ಶನಿವಾರ, ಮೇ 15, 2021
24 °C

ಮೊದಲ ಮಳೆಗೇ ರಸ್ತೆಗೆ ಬಿದ್ದ ಕಾಮಗಾರಿ ಗುಣಮಟ್ಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ವರ್ಷಗಳ ಕಾಲ ಕಲ್ಲು, ಗುಂಡಿಗಳಿಂದ ಇದ್ದ ಆ ರಸ್ತೆ ವರ್ಷದ ಹಿಂದಷ್ಟೇ ದುರಸ್ತಿ ಯಾಗಿತ್ತು. ಆದರೆ, ದುರಸ್ತಿಯಾಗಿದೆ ಎಂಬ ನೆಮ್ಮದಿ ವಾಹನ ಚಾಲಕರಿಗೆ ಬಹಳ ದಿನ ಇರಲಿಲ್ಲ. ತಿಂಗಳ ಹಿಂದೆ ಬಿದ್ದ ಮಳೆಗೆ ರಸ್ತೆಯ ಗುಣಮಟ್ಟದ ಬಣ್ಣ ಬಯಲಾಗಿದೆ.ಇದು, ಮಂಡ್ಯದಿಂದ ನಾಗಮಂಗಲ ಪಟ್ಟಣದ ಕಡೆಗೆ ಸಂಪರ್ಕ ಕಲ್ಪಿಸುವ ಮಂಡ್ಯ ಮತ್ತು ಚಿಕ್ಕಮಂಡ್ಯ ನಡುವಣ ರಸ್ತೆಯ ದುಸ್ಥಿತಿ. ತಿಂಗಳ ಹಿಂದಷ್ಟೇ ಸುರಿದ ಜಡಿ ಮಳೆಗೆ ಅಲ್ಲಲ್ಲಿ ಡಾಂಬರು ಕಿತ್ತು ಬಂದಿದ್ದು, ರಸ್ತೆ ಯಥಾ ಸ್ಥಿತಿಗೆ ಮರಳುವ ಹಾದಿಯಲ್ಲಿದೆ. ಕಳೆದ ವರ್ಷ ಸಾಕಷ್ಟು ಗುಂಡಿಗಳು, ಕಲ್ಲುಗಳು ಇದ್ದ ಈ ರಸ್ತೆಯ ದುಃಸ್ಥಿತಿ ಬಗೆಗೆ ಸಾರ್ವಜನಿಕರು ಮತ್ತು ವಾಹನ ಚಾಲಕರಿಂದ ವ್ಯಾಪಕ ದೂರು ಗಳು ಬಂದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯು ಕಡೆಗೂ ರಸ್ತೆಯ ದುರಸ್ತಿಯನ್ನು ಕೈಗೊಂಡಿತ್ತು.ಲಕ್ಷಾಂತರ ರೂಪಾಯಿ ವೆಚ್ಚವಾದರೂ ಗುಣಮಟ್ಟ ಕಳಪೆ ಎಂಬುದು ಕೆಲವೇ ತಿಂಗಳಲ್ಲಿ ಬಯಲಾಗಿದೆ. ರಸ್ತೆಯು ಅಲ್ಲಲ್ಲಿಯೇ ಕಿತ್ತು ಬಂದಿದ್ದು, ವಾಹನ ಚಾಲನೆ ಅದರಲ್ಲಿಯೂ ದ್ವಿಚಕ್ರ ಚಾಲಕರು ಓಡಾಡುವುದೇ ಕಷ್ಟ ಎಂಬಂತಹ ಸ್ಥಿತಿ ಇದೆ.ಡಾಂಬರು ಕಿತ್ತು ಬಂದಿದ್ದು, ಸಣ್ಣ ಪ್ರಮಾಣದ ಕಲ್ಲುಗಳು ಇರುವ ಕಾರಣ ಎಚ್ಚರಿಕೆಯಿಂದಲೇ ವಾಹನ ಚಾಲನೆ ಮಾಡಬೇಕು. ಸ್ವಲ್ಪ ಆಯತಪ್ಪಿದರೂ ಬೀಳುವುದು ಖಚಿತ. ರಾತ್ರಿಯ ಹೊತ್ತುವಾಹನದ ದೀಪಗಳ ಬೆಳಕು ಕಣ್ಣಿಗೆ ರಾಚುವ ಕಾರಣ ಇನ್ನೂ ಕಷ್ಟ ಎನ್ನುತ್ತಾರೆ ಈ ಮಾರ್ಗದಲ್ಲಿ ನಿತ್ಯ ಸಂಚರಿಸುವ ಉಮೇಶ್.ಕೆಲ ದಿನಗಳ ಹಿಂದೆ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಹೋರಾಟ ನಡೆದಾಗ ಜಿಲ್ಲೆಯಲ್ಲಿಯೂ ವ್ಯಾಪಕ ಪ್ರತಿಭಟನೆ ನಡೆದಿತ್ತು. ಸಂಘ ಸಂಸ್ಥೆಗಳು ಸ್ಪರ್ಧೆಗೆ ಬಿದ್ದಂತೆ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದವು.ದುರಸ್ತಿಯಾದ ಆರೇಳು ತಿಂಗಳಿಗೆ ಈ ಸ್ಥಿತಿಗೆ ಬಂದಿರುವ ಮಂಡ್ಯ-ಚಿಕ್ಕಮಂಡ್ಯ ರಸ್ತೆಯ ಗುಣಮಟ್ಟ, ಕಾಮಗಾರಿಯ ಹಿಂದಿನ ಪ್ರಾಮಾಣಿಕತೆಗೆ ಸ್ಪಷ್ಟವಾಗಿ ಕನ್ನಡಿ ಹಿಡಿಯುತ್ತಿದೆ. ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸಿದ ಅಷ್ಟೆಲ್ಲ ಸಂಘ ಸಂಸ್ಥೆಗಳು ಇನ್ನೂ ಇಂಥ ಕಾಮಗಾರಿಗಳನ್ನು ಗಮನಿಸಿಲ್ಲವೇನೋ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.