ಮೊನಚು ವ್ಯಂಗ್ಯ

7

ಮೊನಚು ವ್ಯಂಗ್ಯ

Published:
Updated:
ಮೊನಚು ವ್ಯಂಗ್ಯ

ಪತ್ರಿಕೆಗಳ ಮೂಲೆಯೊಂದರಲ್ಲಿ ಪ್ರಕಟವಾಗುವ ವ್ಯಂಗ್ಯಚಿತ್ರಗಳು ಓದುಗರ ಗಮನ ಸೆಳೆಯುತ್ತವೆ. ಪತ್ರಿಕೆಯ ಲೇಖನಗಳಿಗಿಂತಲೂ ಅವು ಹೆಚ್ಚು ಪ್ರಭಾವಶಾಲಿಯಾಗಿ ಬೆಳೆದಿವೆ. ವ್ಯಂಗ್ಯ ಚಿತ್ರಗಳು ಸರ್ವಾಧಿಕಾರಿಗಳನ್ನು, ಆಡಳಿತ ಚುಕ್ಕಾಣಿ ಹಿಡಿದವರನ್ನು ನಡುಗಿಸುವ ಗುಣ ಹೊಂದಿವೆ.



ವ್ಯಂಗ್ಯಚಿತ್ರಕಾರನ ವಿಡಂಬನಾತ್ಮಕ ಕುಂಚದ ಗೆರೆಗಳು ಇಂದು ವಿಶ್ವಮನ್ನಣೆ ಗಳಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಪತ್ರಕರ್ತನೇ ವ್ಯಂಗ್ಯಚಿತ್ರಕಾರನಾಗಿದ್ದಾಗ ಅದರ ಮೊನಚು ಮತ್ತಷ್ಟು ತೀಕ್ಷ್ಣವಾಗಿರುತ್ತದೆ. ಈ ಮಾತುಗಳನ್ನು ಪುಷ್ಠೀಕರಿಸುವಂತಿವೆ ವ್ಯಂಗ್ಯಚಿತ್ರಕಾರ, ಪತ್ರಕರ್ತ ರಶೀದ್ ಕಪ್ಪನ್ ಅವರ ವ್ಯಂಗ್ಯಚಿತ್ರಗಳು.



ಪತ್ರಕರ್ತರದ್ದು ಅವಸರದ ಸಾಹಿತ್ಯ ಹಾಗೂ ಸದಾ ಒತ್ತಡದಲ್ಲಿ ನಲುಗುವವರು ಎಂಬುದನ್ನು ಸ್ವತಃ ಬಲ್ಲವರು ರಷೀದ್. ಇಂತಹ ನಿತ್ಯದ ತವಕ, ತಲ್ಲಣಗಳನ್ನು ಕಂಡ ಅವರು ಪತ್ರಿಕಾ ರಂಗದ ಒಳ-ಹೊರಗನ್ನು ತಮ್ಮದೇ ಶೈಲಿಯಲ್ಲಿ ರೇಖೆಗಳ ಮೂಲಕ ಬಿಂಬಿಸಿದ್ದಾರೆ.



ಅವರು `ನಾಸ್ಟಾಲ್ಜಿಯಾ~ ಹೆಸರಿನಡಿಯಲ್ಲಿ ಆಯ್ದ 50 ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಕಳೆದ 3 ವರ್ಷದಲ್ಲಿ ಸಂಭವಿಸಿದ ನಾಟಕೀಯ, ಕುತೂಹಲಕಾರಿ ಘಟನೆಗಳೇ ಅವರ ವಿಡಂಬನೆಗೆ ಆಹಾರ. ಈ ಸಂದರ್ಭದಲ್ಲಿ ಅವರು ಅಂಧರಿಗಾಗಿ 8 ಟ್ಯಾಕ್ಟಾಯಿಲ್ ಕಾರ್ಟೂನ್‌ಗಳನ್ನು ಸಹ ಪ್ರದರ್ಶಿಸಿದ್ದಾರೆ.



ಜಾರ್ಜ್ ಬುಷ್ ಮೇಲೆ ಶೂ ಎಸೆದು ಸುದ್ದಿಯಾದ ಪತ್ರಕರ್ತ, ಪ್ರೀತಿಯ ಸೀಮೋಲ್ಲಂಘನದ ಪ್ರತೀಕದಂತಿರುವ ಸಾನಿಯಾ- ಶೋಯಬ್ ಮಲ್ಲಿಕ್ ಪ್ರೇಮ ವಿವಾಹ, ಬೋಪೋರ್ಸ್ ಹಗರಣ, ಪ್ರತಿದಿನ ಅರ್ಥ್ ಅವರ್ ಆಚರಿಸುವಂತೆ ಮಾಡುವ ಬೆಸ್ಕಾಂನ ಕಾರ್ಯವೈಖರಿ, ಗೂಳಿಹಟ್ಟಿ ಶೇಖರ್ ಅವರ ಆತ್ಮಹತ್ಯೆ ನಾಟಕ, ಬಿಎಂಟಿಸಿ ಬಸ್‌ನಲ್ಲಿ ಚಾಲಕ ಕಮ್ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುವ ಚಾಲಕನ ಪಡಿಪಾಟಲು, ಹಗಲು ದರೋಡೆಗೆ ಸಿಕ್ಕು ನಲುಗುತ್ತಿರುವ ಗಣಿ ಉದ್ಯಮ,



2ಜಿ ಹಗರಣದಲ್ಲಿ ಭಾಗಿಯಾಗಿ ಜೈಲು ಸೇರಿದ ರಾಜಾ ಮತ್ತು ಕನಿಮೋಳಿ ಜೈಲಿನಲ್ಲಿದ್ದುಕೊಂಡೇ ಫೋನ್‌ನಲ್ಲಿ ಸಂಭಾಷಣೆ ನಡೆಸುತ್ತಿರುವ ಸನ್ನಿವೇಶ ಇವೆಲ್ಲವೂ ಅವರ ರೇಖೆಗಳಲ್ಲಿ ತೀಕ್ಷ್ಣವಾಗಿ ಮೂಡಿಬಂದಿವೆ. ಇವು ನೋಡುಗರಲ್ಲಿ ಕಚಗುಳಿ ಇಡುತ್ತದೆ. 



ವ್ಯಂಗ್ಯಚಿತ್ರಗಳು ಸಮಾಜದ ಆಗುಹೋಗುಗಳಿಗೆ ಕನ್ನಡಿ ಹಿಡಿಯುತ್ತವೆ. ಅವುಗಳ ಉದ್ದೇಶ ಬರೀ ಹಾಸ್ಯವಷ್ಟೇ ಅಲ್ಲ. ಶಿಕ್ಷಣವೂ ಆಗಿದೆ. ಜನರನ್ನು ನಗಿಸುತ್ತಲೇ ಅವರ ತಪ್ಪುಗಳನ್ನು ವ್ಯಂಗ್ಯಚಿತ್ರಗಳು ಎತ್ತಿತೋರಿಸುತ್ತವೆ.



ಈ ಮೂಲಕ ಸಮಾಜವನ್ನು ನಿಧಾನವಾಗಿ ಪರಿವರ್ತಿಸಲು ಅವು ಸಹಕಾರಿಯಾಗಿವೆ. ಅಲ್ಲದೇ ಸಾರ್ವಜನಿಕ ಅಭಿಪ್ರಾಯ ರೂಪಿಸಲೂ ನೆರವಾಗುತ್ತವೆ.



ಈ ಎಲ್ಲ ಗುಣ ಹೊಂದಿರುವ ರಶೀದ್ ಕಪ್ಪನ್ ಅವರ ವ್ಯಂಗ್ಯಚಿತ್ರಗಳ ಪ್ರದರ್ಶನ ಆ.25ರ ವರೆಗೆ ಇರುತ್ತದೆ.



ಸ್ಥಳ: ಇಂಡಿಯನ್ ಕಾರ್ಟೂನ್ ಗ್ಯಾಲರಿ, ನಂ.1, ಮಿಡ್‌ಫೋರ್ಡ್ ಹೌಸ್, ಎಂ.ಜಿ.ರಸ್ತೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry