ಶನಿವಾರ, ಜನವರಿ 18, 2020
21 °C

ಮೊಬೈಲ್ ಬಳಕೆ ಕಡಿಮೆ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಓದಿನ ತಯಾರಿ ನಡೆಸುವಾಗ ಮೊಬೈಲ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು. ಆಗ ಏಕಾಗ್ರತೆಯಿಂದ ಓದಬಹುದು~ ಎಂದು ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಹೇಳಿದರು.ನಗರದ ಮಾರತ್‌ಹಳ್ಳಿಯ ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆ ಇತ್ತೀಚೆಗೆ ಆಯೋಜಿಸಿದ್ದ `ಪರೀಕ್ಷೆ ಎದುರಿಸುವುದು ಹೇಗೆ~ ಎಂಬ ಶಿಬಿರದಲ್ಲಿ ಅವರು ಮಾತನಾಡಿದರು.`ಟಿವಿಯನ್ನು  ವಾರಾಂತ್ಯದಲ್ಲಿ ಕೆಲವು ಗಂಟೆಗಳು ಮಾತ್ರ ನೋಡಿ, ವಾರದ ದಿನಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡರೆ, ನಂತರ ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ  ಪರೀಕ್ಷೆ ಎದುರಿಸಲು ಸಿದ್ಧರಾಗಬಹುದು~ ಎಂದು  ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. `ಪರೀಕ್ಷೆ ಸಮಯ ಬಂದಾಗ ಮಾತ್ರ ಓದುವುದನ್ನು ಆರಂಭಿಸುವ ಬದಲು, ಆಯಾ ದಿನದ ಓದನ್ನು ಅದೇ ದಿನ ಮುಗಿಸಬೇಕು. ಇದರಿಂದ ಹೊರೆ ಕಡಿಮೆಯಾಗುತ್ತದೆ. ಯಾವಾಗಲೂ ಸಂತಸದಿಂದ ಪ್ರತಿಕ್ಷಣವನ್ನು ಕಳೆಯಬೇಕು~ ಎಂದು ಸಲಹೆ ನೀಡಿದರು.`ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಉತ್ತಮ ಆರೋಗ್ಯ, ಕೌಟುಂಬಿಕ ಪ್ರೀತಿ ಮತ್ತು ಸಂತೋಷಗಳು ಇದ್ದಾಗ ವಿದ್ಯಾರ್ಥಿಗಳು ಯಾವುದೇ ಸವಾಲನ್ನು ಎದುರಿಸುತ್ತಾರೆ. ಇದರ ಮೂಲಕ ವಿದ್ಯಾರ್ಥಿಗಳು ಓದುವ ಕೌಶಲ್ಯ ಬೆಳಸಿಕೊಳ್ಳಬೇಕು. ಪರೀಕ್ಷೆಯನ್ನು ಯಾವುದೇ ಭಯವಿಲ್ಲದೆ ಬರೆಯಬೇಕು~ ಎಂದರು.`ಪರೀಕ್ಷಾ ಸಂದರ್ಭದಲ್ಲಿ ಶಿಕ್ಷಕರು ಮತ್ತು ಪೋಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ವಿದ್ಯಾರ್ಥಿಗಳಿಗೆ ಸಕಾರಾತ್ಮಕವಾದ ವಿಚಾರಗಳನ್ನು ಹೇಳುವ ಮೂಲಕ ಅವರ ಭಯವನ್ನು ಹೋಗಲಾಡಿಸಬೇಕು. ವಿದ್ಯಾರ್ಥಿಗಳೂ ಸಹ ಬರವಣಿಗೆಯ ಶುದ್ಧತೆ, ವೇಗವಾಗಿ ಬರೆಯುವ ತಂತ್ರಗಾರಿಕೆ ಮತ್ತು ಶ್ರದ್ಧೆಯನ್ನು ಬೆಳಸಿಕೊಳ್ಳುವುದು ಮುಖ್ಯವಾಗುತ್ತದೆ~ ಎಂದರು.

ವಾಗ್ದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಹರೀಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)