ಸೋಮವಾರ, ಜೂನ್ 21, 2021
27 °C

ಮೊಸರು ಗಡಿಗೆ ಒಡೆದು ಬಹುಮಾನ ಗಿಟ್ಟಿಸಿಕೊಂಡರು !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ: ನಗರದ ಅಂಬಿಗೇರ ಗಲ್ಲಿ ಹಾಗೂ ಸಂಗಮನಗರದ ಯುವಕರು ಪ್ರತಿ ವರ್ಷದಂತೆಯೇ ಈ ಬಾರಿಯೂ ಹೋಳಿಹಬ್ಬದ 2ನೇ ದಿನದ ರಂಗಿನಾಟದ ಅಂಗವಾಗಿ ಸುಮಾರು 30 ಅಡಿ ಎತ್ತರದಲ್ಲಿ ಕಟ್ಟಲಾಗಿದ್ದ ಮೊಸರಿನ ಗಡಿಗೆಯನ್ನು ಒಡೆಯುವ ಮೂಲಕ ಆಚರಿಸಿದರು.ಈ ವಿಶಿಷ್ಟ ರಂಗಿನಾಟದ ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಪೂಜಾರಿ ಪಾಲ್ಗೊಂಡು ಸಂಭ್ರಮಿಸಿದರು.

ಈ ರಂಗಿನಾಟದ ಕಾರ್ಯಕ್ರಮದಲ್ಲಿ ಯುವಕರು ಮೂರು ತಂಡಗಳನ್ನು ಕಟ್ಟಿಕೊಂಡು ಗಡಿಗೆ ಒಡೆದು ಪರಸ್ಪರ ಬಣ್ಣ ಎರಚುವ ಮುಖಾಂತರ ಯುವಕರು ಹೋಳಿಯನ್ನು ವಿಜೃಂಭಣೆಯಿಂದ ಆಚರಿಸಿದರು. ಹೋಳಿಹಬ್ಬದ ಬಣ್ಣ ಹಚ್ಚುವ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಮಹಾಂತೇಶ ಮಠಪತಿ, ರಾಜು ಮಾಡಲಗಿ, ಶ್ರೀಶೈಲ ಪೂಜಾರಿ, ಸಂಜೀವ ಪೂಜಾರಿ, ರಾಜು ನಂದಗಾಂವಿ, ಮಹಾ­ದೇವ ನಂದ­ಗಾಂವಿ, ಯುವಕರು ಹಾಗೂ ಯುವತಿ­ಯರು ಬಣ್ಣ ಹಚ್ಚುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ತೆರೆ ಕಂಡ ರಂಗದೋಕುಳಿ: ಶಾಂತಿ ಸೌಹಾ­ರ್ದತೆಯ ಪ್ರತೀಕವಾಗಿರುವ ರಂಗು-ರಂಗಿನ ಹೋಳಿ ಹಬ್ಬದ ಬಣ್ಣದಾಟ ಮಂಗಳವಾರ  ತೆರೆಕಂಡಿತು.ಎರಡು ದಿನಗಳವರೆಗೆ ನಡೆದ ಬಣ್ಣದಾಟದಲ್ಲಿ ಯುವಕರು, ಯುವತಿಯರು ಹಾಗೂ ಚಿಣ್ಣರು, ಮಹಿಳೆಯರು ಪಾಲ್ಗೊಂಡು ಸಂಭ್ರಮಪಟ್ಟರು.ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುವ ಸಂಬಂಧ ನಗರದ ಸಂಗಮನಗರ, ಅಂಬಿಗರ ಗಲ್ಲಿ, ವಿವೇಕಾನಂದ ನಗರ, ಸೋಮವಾರ ಪೇಟೆ ಮೊದಲಾದೆಡೆಗಳಲ್ಲಿ ಬಣ್ಣದಿಂದ ತುಂಬಿದ ಮಡಕೆಯನ್ನು ಒಡೆಯುವ ಪ್ರದರ್ಶನದಲ್ಲಿ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಆಸಕ್ತಿಯಿಂದ ರಂಗಿನಾಟದಲ್ಲಿ ಪಾಲ್ಗೊಂಡಿದ್ದರು.ಡ್ರಮ್ಗಳಲ್ಲಿ ತುಂಬಿದ್ದ ಬಣ್ಣವನ್ನು ಪರಸ್ಪರ ಎರಚುತ್ತಾ ಚಲನಚಿತ್ರ ಗೀತೆಗಳಿಗೆ ತಕ್ಕಂತೆ ನೃತ್ಯದಲ್ಲಿ ತೊಡಗಿದ್ದ ಯುವಕರು ಮೈ-ಮರೆತು ಸಂಭ್ರಮಿಸಿದರು.ಚಿಣ್ಣರ ಬಣ್ಣದಾಟ

ಮುನವಳ್ಳಿ
: ಭಾರತೀಯ ಗ್ರಾಮೀಣ ಶಿಕ್ಷಣ ಪ್ರಸಾರಕ ಸಂಘದ ಶ್ರೀ ವಿ.ಪಿ. ಜೇವೂರ ಸ್ಮಾರಕ ಮೂಕ ಮಕ್ಕಳ ಶಾಲೆಯಲ್ಲಿ ವಿದ್ಯಾರ್ಥಿಗಳು ಹೋಳಿಯನ್ನು ಸಂಭ್ರಮದಿಂದ ಆಚರಿಸಿದರು.ವಿದ್ಯಾರ್ಥಿಗಳಿಗೆ ಬಣ್ಣದ ಗಡಿಗೆಗಳನ್ನು ಒಡೆಯುವ ಸ್ಪರ್ಧೆ ಇಡಲಾಗಿತ್ತು. ಸಂಸ್ಥೆಯ ಚೇರಮನ್ ದಿಲೀಪ್ ಜಂಬಗಿ, ರಾಜೇಶ್ವರಿ ಪೂಜೇರ, ರಾಜಶೇಖರ ಗೌರಿ, ಬಿ.ಎಸ್. ಇಂಗಳೆ, ಶಿವಕುಮಾರ ಕಾಟೆ, ಶಶಿಕಲಾ ಜಂಬಗಿ, ದುರಗಪ್ಪ ಪೂಜೇರ, ವೀರೂ ಕಳಸಣ್ಣವರ ಮೊದಲಾದವರು ಪಾಲ್ಗೊಂಡಿದ್ದರು.ಹೋಳಿ ಹಬ್ಬದ ಸಂಭ್ರಮ: ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶ್ರೀ ಶಂಕರಲಿಂಗ ದೇವಸ್ಥಾನ ಹಾಗೂ ಜಾಡಿಗೇರಿಯಲ್ಲಿ ಪ್ರತಿಷ್ಠಾಪಿಸಿದ್ದ  ರತಿ ಮನ್ಮಥರ ಮೂರ್ತಿಗಳನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.ಪ್ರಮುಖ ಸ್ಥಳಗಳಲ್ಲಿ ಬ್ಯಾರಲ್‌ಗಳಲ್ಲಿ ಬಣ್ಣ ತುಂಬಿ ಪರಸ್ಪರ ಎರಚಾಡಿದರು. ನಂತರ ಕಾಮದಹನ ಜರುಗಿತು. ಮಕ್ಕಳು, ಮಹಿಳೆಯರು ಸೇರಿದಂತೆ ಸಕಲರೂ ಹರ್ಷೋಲ್ಲಾಸಗಳಿಂದ ಹೋಳಿ ಬಣ್ಣದಾಟದಲ್ಲಿ ಮಿಂದೆದ್ದರು. ಅಂಬಲಿ, ಕಲ್ಲಂಗಡಿ ಹೋಳಿ ಹಬ್ಬದ ದಣಿವನ್ನು ತಣಿಸಿದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.