ಮೋಜು ಪಾರ್ಟಿ: ವರದಿ ನೀಡಲು ಡಿಸಿ ಸೂಚನೆ

7

ಮೋಜು ಪಾರ್ಟಿ: ವರದಿ ನೀಡಲು ಡಿಸಿ ಸೂಚನೆ

Published:
Updated:
ಮೋಜು ಪಾರ್ಟಿ: ವರದಿ ನೀಡಲು ಡಿಸಿ ಸೂಚನೆ

ಮಂಡ್ಯ: ನಗರಸಭೆ ಸಿಬ್ಬಂದಿ ಕಚೇರಿ ಅವಧಿಯಲ್ಲಿ ಗೋಸಾಯ್‌ಘಾಟ್‌ಗೆ ತೆರಳಿ ಪಾರ್ಟಿ ಮಾಡಿದ ಘಟನೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರು ನಗರಸಭೆ ಆಯುಕ್ತ ರಾಮಸ್ವಾಮಿ ಅವರಿಗೆ ವರದಿ ಕೇಳಿದ್ದಾರೆ.ಪಾರ್ಟಿ ಮಾಡುವ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ. ತಮಗೆ ತಿಳಿಸಿಯೂ ಇರಲಿಲ್ಲ. ಮೇಲಿನವರಿಗೆ ತಿಳಿಸಿದ್ದೆ ಎಂಬ ಆಯುಕ್ತರ ಹೇಳಿಕೆ ಗಮನಿಸಿದ್ದೇನೆ. ಅದನ್ನು ಲಿಖಿತವಾಗಿ ನೀಡಲಿ’ ಎಂದು ಜಿಲ್ಲಾಧಿಕಾರಿ ಶುಕ್ರವಾರ ಪ್ರತಿಕ್ರಿಯಿಸಿದರು.ಬಜೆಟ್ ಮಂಡನೆ ಬಳಿಕ ನಗರಸಭೆ ಸಿಬ್ಬಂದಿ, ಬಹುತೇಕ ಸದಸ್ಯರು ಶ್ರೀರಂಗ ಪಟ್ಟಣ ತಾಲ್ಲೂಕು ಗೋಸಾಯ್ ಘಾಟ್‌ಗೆ ತೆರಳಿ ಸಂತೋಷ ಕೂಟ ಮಾಡಿದ್ದು, ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಅನುಚಿತವಾಗಿ ವರ್ತಿಸಿದ್ದನ್ನು ಸ್ಮರಿಸಬಹುದು.ಬಿಜೆಪಿ ಪ್ರತಿಭಟನೆ: ಕಚೇರಿ ಅವಧಿಯಲ್ಲಿ ನಗರಸಭೆ ಸಿಬ್ಬಂದಿ, ಸದಸ್ಯರ ಸಂತೋಷ ಕೂಟ  ಮತ್ತು ಮಾಧ್ಯಮ ಪ್ರತಿನಿಧಿಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ಸದಸ್ಯರು ಶುಕ್ರವಾರ ನಗರಸಭೆ ಎದುರು ಪ್ರತಿಭಟಿಸಿದರು.ನಗರಸಭೆ ಅಧ್ಯಕ್ಷರು, ಆಯುಕ್ತರ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಜಿಲ್ಲಾಡಳಿತ ಕೂಡಲೇ ಇತ್ತ ಗಮನಿಸಿ ಸರ್ಕಾರಿ ಯಂತ್ರ ದುರ್ಬಳಕೆ ಮಾಡಿಕೊಂಡಿರುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನಗರಸಭೆ ಬಿಜೆಪಿ ಸದಸ್ಯೆ ಆಯೇಷಾ ತಬುಸ್ಸುಂ ಗೈರು ಹಾಜರಾಗಿದ್ದರು.ಕಚೇರಿ ಅವಧಿಯಲ್ಲಿಯೇ ತೆರಳಿ ಮೋಜು ಮಾಡುವ ಮೂಲಕ ಹೊಣೆಗಾರಿಕೆ ಮರೆತಿದ್ದಾರೆ. ಇದಕ್ಕೆ ಅಧ್ಯಕ್ಷರು ಮತ್ತು ಆಯುಕ್ತರೇ ನೇರ ಹೊಣೆ. ಜಿಲ್ಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ.ಶಿವಕುಮಾರ್, ನಗರಸಭೆ ಸದಸ್ಯ ನಂಜುಂಡಪ್ಪ, ಎಂ.ಸಿ.ಸಿದ್ದು, ಯುವ ಮೋರ್ಚಾ ಅಧ್ಯಕ್ಷ ಚಂದ್ರಕುಮಾರ್, ಸಿದ್ದರಾಜು, ಲಕ್ಷ್ಮಣಯ್ಯ, ಭಕ್ತವತ್ಸಲ, ನೀನಾ ಪಟೇಲ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಪಿ.ಮಹೇಶ್ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry