ಭಾನುವಾರ, ಮಾರ್ಚ್ 26, 2023
31 °C

ಮೊಬೈಲ್ ಫೋನ್ ಆರೋಗ್ಯಕ್ಕೆಹಾನಿಕರವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಬೈಲ್ ಫೋನ್ ಆರೋಗ್ಯಕ್ಕೆಹಾನಿಕರವೇ?

ಮೊಬೈಲ್ ಫೋನ್‌ಗಳು ನಮ್ಮ ದೇಹದ ಆರೋಗ್ಯದ ಮೇಲೆ ಬೀರುವ ಪ್ರತಿಕೂಲ ಪರಿಣಾಮಗಳ ಬಗೆಗೆ ವಿಜ್ಞಾನಿಗಳು ಮತ್ತು ವೈದ್ಯ ಸಂಶೋಧಕರು ಹಲವಾರು ವರ್ಷಗಳಿಂದ ಸಂಶೋಧನೆ, ಅಧ್ಯಯನಗಳನ್ನು ಜಗತ್ತಿನಾದ್ಯಂತ ಕೈಗೊಳ್ಳುತ್ತಿದ್ದಾರೆ. ಆದರೆ ಅವರಿಗೆ ನಿರ್ದಿಷ್ಟವಾದ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ.ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದ ಇತ್ತೀಚಿನ ಅಧ್ಯಯನ ಮೊಬೈಲ್ ಫೋನ್‌ಗಳ ಬಗೆಗೆ ಹೊಸ ವಿಚಾರವನ್ನು ಹೊರಗೆಡವಿದೆ. ಮೊಬೈಲ್ ಟವರ್‌ಗಳು ಮತ್ತು ಫೋನ್‌ಗಳು ಹೊರಚೆಲ್ಲುವ ವಿಕಿರಣತೆ ಪುರುಷರ ಸಂತಾನ ಶಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಹಾಗೂ ಜೀವಕೋಶಗಳ ಪ್ರತಿರೋಧ ಶಕ್ತಿಯನ್ನು ಕುಗ್ಗಿಸುವ ಮೂಲಕ ದೈಹಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತವೆ ಎಂಬುದೇ ಈ ಅಧ್ಯಯನ ಹೊರಚೆಲ್ಲಿದ ಮುಖ್ಯ ಅಂಶ. ಗಂಡು ಇಲಿಗಳ ಮೇಲೆ ಕೈಗೊಂಡ ಪ್ರಯೋಗಗಳಿಂದ ಈ ಫಲಿತಾಂಶ ಬಂದಿದ್ದರೂ, ಆರೋಗ್ಯದ ಈ ಪರಿಣಾಮಗಳು ನೇರವಾಗಿ ಪುರುಷರಿಗೂ ಅನ್ವಯವಾಗುತ್ತದೆ ಎಂದು ಆ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಪ್ರೊ. ಜಿತೇಂದ್ರ ಬೆಹಾರಿ ಅಭಿಪ್ರಾಯಪಡುತ್ತಾರೆ. ಅವರು ಪ್ರಸ್ತುತ ಆ ವಿಶ್ವವಿದ್ಯಾಲಯ ನಡೆಸುತ್ತಿರುವ ಅಧ್ಯಯನ ತಂಡದ ಮುಖ್ಯಸ್ಥರು.ಮೊಬೈಲ್ ಫೋನ್‌ಗಳ ಪ್ರತಿಕೂಲ ಪರಿಣಾಮಗಳ ಕುರಿತು ಪ್ರೊ. ಬೆಹಾರಿ ಮತ್ತು ಅವರ ತಂಡ ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಈ ಪ್ರಯೋಗ ನಡೆಸುತ್ತಿದ್ದಾರೆ. ಮೊಬೈಲ್‌ನಿಂದ ಹೊರಹೊಮ್ಮುವ ವಿಕಿರಣತೆಯ ಎರಡು ಮುಖ್ಯ ಅಂಶಗಳ ಮೇಲೆ ಅವರು ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಪುರುಷರಲ್ಲಿ ಸಂತಾನ ವೃದ್ಧಿಸುವ ಅಂಶ ಹಾಗೂ ಸಾಮಾನ್ಯ ಆರೋಗ್ಯ. ಅದರಲ್ಲಿಯೂ ಮುಖ್ಯವಾಗಿ ಕ್ಯಾನ್ಸರ್‌ನ ಸಾಧ್ಯತೆ ಮತ್ತು ವಂಶವಾಹಿಗಳಲ್ಲಿರುವ ಡಿ.ಎನ್.ಎ.ಗಳ ಮೇಲೆ ಉಂಟುಮಾಡುವ ದುಷ್ಪರಿಣಾಮಗಳು. ಮೊಬೈಲ್ ಟವರ್‌ಗಳು ಹಾಗೂ ಫೋನ್‌ಗಳು ಹೊರಸೂಸುವ ವಿಕಿರಣತೆಯ ವಾತಾವರಣದಲ್ಲಿಯೇ ಪ್ರಯೋಗಾಲಯದಲ್ಲಿ ಇಲಿಗಳನ್ನಿಟ್ಟು ಈ ಪ್ರಯೋಗಗಳನ್ನು ಮಾಡಲಾಗಿದೆ. ಎಲೆಕ್ಟ್ರೋ ಮ್ಯಾಗ್ನೆಟಿಕ್ ವಿಕಿರಣತೆಗೆ ದೀರ್ಘಕಾಲ ಒಳಗೊಳ್ಳುವುದರಿಂದ ಪುರುಷರ ವೀರ್ಯದ ಶಕ್ತಿ ಕುಂದುತ್ತದೆ.ಹಾಗೂ ವೃಷಣಗಳೂ ಕ್ಷೀಣಗೊಳ್ಳುತ್ತವೆ ಎಂಬುದು ಅವರ ಅಧ್ಯಯನದ ಮುಖ್ಯ ಫಲಶ್ರುತಿ. ಇದೇ ರೀತಿಯ ಅಧ್ಯಯನ ಮತ್ತು ಪ್ರಯೋಗಗಳನ್ನು ಪಾಶ್ಚಾತ್ಯ ದೇಶದ ಹಲವು ಪ್ರಮುಖ ಸಂಸ್ಥೆಗಳಲ್ಲೂ ಕೈಗೊಳ್ಳಲಾಗಿದೆ. ಪುರುಷರ ವೀರ್ಯದ ಸಂಖ್ಯೆ, ಚಲನಾಶಕ್ತಿ, ವೀರ್ಯಾಣುಗಳು ದೀರ್ಘಕಾಲ ಜೀವಂತವಿರುವಿಕೆ, ಜೀವಕೋಶದ ರಚನೆಯ ವ್ಯತ್ಯಾಸಗಳ ಮೇಲೆ ದುಷ್ಪರಿಣಾಮ ಬೀರುವುದರಿಂದ ಪುರುಷರಲ್ಲಿ ಸಂತಾನೋತ್ಪತ್ತಿಯ ಶಕ್ತಿಯನ್ನು ಕುಂದಿಸುತ್ತವೆ ಎಂದು ಆ ಅಧ್ಯಯನಗಳೂ ತಿಳಿಸುತ್ತವೆ.ಮಾನವ ಜೀವಕೋಶಗಳಲ್ಲಿ ಹಲವು ಅಪಾಯಕರ ಸನ್ನಿವೇಶಗಳಲ್ಲಿ ಪ್ರತಿಕೂಲ ವಾತಾವರಣಕ್ಕೆ ಸ್ಪಂದಿಸಲು ಆಂಟಿ ಆಕ್ಸಿಡೆಂಟ್‌ಗಳನ್ನೊಳಗೊಂಡ ಪ್ರತಿರೋಧ ಶಕ್ತಿ ಇರುತ್ತದೆ. ಮೊಬೈಲ್‌ನ ಈ ಸೂಕ್ಷ್ಮ ವಿಕಿರಣತೆ ಆಂಟಿ ಆಕ್ಸಿಡೆಂಟ್ ಪ್ರಮಾಣವನ್ನು ಏರುಪೇರು ಮಾಡುತ್ತವೆ. ಅಲ್ಲದೆ ಈ ಸೂಕ್ಷ್ಮ ವಿಕಿರಣತೆ ದೇಹದ ಲಿಪಿಡ್, ಸಸಾರಜನಕ ಹಾಗೂ ಡಿ.ಎನ್.ಎ.ಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರ ಮೂಲಕ ಹೃದಯದ ಕಾಯಿಲೆಗಳು ಕ್ಯಾನ್ಸರ್, ಆರ್ಥೈಟಿಸ್, ಆಲ್ಜೀಮರ್ ಕಾಯಿಲೆಗಳು ಬರುವ ಸಾಧ್ಯತೆಯನ್ನು ಹೆಚ್ಚಿಸುವುದಲ್ಲದೆ ವ್ಯಕ್ತಿ ಬೇಗ ವೃದ್ಧನಾಗುವ ಸಾಧ್ಯತೆಯೂ ಇದೆ.ಮೊಬೈಲ್‌ಗಳು ಉಂಟುಮಾಡುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗಗಳು ದೇಹದಲ್ಲಿ ಅನಗತ್ಯವಾದ ಫ್ರೀ ರ್ಯಾಡಿಕಲ್ ಅಂಶಗಳನ್ನು ವೃದ್ಧಿಸಿ ಜೈವಿಕ ವ್ಯವಸ್ಥೆಗೆ ತೀವ್ರ ರೀತಿಯ ಹಾನಿ ತರುತ್ತವೆ. ಗಮನಿಸಬೇಕಾದ ಮುಖ್ಯ ಅಂಶವೆಂದರೆ ಮೊಬೈಲ್ ಹ್ಯಾಂಡ್‌ಸೆಟ್‌ಗಳು ಹೊರಸೂಸುವ ವಿಕಿರಣತೆ ಮನುಷ್ಯನ ಮೆದುಳಿನ ಮೇಲೆ ತೀವ್ರ ರೀತಿಯ ದುಷ್ಪರಿಣಾಮ ಬೀರುತ್ತವೆ. ದೀರ್ಘಕಾಲ ಮೊಬೈಲ್ ಬಳಸುವುದರಿಂದ ಈ ಬೇಡದ ಪರಿಣಾಮ ಹೆಚ್ಚಾಗುತ್ತದೆ. ಬಹಳ ಕಾಲದಿಂದಲೂ ವಿಜ್ಞಾನಿಗಳು ಹಾಗೂ ವೈದ್ಯ ಸಂಶೋಧಕರಿಗೆ ಮೊಬೈಲ್‌ಗಳು ಮಾನವನ ಮೆದುಳು ಹಾಗೂ ಕೇಂದ್ರೀಯ ನರ ವ್ಯವಸ್ಥೆಯ ಮೇಲೆ ಉಂಟುಮಾಡುವ ದುಷ್ಪರಿಣಾಮಗಳ ಮೇಲೆ ಹೆಚ್ಚು ಗಮನ ಹರಿಸಿದ್ದರು. ಏಕೆಂದರೆ ನಾವು ಮಾತನಾಡುವಾಗ ಮೆದುಳಿಗೆ ತುಂಬಾ ಹತ್ತಿರವಾಗಿ ಫೋನ್ ಇಟ್ಟುಕೊಳ್ಳುತ್ತೇವೆ. ಹೀಗೆ ಮಾಡುವಾಗ ಮೆದುಳಿನೊಳಗೆ 4-6 ಸೆಂ.ಮೀ. ನಷ್ಟು ಒಳಗೆ ನುಸುಳುವಷ್ಟು ವಿಕಿರಣತಾ ಮಂಡಲವನ್ನು ಮೊಬೈಲ್ ಫೋನಿನ ಆಂಟೆನಾ ಹೊರಸೂಸುತ್ತದೆ ಎಂಬುದು ತೀವ್ರ ಕಳವಳಕಾರಿ ಅಂಶ.ಸಾಮಾನ್ಯ ಮನುಷ್ಯನ ದೇಹದಲ್ಲಿ ಶೇ 90ರಷ್ಟು ನೀರಿದೆ. ಅದು ಎಲೆಕ್ಟ್ರೋಮ್ಯಾಗ್ನೆಟಿಕ್ ಮಂಡಲ ಅಥವಾ ವ್ಯೆಹದ ಪ್ರಭಾವಕ್ಕೆ ಒಳಗಾದಾಗ ವಿಕಿರಣತೆಯನ್ನು ಹೀರಿಕೊಳ್ಳುತ್ತದೆ. ಉತ್ತಮ ಉದಾಹರಣೆ ಕೊಡುವುದಾದರೆ ಮೈಕ್ರೋವೇವ್ ಓವನ್‌ನಲ್ಲಿ ಆಹಾರವನ್ನು ತಯಾರಿಸುವಾಗ, ಆಹಾರದಲ್ಲಿನ ನೀರಿನ ಅಂಶ ಮೊದಲು ಬಿಸಿಯಾಗುತ್ತದೆ. ಮಾನವ ದೇಹದಲ್ಲೂ ಇದೇ ಪ್ರಕ್ರಿಯೆ ಜರುಗುತ್ತದೆ. ದ್ರವದ ಅಂಶ ಹೆಚ್ಚಿರುವ ಮಾನವ ಅಂಗಗಳಾದ ಮೆದುಳು ಮತ್ತು ರಕ್ತದಲ್ಲಿ ಸೂಕ್ಷ್ಮ ತರಂಗಗಳ ಹೀರುವಿಕೆ ಅಧಿಕ.ಮೊಬೈಲ್ ಫೋನ್‌ಗಳನ್ನು ದೇಹಕ್ಕೆ ಅತೀ ಸನಿಹದಲ್ಲಿ ಹಿಡಿದುಕೊಳ್ಳುವುದರಿಂದ ಹಾಗೂ ದೀರ್ಘಕಾಲ ಸಂಭಾಷಣೆ ನಡೆಸುವುದರಿಂದ ಉಷ್ಣಾಂಶದ ಪರಿಣಾಮಗಳಾಗಬಹುದು. ಅಲ್ಲದೆ ಇದಕ್ಕೆ ಭಿನ್ನವಾಗಿ ಫೋನ್‌ಗಳು, ಟವರ್‌ಗಳು ಮತ್ತು ಬೇಸ್-ಸ್ಟೇಷನ್‌ಗಳಿಂದ ಒಟ್ಟುಗೂಡಿದ ಪರಿಣಾಮಗಳಾಗಬಹುದು. ಈ ಮೊಬೈಲ್ ಫೋನ್‌ಸ್ಟೇಷನ್‌ಗಳು, ಮನೆ, ಶಾಲೆ ಅಥವಾ ಇನ್ನಿತರ ಕೆಲಸ ಮಾಡುವ ಸ್ಥಳಗಳ, ಹತ್ತಿರ ಇರುವುದರಿಂದಲೂ ಹಲವರಲ್ಲಿ ದುಷ್ಪರಿಣಾಮಗಳು ಕಂಡುಬರಬಹುದು.ಅಮೆರಿಕ ಮತ್ತು ಸ್ವೀಡನ್‌ನಲ್ಲಿ ಕೈಗೊಂಡ ಹಿಂದಿನ ಸಂಶೋಧನೆಗಳು ಹೊರಚೆಲ್ಲಿದ ಮತ್ತೊಂದು ಅಂಶ ಎಂದರೆ ಮೊಬೈಲ್‌ಗಳು ವ್ಯಕ್ತಿಯ ನಿದ್ದೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತವೆ. ಹಾಗಾಗಿ ಹಾಸಿಗೆ ಪಕ್ಕ ಸೆಲ್ ಫೋನ್‌ಗಳನ್ನಿಟ್ಟು ಕೊಂಡು ಮಲಗಬಾರದು ಎಂಬುದು ಈ ಸಂಶೋಧಕರ ಅಭಿಮತ. ವಿಶ್ವದಾದ್ಯಂತ ಕೈಗೊಂಡ ಬೇರೆ ಬೇರೆ ಅಧ್ಯಯನಗಳಲ್ಲಿ ಕಂಡುಬಂದ ಹಾನಿಕಾರಕ ಅಂಶಗಳೆಂದರೆ ಜೊಲ್ಲು ಸ್ರವಿಸುವ ಗ್ರಂಥಿಗಳ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು.ದೀರ್ಘಕಾಲೀನ ಬಳಕೆಯಿಂದ ಕಿವಿ ಬಿಸಿಯಾಗುವುದು, ಚರ್ಮ ಸುಡುವುದು, ವಿಪರೀತ ತಲೆನೋವು ಬರುವುದು, ಬೇಗ ಆಯಾಸಗೊಳ್ಳುವುದು ಇವು ಕೆಲವರಲ್ಲಿ ಕಾಣಿಸಿಕೊಳ್ಳಬಹುದು. ಮಕ್ಕಳು ಸೆಲ್‌ಫೋನ್ ಬಳಸುವುದರಿಂದ ಮಕ್ಕಳ ಕಲಿಯುವ ಶಕ್ತಿ ತೀವ್ರವಾಗಿ ಕುಂದುತ್ತದೆ. ಜ್ಞಾಪಕಶಕ್ತಿ ಕಡಿಮೆಯಾಗುತ್ತದೆ.ಅಲ್ಲದೆ ಮಕ್ಕಳಲ್ಲಿ ತಲೆಬುರುಡೆಯ ಮೂಳೆ ವಯಸ್ಕರಿಗಿಂತ ತೆಳುವಾಗಿರುವುದರಿಂದ ಮೆದುಳಿನ ಮೇಲಿನ ದುಷ್ಪರಿಣಾಮ ಅಧಿಕ. ಒಂದು ರೀತಿಯಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾದ ಸೆಲ್‌ಫೋನ್‌ಗಳ ಬಳಕೆ ಕಡಿಮೆ ಮಾಡುವುದು ಸಾಧ್ಯವೇ? ಅದರಲ್ಲಿಯೂ ತೀವ್ರ ಹಾನಿಗೊಳಗಾಗಬಹುದಾದ ಮಕ್ಕಳು ಮತ್ತು ಯುವಕರಿಗೆ ಈ ಎಚ್ಚರಿಕೆ ಅಥವಾ ಸಲಹೆ ಪಥ್ಯವಾಗಬಲ್ಲುದೇ? ಒಟ್ಟಿನಲ್ಲಿ ವಿಚಾರ ಮಾಡಬಹುದಾದ ವಿಷಯವಂತೂ ಹೌದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.