾಲ್ ಅವರಿಗೆ ಅವಕಾಶ ನೀಡಿದ್ದು, ನಂತರದ 15 ತಿಂಗಳು ಗಣಾಧೀಶ ಹಾಗೂ ಸುರೇಶಬಾಬು ಅವರಿಗೆ ಅವಕಾಶ ದೊರಕಲಿದೆ ಎಂದು ತಿಳಿದು ಬಂದಿದೆ. 15 ತಿಂಗಳ ನಂತರ ನೀಡಬೇಕಾದ ರಾಜೀನಾಮೆಯನ್ನು ಈಗಾಗಲೇ ಲಲಿತಮ್ಮ ಹಾಗೂ ಸೈಯದ್ ಇಕ್ಬಾಲ್ ಅವರಿಂದ ಕಾಂಗ್ರೆಸ್ ಪಕ್ಷದ ಮುಖಂಡರು ಪಡೆದು ಕೊಂಡಿದ್ದಾರೆ ಎಂದು ಹೇಳಲಾಗಿದೆ.ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ಲಲಿತಮ್ಮ ಕುಡಿಯುವ ನೀರು, ಸ್ವಚ್ಛತೆ ಹಾಗೂ ಒಳಚರಂಡಿ ವ್ಯವಸ್ಥೆಗೆ ಆದ್ಯತೆ ನೀಡುವುದಾಗಿ ಹೇಳಿದರು. ಉಪಾಧ್ಯಕ್ಷ ಸೈಯದ್ ಇಕ್ಬಾಲ್ ನಗರದ ಎಲ್ಲಾ 31 ವಾರ್ಡ್‌ಗಳಿಗೆ ಸಮನಾದ ಅನುದಾನ ದೊರಕುವಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.ನಂತರ ನಡೆದ ಅಭಿನಂದನಾ ಸಭೆಯಲ್ಲಿ ಸದಸ್ಯ ತೀ.ನ.ಶ್ರೀನಿವಾಸ್, ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ಅಧಿಕಾರಿಗಳು ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಶುಭಾಶಯ ಹೇಳದೆ ಅಧಿಕಾರ ಹಸ್ತಾಂತರಿಸದೆ ತರಾತುರಿಯಲ್ಲಿ ಹೋಗಿದ್ದನ್ನು ಖಂಡಿಸಿದರು.ಮೊದಲ ಅವಕಾಶ: ಅಭಿನಂದನೆ

ಸಾಗರದ ನಗರಸಭೆಯ 130 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಲಿತ ಮಹಿಳೆಯೊಬ್ಬರು ಅಧ್ಯಕ್ಷರಾಗುವ ಅವಕಾಶ ಲಭ್ಯವಾಗಿದೆ. ಈಗ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎನ್.ಲಲಿತಮ್ಮ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಎರಡನೇ ಬಾರಿಗೆ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿಗೆ ಮೀಸಲಾತಿ ನಿಗದಿಯಾದ ಕಾರಣ ಅಧ್ಯಕ್ಷರಾಗುವ ಅವಕಾಶ ಲಭ್ಯವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.