ಮೊಬೈಲ್ ಗುರು

7

ಮೊಬೈಲ್ ಗುರು

Published:
Updated:
ಮೊಬೈಲ್ ಗುರು

ಈ ಫೋನ್ ಅನ್ನು ಬರಿಗಣ್ಣಿನಲ್ಲಿ ನೋಡಿದರೆ ಅದರಲ್ಲೇನೂ ಕಾಣಿಸುವುದೇ ಇಲ್ಲ. ಆದರೆ ವಿಶೇಷ ಕನ್ನಡಕದಿಂದ ನೋಡಿದರೆ ಎಲ್ಲವೂ ಸರಿಯಾಗಿ ಕಾಣಿಸುತ್ತದೆ.ನಿಮ್ಮ ಮೊಬೈಲ್‌ನಲ್ಲಿ ಸಾಕಷ್ಟು ಹಣವಿದ್ದರೆ ಅದನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುವಂಥ ಸೇವೆಗಳನ್ನು ಹಲವು ಕಂಪೆನಿಗಳು ನೀಡುತ್ತಿವೆ. ಆದರೆ ನಿಮ್ಮ ಮೊಬೈಲ್‌ನ ಬ್ಯಾಟರಿ ಫುಲ್ ಇದ್ದಾಗ ಅದರಿಂದ ನಿಮ್ಮ ಗೆಳೆಯನ ಬ್ಯಾಟರಿ ಚಾರ್ಜ್ ಮಾಡಲು ಸಾಧ್ಯವೇ?ಇದೆಲ್ಲವನ್ನೂ ಗುಲ್ಬರ್ಗದ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಡಿಪ್ಲೊಮೊ ಓದುತ್ತಿರುವ ಗುರುಪ್ರಸಾದ ನರೋಣ ಸಾಧ್ಯ ಮಾಡಿ ತೋರಿಸಿದ್ದಾರೆ.ಮೊಬೈಲ್ ಮೂಲಕವೇ ಇನ್ನೊಂದು ಮೊಬೈಲ್ ಬ್ಯಾಟರಿ ರಿಚಾರ್ಜ್ ಮಾಡುವುದು, ಮೊಬೈಲನ್ನು 24 ಗಂಟೆ ನೀರಿಗೆ ಹಾಕಿಟ್ಟರೂ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವ ತಂತ್ರಜ್ಞಾನ ಗುರುಪ್ರಸಾದ್‌ರ ಸಂಶೋಧನೆಗಳು.ಈ ಎಲ್ಲ ತಂತ್ರಜ್ಞಾನವೂ ಗುರುಪ್ರಸಾದ್ ಸ್ವತಃ ರೂಪಿಸಿರುವ ಪ್ರೊಟೊಟೈಪ್ ಫೋನ್‌ನಲ್ಲಿ ಇರುವುದೇನಲ್ಲ. ಈಗಾಗಲೇ ನಮ್ಮ ಬಳಿ ಇರುವ ಫೋನ್‌ಗಳಿಗೆ ಈ ತಂತ್ರಜ್ಞಾನವನ್ನು ಅಳವಡಿಸಬಹುದು ಎಂಬುದರಲ್ಲಿಯೇ ಗುರುಪ್ರಸಾದ್ ಸಂಶೋಧನೆಯ ಮಹತ್ವವಿದೆ. ಗುರುಪ್ರಸಾದ್ ಕೈಗೆ ಯಾವುದೇ ಮೊಬೈಲ್ ಕೊಟ್ಟರೂ ಈ ಎಲ್ಲ ತಂತ್ರಜ್ಞಾನವನ್ನು ಅಳವಡಿಸಿ ಪ್ರದರ್ಶಿಸುತ್ತಾನೆ ವಿನಃ ಈ ತಂತ್ರಜ್ಞಾನದ ಗುಟ್ಟು ಮಾತ್ರ ಆತ ಬಿಟ್ಟುಕೊಟ್ಟಿಲ್ಲ.`ಮನೆಯಲ್ಲಿನ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಿಚ್ಚುವುದು ಹಾಗೂ ಜೋಡಿಸುವ ರೂಢಿಯಿತ್ತು. ಅದರಲ್ಲಿನ ಕೌತುಕವನ್ನು ಅರಿಯುವ ಕುತೂಹಲದಿಂದಾಗಿಯೆ ಡಿಪ್ಲೊಮಾ ಎಂಜಿನಿಯರಿಂಗ್ ಸೇರಿಕೊಂಡೆ. ಕೈಯಲ್ಲಿರುವ ಸೆಲ್‌ಫೋನ್ ಕೂಡಾ ಸಾಕಷ್ಟು ವಿಸ್ಮಯ ಹೊಂದಿರುವುದರಿಂದ ಈ ಕುರಿತು ಹೆಚ್ಚಿನ ಶೋಧನೆ ಮಾಡಿದ್ದೇನೆ~ ಎಂದು ಹೇಳುವ ಗುರು `ಸೆಲ್‌ಫೋನ್‌ನಲ್ಲಿ ನಾನು ಮಾಡುವ ತಂತ್ರಜ್ಞಾನದ ಗುಟ್ಟು ಹೇಳಿದರೆ, ಯಾವುದಾದರೂ ಕಂಪೆನಿ ಅಳವಡಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ ನನ್ನ ಸಂಶೋಧನೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ಕಂಪೆನಿಗೆ ಮಾತ್ರ ಈ ವಿನೂತನ ಸಂಶೋಧನಾ ವಿವರಣೆಗಳನ್ನು ತಿಳಿಸುತ್ತೇನೆ~ ಎನ್ನುತ್ತಾರೆ.ಈಗಾಗಲೇ ಮೊಬೈಲ್ ಗುರು ಎಂದು ಕಾಲೇಜಿನ ಗೆಳೆಯರ ನಡುವೆ ಚಿರಪರಿಚಿತನಾದ ಈ ಯುವಕ, ಹಾವು ಹಿಡಿಯುವ ವಿದ್ಯೆಯಲ್ಲೂ ಪರಿಣಿತ ಎನ್ನುವುದು ವಿಶೇಷ.ಯಾರಾದರೂ ಹಾವು ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದರೆ, ಕೂಡಲೇ ಸ್ಥಳಕ್ಕೆ ಧಾವಿಸಿ ಹಾವನ್ನು ಕಾಡಿಗೆ ಬಿಟ್ಟು ಬರುವುದನ್ನು ಇವರು ರೂಢಿಸಿಕೊಂಡಿದ್ದಾರೆ. ಗುರುಪ್ರಸಾದನ ಸಹೋದರರು, ತಂದೆ-ತಾಯಿ ಕೂಡ ಈತನ ಹವ್ಯಾಸಗಳನ್ನು ಬೆಂಬಲಿಸುತ್ತ ಬಂದಿದ್ದಾರೆ.ವಿನೂತನ ತಂತ್ರಜ್ಞಾನ ಆವಿಷ್ಕಾರದಲ್ಲಿ ಆಸಕ್ತಿ ಹೊಂದಿರುವ ಈ ಯುವ ಪ್ರತಿಭಾವಂತ ಯುವಕ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದಾನೆ. ಡಿಪ್ಲೊಮಾ ಎಂಜಿನಿಯರಿಂಗ್ ಅಂತಿಮ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಗುರುಪ್ರಸಾದನಿಗೆ ಸಾಫ್ಟ್‌ವೇರ್ ಎಂಜಿನಿಯರ್ ಆಗುವ ಬಯಕೆ ಇದೆ. ಗುರು ಅವರನ್ನು  97416 17143ರಲ್ಲಿ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry