ಗುರುವಾರ , ಜೂನ್ 24, 2021
28 °C

ಮೊದಲ ಮಳೆಯಲ್ಲಿ ಮೈನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಸಂಜು ವೆಡ್ಸ್ ಗೀತಾ~ ಚಿತ್ರದ ಯಶಸ್ಸಿನ ಅಲೆಗೆ ಮೈಯೊಡ್ಡಿ ನಿಂತ ನಿರ್ದೇಶಕ ನಾಗಶೇಖರ್ ಮನಸ್ಸೀಗ ಹಾಡುವ `ಮೈನಾ~ ಹಕ್ಕಿ. ಕೊಲೆ ಮಾಡುವ ಪ್ರೇಮಿ ಜೈಲು ಸೇರುವ ಕಥೆಯನ್ನು `ಸಂಜು ವೆಡ್ಸ್  ಗೀತಾ~ ದಲ್ಲಿ ನೀಡಿದ್ದ ಅವರು, ಈಗ ಜೈಲಿನಲ್ಲಿದ್ದ ಕೈದಿಯೊಬ್ಬನ ಪ್ರೇಮಕಥೆಯನ್ನು ಸಿನಿಮಾಕ್ಕಿಳಿಸುತ್ತಿದ್ದಾರೆ.ತಮ್ಮ ಹಿಂದಿನ ಚಿತ್ರಗಳ ಯಶಸ್ಸಿನಲ್ಲಿ ಹಾಡುಗಳ ಪಾತ್ರ ಹಿರಿದಾದ ಹಿನ್ನೆಲೆಯಲ್ಲಿ `ಮೈನಾ~ ಚಿತ್ರಕ್ಕೆ ಹಾಡುಗಳ ಮಳೆ ಸುರಿಸುವ ಹಂಬಲ ಅವರದು. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ರಚನೆಯ, ಸಿ.ಅಶ್ವತ್ಥ್ ಹಾಡಿರುವ `ಕಾಣದ ಕಡಲಿಗೆ ಹಂಬಲಿಸಿದೆ ಮನ~ ಹಾಡನ್ನು ಯಥಾವತ್ತಾಗಿ ಬಳಸಿಕೊಳ್ಳುವುದು ಅವರ ಉದ್ದೇಶ.ಇದಲ್ಲದೆ ಚಿತ್ರದಲ್ಲಿ ಐದು ಹಾಡುಗಳಿದ್ದು, ಸಂಗೀತ ನಿರ್ದೇಶಕ ಜೆಸ್ಸಿಗಿಫ್ಟ್ ಮತ್ತು ಗೀತರಚನೆಕಾರ ಕವಿರಾಜ್ ಜೋಡಿ ಈಗಾಗಲೇ ಎರಡು ಹಾಡುಗಳನ್ನು ಹೊಸೆದಿದೆ.ನಾಗಶೇಖರ್ ತಮ್ಮ ಹಿಂದಿನ ಚಿತ್ರಕ್ಕೆ ದುಡಿದ ತಂಡವನ್ನೇ ಇಲ್ಲಿ ಬಳಸಿಕೊಳ್ಳುತ್ತಿದ್ದಾರೆ. ನಾಯಕ ನಾಯಕಿಯಲ್ಲಿ ಮಾತ್ರ ಬದಲಾವಣೆ. `ಆ ದಿನಗಳು~ ಖ್ಯಾತಿಯ ನಟ ಚೇತನ್‌ಗೆ ನಿತ್ಯಾ ಮೆನನ್ ಜೋಡಿಯಾಗಲಿದ್ದಾರೆ.

 

ತೆಲುಗಿನ ಶರತ್ ಕುಮಾರ್ ಎಸಿಪಿ ಅಶೋಕ್ ಕುಮಾರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಹಾಸಿನಿ, ರಂಗಾಯಣ ರಘು, ಸುಮನ್ ರಂಗನಾಥ್, ತಬಲಾ ನಾಣಿ, ಸಾಧುಕೋಕಿಲಾ ತಾರಾಗಣದಲ್ಲಿದ್ದಾರೆ.`ಸಂಜು ವೆಡ್ಸ್ ಗೀತಾ~ ಗೆದ್ದ ಬಳಿಕ ಅನೇಕ ಆಫರ್‌ಗಳು ಬಂದವು. ಆದರೆ ಗಟ್ಟಿಯಾದ ಕಥೆ ಸಿಗುವವರೆಗೆ ಚಿತ್ರ ಮಾಡುವುದಕ್ಕೆ ಮನಸಿರಲಿಲ್ಲ. ಈಗ ಅತ್ಯುತ್ತಮ ಕಥೆ ಸಿಕ್ಕಿದೆ ಎಂದ ನಾಗಶೇಖರ್, ಚಿತ್ರಕ್ಕಾಗಿ ದೊಡ್ಡಮಟ್ಟದ ಯೋಜನೆ ಹಾಕಿಕೊಂಡಿರುವುದಾಗಿ ಹೇಳಿಕೊಂಡರು. ಚಿತ್ರದ ಬಜೆಟ್ ಆರು ಕೋಟಿ ಎಂದು ಅಂದಾಜಿಸಲಾಗಿದೆ.ಕರ್ನಾಟಕ-ಗೋವಾ ಮಧ್ಯದ ತಾಣಗಳಲ್ಲಿ ಹೆಚ್ಚಿನ ಚಿತ್ರೀಕರಣ ನಡೆಯಲಿದೆ. 125 ದಿನ ಚಿತ್ರೀಕರಣ ನಡೆಸಲು ಯೋಜಿಸಲಾಗಿದೆ ಎಂದರು. `ಅರಮನೆ~, `ಸಂಜು..~ ದುರಂತ ಅಂತ್ಯದ ಚಿತ್ರಗಳ ಸಾಲಿಗೆ `ಮೈನಾ~ ಕೂಡ ಸೇರಲಿದೆ ಎಂಬ ಸೂಚನೆ ನೀಡಿದರು.`ಮೊದಲ ಮಳೆಯಂತೆ...~ ಹಾಡನ್ನು ಸುಮ್ಮನೆ ಗೀಚಿದ್ದ ಕವಿರಾಜ್ ಬಳಿಕ ಅದನ್ನು ತಿದ್ದಿ ತೀಡಿ ಬೇರೆಯ ಸಾಲುಗಳನ್ನು ಬರೆದಿದ್ದರಂತೆ. ಆದರೆ ಮೊದಲು ಗೀಚಿದ್ದ `ಡಮ್ಮಿ~ ಹಾಡೇ ಚೆನ್ನಾಗಿದೆ ಎಂದು ಚಿತ್ರತಂಡ ಅಭಿಪ್ರಾಯಪಟ್ಟು ಅದೇ ಹಾಡನ್ನು ಬಳಸಿಕೊಳ್ಳುತ್ತಿದೆಯಂತೆ.ಛಾಯಾಗ್ರಾಹಕ ಸತ್ಯ ಹೆಗಡೆ, ನಿರ್ಮಾಪಕ ವಜ್ರೇಶ್ವರಿ ರಾಜ್‌ಕುಮಾರ್, ಸಂಕಲನಕಾರ ಜೋನಿ ಹರ್ಷ, ಆನಂದ್ ಆಡಿಯೊ ಮಾಲೀಕ ಶ್ಯಾಮ್ ಹಾಜರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.