ಮೊಳಕಾಲ್ಮುರಿಗೆ ನೀರು ಹರಿಸಲು ಆಗ್ರಹ

7
ಭದ್ರಾ ಮೇಲ್ದಂಡೆ ಯೋಜನೆ: ತಾಲ್ಲೂಕಿಗೆ 3 ಟಿಎಂಸಿ ನೀರಿಗೆ ಒತ್ತಾಯ

ಮೊಳಕಾಲ್ಮುರಿಗೆ ನೀರು ಹರಿಸಲು ಆಗ್ರಹ

Published:
Updated:

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಮೊಳಕಾಲ್ಮುರು ತಾಲ್ಲೂಕಿಗೆ 3 ಟಿಎಂಸಿ ನೀರು ಒದಗಿಸುವಂತೆ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಈ. ವೆಂಕಟಸ್ವಾಮಿ ಆಗ್ರಹಿಸಿದರು.ಭಾನುವಾರ ನಡೆದ ಬಿಜೆಪಿ ಜಿಲ್ಲಾ ಘಟಕದ ಸಭೆಯಲ್ಲಿ ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸತ್ ಸದಸ್ಯ ಅನಂತಕುಮಾರ್ ಅವರಿಗೆ ವೆಂಕಟಸ್ವಾಮಿ ಮನವಿ ಸಲ್ಲಿಸಿದರು.ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಮೊಳಕಾಲ್ಮುರು ತಾಲ್ಲೂಕಿಗೆ ನೀರು ಒದಗಿಸುವ ಪ್ರಸ್ತಾವ ಇಲ್ಲ. ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ 21.50 ಟಿಎಂಸಿ ನೀರಿನ ಹಂಚಿಕೆಯಾಗಿದೆ. ಆಂಧ್ರಪ್ರದೇಶದ ಪೊಲ್ಲಾವರಮ್ ಇಂದಿರಾಸಾಗರ ತಿರುವು ಯೋಜನೆ ಅನುಷ್ಠಾನದಿಂದ ಕರ್ನಾಟಕ ರಾಜ್ಯಕ್ಕೆ ಕೃಷ್ಣಕೊಳ್ಳದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ದೊರೆಯಬಹುದಾದ 2.4 ಟಿಎಂಸಿ ಹೆಚ್ಚುವರಿ ನೀರಿನ ಹಂಚಿಕೆ ಪ್ರಸ್ತಾವದಲ್ಲಿ ಯಾವುದೇ ಉಳಿತಾಯವಿರುವುದಿಲ್ಲ. ಆದ್ದರಿಂದ ಮೊಳಕಾಲ್ಮುರು ಕ್ಷೇತ್ರವನ್ನು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಸೇರಿಸಿ, ನೀರೊದಗಿಸುವ ಸಲುವಾಗಿ ಹೆಚ್ಚುವರಿ ನೀರಿನ ಹಂಚಿಕೆ ಅಗತ್ಯವಿದೆ. ಹಾಲಿ ಯೋಜನೆ ಅಡಿ ಪ್ಯಾಕೇಜ್ 1,2 ಮತ್ತು 3ರ ಅನುಷ್ಠಾನದ ರೂಪರೇಷೆಗಳನ್ನು ಪರಿಷ್ಕರಿಸಬೇಕಾಗಿದೆ ಎಂದು ತಿಳಿಸಿದರು.ಆದ್ದರಿಂದ ರಾಜ್ಯದ ಅತ್ಯಂತ ಹಿಂದುಳಿದ ಭಾಗವಾಗಿರುವ ಮತ್ತು ಯಾವುದೇ ನೀರಾವರಿ ಸೌಲಭ್ಯ ಇಲ್ಲದೆ ಕೇವಲ ಖುಷ್ಕಿ ಬೇಸಾಯದಿಂದ ಕಂಗೆಟ್ಟಿರುವ ರೈತರಿಗೆ ಈ ಯೋಜನೆಯಿಂದ ನೆಮ್ಮದಿ ಮೂಡಿಸಬೇಕಾಗಿದೆ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅನಂತಕುಮಾರ್, ಮೊಳಕಾಲ್ಮುರಿಗೆ ನೀರು ಹರಿಸುವ ಬಗ್ಗೆ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry