ಶುಕ್ರವಾರ, ಜೂನ್ 18, 2021
23 °C

ಮೊದಲ ಮತ, ಯುವ ಪಥ

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ದೊಡ್ಡವನಾದ ಸಂಭ್ರಮ!

ಮತ ಹಾಕಿದ ಮೊದಲ ದಿನವೆಂದರೆ ದೊಡ್ಡವನಾದ ಸಂಭ್ರಮ! ದೇಶ ನೇತಾರರ ಆಯ್ಕೆಯಲ್ಲಿ ನನ್ನ ಅಭಿಪ್ರಾಯವನ್ನೂ ತೆಗೆದುಕೊಂಡಿದೆ ಎಂಬ ಖುಷಿ. ಕೈಬೆರಳ ಮೇಲೆ ಮೂಡಿದ ಶಾಯಿ ಗುರುತನ್ನು ನೋಡಿ ಆನಂದಿಸುತ್ತಲೇ ಇಡೀ ದಿನ ಕಳೆದಿದ್ದೆ. ಕುಣಿಗಲ್‌ನಲ್ಲಿ ನಾನು ಮೊದಲ ಬಾರಿಗೆ ಮತ ಹಾಕಲು ಹೋದಾಗ ಯಾರೋ ಕಳ್ಳಮತ ಹಾಕಲು ಬಂದು ಸಿಕ್ಕಿಬಿದ್ದು ಲಾಠಿ ಚಾರ್ಜ್‌ ಆಗಿತ್ತು. ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದಿದ್ದರೆ ಎಲ್ಲಿ ಒದೆ ಬೀಳುತ್ತದೆಯೋ ಎಂಬ ಹೆದರಿಕೆಯಲ್ಲಿ ಮತಗಟ್ಟೆಯ ಒಳಗೆ ಕಾಲಿಡುವಾಗ ಎದೆ ಢವ ಢವ ಎಂದು ಹೊಡೆದುಕೊಳ್ಳುತ್ತಿತ್ತು. ಪುಣ್ಯಕ್ಕೆ ಹಾಗಾಗಲಿಲ್ಲ. ಮೊದಲ ಮತವನ್ನು ಹಾಕಿ ಹೊರಬಂದಾಗ ಹೇಳಲಾಗದ ಖುಷಿ.ನಮ್ಮ ದೇಶವನ್ನು ಆಳುವ ಪ್ರತಿನಿಧಿಗಳ ಆಯ್ಕೆ ನಮ್ಮ ಬಹುದೊಡ್ಡ ಜವಾಬ್ದಾರಿ. ಶೈಕ್ಷಣಿಕವಾಗಿ ಇಷ್ಟೆಲ್ಲಾ ಮುಂದುವರೆದಿದ್ದರೂ ನೋಟಿಗಾಗಿ ಓಟು ಮಾರಾಟವಾಗುತ್ತವೆ. ಶಿಕ್ಷಣ, ತಿಳಿವಳಿಕೆ ಮೂಡಿಸುವ ಪ್ರಯತ್ನಗಳು ಅದನ್ನು ತಡೆಯುವಲ್ಲಿ ಯಶಸ್ವಿ ಆಗಿಲ್ಲ ಎನ್ನುವ ಬೇಸರವಿದೆ. ಒಂದು ರೂಪಾಯಿಯನ್ನೂ ತೆಗೆದುಕೊಳ್ಳದೆ ಹಕ್ಕು ಚಲಾಯಿಸುತ್ತಿದ್ದೇನೆ. ಆ ಜವಾಬ್ದಾರಿಯಲ್ಲಿ ಪಾಲ್ಗೊಳ್ಳುತ್ತಿರುವ ಹೆಮ್ಮೆ ನನ್ನದು.

– ಪವನ್‌ ಒಡೆಯರ್‌, ನಿರ್ದೇಶಕ

 

ಬೆಳೆದ ಉಗುರಿನ ಮೇಲಿನ ಶಾಯಿ ಗುರುತು

‘ಮಲೆ ಮಾದೇಶ್ವರನಿಗೆ ಉಘೇ ಎನ್ನಿ’ ಎಂದ ಕೂಡಲೇ ಎಲ್ಲರೂ ‘ಉಘೇ’ ಎನ್ನುತ್ತಾರಲ್ಲ, ಹಾಗಿತ್ತು ನನ್ನ ಮೊದಲ ಮತದಾನದ ಅನುಭವ. ಅಭ್ಯರ್ಥಿ ಯಾರು, ಯಾವ ಪಕ್ಷ, ಆತನ ಸಾಧನೆಗಳೇನು ಇತ್ಯಾದಿ ಯಾವುದೂ ನನಗೆ ಆಗ ಗೊತ್ತಿರಲಿಲ್ಲ. ಅಪ್ಪ ಅಮ್ಮ ಎಲ್ಲರೂ ಯಾರಿಗೆ ಮತ ಹಾಕು ಎಂದಿದ್ದರೋ ಕುರುಡಾಗಿ ಆ ಅಭ್ಯರ್ಥಿಗೆ ಮತ ಒತ್ತಿ ಬಂದಿದ್ದೆ.ಮತಗಟ್ಟೆಯ ಸುತ್ತಲೂ, ಒಳಗೂ ಬಿಗಿ ಭದ್ರತೆ, ನಮ್ಮ ಮನೆಯಲ್ಲಿ ಹಾಕಿರುವ ಕಾವಲಿನ ನಡುವೆ ಒಳಗೆ ಹೋಗಿ ನಮ್ಮ ಹಕ್ಕು ಚಲಾಯಿಸಬೇಕು! ಹೀಗೆ ಕಾವಲಿನಲ್ಲಿ ಓಟು ಹಾಕಿಸಿಕೊಂಡು ಗೆದ್ದ ಪಕ್ಷ ನಮಗೆ ಇಂಥದ್ದೇ ಭದ್ರತೆ ಕೊಡುತ್ತದೆಯೇ? ಮೊದಲ ಬಾರಿಗೆ ಮತ ಚಲಾಯಿಸುವಾಗ ನನಗೆ ನನ್ನ ಜವಾಬ್ದಾರಿಯ ಅರಿವು ಇರಲಿಲ್ಲ.ಈಗಲೂ ಹಳ್ಳಿಗಳಲ್ಲಿ ಯಾರೋ ಹೇಳಿದರೆಂದು ಯಾರಿಗೋ ಮತ ಹಾಕುವವರಿದ್ದಾರೆ. ಮತಹಾಕಿದಾಗ ಉಗುರ ಮೇಲಿನ ಶಾಯಿ ಗುರುತನ್ನು ನೋಡುತ್ತಾ ಇರುತ್ತೇನೆ. ಉಗುರು ಬೆಳೆದಂತೆ ಆ ಗುರುತೂ ಮುಂದೆ ಬರುತ್ತಿರುತ್ತದೆ. ಹೀಗೆ ಬೆಳೆದ ಉಗುರನ್ನು ಕತ್ತರಿಸಿ, ಗುರುತು ಅಳಿಸುವ ಮೊದಲೇ ಸರ್ಕಾರ ಬಿದ್ದುಹೋಗುತ್ತೇನೋ ಎನಿಸುತ್ತಿರುತ್ತದೆ.ನಮ್ಮ ಮತದ ಮೌಲ್ಯ ನಮಗೆ ಗೊತ್ತಿರುವುದಿಲ್ಲ. ಅದೀಗ ಐನೂರು, ಸಾವಿರ ರೂಪಾಯಿ ನೋಟುಗಳಿಗೆ ಬದಲಾಗಿದೆ. ಮತದಾರನೇ ರಾಜ. ಆದರಿಲ್ಲಿ ರಾಜನೇ ಮಂತ್ರಿಗೆ ಬಹುಪರಾಕ್‌ ಹೇಳುತ್ತಾನೆ, ಆತನ ಗುಲಾಮನಾಗುತ್ತಾನೆ. ಮೊದಲ ಮತದಾನದಲ್ಲಿ ಮಾಡಿದ ತಪ್ಪನ್ನು ಮತ್ತೆ ಮಾಡಿಲ್ಲ. ಇವರಿಗೇ ಮತ ಹಾಕು ಎಂದು ನನ್ನ ಪತ್ನಿಗೂ ಹೇಳುವುದಿಲ್ಲ.

– ಹೃದಯ ಶಿವ, ಕವಿ

ಓಟ್‌ ಹಾಕೋದೆಂದರೆ ಇಷ್ಟೇನಾ?!

ಚಿಕ್ಕವರಿದ್ದಾಗ ನಾವು ಮಕ್ಕಳೆಲ್ಲರಲ್ಲೂ ಭಾರಿ ಕುತೂಹಲ, ವಿಸ್ಮಯ. ಓಟ್ ಹಾಕುವುದೆಂದರೆ ಏನು? ಅಪ್ಪ ಅಮ್ಮನ ಹತ್ತಿರ ಕೇಳಿ ಬೈಸಿಕೊಂಡಿದ್ದೆ. ಆದರೂ ಆ ಕುತೂಹಲ ನಮ್ಮಲ್ಲಿ ತಣಿದಿರಲಿಲ್ಲ. ಆಗ ರಾಜಕಾರಣಿಗಳೆಂದರೆ ಸಿನಿಮಾ ಸೆಲೆಬ್ರಿಟಿಗಳ ಥರ. ಅವರು ಒಳಗೆ ಕುಳಿತಿರುತ್ತಾರೆ. ಇವರು ಹೋದಾಗ, ಕೈಕುಲುಕಿ ಫೋಟೊ ತೆಗೆಸಿಕೊಳ್ಳುತ್ತಾರೆ, ಇತ್ಯಾದಿ ಇತ್ಯಾದಿ ನಮ್ಮ ಕಲ್ಪನೆಗಳು ಅಲ್ಲಾವುದ್ದೀನನ ದೀಪದ ಕಥೆಯಂತೆ ಅರಳುತ್ತಿದ್ದವು. ಮನಸಿನಲ್ಲಿ ಇಷ್ಟೆಲ್ಲಾ ಕುತೂಹಲಗಳನ್ನು ಅಡಗಿಸಿಕೊಂಡಿದ್ದ ನನಗೆ, ‘ಅಯ್ಯೋ ಓಟ್‌ ಹಾಕುವುದೆಂದರೆ ಇಷ್ಟೇನಾ?’ ಎಂದು 14–15ರ ಹರೆಯದಲ್ಲಿಯೇ ಅನಿಸಿಬಿಟ್ಟಿತ್ತು! ನಿಜ, ನಾನು ಆ ವಯಸ್ಸಿನಲ್ಲಿಯೇ ಮತ ಹಾಕಿದ್ದೆ.ಅದೂ ಕಳ್ಳ ಓಟು! ನಮ್ಮ ಕುಟುಂಬದಲ್ಲಿಯೇ ಇಬ್ಬರು ಸ್ಪರ್ಧೆಗೆ ನಿಂತಿದ್ದರು. ಗಾಯತ್ರಿನೋ, ಸಾವಿತ್ರಿನೋ ನೆನಪಾಗುತ್ತಿಲ್ಲ. ಯಾವುದೋ ಒಂದು ಹೆಸರಿನಲ್ಲಿ ಓಟು ಹಾಕುವಂತೆ ನನ್ನನ್ನು ಪುಸಲಾಯಿಸಿ ಸಿದ್ಧಪಡಿಸಿದ್ದವರು ಚುನಾವಣೆಗೆ ನಿಂತಿದ್ದ ನನ್ನ ಅತ್ತೆ. ಕುಟುಂಬದವರೇ ಇಬ್ಬರು ನಿಂತಿದ್ದರಿಂದ ಒಂದು ಗುಂಪಿನವರು ಈ ಚಿಹ್ನೆಗೆ ಹಾಕಬೇಕು ಎಂದರೆ, ಮತ್ತೊಬ್ಬರು ಇನ್ನೊಂದು ಚಿಹ್ನೆ ತೋರಿಸಿ ಇದಕ್ಕೆ ಒತ್ತು ಎನ್ನುತ್ತಿದ್ದರು. ಹಿಂದಿನ ದಿನವಿಡೀ ಗೊಂದಲ ಯಾರಿಗೆ ಹಾಕುವುದು ಎಂದು. ಇಬ್ಬರ ಸಹವಾಸವೂ ಬೇಡ ಎಂದು ನಾನು ಓಟು ಹಾಕಿದ್ದು ಪರಿಚಯವೇ ಇರದ ಮೂರನೇ ವ್ಯಕ್ತಿಗೆ! ಚುನಾವಣೆಯಲ್ಲಿ ಗೆದ್ದಿದ್ದು ಆ ವ್ಯಕ್ತಿಯೇ. ಅತ್ತೆ ಸೋತಿದ್ದರು.ಮತ ಹಾಕಿ ಬಂದಾಗ ಬೇರೆಯವರಿಗೆ ಓಟು ಹಾಕಿದ್ದು ಎನ್ನುವ ಸತ್ಯವನ್ನು ನನ್ನಕ್ಕ ಸ್ಮಿತಾಳ ಬಳಿ ಮಾತ್ರ ಹೇಳಿಕೊಂಡಿದ್ದು. ತುಂಬಾ ತಿಳಿವಳಿಕೆ ಹೊಂದಿದ್ದ ಆಕೆ ನನ್ನನ್ನು ಕೂರಿಸಿಕೊಂಡು ಒಂದು ಮತ ಎಷ್ಟೆಲ್ಲಾ ಮುಖ್ಯ, ಅದು ದೇಶದ ಮತ್ತು ನಮ್ಮ ಭವಿಷ್ಯವನ್ನೇ ಬದಲಿಸಿಬಿಡುವ ಶಕ್ತಿ ಹೊಂದಿದೆ ಎಂದೆಲ್ಲಾ ವಿವರಿಸಿದಾಗಲೇ ನಾನು ಮಾಡಿದ ತಪ್ಪಿನ ಅರಿವಾಗಿದ್ದು. ಮಜಾ ಎಂದರೆ, ಅಂದು ಮತಗಟ್ಟೆ ಒಳಗೆ ನನಗೆ ಪಾಠ ಮಾಡಿದ ಶಿಕ್ಷಕಿ ಕುಳಿತಿದ್ದರು.ಅವರು ಅಂದು ಏನೂ ಮಾತನಾಡಿರಲಿಲ್ಲ. ಏನು ಹೇಳುತ್ತಾರೋ ಎಂಬ ಹೆದರಿಕೆಯಲ್ಲಿ ಅವರು ಹೊರಗೆ ಕಂಡಾಗಲೆಲ್ಲಾ ಮುಖ ತಪ್ಪಿಸಿ ಓಡಾಡುತ್ತಿದ್ದೆ. ಶಾಲೆಯಲ್ಲಿ ಎಲ್ಲರಿಗೂ ಕೈಬೆರಳು ತೋರಿಸಿ ಓಟು ಹಾಕಿದ ಪರಾಕ್ರಮವನ್ನು, ಒಳಗೆ ಹೇಗಿರುತ್ತದೆ ಎನ್ನುವುದನ್ನೆಲ್ಲಾ ಬಿಡಿಸಿ ಹೇಳಿ ಸಂಭ್ರಮಿಸಿದ್ದೆ. ಆದರೂ ಓಟು ಹಾಕುವ ಬಗ್ಗೆ ನನ್ನಲ್ಲಿ ಇದ್ದ ಕಲ್ಪನೆಗಳೆಲ್ಲಾ ಮತಗಟ್ಟೆಯ ಒಳಗೆ ಹೋದಾಗ ಠುಸ್‌ ಆಗಿದ್ದಂತೂ ಹೌದು!

– ಸುಮನಾ ಕಿತ್ತೂರು, ನಿರ್ದೇಶಕಿ

ಎಚ್ಚರಗೊಂಡ ಅಂತಃಪ್ರಜ್ಞೆ

ಮತಗಟ್ಟೆ ಇದ್ದದ್ದು ನಮ್ಮೂರಿನಿಂದ ಎರಡು ಕಿ.ಮೀ. ದೂರದಲ್ಲಿರುವ ಪಕ್ಕದ ಊರಿನಲ್ಲಿ. ಮೊದಲ ಮತದಾನದ ಖುಷಿಯಲ್ಲಿ ಸೈಕಲ್ ತುಳಿದುಕೊಂಡು ಬೂತ್‌ ಬಳಿ ಬಂದರೆ, ಉದ್ದನೆಯ ಕ್ಯೂ. ಅಷ್ಟುದ್ದ ಸಾಲು ಕಂಡು ದಿಗಿಲಾಯಿತು. ಇಷ್ಟು ಜನರ ನಡುವೆ ಸರದಿಯಲ್ಲಿ ನಿಂತು ಓಟು ಹಾಕಬೇಕೆ? ಎನ್ನುವ ಅಸಹನೆ. ಸೈಕಲ್‌ ತಿರುಗಿಸಿ ಸೀದಾ ಮನೆ ಹಾದಿ ಹಿಡಿದೆ. ಯಾರಿಗೆ ಬೇಕು ಮತ ಹಾಕುವ ಉಸಾಬರಿ ಎಂದು ಕುಳಿತಿದ್ದವನಿಗೆ, ಪಕ್ಷವೊಂದರ ಕಾರ್ಯಕರ್ತನಾಗಿದ್ದ ಸಂಬಂಧಿಯೊಬ್ಬ ಕರೆ ಮಾಡಿದ. ‘ಓಟು ಹಾಕಿದ್ದೀಯಾ?’ ಎಂದು ಕೇಳಿದ. ‘ಇಲ್ಲ’ ಎಂದೆ. ‘ಬಿಡು, ಪರ್ವಾಗಿಲ್ಲ. ಯಾರ ಬಳಿಯಾದರೂ ಹಾಕಿಸುತ್ತೇನೆ’ ಎಂದ. ಆತನ ಉತ್ತರ ನನ್ನ ಅಂತಃಪ್ರಜ್ಞೆಯನ್ನು ಕೆಣಕಿಸಿತು.ಆಗ ಕಳ್ಳ ಮತದಾನ ಮಾಡುವುದು ಸುಲಭವಾಗಿತ್ತು. ಮತ ಹಾಕುವುದು ನನ್ನ ಹಕ್ಕು, ಜವಾಬ್ದಾರಿ ಎನ್ನುವುದನ್ನು ಒಂದು ಕ್ಷಣ ಮರೆತಿದ್ದರೂ, ನನ್ನ ಹೆಸರಿನಲ್ಲಿ ಬೇರೆಯವರು ಮತ ಚಲಾಯಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿರಲಿಲ್ಲ. ಆಗಲೇ ಹೊತ್ತೇರತೊಡಗಿತ್ತು. ಮತದಾನ ಪ್ರಕ್ರಿಯೆ ಇನ್ನೇನು ಮುಗಿಯುವ ಹೊತ್ತು. ಕೂಡಲೇ ಸೈಕಲ್‌ ಹತ್ತಿ ಮತಗಟ್ಟೆಯತ್ತ ಸಾಗಿದೆ. ನನ್ನ ಹಕ್ಕನ್ನು ನಾನೇ ಚಲಾಯಿಸಿದೆ. ಮತ ಹಾಕುವ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ನನಗೆ, ನಾನೇ ಮತ ಚಲಾಯಿಸಿದೆ ಎಂಬ ಹೆಮ್ಮೆ ಆ ಬೇಸರವನ್ನು ತೊಡೆದುಹಾಕಿತ್ತು.ಇಂದಿಗೂ ಗ್ರಾಮ ಪಂಚಾಯಿತಿ ಚುನಾವಣೆಯೇ ಇರಲಿ, ಲೋಕಸಭೆ ಚುನಾವಣೆಯೇ ಇರಲಿ, ಯಾವುದನ್ನೂ ತಪ್ಪಿಸಿಕೊಳ್ಳುವುದಿಲ್ಲ. ಊರಿಗೆ ಹೋಗಿ ಹಕ್ಕನ್ನು ಚಲಾಯಿಸುತ್ತೇನೆ. ಏಕೆಂದರೆ ಅದು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ನಮಗೆ ಇರುವ ಅವಕಾಶ. ಇಲ್ಲಿ ನಾವು ಯಾರಿಗೂ ಹೇಳಬೇಕಾಗಿಲ್ಲ, ಯಾರನ್ನೂ ಕೇಳಬೇಕಿಲ್ಲ. ಸ್ವತಂತ್ರವಾಗಿ ನನ್ನ ನಿರ್ಧಾರ ತೆಗೆದುಕೊಂಡೆ ಎಂಬ ಖುಷಿ ಅಂದು ನನ್ನಲ್ಲಿತ್ತು.

– ಧನಂಜಯ, ನಟ

ಪ್ರಾರ್ಥಿಸಿದರೂ ಗೆಲ್ಲಲಿಲ್ಲ

ಕಳೆದ ವರ್ಷ ನಡೆದ ಚುನಾವಣೆಯಲ್ಲಷ್ಟೇ ನಾನು ಮೊದಲ ಬಾರಿಗೆ ಮತ ಹಾಕಿದ್ದು. ಕೈ ಮೇಲೆ ಶಾಯಿ ಬಿದ್ದಾಗ ಅದೊಂಥರ ವಿಶಿಷ್ಟ ಅನುಭವ. ಇದ್ದಕ್ಕಿದ್ದಂತೆ ಪ್ರಬುದ್ಧತೆ ಒಳಪ್ರವೇಶಿಸಿದಂಥ ರೋಮಾಂಚನ. ಜೊತೆಗೆ ನಾನೊಬ್ಬ ಜವಾಬ್ದಾರಿಯುತ ಪ್ರಜೆಯಾದೆ ಎಂಬ ಖುಷಿ. ಎಲೆಕ್ಟ್ರಾನಿಕ್ ಯಂತ್ರದಲ್ಲಿ ಬೀಪ್‌ ಶಬ್ದ ಬಂದಾಗಲಂತೂ ಹೇಳತೀರದ ಸಂತಸ. ಯಾವುದೋ ಪಕ್ಷವನ್ನು ಒಪ್ಪಿಕೊಂಡು ಕುರುಡಾಗಿ ಮತ ಹಾಕಬಾರದು ಎನ್ನುವ ತಿಳಿವಳಿಕೆ ಮೂಡಿತ್ತು.ನನ್ನ ತಂಗಿಯದೂ ಅದು ಮೊದಲ ಅವಕಾಶ. ಇಬ್ಬರೂ ಅಭ್ಯರ್ಥಿಗಳ ಬಗ್ಗೆ ಸಾಕಷ್ಟು ಚರ್ಚಿಸಿದ್ದೆವು. ಯಾರಿಗೆ ಮತ ಹಾಕುವುದು ಎಂಬ ಗುಟ್ಟನ್ನು ಪರಸ್ಪರ ಬಿಟ್ಟುಕೊಟ್ಟಿರಲಿಲ್ಲ. ‘ಇವರೇ ಗೆಲ್ಲಲಿ ದೇವರೇ’ ಎಂದು ಪ್ರಾರ್ಥಿಸಿಕೊಂಡು ಗುಂಡಿ ಒತ್ತಿದ್ದೆ. ಕೈ ಬೆರಳಿನ ಇಂಕನ್ನು ಎಲ್ಲರಿಗೂ ತೋರಿಸಿ, ಫೋಟೊ ಕೂಡ ತೆಗೆಸಿಕೊಂಡಿದ್ದೆ. ದುರದೃಷ್ಟವಶಾತ್‌ ನಾನು ಮತ ಹಾಕಿದ ಅಭ್ಯರ್ಥಿ ಗೆಲ್ಲಲಿಲ್ಲ.ಆದರೂ ನನ್ನ ಹಕ್ಕನ್ನು ಚಲಾಯಿಸಿದ ಖುಷಿ ಇದ್ದೇ ಇತ್ತು. ಅದು ನಮಗೆ ಹೊಸ ಜವಾಬ್ದಾರಿ ಹೊರೆಸುವ ಸಮಯ. ಕುರುಡಾಗಿ ಯಾವುದೋ ಪಕ್ಷವನ್ನು ನೆಚ್ಚಿಕೊಂಡು ಮತ ಹಾಕುವುದು ಸರಿಯಲ್ಲ. ಪಕ್ಷಕ್ಕಿಂತಲೂ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವುದು ನನ್ನ ಭಾವನೆ.

– ಸುಕೃತಾ ವಾಗ್ಳೆ, ನಟಿ 

ಮೆಹೆಂದಿ ಹಚ್ಚಿದಂಥ ಖುಷಿ

ಮೊನ್ನೆ ಚಾನೆಲ್‌ವೊಂದರಲ್ಲಿ ಸಂದರ್ಶನ ನಡೆಯುತ್ತಿದ್ದಾಗ ಕರೆ ಮಾಡಿದ ಒಬ್ಬರು ‘ನೀವು ಎಲೆಕ್ಷನ್‌ಗೆ ನಿಂತುಕೊಳ್ಳಿ, ನಾವು ಖಂಡಿತಾ ನಿಮಗೇ ಓಟು ಹಾಕುತ್ತೇವೆ’ ಎಂದರು. ದೇಶದ ಕೆಲಸದಲ್ಲಿ ತೊಡಗಬೇಕೆಂದರೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದೇನೂ ಇಲ್ಲವಲ್ಲ. ನಮಗೆ ಬೇಕಾದಷ್ಟು ಮಾರ್ಗಗಳಿವೆ. ಅದರಲ್ಲಿ ಮೊದಲ ಹೆಜ್ಜೆ ಮತ ಹಾಕುವುದು. ನಮ್ಮ ಮನೆಯಲ್ಲಿ ರಾಜಕೀಯ, ಚುನಾವಣೆ ಎಂದರೆ ಬಹುದೊಡ್ಡ ಚರ್ಚೆ ನಡೆಯುತ್ತದೆ. ಹೀಗಾಗಿ ನನಗೆ ಮೊದಲಿನಿಂದಲೂ ಕುತೂಹಲ.ಯಾವಾಗ 18 ವರ್ಷ ಆಗುತ್ತೋ, ಓಟು ಹಾಕಲು ಅವಕಾಶ ಸಿಗುತ್ತದೆಯೋ ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದೆ. ಕೊನೆಗೂ ಆ ಗಳಿಗೆ ಬಂದೇ ಬಿಟ್ಟಿತು. ಅವತ್ತು ಮನೆಯಲ್ಲಿ ಹಬ್ಬದ ವಾತಾವರಣ. ಬೇಗನೆ ಎಬ್ಬಿಸಿ, ನನ್ನನ್ನು ಸಿದ್ಧಗೊಳಿಸಿದ್ದರು. ಮತಗಟ್ಟೆಯಲ್ಲಿ ಉದ್ದನೆಯ ಸಾಲು ಇರುತ್ತದೆಯಲ್ಲ, ಅದು ಶುರುವಾಗುವ ಮುನ್ನವೇ ಅಲ್ಲಿ ಹೋಗಿ ನಿಲ್ಲಬೇಕೆಂಬ ಆತುರ. ಯಾರಿಗೆ ಓಟ್‌ ಹಾಕಬೇಕು ಎಂದು ನಾವು ಹೇಳುವುದಿಲ್ಲ. ಅದು ನಿನ್ನ ವಿವೇಚನೆಗೇ ಬಿಟ್ಟಿದ್ದು ಎಂದು ಮನೆಯಲ್ಲಿ ಎಲ್ಲರೂ ಹೇಳಿದ್ದರು. ನನ್ನ ಮತ ಪಡೆಯಲು ಯಾರು ಅರ್ಹ ಎಂದು ನಾನೇ ನಿರ್ಧರಿಸಬೇಕಲ್ಲವೇ? ಪತ್ರಿಕೆಗಳನ್ನು ತಿರುವಿ ಹಾಕಿ ಅಭ್ಯರ್ಥಿಗಳ ಬಗ್ಗೆ ತಿಳಿದುಕೊಂಡಿದ್ದೆ.ನನ್ನಲ್ಲಿ ಸೂಕ್ತ ಪ್ರತಿನಿಧಿಯ ಆಯ್ಕೆಯಲ್ಲಿ ಪ್ರಬುದ್ಧತೆ ಬೆಳೆಸುವ ಕೆಲಸವನ್ನು ಮನೆಯಲ್ಲಿ ಆಗಲೇ ಮಾಡಿದ್ದರು. ನನ್ನ ಹಕ್ಕನ್ನು ಚಲಾಯಿಸಿದ ಆ ದಿನ ನನ್ನಲ್ಲಿ ನಾನೇ ದೇಶವನ್ನು ಆಳುತ್ತಿದ್ದೇನೆ ಎಂಬ ಸಂಭ್ರಮ. ಹೆಣ್ಣುಮಕ್ಕಳಿಗೆ ಮೆಹೆಂದಿ ಹಚ್ಚಿದಾಗ ಆಗುವ ಖುಷಿ ಇರುತ್ತದಲ್ಲ, ಹಾಗೆಯೇ ನನ್ನ ಬೆರಳ ಮೇಲೆ ಇಂಕಿನ ಗುರುತು ಮೂಡಿದ ಖುಷಿ. ಬೆರಳ ಮೇಲಿನ ಗುರುತು ಮಾಸುವವರೆಗೂ ನೇಲ್‌ ಪಾಲಿಶ್‌ ಹಚ್ಚಿರಲಿಲ್ಲ ನಾನು. ಎಲ್ಲರಿಗೂ ನಾನು ಓಟು ಮಾಡಿದ್ದು ತಿಳಿಯಲಿ ಎಂದು.ಅದನ್ನು ತುಂಬಾ ಜನರಿಗೆ ತೋರಿಸಿಕೊಂಡೂ ಓಡಾಡಿದ್ದೆ. ನಾವು ಓಟ್‌ ಹಾಕುವ ಮೊದಲು ನಮ್ಮಲ್ಲಿ ಪ್ರಶ್ನೆಗಳು ಮೂಡಬೇಕು. ಪತ್ರಿಕೆಗಳನ್ನು ಓದಿದಾಗ ನಮ್ಮಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳುವ ಪ್ರಬುದ್ಧತೆ ಬೆಳೆಯುತ್ತದೆ. ಅದೇ ನಿಜವಾದ ಎಂಪವರ್‌ಮೆಂಟ್‌.

– ಶ್ವೇತಾ ಶ್ರೀವಾಸ್ತವ, ನಟಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.