ಶುಕ್ರವಾರ, ಏಪ್ರಿಲ್ 23, 2021
28 °C

ಮೊರಾರ್ಜಿ ಶಾಲೆ ಮಕ್ಕಳಿಗೆ ಬಟ್ಟೆ ವಿತರಣೆ ವಿಳಂಬ:ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ತಾಲ್ಲೂಕಿನಲ್ಲಿನ ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಮತ್ತು ಹಾಸ್ಟೆಲ್‌ಗಳಲ್ಲಿನ ವಿದ್ಯಾರ್ಥಿಗಳಿಗೆ ಶೀಘ್ರ ಬಟ್ಟೆ ವಿತರಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗುಂಡುರೆಡ್ಡಿ ಸೂಚಿಸಿದರು.ಅವರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಬಡವರ ಮತ್ತು ನಿರ್ಗತಿಕರ ಮಕ್ಕಳು ಹಾಸ್ಟೆಲ್‌ಗಳಿಗೆ ಪ್ರವೇಶ ಪಡೆಯುತ್ತಾರೆ. ಶೈಕ್ಷಣಿಕ ವರ್ಷ ಮುಗಿಯುತ್ತ ಬಂದರೂ ಅವರಿಗೆ ಬಟ್ಟೆ ಏಕೆ ವಿತರಿಸಲಾಗಿಲ್ಲ ಎಂದು ಪ್ರಶ್ನಿಸಿದರು. ಹಾಸ್ಟೆಲ್‌ಗಳಲ್ಲಿ ಕಳಪೆ ಮಟ್ಟದ ಆಹಾರ ಕೊಡಲಾಗುತ್ತಿದೆ. ಮಕ್ಕಳಿಗೆ ಸರಿಯಾದ ವ್ಯವಸ್ಥೆ ಇಲ್ಲ. ಈ ಬಗ್ಗೆಯೂ ಪರಿಶೀಲನೆ ನಡೆಸಬೇಕು.

ಒಂದುವೇಳೆ ಇನ್ನುಮುಂದೆ ಎಲ್ಲಿಯಾದರೂ ಅವ್ಯವಸ್ಥೆ ಕಂಡು ಬಂದರೆ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿಸಿ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು. ಅಂಗನವಾಡಿ ಕೇಂದ್ರಗಳಲ್ಲಿಯೂ ಮಕ್ಕಳಿಗೆ ಆಹಾರ ಕೊಡುವುದಿಲ್ಲ. ಕೆಲವೆಡೆ ಸರ್ಕಾರ ನಿಗದಿಪಡಿಸಿದಷ್ಟು ಆಹಾರದ ಪೊಟ್ಟಣಗಳನ್ನು ವಿತರಿಸಲಾಗುವುದಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ. ಆದ್ದರಿಂದ ಬಾಲವಿಕಾಸಾಧಿಕಾರಿಗಳು ಎಲ್ಲ ಅಂಗನವಾಡಿಗಳಿಗೆ ಭೇಟಿ ಕೊಡಬೇಕು ಎಂದು ಸೂಚಿಸಿದರು.ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಬೇಕು. ಸುವರ್ಣ ಭೂಮಿ ಯೋಜನೆಯಲ್ಲಿ ಬಾಕಿ ಉಳಿದ ರೈತರಿಗೆ ಪರಿಹಾರ ಧನ ವಿತರಿಸಬೇಕು. ಪಶು ಸಂಗೋಪನಾ ಇಲಾಖೆಯಿಂದ ಆಯ್ಕೆ ಮಾಡಲಾದ ಗೊಂಚಲು ಗ್ರಾಮಗಳ ಪಟ್ಟಿಯಲ್ಲಿ ಬದಲಾವಣೆ ಮಾಡಬೇಕು ಎಂದೂ ಅಧ್ಯಕ್ಷ ಗುಂಡುರೆಡ್ಡಿ ಹೇಳಿದರು. ಹಿಂದೆ ಏನಾಗಿದೆ ಗೊತ್ತಿಲ್ಲ.ಮುಂದೆ ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಮಾತ್ರ ಸುಮ್ಮನಿರುವುದಿಲ್ಲ ಎಂದರು.ಉಪಾಧ್ಯಕ್ಷೆ ಸರಸ್ವತಿ ಕಾಶಪ್ಪ ಸಾಗಾವೆ, ಸದಸ್ಯರಾದ ಬಸವರಾಜ ರಾಯಗೊಳ, ರಾಘವೇಂದ್ರ ದೇಸಾಯಿ, ಗುರುಲಿಂಗಪ್ಪ ಸೈದಾಪುರೆ, ಸವಿತಾ ಹಲಸೆ, ರಾಮಲಿಂಗರೆಡ್ಡಿ, ಅಹ್ಮದಸಾಬ್ ರಾಜೇಶ್ವರ, ಚಂದ್ರಕಾಂತ ಮೇತ್ರೆ ತಮ್ಮ ಕ್ಷೇತ್ರಗಳ ಸಮಸ್ಯೆ ಹೇಳಿದರು.ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಬಸವರಾಜ ಚಿರಡೆ ಸ್ವಾಗತಿಸಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಗತಿ ವರದಿ ವಾಚಿಸಿದರು. ಸಭೆಗೆ ಮೊದಲು ಅಧ್ಯಕ್ಷ- ಉಪಾಧ್ಯಕ್ಷರನ್ನು ಶಾಲು ಹೊದಿಸಿ   ಸತ್ಕರಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.