ಮೊಬೈಲ್ ಸಂದೇಶದಲ್ಲಿ ಅಂಚೆಪತ್ರ ಮರೆ

7

ಮೊಬೈಲ್ ಸಂದೇಶದಲ್ಲಿ ಅಂಚೆಪತ್ರ ಮರೆ

Published:
Updated:

ದಾವಣಗೆರೆ: ಮೊಬೈಲ್‌ಗಳು, ಕಿರು ಸಂದೇಶ ರವಾನೆ (ಎಸ್‌ಎಂಎಸ್)ಯ ಪ್ರವೃತ್ತಿ ಬೆಳೆದ ಮೇಲೆ ಅಂಚೆ ಪತ್ರಗಳನ್ನು ಕಳುಹಿಸುವುದು ಕಡಿಮೆಯಾಗುತ್ತಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಹೇಳಿದರು.

ರಾಷ್ಟ್ರೀಯ ಅಂಚೆ ನೌಕರರ ಸಂಘ 3ನೇ ವರ್ಗ, ಗ್ರೂಪ್ `ಡಿ~ ಗ್ರಾಮೀಣ ಅಂಚೆ ನೌಕರರ ಸಂಘದ ವತಿಯಿಂದ ಪಿ.ಜೆ. ಬಡಾವಣೆಯ ರಾಮಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ `29ನೇ ಅಂಚೆ ನೌಕರರ ಜಂಟಿ ದ್ವೈವಾರ್ಷಿಕ ಸಮ್ಮೇಳನ~ ಉದ್ಘಾಟಿಸಿ ಅವರು ಮಾತನಾಡಿದರು.ಹಿಂದೆ ಹಳ್ಳಿಗಳಲ್ಲಿ ಅಂಚೆಪತ್ರ ಬಂತು ಎಂದರೆ, ಏನೋ ಹೊಸ ಸುದ್ದಿ ಬಂದಿದೆ ಎಂಬ ಕುತೂಹಲ ಇರುತ್ತಿತ್ತು. ಪೋಸ್ಟ್‌ಮನ್ ಬರುವುದನ್ನೇ ಕಾಯುತ್ತಿದ್ದರು; ಅವರಿಂದಲೇ ಪತ್ರ ಓದಿಸಿ ಖುಷಿ ಪಡುತ್ತಿದ್ದುದು ಕಂಡುಬರುತ್ತಿತ್ತು. ಆದರೆ, ಇಂದು ಅಂತಹ ವಾತಾವರಣ ಇಲ್ಲ. ಮೊಬೈಲ್ ಕರೆಯಲ್ಲಿ, ಎಸ್‌ಎಂಎಸ್‌ಗಳಲ್ಲಿ ವಿಷಯಗಳು ಒಬ್ಬರಿಂದ ಮತ್ತೊಬ್ಬರಿಗೆ ಗೊತ್ತಾಗಿಬಿಡುತ್ತಿವೆ ಎಂದರು.ಪ್ರಸ್ತುತ ತಂತ್ರಜ್ಞಾನ ಬದಲಾವಣೆ ಆದಂತೆ ಅಂಚೆ ಇಲಾಖೆಯೂ ಬದಲಾವಣೆ ಆಗಬೇಕಾದದು ಅನಿವಾರ್ಯವಾಗಿದೆ ಎಂದರು.ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಪ್ರಾಮಾಣಿಕರಾಗಿದ್ದಾರೆ. ಅಂತೆಯೇ, ಸಂಘಟಿತರಾಗಬೇಕು. ವೈಯಕ್ತಿಕ ಹಿತಾಸಕ್ತಿಗಿಂತ ಎಲ್ಲರ ಹಿತಕ್ಕಾಗಿ ಹೋರಾಡಬೇಕು. ನಾವು ಏನು ಕೆಲಸ ಮಾಡುತ್ತಿದ್ದೇವೆಯೋ ಅಲ್ಲಿಯೇ ಇದ್ದುಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ರಾಷ್ಟ್ರೀಯ ಅಂಚೆ ನೌಕರರ ಸಂಘ ಕರ್ನಾಟಕ ವಲಯದ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಮಾತನಾಡಿ, ಸಂಘ ಮನೆ ಇದ್ದಂತೆ. ಹೊಂದಾಣಿಕೆ ಇದ್ದರೆ ಮಾತ್ರ ಯಶಸ್ಸು ಸಾಧ್ಯ. ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಇಂದು ಹೆಚ್ಚಿನ ನೌಕರರು ಇದ್ದೇವೆ. 6ನೇ ವೇತನ ಆಯೋಗದ ಶಿಫಾರಸಿನಂತೆ ನೌಕರರಿಗೆ ವೇತನ ದೊರೆಯುತ್ತಿಲ್ಲ. ಪೋಸ್ಟ್‌ಮನ್‌ಗಳಿಗೆ ಇರುವ ವೇತನ ತಾರತಮ್ಯ ಹೋಗಲಾಡಿಸುವ ಮೂಲಕ ಕೇಂದ್ರ ಸರ್ಕಾರ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.ರಾಷ್ಟ್ರೀಯ ಅಂಚೆ ನೌಕರರ ಸಂಘದ ಮೂರನೇ ವರ್ಗದ ಅಧ್ಯಕ್ಷ ಎಸ್. ಸಂಗನಾಳಮಠದ್, `ದೂಡಾ~ ಮಾಜಿ ಅಧ್ಯಕ್ಷ ಯಶವಂತರಾವ್ ಜಾದವ್, ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಕಾಸಲ್ ಎಸ್. ವಿಠ್ಠಲ್, ಚಿತ್ರದುರ್ಗ ಅಂಚೆ ಅಧೀಕ್ಷಕ ಡಿ.ವಿ.ಎಸ್. ಖರೆ, ಸಂಘದ ಪದಾಧಿಕಾರಿಗಳಾದ ಬಿ. ಶಿವಕುಮಾರ್, ಎಂ. ನರೇಂದ್ರನಾಯ್ಕ, ಕೆ.ಸಿ. ಗಂಗಯ್ಯ, ಎ.ಟಿ. ತಿಪ್ಪೇಸ್ವಾಮಿ, ಓಂಕಾರಮೂರ್ತಿ, ಎನ್.ಜಿ. ರಾಜಣ್ಣ, ಗೋವಿಂದರೆಡ್ಡಿ, ಕೆ.ಟಿ. ತಿಮ್ಮಾರೆಡ್ಡಿ, ಎಸ್. ರವೀಂದ್ರನಾಥ್, ಎನ್.ಜಿ. ಉಮೇಶ್ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry