ಮೊಬೈಲ್ ಟವರ್ ಏರಿ ಆತ್ಮಹತ್ಯೆ ಯತ್ನ

7

ಮೊಬೈಲ್ ಟವರ್ ಏರಿ ಆತ್ಮಹತ್ಯೆ ಯತ್ನ

Published:
Updated:
ಮೊಬೈಲ್ ಟವರ್ ಏರಿ ಆತ್ಮಹತ್ಯೆ ಯತ್ನ

ಚಿಂತಾಮಣಿ: ತನ್ನ ಕುಟುಂಬದಲ್ಲಿ ತಲೆ ಹಾಕಿ ತೊಂದರೆ ಕೊಡುತ್ತಿರುವ ವಕೀಲರೊಬ್ಬರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ನಗರದ ವ್ಯಕ್ತಿಯೊಬ್ಬರು ಮೊಬೈಲ್ ಟವರ್ ಹತ್ತಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.ನಗರದ ನಿವಾಸಿ ರಾಜಶೇಖರ್ ಆತ್ಮಹತ್ಯೆಗೆ ಪ್ರಯತ್ನಿಸಿದವರು. ವಕೀಲ ರಾಜಾರಾಂ ತನ್ನ ಪತ್ನಿಯ ಜತೆ ಸೇರಿ ಕುಟುಂಬ ಕಲಹ ತರುತ್ತಿದ್ದಾರೆ. ವಿವಾಹ ವಿಚ್ಚೇದನಕ್ಕೂ ಕುಮ್ಮಕ್ಕು ನೀಡುತ್ತಿದ್ದು, ಅವರ ವಿರುದ್ದ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಶುಕ್ರವಾರ ನಗರದ ಬಾಗೇಪಲ್ಲಿ ಕ್ರಾಸ್‌ನಲ್ಲಿರುವ ಮೊಬೈಲ್ ಟವರ್ ಹತ್ತಿ ಕುಳಿತಿದ್ದರು.ಬಾರ್ ಕೌನ್ಸಿಲ್ ಹೆಸರಿನಲ್ಲಿ ರಾಜಾರಾಂ ತಮ್ಮ ನಡುವೆ ಜಗಳ ತಂದಿದ್ದಾರೆ. ದೂರು ನೀಡಿದ್ದರೂ ವಕೀಲನೆಂಬ ಕಾರಣದಿಂದ ಕ್ರಮ ಕೈಗೊಳ್ಳುತ್ತಿಲ್ಲ. ಆತನನ್ನು ಬಂಧಿಸದಿದ್ದರೆ ಟವರ್‌ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದರು.ರಾಜಶೇಖರ್‌ನ್ನು ಇಳಿಸಲು ಪೊಲೀಸರು ಸಾಕಷ್ಟು ಸಾಹಸ ಮಾಡಿದರೂ ಪ್ರಯೋಜನವಾಗಲಿಲ್ಲ. ಪೊಲೀಸರ ಸಂಧಾನಕ್ಕೆ ಜಗ್ಗಲಿಲ್ಲ. ಪೊಲೀಸರು ರಾಜಾರಾಂನನ್ನು ವಶಕ್ಕೆ ತೆಗೆದುಕೊಂಡ ನಂತರ ಆತ ಟವರ್‌ನಿಂದ ಇಳಿದನು. ಪೊಲೀಸರು ಇಬ್ಬರನ್ನೂ ವಶಕ್ಕೆ ತೆಗೆದುಕೊಂಡು ಇಡೀ ದಿನ ಸಂಧಾನ ನಡೆಸಿದರೂ ಇತ್ಯರ್ಥವಾಗಲಿಲ್ಲ ಎನ್ನಲಾಗಿದೆ.ಹಿನ್ನಲೆ: ರಾಜಾರಾಂ ಮತ್ತು ರಾಜಶೇಖರ್ ನಡುವೆ ಹಲವು ತಿಂಗಳುಗಳಿಂದ ಜಗಳ ನಡೆಯುತ್ತಿದ್ದು, ದೂರು ಪ್ರತಿದೂರು ನೀಡಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದರು. ಮೊದಲಿಗೆ ವಕೀಲರು ರಾಜಶೇಖರ್ ಪತ್ನಿಯನ್ನು ಪುಸಲಾಯಿಸಿ ವರದಕ್ಷಿಣೆ ಕಿರುಕುಳ ದೂರು ನೀಡಿ ರಾಜಶೇಖರ್‌ನ್ನು ಜೈಲಿಗೆ ಕಳುಹಿಸಿದ್ದರು.ನಂತರ ರಾಜಶೇಖರ್ ಪೊಲೀಸರಿಗೆ ದೂರು ನೀಡಿ ರಾಜಾರಾಂ ಮತ್ತು ಸಂಗಡಿಗರು ತನ್ನ ಮನೆಗೆ ನುಗ್ಗಿ ಸುಮಾರು 4 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಕದ್ದುಕೊಂಡು ಹೋಗಿದ್ದಾರೆಂದು ದೂರು ನೀಡಿದ್ದರು. ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿದ್ದರು.ವಕೀಲ ರಾಜಾರಾಂ ವೈಯುಕ್ತಿಕ ಪ್ರಕರಣಗಳಿಗೆ ಬಾರ್‌ಕೌನ್ಸಿಲ್‌ನ್ನು ದುರುಪಯೋಗಪಡಿಸಿಕೊಂಡು ತನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ. ವಕೀಲರಾಗಿರುವ ಕಾರಣ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಗುರುವಾರ ರಾತ್ರಿಯೂ ಮತ್ತೊಂದು ದೂರು ನೀಡಿದ್ದು, ಮೊಕದ್ದಮೆ ದಾಖಲಾಗಿದೆ.ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಮುಂದಾಗಿದ್ದಾಗಿ ರಾಜಶೇಖರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry