ಬುಧವಾರ, ನವೆಂಬರ್ 20, 2019
25 °C

ಮೊಬೈಲ್‌ನಲ್ಲಿ ಮತ ಕೋರಿಕೆ

Published:
Updated:

ಬೆಂಗಳೂರು: `ನಾನು ಎಚ್.ಡಿ. ಕುಮಾರಸ್ವಾಮಿ... ನಿಮ್ಮ ಮನೆ ಮಗ... ನಿಮ್ಮ ಸೇವೆಗೆ ಸದಾ ಸಿದ್ಧ... ರಾಜ್ಯದ ಅಭಿವೃದ್ಧಿ ಹಾದಿ ತಪ್ಪಿದೆ... ಜೆಡಿಎಸ್ ಬೆಂಬಲಿಸುವ ಮೂಲಕ ಅಭಿವೃದ್ಧಿಯ ಹರಿಕಾರರಾಗಿ'. ಇದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಮಾಡುತ್ತಿರುವ ಭಾಷಣದ ಸಾಲು ಅಲ್ಲ.ಇದು ಅವರು ರಾಜ್ಯದ ಮತದಾರರ ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಖಾಸಗಿಯಾಗಿ ಹೇಳುತ್ತಿರುವ ಮಾತು! ಅರೇ, ಇದು ಹೇಗೆ ಎಂದು ಪ್ರಶ್ನಿಸುತ್ತೀರಾ? ಇದು ಸಾಧ್ಯ, ಸುಲಭ ಎನ್ನುತ್ತಿದ್ದಾರೆ ಜೆಡಿಎಸ್ ಕಾರ್ಯಕರ್ತರು.ರಾಜ್ಯ ವಿಧಾನಸಭೆಗೆ ಮೇ 5ರಂದು ನಡೆಯುವ ಚುನಾವಣೆಗೆ ಕಾವು ಏರುತ್ತಿದೆ. ಅದೇ ರೀತಿ ಪ್ರಚಾರದ ಭರಾಟೆಯೂ ಜೋರಾಗಿಯೇ ನಡೆದಿದೆ. ತನಗೇ ಮತ ನೀಡುವಂತೆ ಮತದಾರರನ್ನು ವೈಯಕ್ತಿಕವಾಗಿ ಕೋರುವ ಉದ್ದೇಶದಿಂದ ಜೆಡಿಎಸ್, ಇಂಥದೊಂದು ಪ್ರಯೋಗಕ್ಕೆ ಮುಂದಾಗಿದೆ.

`ಇದು ಧ್ವನಿಯ ರೂಪದಲ್ಲಿರುವ ಎಸ್‌ಎಂಎಸ್. ಕುಮಾರಸ್ವಾಮಿ ಅವರು ನಾಡಿನ ಜನತೆಯಿಂದ ಮತ ಯಾಚಿಸುವ ಮುದ್ರಿತ ಹೇಳಿಕೆಯೊಂದನ್ನು ಖಾಸಗಿ ಏಜೆನ್ಸಿಯೊಂದಕ್ಕೆ ನೀಡಲಾಗಿದೆ. ಏಜೆನ್ಸಿಯ ಬಳಿ ಬಹಳಷ್ಟು ಸಂಖ್ಯೆಯ ಮತದಾರರ ಮೊಬೈಲ್ ದೂರವಾಣಿ ಸಂಖ್ಯೆ ಇದೆ. ಮತದಾರರಿಗೆ ಧ್ವನಿ ಎಸ್‌ಎಂಎಸ್ ರವಾನಿಸುವ ಕಾರ್ಯವನ್ನು ಏಜೆನ್ಸಿಯವರೇ ಮಾಡುತ್ತಿದ್ದಾರೆ' ಎಂದು ಪಕ್ಷದ ಕಾರ್ಯಕರ್ತರೊಬ್ಬರು ತಿಳಿಸಿದರು. ಈ ಧ್ವನಿ ಎಸ್‌ಎಂಎಸ್ ರಾಜ್ಯದ ಎಲ್ಲ ಭಾಗಗಳಿಗೂ ರವಾನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)