ಭಾನುವಾರ, ನವೆಂಬರ್ 17, 2019
21 °C

ಮೊಳಕೆ ಬಿಡಲು ನಾಂದಿ `ಯುಗಾದಿ'

Published:
Updated:

ಯುಗಾದಿ ಹೊಸ ವರ್ಷದ ಆರಂಭ ಮಾತ್ರಲ್ಲ, ಕೃಷಿ ಚಟುವಟಿಕೆಗಳಿಗೆ ನಾಂದಿ ಹಾಡುವ ದಿನವೂ ಹೌದು. ರೈತರು ಬಿತ್ತನೆಗಾಗಿ ಸಂಗ್ರಹಿಸಿಟ್ಟುಕೊಂಡಿರುವ ಬಿತ್ತನೆ ಬೀಜಗಳನ್ನು ನೈಸರ್ಗಿಕ ವಿಧಾನದ ಮೂಲಕ ಪರೀಕ್ಷಿಸಿ ಕೊಳ್ಳಲು `ಮೊಳಕೆ ಬಿಡುವ' ಆಚರಣೆ ಇದೆ. ಇದೊಂದು ರೀತಿಯಲ್ಲಿ ಬೆಳೆಯುವ ಪೈರನ್ನು ಮೊಳಕೆಯಲ್ಲೇ ನೋಡುವ ಪರಿ. ಅದೇ ರೀತಿ ಮುಂದಿನ ಮಳೆ, ಬೆಳೆ, ಬಿತ್ತನೆ ಬೀಜ ಹೇಗೆ ಎಂದು ತಿಳಿದುಕೊಳ್ಳುವ ಪೈರಿನ ಪಂಚಾಗ ಕೂಡ. ಇದು ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ ಈ ಭಾಗದ ರೈತರು ಇಂದಿಗೂ ಸಹ ಯುಗಾದಿ ಹಬ್ಬದ ದಿನ `ಮೊಳಕೆ ಬಿಡುವ' ಸಂಪ್ರದಾಯ ಮುಂದುವರೆಸಿಕೊಂಡು ಬಂದಿದ್ದಾರೆ.ಹೊಲದ ರೀತಿಯಲ್ಲಿಯೇ ಚೌಕಾಕಾರವಾಗಿ ಮೊಳಕೆ ಬಿಡುವ ಹಲಗೆಯನ್ನು ಸಿದ್ಧಗೊಳಿಸಲಾಗುತ್ತದೆ. ಈ ಹಲಗೆ ಮೇಲೆ ಯುಗಾದಿ ಹಬ್ಬದ ದಿನ ಪೂಜೆ ಸಲ್ಲಿಸಿ ಮನೆಯಲ್ಲಿ ಬಿತ್ತನೆಗಾಗಿ ಕೂಡಿಟ್ಟ ವಿವಿಧ ಬೀಜಗಳನ್ನು ಮೊಳಕೆ ಬಿಡಲಾಗುತ್ತದೆ. ನಿಯಮಿತದಂತೆ ಪ್ರತಿದಿನ ಬೆಳಗ್ಗೆ ಹಲಗೆ ಮೇಲೆ ನೀರು ಹಾಕಿ ಮನೆ ಅಂಗಳದಲ್ಲಿ ಚನ್ನಾಗಿ ಬಿಸಿಲು ಬೀಳುವ ಸ್ಥಳದಲ್ಲಿ ಮೊಳಕೆ ಬಿಟ್ಟಿರುವ ಹಲಗೆಯನ್ನು ಇಡಲಾಗುತ್ತದೆ. ಬಿಸಿಲು ಚೆನ್ನಾಗಿ ಮೇಲೇರಿದ ನಂತರ ಅಂದರೆ ಮಧ್ಯಾಹ್ನ 11 ಗಂಟೆ ಸುಮಾರಿಗೆ ಮೊಳಕೆ ಬಿಟ್ಟಿರುವ ಹಲಗೆಯನ್ನು ಮನೆ ಒಳಗೆ ಹೊಯ್ದು ಗಾಳಿ, ಬೆಳಕು ಚನ್ನಾಗಿ ಬರುವ ಸ್ಥಳದಲ್ಲಿ  ಇಡಲಾಗುತ್ತದೆ.ಇದೇ ರೀತಿ ನಿಯಮಿತದಂತೆ 9 ದಿನಗಳ ಕಾಲ ಮಾಡಲಾಗುತ್ತದೆ. ಯುಗಾದಿ ಹಬ್ಬ ಕಳೆದ 9 ದಿನಗಳ ನಂತರ ಬರುವ ಶ್ರೀರಾಮನವಮಿ ದಿನದಂದು ಹಲಗೆ ಮೇಲೆ ಬಿತ್ತಲಾಗಿರುವ ಬೀಜಗಳ  ಪೈಕಿ ಯಾವ ಯಾವ ಬೀಜಗಳು ಎಷ್ಟು ಪ್ರಮಾಣದಲ್ಲಿ ಉತ್ತಮವಾಗಿ ಮೊಳಕೆಯೊಡೆದು ಪೈರು ಹುಲುಸಾಗಿ  ಬೆಳೆದಿವೆ ಎಂದು ಪರೀಕ್ಷಿಸಿಕೊಳ್ಳಲಾಗುತ್ತದೆ. ಶ್ರೀರಾಮನಮಿ ದಿನ ಸಂಜೆ ಪೈರಿಗೆ ಪೂಜೆ ಸಲ್ಲಿಸಿ ಮನೆ ಅಂಗಳದ ತೆಂಗಿನ ಮರ ಅಥವಾ ಹೂವಿನ ಗಿಡದ ಕೆಳಗೆ ಇಡಲಾಗುತ್ತದೆ. ಇದು ರೈತರು ತಮ್ಮಲ್ಲಿ ಕೂಡಿಟ್ಟುಕೊಂಡಿರುವ ಬಿತ್ತನೆ ಬೀಜಗಳು ಎಷ್ಟರಮಟ್ಟಿಗೆ ಬಿತ್ತನೆಗೆ ಯೋಗ್ಯ ಎನ್ನುವುದನ್ನು ಪರೀಕ್ಷಿಸಿಕೊಳ್ಳುವ ನೈಸರ್ಗಿಕ ವಿಧಾನ.ಸಿದ್ಧತೆ ಹೇಗೆ

ಒಂದು ಅಡಿ ಸುತ್ತಳತೆ ಹಲಗೆ ಸುತ್ತಲು ಹಸಿ ಸಗಣಿಯಿಂದ ಒಂದುವರೆ ಇಂಚಿನಷ್ಟು ಎತ್ತರಕ್ಕೆ ಕಟ್ಟೆಯನ್ನು ಕಟ್ಟಲಾಗುತ್ತದೆ. ಇದರ ಒಳಗೆ ಒಂದು ಹಿಡಿ ಮಣ್ಣು, ಸಗಣಿಯನ್ನು ಒಣಗಿಸಿ ಮಾಡಿದ ಒಣ ಗೊಬ್ಬರದಲ್ಲಿ ವಿವಿಧ ತರಹದ ಬಿತ್ತನೆ ಬೀಜಗಳನ್ನು ಮಿಶ್ರಣ ಮಾಡಿ ಮೊಳಕೆ ಬಿಡಲಾಗುತ್ತದೆ. ಮಳೆಗಾಲದಲ್ಲಿ ಬಿತ್ತನೆಗಾಗಿ ಕೂಡಿಟ್ಟುಕೊಂಡಿರುವ ಅವರೆ, ಅಲಸಂದೆ, ರಾಗಿ, ಹುಚ್ಚೆಳ್ಳು, ಹರಳು, ಜೋಳ, ಬತ್ತ ಸೇರಿದಂತೆ ವಿವಿಧ ಬೀಜಗಳು ಉತ್ತಮವಾಗಿ ಮೊಳಕೆ ಬರುತ್ತವೋ, ಇಲ್ಲವೋ ಅಥವಾ ನಾವು ಹಾಕಿರುವ ಬೀಜಗಳ ಪೈಕಿ ಎಷ್ಟು ಪ್ರಮಾಣದಲ್ಲಿ ಮೊಳಕೆ ಬಂದಿವೆ ಎನ್ನುವುದನ್ನು ಮಳೆಗಾಲ ಆರಂಭವಾಗುವ ಮುನ್ನವೇ ನೈಸರ್ಗಿಕ ವಿಧಾನದ ಮೂಲಕ ಪರೀಕ್ಷಿಸಿಕೊಳ್ಳಲು ಮೊಳಕೆ ಬಿಡುವ ಸಂಪ್ರದಾಯವಿದೆ.

ಪ್ರತಿಕ್ರಿಯಿಸಿ (+)