ಮೊಬೈಲ್ ಅಪ್ಲಿಕೇಷನ್ಸ್‌ಗಳಿಗೆ ದಿಡ್ಡಿಬಾಗಿಲು

7

ಮೊಬೈಲ್ ಅಪ್ಲಿಕೇಷನ್ಸ್‌ಗಳಿಗೆ ದಿಡ್ಡಿಬಾಗಿಲು

Published:
Updated:

‘ಅಂಗಡಿಯಿಂದ ತರುವ ವಸ್ತುಗಳನ್ನು ಹಾಕಿ ಕೊಡುವ ಪ್ಲಾಸ್ಟಿಕ್ ಚೀಲವನ್ನೇ ಜತನದಿಂದ ಕಾಪಾಡುವ ಭಾರತೀಯರಿಗೆ ತಂತ್ರಜ್ಞಾನ ಹಳೆಯದಾಯಿತೆಂದು ಬೀಸಾಡಿ, ಹೊಸತನ್ನು ಅಳವಡಿಸಿಕೊಳ್ಳುವುದು ಸಾಧ್ಯವಿಲ್ಲ’ ಎಂದು ಇತ್ತೀಚೆಗೆ ಸಾಫ್ಟ್‌ವೇರ್ ಪರಿಣತರೊಬ್ಬರು ಆಡಿದ ಮಾತಿನಲ್ಲೂ ತಥ್ಯವಿದೆ.ಎಲೆಕ್ಟ್ರಾನಿಕ್ ವಸ್ತುಗಳನ್ನು ಒಮ್ಮೆ ಖರೀದಿಸಿದರೆ ಅದನ್ನು ಬದಲಿಸಲು ಹಲವರು ಬಾರಿ ಚಿಂತಿಸುತ್ತಾರೆ. ಆದರೆ ಮೊಬೈಲ್ ವಿಷಯಕ್ಕೆ ಬಂದಾಗ ಭಾರತೀಯರು ಕೊಂಚ ಭಿನ್ನ.   ಏಕೆಂದರೆ ಮೊಬೈಲ್ 80 ಕೋಟಿಗೂ ಹೆಚ್ಚು ಭಾರತೀಯರ ಅವಿಭಾಜ್ಯ ಅಂಗವಾಗಿದೆ. ದೇಹದ ಭಾಗಗಳಂತೆ, ಮೊಬೈಲ್‌ಗಳನ್ನೂ ಕ್ಷಣ ಕಾಲವೂ ಬಿಟ್ಟಿರಲಾರದಷ್ಟು ಹೊಂದಿಕೊಂಡಿದ್ದಾರೆ. ಒಂದೆರಡು ವರ್ಷಗಳ ಹಿಂದೆ ಕ್ಯಾಮೆರಾ, ಸಂಗೀತ ಅದರ ಹೊರಹೊಮ್ಮುವ ಶಬ್ದದ ತಾಕತ್ತಿನ ಬಗ್ಗೆ ಮಾತಾಡುತ್ತಿದ್ದ ಮಂದಿ ಇಂದು ಇನ್‌ಸ್ಟಾಲ್ ಮಾಡಿಕೊಂಡಿರುವ ಹೊಸ ಹೊಸ ಅಪ್ಲಿಕೇಷನ್ ಕುರಿತು ಹರಟುತ್ತಿದ್ದಾರೆ.ಹೀಗಾಗಿ 2010 ಅನ್ನು ಯಾವುದೇ ಗೊಂದಲವಿಲ್ಲದೆ ‘ಅಪ್ಲಿಕೇಷನ್ ವರ್ಷ’ ಎಂದು ಮೊಬೈಲ್ ಜಗತ್ತು ಕರೆದುಬಿಟ್ಟಿದೆ. 2007ರಲ್ಲಿ ಸ್ಟೀವ್ ಜಾಬ್‌ರ ಆ್ಯಪಲ್ ಸಂಸ್ಥೆ ತನ್ನ ಐಫೋನ್ ಬಿಡುಗಡೆ ಮಾಡಿದ ಸಂದರ್ಭ. ಆಗ ಫೋನ್‌ನ ಜತೆಗೆ ನೂರಾರು ಅಪ್ಲಿಕೇಷನ್‌ಗಳು ಹೊಸ ಸಂಚಲನವನ್ನು ಉಂಟುಮಾಡಿದ್ದವು. ದುಬಾರಿ ಐಫೋನ್ ಕೊಳ್ಳಲಾಗದ ಮಂದಿ ಮನಸ್ಸಿನಲ್ಲಿಯೇ ಕೊರಗಿದರು. ಅದು ಸ್ಮಾರ್ಟ್ ಫೋನ್‌ಗಳ ಕಾಲ. ಕಾರ್ಪೊರೇಟ್ ಮಂದಿ ಮಾತ್ರ ಬಳಸುತ್ತಿದ್ದ ಫೋನ್‌ಗಳಲ್ಲಿ ವೇಗದ ಇಂಟರ್‌ನೆಟ್ ಸೌಲಭ್ಯ, ಬೇಕಾದಷ್ಟು ಅಪ್ಲಿಕೇಷನ್‌ಗಳನ್ನು ಇನ್‌ಸ್ಟಾಲ್ ಅಥವಾ ಬೇಡದ್ದನ್ನು ಅನ್‌ಇನ್‌ಸ್ಟಾಲ್ ಮಾಡಬಹುದಾದ ಅವಕಾಶಗಳು ಇವುಗಳಲ್ಲಿ ಇದ್ದವು. ಪ್ರತಿಯೊಬ್ಬರೂ ಲ್ಯಾಪ್‌ಟಾಪ್‌ಗಳನ್ನೇ ಮರೆತು ಬಿಡುವಷ್ಟು ಸ್ಮಾರ್ಟ್ ಫೋನ್‌ಗಳಲ್ಲಿ ತಲ್ಲೆನರಾದರು.ಆದರೆ, ಸದಾ ಮಾರುಕಟ್ಟೆಗೆ ಹೊಸತನ್ನೇ ನೀಡುವ ಗೂಗಲ್ ಮಧ್ಯಮ ವರ್ಗದವರ ಈ ಆಸೆಯನ್ನು ಪೂರೈಸಿತು. ಹೀಗಾಗಿಯೇ 2010 ಮೂರನೇ ತ್ರೈಮಾಸಿಕ ವೇಳೆ ಸ್ಮಾರ್ಟ್ ಫೋನ್‌ಗಳ ಮಾರಾಟ 8.1 ಕೋಟಿಗಳಷ್ಟಾಯಿತು  (2009ರಲ್ಲಿ ಇಡೀ ವರ್ಷ ಮಾರಾಟವಾದ ಮೊಬೈಲ್‌ಗಳಿಗಿಂತ ಇದು ಎರಡು ಪಟ್ಟು). ಇದಕ್ಕೆ ಕಾರಣ ಸ್ವತಂತ್ರ ಆಂಡ್ರಾಯ್ಡಾ ಆಪರೇಟಿಂಗ್ ಸಿಸ್ಟಂ. ಇದರಿಂದಾಗಿ ಸಾಮಾನ್ಯರ ಕೈಯಲ್ಲೂ ಸ್ಮಾರ್ಟ್‌ಫೋನ್‌ಗಳು ರಿಂಗಣಿಸಲು ಆರಂಭಿಸದವು. ಹೀಗಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಮುಂಚೂಣಿಯಲ್ಲಿದ್ದ ‘ರಿಸರ್ಚ್ ಇನ್ ಮೋಷನ್’ ಸಂಸ್ಥೆಯ ಬ್ಲಾಕ್‌ಬೆರಿ, ಆಪ್ಯಲ್‌ನ ಐಫೋನ್‌ಗಳು ತುಸು ಹಿಂದೆ ಬಿದ್ದವು.ಐಫೋನ್‌ಗೆ ಒಬ್ಬ ಸಮರ್ಥ ಪ್ರತಿಸ್ಪರ್ಧಿ ಸಿಕ್ಕಿದ್ದು ಸಹ 2010ರಲ್ಲೇ. ಇಷ್ಟೇ ಅಲ್ಲ, ಜಾಗತಿಕ ಮಾರುಕಟ್ಟೆಯ ಬಹುಪಾಲು ಪಡೆದಿದ್ದ ನೋಕಿಯಾ ಇಳಿಮುಖವಾಗಿರುವ ತನ್ನ ಮಾರಾಟವನ್ನು ಮೇಲೆತ್ತೆಲು ಹರಸಾಹಸ ಪಡುವುದರ ಜತೆಗೆ ತನ್ನ ‘ಸಿಇಒ’ನನ್ನೇ ಬದಲಾಯಿಸುವ ಕಠಿಣ ನಿರ್ಧಾರ ತೆಗೆದುಕೊಂಡಿತು. (ಈಗಿನ ನೋಕಿಯಾ ಅಧ್ಯಕ್ಷ ಹಾಗೂ ಸಿಇಒ ಸ್ಟೀಫನ್ ಇಲೋಪ್, ಮೈಕ್ರೊಸಾಫ್ಟ್‌ನ ವ್ಯವಹಾರ ವಿಭಾಗದ ಮಾಜಿ ಅಧ್ಯಕ್ಷ).ಇವೆಲ್ಲದರ ನಡುವೆ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂಗಳ ದೈತ್ಯ ಮೈಕ್ರೊಸಾಫ್ಟ್, ಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಮುಂದುವರಿಸಿದೆ. ಸದ್ಯಕ್ಕೆ ಅದಕ್ಕೆ ದಕ್ಕಿದ್ದು ಕೇವಲ ಶೇ 2.8 (2010ರ ಮೂರನೇ ತ್ರೈಮಾಸಿಕ ವೇಳೆಗೆ) ಮಾತ್ರ. ವಿಂಡೋಸ್ ಫೋನ್ 7 ಎಂಬ ನೂತನ ಆಪರೇಟಿಂಗ್ ಸಿಸ್ಟಂ ಮೂಲಕ ತನ್ನ ಪವಾಡ ನಡೆಯಬಹುದೇನೋ ಎಂಬ ನಿರೀಕ್ಷೆಯಲ್ಲಿ ಅದು ಇದೆ.ಅಪ್ಲಿಕೇಷನ್‌ಗಳೆಂಬ ಗುಡಿ ಕೈಗಾರಿಕೆ

ನಾವು ಮಾತನಾಡಿದ್ದನ್ನೇ ಪುನರುಚ್ಚರಿಸುವ ಟಾಮ್ ಕ್ಯಾಟ್, ದಿನ ನಿತ್ಯದ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವ ಮನಿ ಮ್ಯಾನೇಜ್‌ಮೆಂಟ್, ರಸಾಯನಶಾಸ್ತ್ರದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪೀರಿಯಾಡಿಕ್ ಟೇಬಲ್, ಸಂಗೀತದಲ್ಲಿ ಆಸಕ್ತಿ ಇರುವವರಿಗೆ ಗಿಟಾರ್‌ನಂತೆ ನುಡಿಸಬಹುದಾದ ತಂತಿ ಇಲ್ಲದ ಗಿಟಾರ್, ಆರೋಗ್ಯ ಕಾಳಜಿ ಇರುವವರಿಗೆ ಹೃದಯ ಬಡಿತ ಪರೀಕ್ಷೆ, ಪಡ್ಡೆಗಳಿಗಂತೂ ಅಪ್ಲಿಕೇಷನ್‌ಗಳ ಸುರಿಮಳೆ.ಇಂಥ ಲಕ್ಷಗಟ್ಟಲೆ ಅಪ್ಲಿಕೇಷನ್‌ಗಳು ಐಫೋನ್ ಹಾಗೂ ಆಂಡ್ರಾಯ್ಡಾಗಳಲ್ಲಿ ಲಭ್ಯ.ಐಫೋನ್‌ಗಳು ಅತ್ಯಂತ ಗರಿಷ್ಠ ಮಟ್ಟದ ಸುರಕ್ಷತೆ ಕಾಪಾಡುವುದರಿಂದ ಐಟ್ಯೂನ್‌ಗಳಿಂದಲೇ ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಜತೆಗೆ ಅಪ್ಲಿಕೇಷನ್ ಅಭಿವೃದ್ಧಿಪಡಿಸುವವರಿಗೂ ಅಲ್ಲಿ ಸಾಕಷ್ಟು ಕಟ್ಟುನಿಟ್ಟುಗಳಿವೆ.ಆದರೆ ಆಂಡ್ರಾಯ್ಡಾ ಸ್ಮಾರ್ಟ್ ಫೋನ್‌ಗಳ ಡಾರ್ಲಿಂಗ್ ಇದ್ದಂತೆ. ಅಲ್ಲಿ ಉಚಿತ ಹಾಗೂ ಹಣ ಕೊಟ್ಟು ಬಳಸುವ ಅಪ್ಲಿಕೇಷನ್‌ಗಳು ಲಭ್ಯ. ಅಪ್ಲಿಕೇಷನ್ ಅಭಿವೃದ್ಧಿಪಡಿಸುವವರಿಗಂತೂ ಇದು ಒಳ್ಳೆಯ ಗೃಹ ಕೈಗಾರಿಕೆ. ಮನೆಯಲ್ಲೇ ಕೂತು ಅಪ್ಲಿಕೇಷನ್ ಅಭಿವೃದ್ಧಿಪಡಿಸಿ ಆಂಡ್ರಾಯ್ಡಾ ‘ಮಾರ್ಕೆಟ್’ಗೆ ಬಿಟ್ಟರಾಯಿತು (ಇದಕ್ಕೆ ನಿಗದಿತ ರಾಯಧನ ನೀಡಬೇಕು). ಬೇಕಾದವರು ಅದನ್ನು ಬಳಸಿ ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಆಂಡ್ರಾಯ್ಡಾನ ಈ ಬೆಳವಣಿಗೆ ಅರಿತ ಐಫೋನ್, ಮೂರು ವರ್ಷಗಳ ನಂತರ ಇದೀಗ ಹೊರಗಿನಿಂದ ಅಪ್ಲಿಕೇಷನ್‌ಗಳನ್ನು ಆಹ್ವಾನಿಸಲು ತೀರ್ಮಾನಿಸಿದೆ.ಬಳಕೆದಾರರು ಅಪ್ಲಿಕೇಷನ್‌ಗಳಿಗಾಗಿ ಮುಗಿಬೀಳುತ್ತಿರುವುದನ್ನು ಅರಿತ ಇತರರೂ ಈಗ ಅಪ್ಲಿಕೇಷನ್‌ಗಳ ಅಭಿವೃದ್ಧಿಗೆ ಸಾಕಷ್ಟು ಹಣ ಸುರಿಯುತ್ತಿದ್ದಾರೆ.2010ರಲ್ಲೇ ನಡೆದ ಒಟ್ಟು ಮೊಬೈಲ್ ಅಪ್ಲಿಕೇಷನ್‌ಗಳ ವ್ಯವಹಾರಗಳ ಮೊತ್ತ 6.7 ಶತಕೋಟಿ ಡಾಲರ್. ‘ಆಂಗ್ರಿ ಬರ್ಡ್’ ಎಂಬ ಏಕೈಕ ಅಪ್ಲಿಕೇಷನ್ ಅನ್ನು 1.2 ಕೋಟಿ ಮಂದಿ ಡೌನ್‌ಲೋಡ್ ಮಾಡಿದ್ದಾರೆ.ಅಪ್ಲಿಕೇಷನ್‌ಗಳು ಎಷ್ಟು ಸುರಕ್ಷಿತ?

ಸ್ಮಾರ್ಟ್ ಫೋನ್‌ಗಳು ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸುವರಿಗೆ ಹಾಗೂ ಬಳಕೆದಾರರಿಗೆ ಹೆಬ್ಬಾಗಿಲನ್ನೇ ತೆರೆದಿಟ್ಟಿವೆ. ಆದರೆ, ಲಭ್ಯವಿರುವ ಸಾವಿರಾರು ಅಪ್ಲಿಕೇಷನ್‌ಗಳಲ್ಲಿ ಯಾವುದು ಸುರಕ್ಷಿತ ಎಂದು ಹೇಳುವುದು ಕಷ್ಟ. ಏಕೆಂದರೆ ವಾಲ್ ಸ್ಟ್ರೀಟ್ ಜರ್ನಲ್ ನಡೆಸಿದ ಸಮೀಕ್ಷೆಯ ಪ್ರಕಾರ 101 ಅಪ್ಲಿಕೇಷನ್‌ಗಳಲ್ಲಿ 47 ಅಪ್ಲಿಕೇಷನ್‌ಗಳು ಬಳಕೆದಾರರ ಸ್ಥಳ ರವಾನಿಸುತ್ತವೆ. ಐದು ಅಪ್ಲಿಕೇಷನ್‌ಗಳು ವೈಯಕ್ತಿಕ ಮಾಹಿತಿಯನ್ನು ದೂರದ ಸರ್ವರ್‌ಗೆ ರವಾನಿಸುತ್ತವೆ ಎಂದು ಹೇಳಲಾಗುತ್ತಿದೆ.ಇಷ್ಟೇ ಅಲ್ಲದೆ, ಕಂಪ್ಯೂಟರ್‌ನಲ್ಲಿರುವ ಮಾಹಿತಿ ಕದಿಯುವ ಹ್ಯಾಕರ್‌ಗಳಿಗೆ, ಮೊಬೈಲ್ ಅಪ್ಲಿಕೇಷನ್‌ಗಳು ಇನ್ನಷ್ಟು ಅನುಕೂಲ ಮಾಡಿಕೊಟ್ಟಿವೆ. ಇಷ್ಟೇ ಏಕೆ, ಲುಕ್‌ಔಟ್ ಎಂಬ ಮೊಬೈಲ್ ಆಂಟಿವೈರಸ್ ಸಂಸ್ಥೆ ಇತ್ತೀಚೆಗೆ ಟ್ರೋಜನ್ ವೈರಸ್ ಚೀನಾನಲ್ಲಿ ಪುಂಡಾಟಿಕೆ ನಡೆಸುತ್ತಿದೆ ಎಂದು ವರದಿ ಮಾಡಿದೆ. ಬಳಕೆದಾರರ ಮಾಹಿತಿಯನ್ನು ಎಲ್ಲೋ ಅಜ್ಞಾನ ಸ್ಥಳದಲ್ಲಿರವ ಸರ್ವರ್‌ಗೆ ರವಾನಿಸತ್ತಿದೆ ಎಂದು ಹೇಳಿದೆ.ಪ್ಲಾಸ್ಟಿಕ್ ಕಾರ್ಡ್ ಬದಲು ಮೊಬೈಲ್

ಶಾಪಿಂಗ್‌ಗೆ ಹೋಗುವ ಮಂದಿ ಈಗ ಹಣ ಕೊಂಡೊಯ್ಯುವ ಬದಲು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಹಣದ ನೋಟಿನಂತೆ ಇದಕ್ಕೂ ವಿದಾಯ ಹೇಳುವ ಕಾಲ ಬರುವ ಲಕ್ಷಣಗಳು ಕಾಣಿಸುತ್ತಿವೆ. ಏಕೆಂದರೆ ಅಮೆರಿಕದ ಎಟಿ ಅಂಡ್ ಟಿ, ವರ್ಝನ್ ಹಾಗೂ ಟಿ-ಮೊಬೈಲ್‌ಗಳು ಜಂಟಿಯಾಗಿ ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿವೆ.ಸೂಪರ್ ಮಾರ್ಕೆಟ್‌ಗೆ ಹೋಗುವ ಗ್ರಾಹಕ ತನಗೆ ಬೇಕಾದುದನ್ನು ಪಡೆದು, ಅಂತಿಮವಾಗಿ ಹಣದ ಬದಲು ತನ್ನ ಮೊಬೈಲ್ ಅನ್ನು ಅಲ್ಲಿರುವ ಹಣ ಸ್ವೀಕೃತಿ ಸಾಧನಕ್ಕೆ ಹಿಡಿದರೆ ಸಾಕು ಹಣ ಪಾವತಿಯಾಗುತ್ತದೆ. ಇದು ಮೊಬೈಲ್‌ನ ಹಾಗೂ ಮೊಬೈಲ್ ಅಪ್ಲಿಕೇಷನ್‌ನ ಹೊಸ ಅವತಾರ.ಮೂರು ವರ್ಷಗಳ ಹಿಂದೆ ಅಪ್ಲಿಕೇಷನ್ ಹಾಗೂ ಮಲ್ಟಿ ಟಚ್ ಇರುವ ಫೋನ್‌ಗಳನ್ನು ಬಿಡುಗಡೆ ಮಾಡಿದ ಐಫೋನ್, ಕೇವಲ ದುಬಾರಿ ಮೊಬೈಲ್ ಇರುವ ಮಂದಿಗೆ (30 ಸಾವಿರ ರೂಪಾಯಿಗೂ ಹೆಚ್ಚು) ಮಾತ್ರ ಎಂಬ ಮಾತಿತ್ತು. ಆದರೆ, ಅದನ್ನು ಸುಳ್ಳು ಮಾಡಿದ್ದು ಆಂಡ್ರಾಯ್ಡಾ. ಏಕೆಂದರೆ ಆಂಡ್ರಾಯ್ಡಾ ಆಪರೇಟಿಂಗ್ ಸಿಸ್ಟಂಗೆ ಯಾವುದೇ ಶುಲ್ಕವಿಲ್ಲ. ಹೀಗಾಗಿ ಬಹುತೇಕ ಮೊಬೈಲ್ ತಯಾರಕರು (ನೋಕಿಯಾ ಹೊರತುಪಡಿಸಿ) ಆಂಡ್ರಾಯ್ಡಾ ಆಪರೇಟಿಂಗ್ ಸಿಸ್ಟಂ ಅನ್ನೇ ಬಳಸುತ್ತಾರೆ. ಸದ್ಯಕ್ಕೆ ಆಂಡ್ರಾಯ್ಡಾ 2.1 ಎಕ್ಲೈರ್ ಎಲ್ಲೆಡೆ ಲಭ್ಯ. ಆಂಡ್ರಾಯ್ಡಾ 2.2 ಆವೃತ್ತಿ ಫ್ರೊಯೊ ಇದೀಗಷ್ಟೇ ಮಾರುಕಟ್ಟೆ ಪ್ರವೇಶಿಸಿದೆ.ಹೀಗಾಗಿ ಎಚ್‌ಟಿಸಿ, ಸ್ಯಾಮ್ಸಂಗ್, ಎಲ್‌ಜಿ., ಸೋನಿ, ಮೊಟೊರೋಲಾ ಕಂಪೆನಿಗಳು ್ಙ 10ರಿಂದ 15 ಸಾವಿರಗಳ  ಶ್ರೇಣಿಯಲ್ಲಿ ಸ್ಮಾರ್ಟ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಇದರ ಜತೆಯಲ್ಲಿ ಅಗ್ಗದ ಚೀನಾ ಸೆಟ್‌ಗಳು ಮಾರುಕಟ್ಟೆಯಲ್ಲಿ ಮೊಬೈಲ್ ಮಳೆಯನ್ನೇ ಸುರಿಸಿರುವುದರಿಂದ ಒಂದು ಕಾಲದ ಮೊಬೈಲ್ ದಿಗ್ಗಜ ನೋಕಿಯಾ ಮತ್ತಷ್ಟು ಸಂಕಷ್ಟ ಸಿಲುಕಿದಂತಾಗಿದೆ.ಮೊಬೈಲ್ ಅಪ್ಲಿಕೇಷನ್‌ಗಳಿಂದ ಮೊಬೈಲ್‌ಗಳು ಈಗ ಮತ್ತಷ್ಟು ಹತ್ತಿರವಾಗಿವೆ. ಸಂಗೀತ, ರಿಂಗ್‌ಟೋನ್, ಕ್ಯಾಮೆರಾ ಎನ್ನುತ್ತಿದ್ದವರ ಬಾಯಲ್ಲಿ ಈಗ ಬಗೆಬಗೆಯ ಅಪ್ಲಿಕೇಷನ್‌ಗಳ ಹೆಸರುಗಳು ಓಡಾಡುತ್ತಿವೆ. ಈ ಮೂಲಕ ಮೊಬೈಲ್ ಗ್ರಾಹಕರನ್ನು ತಂತ್ರಜ್ಞಾನದ ಮತ್ತೊಂದು ಹಂತಕ್ಕೆ ತಂದು ನಿಲ್ಲಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry