ಮೋಡಿಯ ಆಟ

7

ಮೋಡಿಯ ಆಟ

Published:
Updated:

ಹಸಿರು ತುಣುಕುಗಳು ದೂರ ದೂರ ಹಾರುತ್ತ ಆಕಾಶದ ನೀಲಿಸಂಗದಲ್ಲಿ ವೇಗವಾಗಿ ಹರಡುತ್ತಿವೆ. ನೂರು ತೋಳುಗಳು ಚಾಚುತ್ತ ಚಾಚುತ್ತ ಆಕಾಶವನ್ನೆ ಆಲಂಗಿಸಲೆಳಸುತ್ತಿವೆ. ಎಲೆ... ಕೊಂಬೆ...`ಅಬ್ಬಾ! ನೀನು ಯಾರು?~ ಎಂದು ಕೇಳಿದೆ. `ನಾನು-ಯಾರೂ ಅಲ್ಲ. ಅಥವಾ ಎಲ್ಲವೂ~ ಎಂದಿತು ಅದು ವೈಭವದಿಂದ. ಬೆರಗಾಯಿತು, ಭಯದಂಥ ಭಾವನೆ ಸುಳಿಯಿತು. `ನೀನು-ಮರ~ ಎಂದು ಉಸುರಿಬಿಟ್ಟೆ. ಆ ಕ್ಷಣ, ಏರಿಳಿದು ಪ್ರವಹಿಸುತ್ತಿದ್ದುದಕ್ಕೆ `ಬಂಡೆ~ ಎಂದೆ. ಅದು ಕಲ್ಲಾಗಿ ಒಂದು ಕಡೆ ಹೂತುಬಿಟ್ಟಿತು.ನಾನು ಜಗದೇಕವೀರನಾದ ಮಣ್ಣಹೆಂಟೆ ಎಂದು ಹೆಸರಾಂತು ಉರುಳುತ್ತಲಿದ್ದೆ. ಕಲ್ಲ ಹರಳುಗಳೆಲ್ಲ ಬಂದು ನನ್ನನ್ನೆ ತಾಕುತ್ತಿತ್ತು. ಹುಲುಕಡ್ಡಿಗಳೆಲ್ಲ ಬಾಣಗಳಾಗಿ ನನ್ನನ್ನೇ ಘಾಸಿಗೊಳಿಸುತ್ತಿತ್ತು. ಮೈತುಂಬ ಗಾಯವಾಗಿ ರಕ್ಕತ ಜಿನುಗುತ್ತ ಅಂಕದ ಕೋಳಿಯಂತೆ ನೋವು, ಸೋಲು, ಅವಮಾನದಿಂದ ವ್ಯಗ್ರವಾಗಿ ಉಗ್ರವಾಗಿ ಇದ್ದೆ. ಕಣ್ಣು ಸದಾ ಉರಿವ ಕೆಂಡದಂತೆ ಕೆಂಪು!ನನ್ನ ಬುಡದಲ್ಲಿ ನೋಡಿದೆ- ಮಣ್ಣು. ಕಡಿದರೂ ಕೆತ್ತಿದರೂ ಸಿಗಿದರೂ ಪೂರಾ ಉತ್ತೇಬಿಟ್ಟರೂ ನಗುನಗುತ್ತಾ ಇನ್ನೂ ಅರಳುತ್ತಿತ್ತು- ಸುಮ್ಮನೆ ಹರಡಿದ ಹುಡಿ ಹುಡಿ ಮಣ್ಣು. ಅದಕ್ಕೆ ನಾಶವೆಂಬುದೇ ಇರಲಿಲ್ಲ.ಮಣ್ಣಹೆಂಟೆಯಂತಿರದೆ ಮಣ್ಣಿನಂತಿರುವುದು ಹೇಗೆ ಎಂದು ಆಲೋಚಿಸತೊಡಗಿದೆ. ಆಗ ಸುತ್ತ ನೋಡಿದರೆ ಎಲ್ಲವೂ ಎಲ್ಲರೂ ಬೇರೆ ಬೇರೆ ರೂಪ ಆಕೃತಿಗಳ ಮಣ್ಣಹೆಂಟೆಗಳೇ. ಅವುಗಳೊಳಗೆ ಕಣ ಕಣದಿಂದ ಆಕಾಶವನ್ನು ಬಂಧಿಸಿದ ಮಣ್ಣೇ.ನೀವೆಲ್ಲ ಯಾಕೆ ಅನೇಕ ಆಕೃತಿಯಾಗಿ ಹೀಗಿದ್ದೀರಿ ಎಂದು ಪ್ರಶ್ನಿಸಿದರೆ- ನೀನು ಹೀಗಿದ್ದೀಯಲ್ಲ ಅದಕ್ಕೇ ಎಂಬ ಒಳನಗುವಿನ ಉತ್ತರ ಬಂತು. ಯಾವುದೂ ಏನೂ ಆಗಿಲ್ಲದೆಯೂ ಎಲ್ಲವೂ ಏನೇನೋ ಆಗಿ ಸುತ್ತ ಕುಣಿಯುತ್ತಿದ್ದವು. ಯಾರಿಗೂ ವಿನಾಯಿತಿಯಿರದೆ ಪರಸ್ಪರ ಮಾಟ ಮಾಡಿಕೊಂಡಿರುವ ಈ ಜಾಲ ಎಂಥಾ ಮೋಡಿ ಎಂದು ಮತ್ತೆ ಆಶ್ಚರ್ಯವಾಯ್ತು.ಎಲ್ಲವೂ ಬೇರೆ ಬೇರೆ ಆಗಿದ್ದು ಸಂಬಂಧಿಸಿಕೊಳ್ಳುತ್ತವೆ. ಈ ಸಂಬಂಧದ ವೈಚಿತ್ರ್ಯ, ಸಂಕೀರ್ಣತೆ ದಂಗುಬಡಿಸುವಂಥದು. ಉದಾಹರಣೆಗೆ, ನನ್ನ ಅಂಗಿ ಚೆನ್ನಾಗಿಲ್ಲ, ನಿನ್ನದು ಚೆನ್ನಾಗಿದೆ ಎಂಬುದು ಈ ಜೀವಮಾನಪರ‌್ಯಂತ ನನ್ನ ನಾಚಿಕೆಗೆ, ಮಾತ್ಸರ್ಯಕ್ಕೆ, ದ್ವೇಷಕ್ಕೆ ಸಾಕಾಗುತ್ತದೆ. ಈ ಭಾವಗಳು ನಿನ್ನಲ್ಲಿ ಮತ್ತೆ ಏನೆಲ್ಲ ಭಾವಗಳನ್ನೂ ಹುಟ್ಟಿಸುತ್ತದೆ. ಯಾವುದು ಮೊದಲು ಯಾವುದು ಪ್ರತಿಕ್ರಿಯೆ ಗೊತ್ತಾಗದಂತಾಗುತ್ತದೆ.ಇನ್ನೊಂದು ರೀತಿಯಲ್ಲಿ ನೋಡಿದರೆ ಯಾವುದೂ ಯಾವುದಕ್ಕೂ ಸಂಬಂಧಿಸಿದ್ದೇ ಅಲ್ಲ. ಅಂದರೆ, ಎಲ್ಲವೂ ಒಂದೇ ಎನ್ನಿಸುವಾಗ ಸಂಬಂಧದ ಪ್ರಶ್ನೆ ಉದ್ಭವಿಸುವುದೇ ಇಲ್ಲ! ಸಂಬಂಧ ಎನ್ನುವುದೇ ಬೇರೆ ಬೇರೆ ಎಂಬುದನ್ನು ಧ್ವನಿಸುತ್ತಿದೆಯಲ್ಲವೇ?ಈಗ ನನಗೆ ನನ್ನನ್ನೂ ಒಳಗೊಂಡು ಎಲ್ಲರೂ ಒಂದೇ ಆಗಿದ್ದೇವಲ್ಲಾ ಎಂದು ಆಶ್ಚರ್ಯವಾಗುತ್ತಿದೆ. ನಾನೆಷ್ಟು ಪಾಲು ಸಂತನೋ ಕೇಡಿಯೋ ನೀನೂ ಅಷ್ಟೇ. ನಾನೆಷ್ಟು ಸುಖದಲ್ಲಿದ್ದೇನೋ ಬೇಸರದಲ್ಲಿದ್ದೇನೋ ನೀನೂ ಅಷ್ಟೇ- ನೀನು ಹೇಗಿದ್ದೀಯ ಎಂದು ಕೇಳುವ ಅಗತ್ಯವೇ ಇಲ್ಲದಂತೆ. ನೀನು ನನ್ನ ಪ್ರತಿಬಿಂಬ ಅಥವಾ ಪ್ರತಿಕ್ರಿಯೆ ಎಂಬಂತೆ. ಎಲ್ಲರೂ ಬೇರೆ ಬೇರೆ ರೀತಿ ಇರುವಂತೆ ಕಂಡರೂ ಅದು ಮೇಲ್ಪದರದ್ದು ಎನಿಸುತ್ತಿದೆ.ಸೌಂದರ್ಯ ಎನ್ನುವುದು ತೊಗಲ ಮಟ್ಟದ್ದು ಎಂಬ ಮಾತಿನಂತೆ ಭಿನ್ನತೆ ಎನ್ನುವುದೂ ಹಾಗೇ ಅಲ್ಲವೆ ಎಂದು ವಿಸ್ಮಯವಾಗುತ್ತಿದೆ. ತೊಗಲು ಸುಲಿದರೆ ಎಲ್ಲರೂ ಅದೇ ಕರುಳು, ಗುಂಡಿಗೆ, ಈಲಿ ಎನ್ನುವ ಹಾಗೆ, ಅದೇ ಮನಸ್ಸು, ಬೇಕೆಂದರೆ ಅದೇ `ಆತ್ಮ  ಕೂಡ!ಹಾಗಾದರೆ ಭಿನ್ನ ಸ್ವಭಾವ ಎಂಬುದು ಸುಳ್ಳೇ? ಸುಳ್ಳಲ್ಲ. ನಮ್ಮ ನಮ್ಮ ವಿಭಿನ್ನ ಮುಖಗಳು ಸುಳ್ಯಾಕೆ? ತೊಗಲ ಮಟ್ಟದಲ್ಲಿ ಸುಳ್ಳಿಗೊಂದು ಅಸ್ತಿತ್ವ ಉಂಟಾಗುತ್ತದೆ! ನಮ್ಮ ಸುಳ್ಳಿಂದಾಗಿ ಬೇರೆಯ ಸುಳ್ಳು ದೃಢಗೊಳ್ಳುತ್ತದೆ.ನನ್ನಲ್ಲಿ ಹುಸಿ ಇರದೆ ಅದು ಬೇರೆ ಕಡೆ ಸೃಷ್ಟಿಯಾಗಲಾರದು. ನನ್ನ ಒಂದು ಮಾತು-ಏನಂದರೂ ಅನುಭವದ ಆಚೆ ಈಚೆ ಇರುತ್ತದೆ. ನಂತರ ಅದಕ್ಕೆ ಸಮರ್ಥನೆ, ವೈಭವೀಕರಣ, ಅಥವಾ ಧೀರತೆ ಈ ಎಲ್ಲ ರುಚಿ ರಂಗು ವಾಸನೆ ಬೆರೆತು ಆಸ್ವಾದ್ಯವಾಗುತ್ತದೆ, ನಿಜದಿಂದ ಇನ್ನೂ ದೂರ ಹೋಗುತ್ತದೆ. ಇದರಿಂದ ಉಂಟಾಗುವ ಆತ್ಮವಂಚನೆಯಿರದೆ ಪರವಂಚನೆಯಾಗಲೀ ಪರರಿಂದ ವಂಚನೆಯಾಗಲೀ ಸಾಧ್ಯವಾಗಲಾರದು.ಈ ಎಲ್ಲ ಜೀವನವ್ಯಾಪಾರದ ನಡುವೆ ಹರಿದಾಡುವ ಭಾಷೆ ನಾವು ಬಳಸುವ ಸಾಧನವಾಗಿ ಉಳಿಯದೆ ನಮ್ಮನ್ನು ಆಡಿಸುತ್ತಿರುವ ಸೂತ್ರವೇ ಆಗಿಬಿಡುವುದು ಮಹಾ ಸೋಜಿಗ. ಎಲ್ಲವನ್ನೂ ಸ್ಥಿರಪಡಿಸುವುದು ಅದೇ. ಮೊದಲು `ಮರ~ ಎಂದು ಕರೆದದ್ದು ಅದೇ ತಾನೆ?ಭಾಷೆಯ ತಿರುಳಾದ ಅಥವಾ ಭಾಷೆಯೇ ಆದ ಆಲೋಚನೆ, ಭಾವನೆ ಎಲ್ಲವೂ ನನ್ನ ಪೂರ್ವಗ್ರಹವೋ ತೀರ್ಮಾನವೋ ಆಗಿರುತ್ತದೆ. ಅದೇ ಹರಳುಗಟ್ಟಿ ನಮ್ಮ ನಂಬಿಕೆಯೂ ಆಗುತ್ತದೆ. ಭಾಷೆ ಎಲ್ಲವನ್ನೂ ಸ್ಥಾಪಿಸಿ ಇಡುತ್ತದೆ. ನೆನಪಾಗಿ ಹೆಪ್ಪುಗಟ್ಟಿಸುತ್ತದೆ. ಉದಾಹರಣೆಗೆ, ಒಂದು ಕೊಲೆ ಮಾಡಿದವನು ಕಾಯಂ ಆಗಿ ಕೊಲೆಗಾರನೆಂದಾಗುತ್ತಾನೆ.

 

ಅಕಸ್ಮಾತ್ ತಪ್ಪಿಸಿಕೊಂಡವನು ಅಥವಾ ಅದೇ ಮನಸ್ಥಿತಿಯಿದ್ದೂ ಜೀವನಪರ‌್ಯಂತ ಅದು ಮುಂದುಹಾಕಲ್ಪಟ್ಟವನು ಕೊಲೆಗಾರನೆಂದಾಗುವುದಿಲ್ಲ. ಕೊಲೆ ಮಾಡಿದವನು ಕೊಲೆಮಾಡಿದ್ದಕ್ಕೆ ಕೊಲೆಗಾರನಾಗುವುದಕ್ಕಿಂತ, ನಾವು ಮತ್ತು ಅವನೂ ಹಾಗೆ ನಂಬುವುದರಿಂದ ಮತ್ತು ಹೇಳುವುದರಿಂದ ಕೊಲೆಗಾರನಾಗುತ್ತಾನೆ ಎನಿಸುತ್ತದೆ.ಕೊಲೆ ಘೋರ ಪಾತಕ, ಅಪರಾಧ ಎಂದು ನಾವು ನಂಬಿ ಬೆಚ್ಚುವುದಾದರೂ ನಾವು ಅದನ್ನು ಮಾಡಿಬಿಡಬಹುದಾದ್ದನ್ನು ತಡೆಯಲಿಕ್ಕೆಂದೇ ಇರಬಹುದು. ಮತ್ತು ನಮ್ಮ ಆ ನಂಬಿಕೆಯೇ ಹಲವರನ್ನು ಕೊಲೆಗಾರರನ್ನಾಗಿಸುತ್ತದೆ!ಪಾರ್ಕಿನಲ್ಲಿ `ಲಾನ್ ಮೇಲೆ ನಡೆಯಬಾರದು, ಗುಲಾಬಿ ಹೂ ಕೀಳಬಾರದು~ ಎಂಬ ನಿಷೇಧ ನಾವು ಹಾಗೆ ಮಾಡುವುದನ್ನು ತಡೆಯುವಂತೆಯೇ, ಹಾಗೆ ಮಾಡುವ ತುಡಿತವನ್ನೂ ನಮ್ಮಲ್ಲಿ ಹುಟ್ಟಿಸುವ ಹಾಗೆ!ಹಾಗಾಗಿ ಏನನ್ನಾದರೂ ಹೆಸರಿಸುವುದಕ್ಕೆ, ಪರಿಕಲ್ಪಿಸುವುದಕ್ಕೆ ಬಹಳ ಎಚ್ಚರದಿಂದಿರಬೇಕು. ಯಾಕೆಂದರೆ ಮೂಲತಃ ಏನೂ ಅಲ್ಲದ್ದನ್ನು ನಾವು ಏನೋ ಆಗಿ ರೂಪಿಸುತ್ತಿರುತ್ತೇವೆ- ಮೋಡಿಯನ್ನು ಚಾಲೂ ಮಾಡುತ್ತಿರುತ್ತೇವೆ.ಆದರೆ ನಮ್ಮ ಸುತ್ತಲಿನದೆಲ್ಲವೂ `ಹೆಸರಿಸು ಹೆಸರಿಸು~ ಎಂದು ಒತ್ತಾಯಿಸುತ್ತಿರುವಂತೆ ಕಾಣುತ್ತದೆ. ಮಗು ಏನೋ ತಂಟೆ ಮಾಡಿ ವಾರೆಗಣ್ಣಲ್ಲಿ ತಾಯಿಯನ್ನು ನೋಡುತ್ತ `ನಾನು ಕೆಟ್ಟ ಮಗು ಎಂದು ಹೇಳು~ ಎಂದು ಪ್ರಚೋದಿಸುವಂತೆ.

 

`ನಾನು ದಡ್ಡ, ನಾನು ಕೇಡಿಗ, ನಾನು ಕಮಂಗಿ, ನಾನು ಸಜ್ಜನ, ನಾನು ಗಣ್ಯ, ನಾನು ಹುಳ, ನಾನು ಗೂಬೆ, ನಾನು ನವಿಲು, ನಾನು ಹೇಡಿ, ನಾನು ರೌಡಿ, ನಾನು ಕಂಜೂಸ್, ನಾನು ದಿಲ್ದಾರ್, ನಾನು ಜೀನಿಯಸ್, ನಾನು ಕವಿ, ನಾನು ನಟ, ನಾನು ವಿಟ, ನಾನು ಜನನಾಯಕ, ನಾನು ನಾನು ನಾನು...~  ನೋಡು ಹೆಸರಿಡು ಎಂದು ದುಂಬಾಲು ಬೀಳುತ್ತವೆ. ಈ ಮೋಡಿಯ ಆಟದಲ್ಲಿ ಸೇರದೇ ಇರುವುದು ದುಸ್ಸಾಧ್ಯ.ಹಾಗೆ ಈ ಮೋಡಿಯಲ್ಲಿ ಸೇರದೇ ಇರುವುದೆಂದರೆ ನಿರೀಕ್ಷಿತ ಪ್ರತಿಕ್ರಿಯೆಯನ್ನು ನೀಡದೇ ಇರುವುದು. ವಾರೆನೋಟದ ಮಗುವಿನ ಬಳಿ ಹೋಗಿ ತಾಯಿ, ಅದನ್ನು ಮುದ್ದಾಡಿ `ಕಂದಾ, ನೀನು ಏನೂ ಅಲ್ಲ, ನೀನು ನನ್ನ ಮಗು, ಅಷ್ಟೇ ನಿಜ ಮತ್ತು ಅದು ಮುಖ್ಯವಾದ್ದು~ ಎಂದು ತಿಳಿಸುವುದು. ಆಗ ಮಗುವಿಗೊಂದು ಗೊಂದಲವಾಗುತ್ತದೆ. ಮೋಡಿ ಕೆಲಸ ಮಾಡುವುದಿಲ್ಲ.ಈ ಜಗತ್ತು ನಿರೀಕ್ಷಿತ ಪ್ರತಿಕ್ರಿಯೆಗಳ ಜಾಲ- ಇದನ್ನು ಕ್ಲೀಷೆ ಎನ್ನೋಣವೇ? ಸಂಬಂಧ ಎನ್ನುವುದು ಆಕರ್ಷಣೆ ವಿಕರ್ಷಣೆ ಎರಡೂ ಸೇರಿರುವುದು ತಾನೆ? ಅಂಥ ಎಲ್ಲ ಸಂಬಂಧಗಳ ಮಾತು-ವರ್ತನೆಗಳು ಸಿದ್ಧವಾಗಿರುವಂತೆಯೇ ತೋರುತ್ತದೆ.ಅತ್ತೆ-ಸೊಸೆ, ತಂದೆ-ಮಗ, ಅಣ್ಣ-ತಮ್ಮ, ಜಗದ್ಗುರು-ಭಕ್ತಾದಿ, ನಾಯಕ-ಪ್ರಜೆ ಎಲ್ಲರದೂ. ಇಡೀ ಜೀವನದ ಧ್ವನಿ-ಚಿತ್ರ ಮುದ್ರಿಕೆ ಮೊದಲೇ ಲಭ್ಯವಿರಬಹುದೆ? ಹೊಸತು ಸೃಷ್ಟಿಯಾಗಬೇಕಾದರೆ ಅದನ್ನು ಮುರಿಯಬೇಕಷ್ಟೇ.ಮೊದಲೇ ಹೇಳಿದಂತೆ ಆ ಮೋಡಿಯನ್ನು ಮುರಿಯುವುದು ಅತೀ ಕಷ್ಟದ್ದಾಗಿ, ನಾವು ಎಲ್ಲವನ್ನೂ ಅವುಗಳ ಸ್ವಭಾವದ ಬಗ್ಗೆ ದೂಷಿಸುವ ಸುಲಭಕಾರ್ಯದಲ್ಲಿ ತೊಡಗುತ್ತೇವೆ. ಒಬ್ಬನನ್ನು ಅಹಂಕಾರಿ ಎನ್ನುತ್ತೇವೆ. ನಾವು ಅವನಿದಿರು ನಿರಹಂಕಾರಿಯಾಗಿ ನಿಲ್ಲಲಾರೆವು.

 

ಒಬ್ಬನನ್ನು ಕಪಟಿ ಎನ್ನುತ್ತೇವೆ. ನಾವು ಅವನಿದಿರು ಪ್ರಾಮಾಣಿಕವಾಗಿ ಇರಲಾರೆವು. ಒಳಗಿಂದೊಳಗೇ ನಾವು ಅವರಲ್ಲಿ ಆ ಗುಣಗಳನ್ನು ಪ್ರಚೋದಿಸಿ ಪ್ರೋತ್ಸಾಹಿಸುತ್ತ, ಅದರಿಂದಾಗಿ ಗರಿಷ್ಟ ಮನರಂಜನೆ ಗಳಿಸುತ್ತ, ನಾವು ಅದಕ್ಕೆ ಕಾರಣವೇ ಅಲ್ಲವೆಂಬಂತೆ ನಾವು ಸರಿ ಎಂಬ ಭಾವನೆಯಲ್ಲಿ ನಿರುಮ್ಮಳವಾಗಿರುತ್ತೇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry