ಮೊಬೈಲ್: ಅಗ್ಗದ ಕರೆ ಯುಗಾಂತ್ಯ?

7

ಮೊಬೈಲ್: ಅಗ್ಗದ ಕರೆ ಯುಗಾಂತ್ಯ?

Published:
Updated:
ಮೊಬೈಲ್: ಅಗ್ಗದ ಕರೆ ಯುಗಾಂತ್ಯ?

ಚೀನಾ ಹೊರತುಪಡಿಸಿದರೆ ಪ್ರಪಂಚದಲ್ಲಿಯೇ ಅತಿ ದೊಡ್ಡ ಮೊಬೈಲ್ ಮಾರುಕಟ್ಟೆ ಭಾರತ. 75 ಹ್ಯಾಂಡ್‌ಸೆಟ್ ತಯಾರಿಕಾ ಕಂಪೆನಿಗಳು, 15ಕ್ಕೂ ಹೆಚ್ಚು ದೂರವಾಣಿ ಸೇವಾ ಪೂರೈಕೆ ಕಂಪೆನಿಗಳಿರುವ ದೇಶದಲ್ಲಿ ಒಟ್ಟು ಚಂದಾದಾರರ ಸಂಖ್ಯೆ ಕಳೆದ ಜೂನ್ ತಿಂಗಳಲ್ಲಿ 826 ದಶಲಕ್ಷ ದಾಟಿದೆ.

 

ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ದೇಶದ ಮೊಬೈಲ್ ದೂರವಾಣಿ ವಹಿವಾಟು 76 ಶತಕೋಟಿ ಡಾಲರ್ (ರೂ.3,44,921 ಕೋಟಿ) ದಾಟಬಹುದು ಎಂದು ಅಂದಾಜಿಸಲಾಗಿದೆ.!ಈ ಅಂಕಿ ಅಂಶಗಳ ಮೂಲಕ ದೇಶಿ ಮೊಬೈಲ್ ಮಾರುಕಟ್ಟೆಯ  ಆಳ-ಅಗಲ ಅರ್ಥವಾಗಬಹುದು. ಅಷ್ಟೇ ಅಲ್ಲ, ಪ್ರಪಂಚದಲ್ಲೇ ಮೊಬೈಲ್ ಕರೆಗಳಿಗೆ ಅತ್ಯಂತ ಕಡಿಮೆ ದರ ಇರುವುದು ಭಾರತದಲ್ಲಿ. ಹೌದು.! 2009ರಲ್ಲಿ ಟಾಟಾ ಟೆಲಿಸರ್ವೀಸಸ್ `ಡೊಕೊಮೊ~ ಮೂಲಕ ಮಾಡಿದ ಮಾರುಕಟ್ಟೆ ಜಾದೂ  ಅಂತದ್ದು.! `ಪ್ರತಿ ಸೆಕೆಂಡ್ ಬಿಲ್ಲಿಂಗ್~ (per second billing) ಯೋಜನೆಯನ್ನು ಜಾರಿಗೆ ತಂದಿದ್ದೇ ಟಾಟಾ.ಮಾತನಾಡುವ ಪ್ರತಿ ಸೆಕೆಂಡ್‌ಗಳಿಗೆ ಮಾತ್ರ ಹಣ ಪಾವತಿಸಿ, ಅನಗತ್ಯ ಶುಲ್ಕ ಏಕೆ ಎನ್ನುವ  `ಡೊಕೊಮೊ~ ಜಾಹೀರಾತು ಗ್ರಾಹಕನ ಮನ ಗೆದ್ದಿತು. ದಿನ ಬೆಳಗಾಗುವುದರ ಒಳಗೆ `ಡೊಕೊಮೊ~ `ಸಿಮ್~ಗಳಿಗೆ ಚಿನ್ನದ ಮೌಲ್ಯ ಬಂದುಬಿಟ್ಟಿತು.

ಉಳಿದ ಕಂಪೆನಿಗಳು ಅನಿವಾರ್ಯವಾಗಿ ದರ ಇಳಿಸಬೇಕಾಯಿತು.

ಗ್ರಾಹಕನೇ ನಿಜವಾದ ದೊರೆಯಾದ. ಹೀಗೆ ಪ್ರಾರಂಭಗೊಂಡ ಅಗ್ಗದ ಕರೆಗಳ ದರ ಸಮರ `ಮೊಬೈಲ್ ನಂಬರ್ ಪೋರ್ಟೆಬಿಲಿಟಿ~ ಮತ್ತು (ಎಂಎನ್‌ಪಿ) `3ಜಿ~  ಜಾರಿಯೊಂದಿಗೆ ಮತ್ತೊಂದು ಸ್ವರೂಪ ಪಡೆಯಿತು. ಗ್ರಾಹಕ ಸೇವಾ ಸಂಸ್ಥೆಗಳನ್ನು ಬದಲಿಸದಂತೆ ಮೊಬೈಲ್ ಕಂಪೆನಿಗಳು  ಹಲವು ಕೊಡುಗೆಗಳನ್ನು ಪ್ರಕಟಿಸಿದವು.ಗ್ರಾಹಕ ಬಯಸಿದ ಸೇವೆ, ಬೇಕಾದ ಪ್ಲಾನ್, ಉಚಿತ ಕರೆ ಸಮಯ ಒಂದೇ, ಎರಡೇ ಹೀಗೆ ಒಟ್ಟಾರೆ ಗ್ರಾಹಕ ಸೇವೆಗಳ ಸಂಪೂರ್ಣ ಚಿತ್ರಣವೇ ಬದಲಾಯಿತು. `ಎಂಎನ್‌ಪಿ~ಯಿಂದ ಹೆಚ್ಚು ಲಾಭವನ್ನು ಐಡಿಯಾ ಮತ್ತು ಏರ್‌ಟೆಲ್ ಪಡೆದುಕೊಂಡರೆ, ಸರ್ಕಾರಿ ಸ್ವಾಮ್ಯದ `ಬಿಎಸ್‌ಎನ್‌ಎಲ್~ ದೊಡ್ಡ ಪ್ರಮಾಣದ ಚಂದಾದಾರರನ್ನು ಕಳೆದುಕೊಂಡಿತು.ಈಗ ಇವೆಲ್ಲವೂ ಬದಲಾಗಿ, ಅಗ್ಗದ ಕರೆಗಳ ಯುಗ ಕೊನೆಗೊಳ್ಳುವ ಕಾಲ ಸನ್ನಿಹಿತವಾಗಿದೆ.  `ಅಗ್ಗದ ಕರೆಗಳ ಮೂಲಕ ಮಾರುಕಟೆಯಲ್ಲಿ ತುಂಬಾ ದಿನ ನೆಲೆ ನಿಲ್ಲಲು ಸಾಧ್ಯವಿಲ್ಲ   ಎನ್ನುವುದನ್ನು ಇದಕ್ಕೆ ಮುನ್ನುಡಿ ಬರೆದ `ಡೊಕೊಮೊ~ವೇ ಬಹುಬೇಗ ಅರ್ಥಮಾಡಿಕೊಂಡಿತು. ಲಾಭದ ಸಮತೋಲನ ಕಾಯ್ದುಕೊಳ್ಳಲು ಕಂಪೆನಿ `ಎಸ್‌ಟಿಡಿ~ ಕರೆಗಳ ದರ ದ್ವಿಗುಣಗೊಳಿಸಿತು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಎಸ್‌ಎಂಎಸ್ ದರವನ್ನು ಕ್ರಮವಾಗಿ ಶೇ 67 ಮತ್ತು ಶೇ 25ರಷ್ಟು ಹೆಚ್ಚಿಸಿತು.  ಈಗ ಏರ್‌ಟೆಲ್ ಕರೆಗಳ ದರಗಳ ಯುಗಾಂತ್ಯಕ್ಕೆ ಹೊಸ ಮುನ್ನುಡಿ ಬರೆದಿದೆ. ದೇಶದಲ್ಲಿ ಗರಿಷ್ಠ ಸಾಮರ್ಥ್ಯದ ಮೂರನೆಯ ತಲೆಮಾರಿನ ತರಂಗಾಂತರ ಸೇವೆ (high speed 3G) ನಿರೀಕ್ಷಿತ ಮಟ್ಟದ ಲಾಭ ತಂದುಕೊಡದಿರುವುದು, ಬ್ರಾಡ್‌ಬ್ಯಾಂಡ್ ನಿಸ್ತಂತು ಸಂಪರ್ಕಕ್ಕಾಗಿ(broadband wireless access -BWA) ಕಂಪೆನಿಗಳು ದುಬಾರಿ ಹಣ ಪಾವತಿಸಿರುವುದು, ಮೊಬೈಲ್ ಗೋಪುರಗಳ ತೆರಿಗೆ ಹೆಚ್ಚಿರುವುದು (mobile tower) ಮತ್ತು ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಜಾರಿಗೊಳಿಸಿರುವ ಬಿಗಿ ನಿಯಮಗಳು ಮೊಬೈಲ್ ಕಂಪೆನಿಗಳ ವರಮಾನಕ್ಕೆ ಪೆಟ್ಟು ನೀಡಿವೆ.ಈ ನಷ್ಟವನ್ನು ಗ್ರಾಹಕರಿಂದ ಭರ್ತಿ ಮಾಡಿಕೊಳ್ಳುವುದು ಈಗಿನ ಬೆಲೆ ಏರಿಕೆಗೆ ಮುಖ್ಯ ಕಾರಣ. ಆದರೆ, ಅಗ್ಗದ ಕರೆಗಳಿಗೆ ಅಬ್ಬರದ ಪ್ರಚಾರ ನೀಡಿದ ಕಂಪೆನಿಗಳು,  ಬೆಲೆ ಏರಿಕೆಯ ಸಂದರ್ಭದಲ್ಲಿ ಮಾತ್ರ ಮೌನಕ್ಕೆ ಶರಣಾಗಿವೆ. ಕೇವಲ ಆಯ್ದ ದೂರವಾಣಿ ವೃತ್ತಗಳಲ್ಲಿ ಮಾತ್ರ ದರಗಳನ್ನು ಹೆಚ್ಚಿಸಿ, ನಂತರ ನಿಧಾನವಾಗಿ ಉಳಿದ ವೃತ್ತಗಳಿಗೂ ವಿಸ್ತರಿಸುವ ಜಾಣತನ ಮೆರೆಯುತ್ತಿವೆ.  ದೇಶದ ಅತಿದೊಡ್ಡ ಮೊಬೈಲ್ ಸೇವಾ ಪೂರೈಕೆ ಕಂಪೆನಿ ಏರ್‌ಟೆಲ್ ಕರ್ನಾಟಕವೂ ಸೇರಿದಂತೆ 18 ದೂರವಾಣಿ ವೃತ್ತಗಳಲ್ಲಿ ತನ್ನ ಕರೆ ದರವನ್ನು ಶೇ 20ರಿಂದ 50ರಷ್ಟು ಹೆಚ್ಚಿಸಿದೆ. ಇದರ ಬೆನ್ನ ಹಿಂದೆಯೇ ಐಡಿಯಾ ಸೆಲ್ಯುಲರ್ ಮತ್ತು ವೋಡಾಪೋನ್ ಎಸ್ಸಾರ್ `ಪ್ರತಿ ಸೆಕೆಂಡ್ ಬಿಲ್ಲಿಂಗ್~ ಯೋಜನೆಯಡಿ ಪ್ರತಿ ಸೆಕೆಂಡ್‌ಗೆ 1 ಪೈಸೆ ಕರೆ ದರವನ್ನು 1.20ಕ್ಕೆ ಹೆಚ್ಚಿಸಿದೆ. ವೊಡಾಫೋನ್ 12 ದೂರವಾಣಿ ವೃತ್ತಗಳಲ್ಲಿ ಕರೆಗಳ ದರವನ್ನು ಪ್ರತಿ ಸೆಕೆಂಡ್‌ಗೆ 1.5 ಪೈಸೆಗಳಿಗೆ ಹೆಚ್ಚಿಸಲು ನಿರ್ಧರಿಸಿದೆ.`ಜಿಎಸ್‌ಎಂ~ (Global Syst­em for Mobile Commu­ni­cations)  ಕ್ಷೇತ್ರದಲ್ಲಿ ಏರ್‌ಟೆಲ್‌ನ ನೇರ ಪ್ರತಿಸ್ಪರ್ಧಿ ವೊಡಾಪೋನ್ ಮತ್ತು ಐಡಿಯಾ ಸೆಲ್ಯುಲರ್. `ಐಡಿಯಾ~ ಈಗಾಗಲೇ ಪೂರ್ವಪಾವತಿ ಕರೆ ದರಗಳನ್ನು ಹೆಚ್ಚಿಸಿದೆ.ಸದ್ಯ ಏರ್‌ಟೆಲ್‌ನಿಂದ ಏರ್‌ಟೆಲ್‌ಗೆ ಮಾಡುವ ಮೊಬೈಲ್ ಮತ್ತು ಸ್ಥಿರ ದೂರವಾಣಿ ಕರೆಗಳಿಗೆ ಪ್ರತಿ ನಿಮಿಷಕ್ಕೆ 50 ಪೈಸೆ ದರ  ಇದೆ. ಇದು 60 ಪೈಸೆಗಳಾಗಲಿದೆ. ಏರ್‌ಟೆಲ್ ಹೊರತುಪಡಿಸಿ ಇತರೆ ಮೊಬೈಲ್ ಜಾಲಗಳಿಗೆ ಕರೆ ಮಾಡಿದರೆ ಹೆಚ್ಚುವರಿ 30ಪೈಸೆ ಪಾವತಿಸಬೇಕು. ಅಂದರೆ ಪ್ರತಿ ನಿಮಿಷಕ್ಕೆ 90 ಪೈಸೆ ತಗುಲುತ್ತದೆ. ಪ್ರತಿ ಸೆಕೆಂಡ್ ಶುಲ್ಕ ಯೋಜನೆಯೂ ಪರಿಷ್ಕರಣಗೆಗೊಳ್ಳಲಿದೆ.ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ ಬಿಡುಗಡೆ ಮಾಡಿರುವ ಮೇ ತಿಂಗಳ ಅಂಕಿ ಅಂಶಗಳಂತೆ  ಭಾರ್ತಿ ಏರ್‌ಟೆಲ್ ದೇಶದಾದ್ಯಂತ 167 ದಶಲಕ್ಷ ಚಂದಾದಾರರನ್ನು ಹೊಂದಿದೆ. ವೊಡಾಪೋನ್ ಮತ್ತು ಐಡಿಯಾ ಕ್ರಮವಾಗಿ 139 ಮತ್ತು 93 ದಶಲಕ್ಷ ಚಂದಾದಾರರನ್ನು ಹೊಂದಿವೆ.  ವಿಶೇಷವೆಂದರೆ `ದರ ಸಮರದ~ ಅವಧಿಯಲ್ಲಿ (ಕಳೆದ 2ವರ್ಷ) ದೇಶದ ದೂರವಾಣಿ ಸಂಪರ್ಕ ಜಾಲಕ್ಕೆ 400 ದಶಲಕ್ಷ ಚಂದಾದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ದೂರವಾಣಿ ಸಾಂದ್ರತೆ (tele-density) ಕಳೆದ ಏಪ್ರಿಲ್ ತಿಂಗಳ ಅಂತ್ಯದ ವೇಳೆಗೆ ಶೇ 73ರಷ್ಟಾಗಿದೆ.ಉದ್ಯಮ ಮೂಲಗಳ ಪ್ರಕಾರ ಏರ್‌ಟೆಲ್‌ನ ನಡೆ ಚಿಕ್ಕ ಚಿಕ್ಕ ಪ್ರಮಾಣದ ಮೊಬೈಲ್ ಸೇವಾ ಪೂರೈಕೆ ಕಂಪೆನಿಗಳಿಗೂ ಹರ್ಷ ತಂದಿದೆ. ಕಳೆದ ಕೆಲವು ವರ್ಷಗಳಿಂದ ನಷ್ಟದಲ್ಲಿದ್ದ ಈ ಕಂಪೆನಿಗಳಿಗೆ ಕರೆ ದರ ಏರಿಕೆ ಆರ್ಥಿಕ ಚೇತರಿಕೆ ನೀಡಲಿದೆ ಎನ್ನುತ್ತಾರೆ  ದೂರವಾಣಿ ಸಲಹಾ ಸಂಸ್ಥೆ `ಫಸ್ಟ್ ಇಂಡಿಯಾ~ ನಿರ್ದೇಶಕ ಮಹೇಶ್ ಉಪಾಲ್.ಹೊಸ ದೂರವಾಣಿ ಕಂಪೆನಿ ಯೂನಿನಾರ್ ಬೆಲೆ ಏರಿಕೆಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಿಲಯನ್ಸ್ ಕಮ್ಯುನಿಕೇಷನ್ಸ್ ಕೂಡ ಕರೆ ದರ ಏರಿಕೆ ಕುರಿತು ಪ್ರತಿಕ್ರಿಯಿಸಿಲ್ಲ.`ಮೊಬೈಲ್ ಕಂಪೆನಿಗಳು ದರ ಏರಿಕೆ ಮಾಡದಿದ್ದರೂ, ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವಷ್ಟು ವರಮಾನ ಹೊಂದಿವೆ. ಯಾವುದೇ ಮೊಬೈಲ್  ಕಂಪೆನಿಗಳು ನಷ್ಟದಲ್ಲಿ ಇಲ್ಲ. ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ ಬೆಲೆ ಏರಿಕೆಗೆ ನಿರ್ಬಂಧ ವಿಧಿಸಬೇಕು~ ಎನ್ನುತ್ತಾರೆ ಮುಂಬೈ ಮೂಲದ ದೂರವಾಣಿ ಸಲಹಾ ಸಂಸ್ಥೆಯೊಂದರ ಅಧ್ಯಕ್ಷ ಪ್ರದೀವ್ ದುವೆ.ಮೌಲ್ಯವರ್ಧಿತ ಸೇವೆಗಳಿಂದ (ವಿಎಎಸ್) ಬರುತ್ತಿರುವ ವರಮಾನ ಕುಸಿಯುತ್ತಿರುವುದೂ ಕರೆ ದರ ಏರಿಕೆಗೆ ಮತ್ತೊಂದು ಕಾರಣ. ಒಟ್ಟಾರೆ ನಿಸ್ತಂತು ದೂರವಾಣಿ ವರಮಾನಕ್ಕೆ ಮೌಲ್ಯವರ್ಧಿತ ಸೇವೆಗಳ ಕೊಡುಗೆ (ವಿಎಎಸ್) ಶೇ 31ರಷ್ಟಿದೆ.  ಸದ್ಯ ದೇಶದಲ್ಲಿ 50ಕ್ಕೂ ಹೆಚ್ಚು ಮೌಲ್ಯವರ್ಧಿತ ಸೇವೆಗಳ ಕಂಪೆನಿಗಳಿದ್ದು, ಸಂಗೀತ, ಸುದ್ದಿ, ಅಂತರ್ಜಾಲ, ಆರೋಗ್ಯ, ಶಿಕ್ಷಣ, ಮನೋರಂಜನೆ `ವಿಎಎಸ್~ ಮಾರುಕಟ್ಟೆಯಡಿ ಬರುತ್ತದೆ. ಆದರೆ, ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಸೇವೆ ಒದಗಿಸುವುದು ಕಂಪೆನಿಗಳ ಮುಂದಿರುವ ಸವಾಲು.ಸ್ಥಳೀಯ ಭಾಷೆಗಳಲ್ಲಿ `ಎಸ್‌ಎಂಎಸ್~ ಪಠ್ಯ ಒದಗಿಸುವ ತಾಂತ್ರಿಕ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಸೇವಾ ಲೋಪ, ವಿಳಂಬ, ಕಾನೂನು ಖಟ್ಲೆಗಳನ್ನೂ `ವಿಎಎಸ್~ ಉದ್ಯಮ ಎದುರಿಸುತ್ತಿದೆ. ಇದು ಏನೇ ಇರಲಿ, 2015ರ ವೇಳೆಗೆ ದೇಶದ `ವಿಎಎಸ್~ ಮಾರುಕಟ್ಟೆ ರೂ. 67,100 ಕೋಟಿ ತಲುಪಲಿದೆ ಎಂದು ಭಾರತೀಯ ಇಂಟರ್‌ನೆಟ್ ಮೊಬೈಲ್ ಸಂಘಟನೆ (ಐಎಎಂಎಐ) ಸಮೀಕ್ಷೆ ತಿಳಿಸಿದೆ. 2013ರ ವೇಳೆಗೆ ದೇಶದ ಮೊಬೈಲ್ ಚಂದಾದಾರ ಸಂಖ್ಯೆ 1.159 ಶತಕೋಟಿಗೆ ಏರಲಿದ್ದು, ಚೀನಾವನ್ನು ಹಿಂದಿಕ್ಕಲಿದೆ ಎಂದೂ ಅಂದಾಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry