ಮೋಟಾರ್ ರ‌್ಯಾಲಿ: ಪ್ರಶಸ್ತಿಯತ್ತ ರಾಣಾ ಹೆಜ್ಜೆ

7

ಮೋಟಾರ್ ರ‌್ಯಾಲಿ: ಪ್ರಶಸ್ತಿಯತ್ತ ರಾಣಾ ಹೆಜ್ಜೆ

Published:
Updated:

ಭುಜ್ (ಗುಜರಾತ್): ಮೋಟಾರ್ ರ‌್ಯಾಲಿಯ ದಿಕ್ಕು ಶುಕ್ರವಾರ ರಾಜಸ್ತಾನದ ಮರಭೂಮಿಯಿಂದ ಗುಜರಾತಿನ ಲವಣ ಭೂಮಿಗೆ ಬದಲಾದರೂ ಥಂಡರ್ ಬೋಲ್ಟ್‌ನ ಸುರೇಶ್ ರಾಣಾ ಅವರ ಮುನ್ನಡೆಯನ್ನು ಯಾವ ಎದುರಾಳಿಗೂ ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ.ನಾದರ್ನ್ ಮೋಟಾರ್ ಸ್ಪೋರ್ಟ್ಸ್ ಸಹಯೋಗದಲ್ಲಿ ಮಾರುತಿ ಸುಜುಕಿ ಸಂಸ್ಥೆ ಏರ್ಪಡಿಸಿರುವ 10ನೇ ವರ್ಷದ `ಡಸರ್ಟ್ ಸ್ಟಾರ್ಮ್~ ಮೋಟಾರ್ ರ‌್ಯಾಲಿ ಚಾಂಪಿಯನ್‌ಷಿಪ್‌ನ ಎಕ್ಸ್‌ಟ್ರೀಮ್ ವಿಭಾಗದಲ್ಲಿ, ಸುಮಾರು 36 ನಿಮಿಷಗಳ ಮುನ್ನಡೆ ಕಾಯ್ದುಕೊಂಡಿರುವ ಜಿಪ್ಸಿ ಚಾಲಕ ರಾಣಾ, ಸ್ಪರ್ಧೆಯ ನಾಲ್ಕನೇ ದಿನವೂ ಅದೇ ವೇಗದಲ್ಲಿ ವಾಹನ ಚಲಿಸುವ ಮೂಲಕ ಪ್ರಶಸ್ತಿಯತ್ತ ದಾಪುಗಾಲು ಹಾಕಿದರು.ಗುರುವಾರ ಜೈಸಲ್ಮೇರ್‌ನ ಬೃಹದಾಕಾರದ ಪವನ ವಿದ್ಯುಚ್ಛಕ್ತಿ ಫ್ಯಾನುಗಳ ಅಡಿಯಲ್ಲಿ ಭಾರಿ ದೂಳೆಬ್ಬಿಸಿ ಬಂದಿದ್ದ ರಾಣಾ, ದೇಶ ಇದುವರೆಗೆ ಕಂಡ ಅತ್ಯಂತ ದೊಡ್ಡ ರ‌್ಯಾಲಿ ಲೆಗ್ (340 ಕಿ.ಮೀ) ಎನಿಸಿದ `ದಿ ಗ್ರೇಟ್ ರನ್~ನಲ್ಲಿ ಕೂಡ ಮೊದಲಿಗರಾಗಿಯೇ ಗುರಿ ತಲುಪಿದರು. ಜಗತ್ತಿನ ಕೌತುಕಗಳಲ್ಲಿ ಒಂದಾದ ಬಿಳಿ ಮರಭೂಮಿ (ವೈಟ್ ಡಸರ್ಟ್)ಗೆ ಹೊಂದಿಕೊಂಡ ಕಚ್‌ನ ಲವಣ ಪ್ರದೇಶದಲ್ಲಿ ಈ ಸ್ಪರ್ಧೆ ನಡೆಯಿತು.ಮಂಗಳೂರಿನ ಅಶ್ವಿನ್ ನಾಯಕ್ ವೇಗದ ಚಾಲಕ ರಾಣಾಗೆ ಜೊತೆಗಾರರಾಗಿದ್ದು, ಮಹತ್ವದ ಹಂತದಲ್ಲಿ ಸೂಕ್ತ ಸಲಹೆ ನೀಡುವ ಮೂಲಕ ತಮ್ಮ ವಾಹನದ ವೇಗ ಕಡಿಮೆಯಾಗದಂತೆ ನೋಡಿಕೊಂಡರು. ಸ್ಪರ್ಧೆಯ ಬಳಿಕ `ಪ್ರಜಾವಾಣಿ~ ಜತೆ ಮಾತನಾಡಿದ ಅವರು, `ದಾರಿಯಲ್ಲಿ ನಾವು ನೀಲ್‌ಗಾಯ್‌ಗಳು ಮತ್ತು ಒಂಟೆಗಳನ್ನು ಕಂಡೆವು. ಯಾವುದೇ ಒತ್ತಡವಿಲ್ಲದೆ ನಡೆದ ಯಾತ್ರೆ ತುಂಬಾ ಖುಷಿ ನೀಡಿತು~ ಎಂದು ಸಂತಸ ಹಂಚಿಕೊಂಡರು.`ಮೊದಲ ಸುತ್ತು ಪೂರೈಸಿದ ಬಳಿಕ ಡೀಸೆಲ್‌ಗಾಗಿ ನಾವು ಎರಡು ನಿಮಿಷ ನಿಲ್ಲಬೇಕಾಯಿತು. ವಾಹನದ ಕೆಲಭಾಗಗಳು ಕೂಡ ವೇಗದ ಯಾತ್ರೆಯಲ್ಲಿ ಮುರಿದುಹೋದವು. ನಮ್ಮ ವಿರುದ್ಧ ತೇಲಿಬಂದ ಎಲ್ಲ ಅಡಚಣೆಗಳ ಅಲೆಯನ್ನು ನಾವು ವಿಶ್ವಾಸದಿಂದ ಮೆಟ್ಟಿ ನಿಂತೆವು. ನಮ್ಮ ಗೆಲುವು ನಿಶ್ಚಿತವಾಗಿದ್ದು, ಕೊನೆಯ ಲೆಗ್‌ನಲ್ಲಿ ನಾವು ಇದೇ ವೇಗ ಕಾಯ್ದುಕೊಂಡರೆ ಸಾಕು~ ಎಂದು ಅವರು ಹೇಳಿದರು.340 ಕಿ.ಮೀ.ಗಳ ಸುದೀರ್ಘ ಗುಡ್ಡಗಾಡು ಓಟವನ್ನು ರಾಣಾ ಅವರ ಜಿಪ್ಸಿ ಕೇವಲ 4.14 ಗಂಟೆಗಳಲ್ಲಿ ಪೂರೈಸಿತು. ಎರಡನೇ ಸ್ಥಾನದಲ್ಲಿ ಗೌರವ್ ಚಿರಿಪಾಲ್ ಇದ್ದು, ಸದ್ಯ 36 ನಿಮಿಷಗಳಷ್ಟು ದೊಡ್ಡ ಹಿನ್ನಡೆಯನ್ನು ಅವರು ಅನುಭವಿಸುತ್ತಿದ್ದಾರೆ. ಹೀಗಾಗಿ ಉಳಿದಿರುವ ಒಂದೇ ಹಂತದಲ್ಲಿ ರಾಣಾ ಅವರನ್ನು ಹಿಂದಿಕ್ಕುವುದು ಅವರಿಗೆ ಅಸಾಧ್ಯ ಎನಿಸಿದೆ. ಪರ್‌ಫೆಕ್ಟ್ ರ‌್ಯಾಲಿ ತಂಡದ ಅಭಿಷೇಕ್ ಮಿಶ್ರಾ ಮೂರನೇ ಸ್ಥಾನದಲ್ಲಿದ್ದು, ಚಿರಿಪಾಲ್‌ಗೆ ತೀವ್ರ ಪೈಪೋಟಿ ಒಡ್ಡಿದ್ದಾರೆ. ಚಿರಿಪಾಲ್‌ಗೆ ನಿಖಿಲ್ ಪೈ ಮತ್ತು ಅಭಿಷೇಕ್‌ಗೆ ಹನುಮಂತ್ ಸಿಂಗ್ ಜತೆಗಾರರಾಗಿದ್ದು, ತಮ್ಮ ಚಾಲಕರು ಲೆಕ್ಕಾಚಾರ ತಪ್ಪದಂತೆ ನೋಡಿಕೊಳ್ಳಲು ಹೆಣಗಾಡುತ್ತಿದ್ದಾರೆ.ಅಲ್ಲಲ್ಲಿ ಬಸಿಯುತ್ತಿದ್ದ ಲವಣದ ನೀರಿನಿಂದ ವಾಹನಗಳ ಗಾಲಿಗಳು ಜಾರುತ್ತಿದ್ದವು. ಅಂತಹ ನೆಲದಲ್ಲಿ ಚಾಲಕರು ತಮ್ಮ ವಾಹನಗಳನ್ನು ಶರವೇಗದಿಂದ ಓಡಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರಲ್ಲಿ ರೋಮಾಂಚನ ಉಂಟು ಮಾಡಿದರು. ಕಳೆದ ರಾತ್ರಿ ಜೈಸಲ್ಮೇರ್‌ನಿಂದ ಸುಮಾರು 580 ಕಿ.ಮೀ. ದೂರ ವಾಹನ ಚಲಾಯಿಸಿಕೊಂಡು ಬಂದ ಸ್ಪರ್ಧಿಗಳು, ಭುಜ್‌ನಿಂದ 25 ಕಿ.ಮೀ. ದೂರದ ಬಚಾವ್ ಎಂಬಲ್ಲಿ ಹಾಕಿದ್ದ ಡೇರೆಗಳಲ್ಲಿ ತಂಗಿದ್ದರು. ಬೆಳಿಗ್ಗಿನ ರ‌್ಯಾಲಿಗೆ ಅಲ್ಲಿಂದಲೇ ಹಸಿರು ನಿಶಾನೆ ತೋರಿಸಲಾಯಿತು.ಹೊಸ ವಿನ್ಯಾಸದ ಮಹೀಂದ್ರಾ ಗಾಡಿ ಓಡಿಸುತ್ತಿರುವ ಮೈಸೂರಿನ ಲೋಹಿತ್ ಅರಸ್ ಮತ್ತು ಪಿವಿಎಸ್ ಅರಸ್ ಜೋಡಿ ನಾಲ್ಕನೇ ಲೆಗ್‌ನಲ್ಲಿ ಅತ್ಯುತ್ತಮ ಸಾಧನೆ ತೋರಿತಾದರೂ ಉಳಿದ ಲೆಗ್‌ಗಳಲ್ಲಿ ವೇಗ ಕಾಯ್ದುಕೊಳ್ಳಲು ಆಗದ್ದರಿಂದ 4ನೇ ಸ್ಥಾನಕ್ಕೆ ಜಾರಿ ನಿರಾಸೆ ಅನುಭವಿಸಿತು. ಮೊದಲ ದಿನದ ಸ್ಪರ್ಧೆಯಲ್ಲಿ ಸಮಯದ ಲೆಕ್ಕಾಚಾರ ಹಾಕುವಾಗ ತಮಗೆ ಅನ್ಯಾಯ ಎಸಗಲಾಗಿದೆ ಎಂದು ಲೋಹಿತ್ ದೂರಿದರು.ಜೇಡಿಮಣ್ಣಿನಿಂದ ಕೂಡಿದ್ದ ಹಾದಿಯಲ್ಲಿ ವಾಹನಗಳು ಎಬ್ಬಿಸುತ್ತಿದ್ದ ದಟ್ಟವಾದ ದೂಳು ದೊಡ್ಡ ಮೋಡವನ್ನು ಸೃಷ್ಟಿಸಿ ತೇಲಿ ಬಿಡುತ್ತಿತ್ತು. ಆಗ 2-3 ನಿಮಿಷಗಳ ಕಾಲ ಪಕ್ಕದಲ್ಲಿದ್ದವರೂ ಕಾಣುವುದು ಕಷ್ಟವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry