ಸೋಮವಾರ, ಅಕ್ಟೋಬರ್ 21, 2019
25 °C

ಮೊಬೈಲ್‌ನಿಂದ ಮೊಬೈಲ್‌ಗೆ...

Published:
Updated:
ಮೊಬೈಲ್‌ನಿಂದ ಮೊಬೈಲ್‌ಗೆ...

ಪೈರಸಿಯಿಂದಾಗಿ ಹಾಡುಗಳ ಮಾರುಕಟ್ಟೆ ಬಿದ್ದುಹೋಗಿದೆ ಎಂದು ಚಿತ್ರೋದ್ಯಮ ಕೊರಗುತ್ತಿರುವ ಸಂದರ್ಭದಲ್ಲಿ, `ನಮ್ಮಣ್ಣ ಡಾನ್~ ತಂಡ ಪರಿಹಾರದ ಸಾಧ್ಯತೆಯೊಂದನ್ನು ಪರಿಚಯಿಸಿದೆ, ಮೊಬೈಲ್ ಮೂಲಕ.ಮೊಬೈಲ್‌ಗಳಲ್ಲಿ ರಿಂಗ್‌ಟೋನ್ ಆಯ್ಕೆ ಮಾಡಿಕೊಳ್ಳುವಂತೆ ಗೀತೆಗಳನ್ನೂ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು `ನಮ್ಮಣ್ಣ ಡಾನ್~ ಚಿತ್ರರಸಿಕರಿಗೆ ಒದಗಿಸಿದೆ. `ಕ್ಯಾಸೆಟ್ ಕಾಲ ಮುಗಿಯಿತು. ಸೀಡಿಗಳೂ ಈಗ ಹಳತೆನ್ನಿಸುತ್ತಿವೆ. ಈಗೇನಿದ್ದರೂ ಮೊಬೈಲ್ ಜಮಾನ~ ಎನ್ನುವ ರಮೇಶ್ ಅರವಿಂದ್ ಮಾತುಗಳಲ್ಲಿ `ನಾಳೆಗಳ ನಿರೀಕ್ಷೆ~ ಇಣುಕುತ್ತದೆ.`ನಮ್ಮಣ್ಣ ಡಾನ್~ ರಮೇಶ್ ನಾಯಕರಾಗಿ ನಟಿಸಿ, ನಿರ್ದೇಶಿಸಿರುವ ಚಿತ್ರ. ಏನಾದರೂ ಹೊಸತನ್ನು ಮಾಡಬೇಕು ಎಂದು ಹೊರಟ ಅವರಿಗೆ ಹೊಳೆದಿರುವುದು ಮೊಬೈಲ್‌ಗಳ ಮೂಲಕ ಚಿತ್ರದ ಗೀತೆಗಳನ್ನು ಕೇಳುಗರಿಗೆ ನೇರವಾಗಿ ತಲುಪಿಸುವ ಐಡಿಯಾ.ಸಿನಿಮಾದಲ್ಲಿ ಮೂರು ಗೀತೆಗಳಿವೆ. ನಿರ್ದಿಷ್ಟ ಮೊತ್ತವನ್ನು ಕೊಟ್ಟು ಎಲ್ಲ ಗೀತೆಗಳನ್ನು ಅಥವಾ ಇಷ್ಟಪಟ್ಟ ನಿರ್ದಿಷ್ಟ ಗೀತೆಯನ್ನು ಆಯ್ದುಕೊಳ್ಳಬಹುದು. ಈ ವಿಧಾನದ ಮೂಲಕ ಸಾಂಪ್ರದಾಯಿಕ ಮಾರುಕಟ್ಟೆಯ ಲೆಕ್ಕಾಚಾರಕ್ಕಿಂತ ದುಪ್ಪಟ್ಟು ಲಾಭ ಗಳಿಸುವ ನಿರೀಕ್ಷೆ ರಮೇಶ್ ಅವರದ್ದು.ತಮ್ಮ ಪ್ರಯತ್ನ ಒಂದು ಪ್ರಯೋಗ ಎನ್ನುವ ಅರಿವು ರಮೇಶ್ ಅವರಿಗಿದೆ. `ಚಿತ್ರತಂಡದ ಎಲ್ಲರೂ ಗೆಳೆಯರೇ ಆದುದರಿಂದ ಈ ಪ್ರಯೋಗಕ್ಕೆ ಮುಂದಾಗಲು ಸಾಧ್ಯವಾಗಿದೆ.ಮುಂದಿನ ಚಿತ್ರದಲ್ಲಿ ಇದು ಸಾಧ್ಯವಾಗದೆ ಹೋದರೂ ಅಚ್ಚರಿಯಿಲ್ಲ~ ಎನ್ನುವ ರಮೇಶ್‌ಗೆ, ಮೊಬೈಲ್ ಮೂಲಕ ಹಾಡುಗಳನ್ನು ತಲುಪಿಸುವ ಪ್ರಕ್ರಿಯೆಯ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮಗಳು ಇನ್ನು ಮುಂದೆಯಷ್ಟೇ ಸ್ಪಷ್ಟವಾಗಬೇಕಾಗಿದೆ.ಅಂದಹಾಗೆ, ಚಿತ್ರವೊಂದರ ಗೀತೆಗಳನ್ನು ಮೊಬೈಲ್‌ಗಳಿಗೆ ನೇರವಾಗಿ ತಲುಪಿಸುತ್ತಿರುವುದು ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲು. ಆ ಖುಷಿಯಲ್ಲಿ ತೇಲುತ್ತಿದ್ದ ಚಿತ್ರತಂಡ, ಸಿನಿಮಾ ಗೆಲ್ಲುವ ಬಗ್ಗೆಯೂ ವಿಶ್ವಾಸ ವ್ಯಕ್ತಪಡಿಸಿತು.ಇಪ್ಪತ್ತೆರಡರ ಹರೆಯದ ಮ್ಯಾಥ್ಯು ಮನು ಈ ಚಿತ್ರದ ಸಂಗೀತ ನಿರ್ದೇಶಕರು. ರಮೇಶ್ ಅವರೊಂದಿಗೆ ಕೆಲಸ ಮಾಡಿದ ಖುಷಿಯನ್ನು ಹಂಚಿಕೊಂಡ ಅವರು, `ಇಡೀ ಚಿತ್ರತಂಡ ಒಂದು ಸಿಹಿ ಲಾಡುವಾದರೆ, ಅದರೊಳಗಿನ ಗೋಡಂಬಿ ತುಣುಕು ನಾನು~ ಎಂದು ತಮ್ಮನ್ನು ಬಣ್ಣಿಸಿಕೊಂಡರು.ಮೋನಾ ಪರ್ವೇಶ್ ಹಾಗೂ ಸನಾತನಿ ಚಿತ್ರದ ನಾಯಕಿಯರು. ಇಬ್ಬರಿಗೂ ಡಾನ್ ಸಹವಾಸ ಖುಷಿಕೊಟ್ಟಿದೆ.`ನಮ್ಮಣ್ಣ ಡಾನ್~ ಗೀತೆಗಳನ್ನು ಮೊಬೈಲ್‌ಗಳಿಗೆ ತಲುಪಿಸುತ್ತಿರುವ `ಐಡಿಯಾ ಸೆಲ್ಯುಲರ್~ನ ಸಿಇಒ ಶಿವ ಗಣಪತಿ ಕಂಪನಿಯ ಅಧಿಕಾರಿಗಳು, ಚಿತ್ರದ ನಿರ್ಮಾಪಕ ರವಿ ಜೋಶಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)