ಮೋಡಿ ಮಾಡಿದ ಚಿಣ್ಣರ ಕಂಸಾಳೆ

7

ಮೋಡಿ ಮಾಡಿದ ಚಿಣ್ಣರ ಕಂಸಾಳೆ

Published:
Updated:

ಯಳಂದೂರು: ಚಿಣ್ಣರ ಪ್ರತಿಭೆಗೆ ಅಂಗಳವಾದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಈ ಬಾರಿ ರಂಜಿಸಿದ್ದು, ಕಂಸಾಳೆ ಕಲೆ. ಮತ್ತೊಂದೆಡೆ ಹಳೆಯ ಗೀತೆಗಳ ಗಾಯನ, ಸಾಂಪ್ರದಾಯಿಕ ಸಂಗೀತ. ಹಲವು ಶಾಲೆಗಳ ಮಕ್ಕಳು ಜನಪದೀಯ ಸೊಗಡಿನ ಪ್ರದರ್ಶನ ನೀಡಿ ಮನಸೆಳೆದರು.ತಾಲ್ಲೂಕಿನ ಮದ್ದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಈಚೆಗೆನಡೆದ ಅಗರ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮ ಹತ್ತಾರು ಕಲಾ ಪ್ರಕಾರ ಪರಿಚಯಿಸುವ ವೇದಿಕೆಯಾಯಿತು.ಕೆಸ್ತೂರು ಪ್ರೌಢಶಾಲೆಯ ಮಕ್ಕಳು ಕಂಸಾಳೆ ಬಡಿಯುತ್ತ ತಾಳಕ್ಕೆ ತಕ್ಕಂತೆ ಕುಣಿಯುತ್ತ ವೇದಿಕೆಗೆ ಬಂದಾಗ ಮೈಮರೆತು ವೀಕ್ಷಿಸುವ ಸರದಿ ಎಲ್ಲರದಾಗಿತ್ತು. ಕೇಸರಿಬಣ್ಣದ ಅಂಗಿ, ಬಣ್ಣದ ರುಮಾಲು ಧರಿಸಿದ್ದ ಚಿಣ್ಣರು ಕೈಸಾಳೆಯ ಕಂಪನ್ನು ಉಣಬಡಿಸಿದರು.ಮಕ್ಕಳ ಕೈಚಳಕಕ್ಕೆ ತಲೆದೂಗಿದ್ದು, ಮಾತ್ರ ಮಕ್ಕಳ ಲೋಕ. ಉಘೇ ಉಘೇ... ಮಾದಪ್ಪ ಗೀತೆಯ ಗಾಯನದ ಹಿಮ್ಮೇಳ ಹಾಗೂ ಕಂಸಾಳೆಯ ನಾದ ಬೆರೆತ ಕಿನ್ನರ ಲೋಕವನ್ನೇ ಸೃಷ್ಟಿಸಿದರು. ಪ್ರತಿಭಾ ಕಾರಂಜಿಯಲ್ಲಿ ಸಾಂಸ್ಕೃತಿಕ   ಪರಂಪರೆ ಅನಾವರಣಗೊಳಿಸಿದರು.ಕಳೆದ ತಿಂಗಳಿನಿಂದ ಶಾಲೆಯಲ್ಲಿ ಕಂಸಾಳೆ ಪದಕ್ಕೆ ಹೆಜ್ಜೆಹಾಕಿದೆವು. ಒಬ್ಬರ ಮೇಲೇರಿ ಮತ್ತೊಬ್ಬರು ಹೆಗಲು ಕೊಟ್ಟು ನಿಂತು ತರಬೇತಿ ಪಡೆದು ಅಭ್ಯಾಸ ಮಾಡಿದೆವು. ಹೀಗಾಗಿ, ಉತ್ತಮ ಪ್ರದರ್ಶನ ನೀಡಲು ಸಹಕಾರಿಯಾಯಿತು ಎಂದು ನುಡಿದ ಚಿಣ್ಣರ ಮೊಗದಲ್ಲಿ ಜನಪದ ಸೊಗಡು ಇಣುಕಿತು.`ಶಾಲೆಗಳಲ್ಲಿ ನಮ್ಮ ನೆಲದ ಸೊಗಡನ್ನು ಉಳಿಸಿ ಬೆಳೆಸಲು ಶಿಕ್ಷಕರು ಇಂತಹ ಕಾರ್ಯಕ್ರಮ ರೂಪಿಸಬೇಕು. ಆ ಮೂಲಕ ಜನಪದ ಕಲಾ ಪ್ರಕಾರಗಳಿಗೆ ಹೆಚ್ಚಿನ ಆದ್ಯತೆ ನೀಡಿದಂತಾಗುತ್ತದೆ' ಎನ್ನುತ್ತಾರೆ ಸಿಆರ್‌ಪಿ ಕೆ.ಎಲ್. ದೊರೆಸ್ವಾಮಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry