ಗುರುವಾರ , ನವೆಂಬರ್ 21, 2019
20 °C

ಮೊದಲ ಸಲ ಎಸ್‌ಡಿಪಿಐ `ರಂಗ'ಪ್ರವೇಶ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರಕ್ಕೆ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಣಕ್ಕೆ ಇಳಿಯಲು ನಿರ್ಧರಿಸಿದೆ.ಮಡಿಕೇರಿ ಕ್ಷೇತ್ರಕ್ಕೆ ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಫಜಲುಲ್ಲಾ ಹಾಗೂ ವಿರಾಜಪೇಟೆ ಕ್ಷೇತ್ರಕ್ಕೆ ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯ ಉಸ್ಮಾನ್ ಸುಂಟಿಕೊಪ್ಪ ಅವರು ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರ ಮತದಾರರ ಮೇಲೆ ಪಕ್ಷದ ಅಭ್ಯರ್ಥಿಗಳು ಕೇಂದ್ರೀಕರಿಸಿದ್ದಾರೆ.ನಗರದಲ್ಲಿ ಇತ್ತೀಚೆಗೆ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಜಾತ್ಯತೀತ ಮತಗಳನ್ನು ಭದ್ರಪಡಿಸುವ ನಿಟ್ಟಿನಲ್ಲಿ ಚುನಾವಣಾ ಕಣಕ್ಕಿಳಿಯುವುದು ಅನಿವಾರ್ಯವಾಗಿದೆ ಎಂದು ಪಕ್ಷದ ಮಡಿಕೇರಿ ನಗರ ಘಟಕದ ಅಧ್ಯಕ್ಷ ನೂರುದ್ದೀನ್ ತಿಳಿಸಿದರು.ಕುಶಾಲನಗರ ಮೆಲುಕು

ಇತ್ತೀಚೆಗೆ ಕುಶಾಲನಗರ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಐದು ವಾರ್ಡ್‌ಗಳಲ್ಲಿ ಎಸ್‌ಡಿಪಿಐ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಇದು ಮೊದಲ ಪ್ರಯತ್ನವಾಗಿದ್ದರೂ ಗಮನಾರ್ಹ ಕೊಡುಗೆ ನೀಡಿದರು. ಯಾವುದೇ ವಾರ್ಡ್‌ನಲ್ಲಿ ಗೆಲುವು ಸಾಧಿಸದಿದ್ದರೂ, ತಮ್ಮ ಇರುವಿಕೆಯನ್ನು ಸಾಬೀತುಪಡಿಸಿದರು.ಹಲವೆಡೆ ಜೆಡಿಎಸ್, ಬಿಎಸ್‌ಆರ್ ಕಾಂಗ್ರೆಸ್ ಹಾಗೂ ಕೆಜೆಪಿ ಪಕ್ಷದ ಅಭ್ಯರ್ಥಿಗಳಿಗಿಂತಲೂ ಎಸ್‌ಡಿಪಿಐ ಅಭ್ಯರ್ಥಿಗಳು ಹೆಚ್ಚು ಮತಗಳನ್ನು ಪಡೆದಿರುವುದು ಗಮನಾರ್ಹ.ಪರಿಶಿಷ್ಟ ಮಹಿಳೆಗೆ ಮೀಸಲಾಗಿದ್ದ ವಾರ್ಡ್ ಸಂಖ್ಯೆ-2ರಿಂದ ಎಸ್‌ಡಿಪಿಐ ಅಭ್ಯರ್ಥಿಯಾಗಿದ್ದ ಸ್ಪರ್ಧಿಸಿದ್ದ ಲತಾ ಅವರಿಗೆ 102 ಮತಗಳು ಲಭಿಸಿದ್ದವು. ಇಲ್ಲಿ ಜೆಡಿಎಸ್ ಅಭ್ಯರ್ಥಿ 57 ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ 184 ಮತಗಳನ್ನು ಪಡೆದಿದ್ದರು.ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದ್ದ ವಾರ್ಡ್ ಸಂಖ್ಯೆ- 3ರಲ್ಲಿ ಎಸ್‌ಡಿಪಿಐ ವತಿಯಿಂದ ಸ್ಪರ್ಧಿಸಿದ್ದ ಮೊಹಮ್ಮದ್ ಶಫಿ ಅವರು 52 ಮತಗಳನ್ನು ಪಡೆದಿದ್ದರು. ಇಲ್ಲಿ ಜೆಡಿಎಸ್ ಅಭ್ಯರ್ಥಿ 34, ಕೆಜೆಪಿ ಅಭ್ಯರ್ಥಿ 2 ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೇವಲ 1 ಮತವನ್ನು ಪಡೆದಿದ್ದರು ಎನ್ನುವುದು ಗಮನಾರ್ಹ.ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದ್ದ ವಾರ್ಡ್ ಸಂಖ್ಯೆ 7ರಲ್ಲಿ ಎಸ್‌ಡಿಪಿಐ ಅಭ್ಯರ್ಥಿಯಾಗಿದ್ದ ಗಫರ್ ಬೇಗ್ ಅವರು 22 ಮತಗಳನ್ನು ಹಾಗೂ ಪರಿಶಿಷ್ಟರಿಗೆ ಮೀಸಲಾಗಿದ್ದ ವಾರ್ಡ್ 8ರಲ್ಲಿ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಬಿ.ರಾಜು 19 ಮತಗಳನ್ನು ಪಡೆದಿದ್ದರು.ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ವಾರ್ಡ್ 9ರಲ್ಲಿ ಎಸ್‌ಡಿಪಿಐ ವತಿಯಿಂದ ಸ್ಪರ್ಧಿಸಿದ್ದ ರೇಶ್ಮಾ ಅವರಿಗೆ 16 ಮತಗಳು ಲಭಿಸಿದ್ದವು. ಇಲ್ಲಿ ಜೆಡಿಎಸ್ ಅಭ್ಯ 197 ಮತಗಳಿಂದ ಜಯಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ 98 ಮತಗಳನ್ನು ಪಡೆದಿದ್ದು, ಕೇವಲ 6 ಮತಗಳ ಅಂತರದಿಂದ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಬಿಜೆಪಿ ಅಭ್ಯರ್ಥಿ 104 ಮತ ಪಡೆದಿದ್ದರು.ಕೋಮುವಾದಿ ಪಕ್ಷಗಳಿಗೆ ವರದಾನ?

ಎಸ್‌ಡಿಪಿಐ ಅಭ್ಯರ್ಥಿಗಳ ಸ್ಪರ್ಧೆಯಿಂದಾಗಿ ಜಿಲ್ಲೆಯ ಜಾತ್ಯತೀತ ಮತಗಳು ವಿಭಜನೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ಆಗಿದ್ದ ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರ ಮತಗಳು ವಿಭಜನೆಯಾದರೆ ಕೋಮುವಾದಿ ಪಕ್ಷಗಳಿಗೆ ಲಾಭವಾಗುವ ಆತಂಕ ಪ್ರಜ್ಞಾವಂತ ಮತದಾರರಲ್ಲಿ ಕಾಡುತ್ತಿದೆ.ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರದಲ್ಲಿ ದಲಿತರು, ಹಿಂದುಳಿದವರು ಹಾಗೂ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ, ಎಸ್‌ಡಿಪಿಐ ಅಭ್ಯರ್ಥಿಗಳು ಈ ಮತಗಳನ್ನು ತಮ್ಮತ್ತ ಸೆಳೆದರೆ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಪ್ರತಿಕ್ರಿಯಿಸಿ (+)