ಶನಿವಾರ, ಮೇ 21, 2022
25 °C

ಮೊರಾರ್ಜಿ, ಚನ್ನಮ್ಮ ವಸತಿಯುತ ಶಾಲೆ:ಚಿತ್ರಕಲಾ ಶಿಕ್ಷಕರ ನೇಮಕಾತಿಯಲ್ಲೂ ಗೊಂದಲ

ಪ್ರಜಾವಾಣಿ ವಾರ್ತೆ/ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಬಳ್ಳಾರಿ: ರಾಜ್ಯದ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿಯುತ ಶಾಲೆಗಳಲ್ಲಿ ಖಾಲಿ ಇರುವ ಚಿತ್ರಕಲಾ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದ ನಂತರ ಗೊಂದಲ ಸೃಷ್ಟಿಯಾಗಿದ್ದು, ಉದ್ಯೋಗಾ ಕಾಂಕ್ಷಿಗಳಲ್ಲಿ ತೀವ್ರ ನಿರಾಸೆ ಉಂಟಾಗಿದೆ.ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಈ ಶಾಲೆಗಳಿಗೆ ಅಗತ್ಯವಿರುವ ವಿವಿಧ ವಿಷಯಗಳ ಒಟ್ಟು 5325 ಶಿಕ್ಷಕ ಹುದ್ದೆಗಳ ನೇಮಕಕ್ಕೆ ವೃಂದ ಮತ್ತು ನೇಮಕಾತಿ ನಿಯಮದಡಿ 2011ರ ಏಪ್ರಿಲ್ 27ರಂದು ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿತ್ತು.ಬಿಎಫ್‌ಎ, ಎಂಎಫ್‌ಎ ಅಥವಾ ತತ್ಸಮಾನ, ಡ್ರಾಯಿಂಗ್ ಮತ್ತು ಪೇಂಟಿಂಗ್‌ನಲ್ಲಿ ಡಿಪ್ಲೊಮಾ ಅಥವಾ ಆರ್ಟ್ ಮಾಸ್ಟರ್ ಪರೀಕ್ಷೆ ಅಥವಾ ಸರ್ಕಾರವು 2006ರಲ್ಲಿ ಆದೇಶಿಸಿದಂತೆ ತತ್ಸಮಾನ ವಿದ್ಯಾರ್ಹತೆಯೊಂದಿಗೆ ಒಂದು ವಿಷಯವಾಗಿ ಕನ್ನಡವನ್ನೂ ಕಡ್ಡಾಯವಾಗಿ ಅಭ್ಯಸಿಸಿರುವವರು 460 ಚಿತ್ರಕಲಾ ಶಿಕ್ಷಕರ ಹುದ್ದೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದು, ಅರ್ಹರು ಅರ್ಜಿ ಸಲ್ಲಿಸಿದ್ದರು.ಸಂಘವು ನಿಯಮಾನುಸಾರ ಆಯ್ಕೆ ಆದವರ ತಾತ್ಕಾಲಿಕ ಪಟ್ಟಿ ಪ್ರಕಟಿಸಿ ದಾಖಲೆಗಳ ಪರಿಶೀಲನೆಯನ್ನೂ ಮಾಡಿದ ನಂತರ, `ಕೆಲವು ಗೊಂದಲ ಗಳಿವೆ~  ಎಂಬ ಕಾರಣ ನೀಡಿ ನೇಮಕಾತಿ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಿದೆ. ಆಯ್ಕೆ ಪಟ್ಟಿಯಲ್ಲಿ ಹೆಸರಿರುವುದರಿಂದ, `ಉದ್ಯೋಗ ದೊರೆಯಿತು~ ಎಂಬ ಸಂಭ್ರಮದಲ್ಲಿದ್ದವರಿಗೆ ಇದರಿಂದ ಗೊಂದಲ ಉಂಟಾಗಿದೆ ಎಂದು ಉದ್ಯೋಗಾಕಾಂಕ್ಷಿಗಳಾದ ಫಕೀರೇಶ ಕುಳಗೇರಿ ಹಾಗೂ ಬಸವರಾಜ ನೆಲಝೇರಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಗೊಂದಲವೇನು?: ರಾಜ್ಯದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಲಲಿತಕಲಾ ಪದವಿ (ಬಿಎಫ್‌ಎ) ಬದಲಿಗೆ, ದೃಶ್ಯ ಕಲೆಯ (ಬಿವಿಎ) ಹೆಸರಿನಲ್ಲಿ ಪದವಿ ನೀಡಲಾಗುತ್ತಿದ್ದು, ಬಿಎಫ್‌ಎಗೆ ತತ್ಸ ಮಾನ ಎಂದೇ ಪರಿಗಣಿಸಲಾಗುತ್ತಿದೆ.ಬಿವಿಎ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಿದ್ದು, ಆ ಪದವಿಗೆ ಮಾನ್ಯತೆ ನೀಡ ಬೇಕೇ, ಬೇಡವೇ ಎಂಬ ಗೊಂದಲಕ್ಕೆ ಸಂಘ ಒಳಗಾಗಿದೆ. ಮಾನ್ಯತೆ ಪಡೆದ ವಿವಿಗಳಲ್ಲೇ ಬಿವಿಎ ಪದವಿ ನೀಡ ಲಾಗುತ್ತಿದ್ದು, ನೇಮಕಾತಿಗೆ ಪರಿಗಣಿಸು ವಂತೆ ಸಂಘಕ್ಕೆ ಮನವರಿಕೆ ಮಾಡ ಲಾಗಿದೆ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ದೃಶ್ಯಕಲಾ ವಿಭಾಗದ ಪ್ರಾಧ್ಯಾಪಕ ಎಸ್.ಸಿ. ಪಾಟೀಲ ತಿಳಿಸಿದ್ದಾರೆ.ಆಯಾ ಪರೀಕ್ಷಾ ಮಂಡಳಿಗಳು ಮತ್ತು ವಿವಿಗಳು ನಿಗದಿಪಡಿಸಿರುವ ಒಟ್ಟು ಅಂಕಗಳಲ್ಲಿ ವ್ಯತ್ಯಾಸವಿದೆ. ಕೆಲವು ಕೋರ್ಸ್‌ಗಳಿಗೆ 1600 ಅಂಕಗಳಿದ್ದರೆ, ಇನ್ನು ಕೆಲವು ಕೋರ್ಸ್ 2400 ಹಾಗೂ 3200 ಅಂಕಗಳನ್ನು ಒಳಗೊಂಡಿವೆ.ಈ ವ್ಯತ್ಯಾಸದಿಂದ ಮೆರಿಟ್ ಆಧಾರದ ಆಯ್ಕೆ ದುಸ್ತರ ಎಂದು ಸಂಘ ತಿಳಿಸಿದೆ. ಅಂಕಗಳು ಎಷ್ಟೇ ಇದ್ದರೂ, ಶೇಕಡಾವಾರು ಪರಿಗಣಿಸಿದಾಗ, ಪ್ರತಿ ನೂರಕ್ಕೆ ಇಂತಿಷ್ಟೇ ಎಂಬಂತೆ ನಿಖರ ಪರ್ಸೆಂಟೇಜ್ ಗುರುತಿಸಬಹುದಾಗಿದೆ. ಆ ಮಾದರಿಯಲ್ಲೇ ಮೆರಿಟ್ ಹಂಚಿಕೆ ಮಾಡಬಹುದಾಗಿದೆ. ಆದರೆ ಸಂಘ ಅನಗತ್ಯ ಗೊಂದಲಕ್ಕೀಡಾಗಿದೆ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ನಮ್ಮಿಂದ ತಪ್ಪಾಗಿದೆ: `ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸು ವಾಗ ಚಿತ್ರಕಲಾ ಶಿಕ್ಷಕರ ವಿದ್ಯಾರ್ಹತೆ ನಿಗದಿಗೆ ಸಂಬಂಧಿಸಿದಂತೆ ಸ್ಪಷ್ಟತೆ ಇಲ್ಲದೆ, ಗೊಂದಲ ಸೃಷ್ಟಿಯಾಗಿದ್ದು, ಖಂಡಿತ ನಮ್ಮಿಂದ ತಪ್ಪಾಗಿದೆ~ ಎಂದು ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಎನ್. ಶಾಂತಪ್ಪ ಹೇಳುತ್ತಾರೆ.ಗೊಂದಲ ನಿವಾರಣೆಗಾಗಿ ಮತ್ತು ಅಧಿಸೂಚನೆಯ ಅನುಸಾರ ನೇಮಕಕ್ಕೆ ಅನುಮತಿ ಕೋರಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಯವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಅವರಿಂದ ಇನ್ನೂ ಉತ್ತರ ಬಂದಿಲ್ಲ. ಬಂದ ನಂತರ ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರ ಹುದ್ದೆಗೆ ಕೇವಲ ಬಿಎಫ್‌ಎ, ಬಿವಿಎ ಪದವಿ ಪರಿಗಣಿಸದೆ, ಪದವಿ ನಂತರದ ಬಿಇಡಿ ಮಾದರಿಯ ಶಿಕ್ಷಕರ ತರಬೇತಿ ಕೋರ್ಸ್‌ಗಳನ್ನು ಪರಿಗಣಿಸುತ್ತದೆ. ಕೇಂದ್ರ ಸರ್ಕಾರ ವಸತಿಯುತ ಶಾಲೆಗಳ ಶಿಕ್ಷಕರ ಹುದ್ದೆಗಳ ನೇಮಕಕ್ಕೆ ಕೇವಲ ಪದವಿಯನ್ನು ಪರಿಗಣಿಸುತ್ತದೆ. ಸಂಘ ಈ ಎರಡನ್ನೂ ಪರಿಗಣಿಸಿದ್ದು ತಪ್ಪಾಗಿ,  ಗೊಂದಲ ಮೂಡಿದೆ. ಉನ್ನತ ಶಿಕ್ಷಣ ಇಲಾಖೆ ಸೂಚನೆಯನ್ನೇ ಅನುಸರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.