ಮೊಹಿಂದರ್ ನಡೆ ಸರಿಯಲ್ಲ-ಮೋರೆ

7

ಮೊಹಿಂದರ್ ನಡೆ ಸರಿಯಲ್ಲ-ಮೋರೆ

Published:
Updated:

ಮುಂಬೈ (ಪಿಟಿಐ): ಭಾರತ ತಂಡದ ಆಯ್ಕೆಯ ಸಂದರ್ಭದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರು ವ್ಯಕ್ತ ಪಡಿಸಿದರೆನ್ನಲಾದ ಅನಿಸಿಕೆಗಳನ್ನು ಬಹಿರಂಗಗೊಳಿಸಿರುವ ಮೊಹಿಂದರ್ ಅಮರನಾಥ್ ಅವರದ್ದು ಉತ್ತಮ ಅಭಿರುಚಿಯ ವರ್ತನೆಯಲ್ಲ ಎಂದು ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಕಿರಣ್ ಮೋರೆ ಅಭಿಪ್ರಾಯ ಪಟ್ಟಿದ್ದಾರೆ.“ಆಯ್ಕೆ ಸಮಿತಿಯೊಳಗೆ ನಡೆಯುವಂತಹ ಮಾತುಕತೆಗಳನ್ನು ಬಯಲುಗೊಳಿಸುವುದು ವಿಶ್ವಾಸಾರ್ಹ ನಡೆಯಂತೂ ಅಲ್ಲ. ಆಯ್ಕೆ ಸಮಿತಿಯೊಳಗಿದ್ದೀರಿ ಎಂದರೆ ಬಿಸಿಸಿಐನ ಕೆಲವು ನಿಯಮಗಳು, ಅದರ ಸಂವಿಧಾನದ  ಬಗ್ಗೆ ಸ್ಪಷ್ಟ ತಿಳಿವಳಿಕೆ ಇರಲೇಬೇಕು. ಮೊಹಿಂದರ್ ಈಚೆಗೆ ಮಾತನಾಡಿರುವ    ಸಂಗತಿಗಳು ಈ ದೇಶದ ಕ್ರಿಕೆಟ್‌ಗೆ ಒಳ್ಳೆಯದಂತೂ ಅಲ್ಲ” ಎಂದೂ ಅವರು ಹೇಳಿದರು.“ಒಬ್ಬ ಆಟಗಾರನ ಪರ ಅಥವಾ ವಿರುದ್ಧ ಏನೇ ಅಭಿಪ್ರಾಯಗಳಿದ್ದರೂ, ಆಯ್ಕೆ ಸಮಿತಿಯ ಸಭೆ ನಡೆವ ಕೊಠಡಿಯ ಹೊರಗೆ ನಿಂತು ಧ್ವನಿ ಎತ್ತರಿಸಿ ಹೇಳುವ ಅಗತ್ಯವಂತೂ ಇಲ್ಲವೇ ಇಲ್ಲ” ಎಂದರು.

“ಅನಿಸಿಕೆಗಳನ್ನು ಹೇಳಲೇ ಬೇಕಿದ್ದರೆ ಎಲ್ಲವನ್ನೂ ಬರೆದು ಮಂಡಳಿಗೇ ತಿಳಿಸಬಹುದಿತ್ತೇ ಹೊರತು, ಮಾಧ್ಯಮದ ಎದುರು ನಿಲ್ಲಬೇಕಿರಲಿಲ್ಲ” ಎಂದಿದ್ದಾರೆ.ಇದೇ ವರ್ಷದ ಜನವರಿಯಲ್ಲಿ ನಡೆದ ಆಯ್ಕೆ ಸಮಿತಿ   ಸಭೆಯಲ್ಲಿ ಐವರು ಸದಸ್ಯರು ದೋನಿಯವರನ್ನು ಕೈಬಿಡುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದರಾದರೂ, ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಮಧ್ಯಪ್ರವೇಶ ನಡೆಸಿ ದೋನಿಯವರನ್ನು ಉಳಿಸಿಕೊಂಡರು ಎಂದು ಹಿಂದೆ ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿದ್ದ ಮೊಹಿಂದರ್ ಅಮರನಾಥ್ ಹೇಳಿದ್ದರು. ಈ ಹೇಳಿಕೆಯ ಬಗ್ಗೆ ದೇಶದಾದ್ಯಂತ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry