ಮೊಬೈಲ್ ಷಾಪಿಂಗ್ ಕಮಾಲ್

7

ಮೊಬೈಲ್ ಷಾಪಿಂಗ್ ಕಮಾಲ್

Published:
Updated:
ಮೊಬೈಲ್ ಷಾಪಿಂಗ್ ಕಮಾಲ್

ಬೆಂಗಳೂರಿನ ನಾಗರಿಕರಿಗೆ ಬಿಗ್ ಬಾರ್, ಸೆಂಟ್ರಲ್, ಮಂತ್ರಿ ಮಾಲ್, ಗೋಪಾಲನ್ ಮಾಲ್, ಟೋಟಲ್, ಸ್ಟಾರ್ ಹೀಗೆ ಬಗೆಬಗೆಯ ಮಾಲ್, ಬಜಾರ್‌ಗಳು ಚಿರಪರಿಚಿತ.  ಈ ಮಾಲ್‌ಗಳಂತೆಯೇ ನಗರದಲ್ಲಿ ಹಲವು ಪುಟ್ಟ ಪುಟ್ಟ  ಮೊಬೈಲ್ ಷಾಪಿಂಗ್ ಮಾಲ್‌ಗಳನ್ನು  ಅರ್ಥಾತ್ ಸಂಚಾರಿ ಮಾರಾಟ ಮಳಿಗೆಗಳನ್ನೂ ಕಾಣಬಹುದು.  ಉದಾಹರಣೆಗೆ ಹೊರನಾಡಿನ ಮಲೆನಾಡು ಮಳಿಗೆ. ನೀವೇನಾದರೂ ಶನಿವಾರ ಬೆಳಿಗ್ಗೆ 10.30 ರಿಂದ ರಾತ್ರಿ 8.30ರ  ಒಳಗೆ ಜಯನಗರ 9ನೇ ಬ್ಲಾಕಿನ ರಾಗಿಗುಡ್ಡದ ಬಳಿ ಬಂದರೆ ಈ ಮಳಿಗೆಯನ್ನು ಕಾಣಬಹುದು.ಮಳಿಗೆಯ ಮಾಲೀಕ ಎಂ.ವಿ. ಜೈನ್ ಅವರು ಬೆಳಿಗ್ಗೆ ತಮ್ಮ  ಮಾರುತಿ ವ್ಯಾನ್‌ನ್ನು ಮುಖ್ಯ ರಸ್ತೆಯಲ್ಲಿರುವ ಹೆಬ್ಬಾಗಿಲಿನಿಂದ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ತಂದು ನಿಲ್ಲಿಸುತ್ತಾರೆ. ವ್ಯಾನ್ ಮತ್ತು ರಸ್ತೆಯ ಬದಿಯಿರುವ ಕಟ್ಟಡದ ಗೋಡೆಗಳನ್ನು ಆಧರಿಸಿ ಪ್ಲಾಸ್ಟಿಕ್ ಹಾಳೆಯನ್ನು ಕಟ್ಟಿ ಪಕ್ಕದಲ್ಲಿ ತಾವೇ ತಂದಿರುವ ಬೆಂಚುಗಳನ್ನು ಜೋಡಿಸಿದರೆ ಮಳಿಗೆ ತಯಾರು. ಇನ್ನು ತಮ್ಮ ಸಹಾಯಕರ ನೆರವಿನಿಂದ ಸರಕು ಇಳಿಸಿ ಅಚ್ಚುಕಟ್ಟಾಗಿ ಜೋಡಿಸಿದರೆ ಷೋರೂಂ ಫಟಾಫಟ್ ರೆಡಿ. ಈ ಮಳಿಗೆಯಲ್ಲಿ ಹೊರನಾಡು ಕಾಫಿ ಪುಡಿ, ಹೊರನಾಡು ಟೀಪುಡಿ, ಮಲೆನಾಡು ಜೇನುತುಪ್ಪ, ಮಲೆನಾಡು ಹಸುವಿನ ತುಪ್ಪ ಮುಂತಾದ ಅನೇಕ ಮಲೆನಾಡಿನ ವಿಶೇಷ ವಸ್ತುಗಳು ದೊರೆಯುತ್ತವೆ. ಜೊತೆಗೆ ಹಪ್ಪಳ, ಸಂಡಿಗೆ, ಮಸಾಲೆ ಪುಡಿಗಳು, ಶೃಂಗೇರಿ ಬಾಳೆಕಾಯಿ ಚಿಪ್ಸ್, ಬಾಳೆ ಹಣ್ಣು ಹಲ್ವ ಮುಂತಾದ ತಿನಿಸುಗಳು, ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಿದ ಹರ್ಬಲ್ ಜ್ಯೂಸ್ ಆಯುರ್ವೇದದ ಹಲವಾರು ಔಷಧಿಗಳೂ ಇವೆ. ಮಾರಾಟಕ್ಕಿರುವ ಎಲ್ಲಾ ವಸ್ತುಗಳು ಗ್ರಾಹಕರಿಗೆ ಕಣ್ಣೆದುರಿಗೆ ನಿಚ್ಚಳವಾಗಿ ಕಾಣುವಂತೆ ಪ್ರದರ್ಶನಗೊಂಡಿರುವುದೇ ಈ ಮಳಿಗೆಯ ವಿಶೇಷ.  ಗ್ರಾಹಕ ಸ್ನೇಹಿಗಳಾದ ಈ ಮಳಿಗೆಯ ಮಾಲೀಕರು ಅಜ್ಜಿ ಔಷಧಿಗಳ ಬಳಕೆಯ ಬಗ್ಗೆ ಸಲಹೆ ಸೂಚನೆಗಳನ್ನು ಸಹಾ ನೀಡುತ್ತಾರೆ.ಇಂತಹ ಸಂಚಾರಿ ಮಳಿಗೆಯ  ಕಲ್ಪನೆ ಹೇಗೆ ಬಂತು ಎಂಬ ಪ್ರಶ್ನೆಗೆ ಜೈನ್ ಅವರು, `ಮೂಲತಃ  ನಾನು ಹೊರನಾಡಿನ ವ್ಯಾಪಾರಿ. ಬೆಂಗಳೂರಿನಿಂದ ಹೊರನಾಡಿಗೆ ಬರುವ ಪ್ರವಾಸಿಗಳು ನಮ್ಮಲ್ಲಿ ದೊರೆಯುವ ಕಾಫಿಪುಡಿ ಮುಂತಾದ ಪದಾರ್ಥಗಳಿಂದ ಆಕರ್ಷಿತರಾಗಿ ಬೆಂಗಳೂರಿನಲ್ಲೂ ಕೊಳ್ಳಬಯಸುತ್ತಿದ್ದರು. ಹಾಗಾಗಿ ಮೊದಲಿಗೆ  ಶ್ರೀನಗರದಲ್ಲಿ ಅಂಗಡಿ ಪ್ರಾರಂಭಿಸಿದೆ. ಈಗ ಮೂರು ವರ್ಷಗಳಿಂದ ಶ್ರೀನಗರ ಮಾತ್ರವಲ್ಲದೇ ಬೆಂಗಳೂರಿನ ಇತರ ಪ್ರದೇಶಗಳ ಗ್ರಾಹಕರಿಗೂ ಸುಲಭವಾಗಿ ಪದಾರ್ಥಗಳು ಲಭ್ಯವಾಗಲಿ ಎಂದು  ಸಂಚಾರಿ ಮಳಿಗೆ ಪ್ರಾರಂಭಿಸಿದೆವು~ ಎನ್ನುತ್ತಾರೆ.  ತಮ್ಮ ಈ ಪ್ರಯತ್ನಕ್ಕೆ ಗ್ರಾಹಕರೇ ಪ್ರೇರಣೆ ಎಂದು ಹೇಳಲೂ ಮರೆಯುವುದಿಲ್ಲ. ಈ ಮಲೆನಾಡು ಸಾಮಗ್ರಿಗಳ ಸಂಚಾರಿ ಮಳಿಗೆಯ ಸೇವೆ ರಾಗಿಗುಡ್ಡ ಮಾತ್ರವಲ್ಲದೇ ಭಾನುವಾರ ಮುಂಜಾನೆ 6 ಘಂಟೆಯಿಂದ  9 ಘಂಟೆಯವರೆಗೆ ಲಾಲ್‌ಬಾಗ್, ಸಂಜೆ 4 ರಿಂದ ರಾತ್ರಿ 9.30 ರ ವರೆಗೆ ಬನ್ನೇರುಘಟ್ಟ ರಸ್ತೆಯ ವಿಜಯ್ ಎನ್‌ಕ್ಲೇವ್ ಬಳಿ ಹಾಗೂ ಜೆಸಿ ರಸ್ತೆಯ ಕೆನರಾ ಬ್ಯಾಂಕ್ ಮುಖ್ಯ ಕಚೇರಿ ಬಳಿಯೂ ನಿಲ್ಲುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry