ಮೋಡಿ ಮಾಡಿದ ರಾಮು ಜಾದು

7

ಮೋಡಿ ಮಾಡಿದ ರಾಮು ಜಾದು

Published:
Updated:

ಹುಬ್ಬಳ್ಳಿ: ಸಣ್ಣ ಟೇಬಲ್ ಮೇಲೆ ಆಶೀಶ್ ಮಲಗಿದ. ನಂತರ ಅವನ ತಂದೆ ಜಾದುಗಾರ ಪಿ. ಮಂಜುನಾಥ ಟೇಬಲ್ ತೆಗೆದರು. ಆಗ ಅಂಧ ಜಾದು ರಾಮು ಅವರು ಆಶೀಶನನ್ನು ಹಿಡಿದುಕೊಂಡರು. ಆಮೇಲೆ ಮೆಲ್ಲಗೆ ಕೈಗಳನ್ನು ಹಿಂತೆಗೆದ್ದುಕೊಂಡರು. ಆಗ ಯಾವುದೇ ಆಸರೆಯಿಲ್ಲದೆ ಆಶೀಶ್ ಮಲಗಿದ. ಅವನನ್ನು ಮುಟ್ಟಿ ರಾಮು ಕೈಮುಗಿದರು. ಆಗ ಎಲ್ಲರೂ ಚಪ್ಪಾಳೆ ತಟ್ಟಿದರು.ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಇಲ್ಲಿಯ ವಿನಾಯಕನಗರದ ಉಷಸ್ ವಿಶೇಷ ಮಕ್ಕಳ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹರಿಹರದ ಅಂಧ ರಾಮು ಅವರು ಜಾದು ಪ್ರದರ್ಶಿಸಿದರು.ಮುಚ್ಚಿಟ್ಟ ಪಾತ್ರೆಯನ್ನು ರಾಮು ತೆಗೆದಾಗ ಪಾರಿವಾಳವೊಂದು ಹಾರಿ ಹೋಯಿತು. ಕೇಸರಿ, ಹಸಿರು ಹಾಗೂ ಬಿಳಿ ಬಟ್ಟೆಗಳನ್ನು ಒಂದೊಂದಾಗಿ ಅವರು ಹಿಡಿದಿದ್ದ ಚೀಲದೊಳಗೆ ಮಂಜುನಾಥ ಹಾಕಿದರು. ನಂತರ ಚೀಲದೊಳಗೆ ಕೈ ಹಾಕಿದ ರಾಮು ರಾಷ್ಟ್ರಧ್ವಜ ಹೊರತೆಗೆದರು! ಅದನ್ನು ಮಂಜುನಾಥ ಪ್ರದರ್ಶಿಸಿದರು.ಆ ಮೇಲೆ ಹಾಳೆಯನ್ನು ಚೀಟು ಕಟ್ಟಿದ್ದಕ್ಕೆ ರಾಮು ಹಾಲು ಸುರಿದರು. ಆದರೆ ಹಾಳೆಯ ಚೀಟು ಒದ್ದೆಯಾಗಿರಲಿಲ್ಲ. ಇದಾದ ಮೇಲೆ ಬಕೆಟ್‌ನೊಳಗೆ ಪುಟ್ಟ ಕೊಡದಿಂದ ರಾಮು ಸುರಿದರು. ಹಾಗೆ ಸುರಿಯುತ್ತಲೇ ಇದ್ದರೂ ಕೊಡದಲ್ಲಿಯ ನೀರು ಖಾಲಿಯಾಗಲಿಲ್ಲ. ಒಂದೇ ಹೂವಿನಿಂದ ಗುಚ್ಛವನ್ನು ಅರಳಿಸಿದರು. ಹೀಗೆ 15 ನಿಮಿಷಕ್ಕೂ ಅಧಿಕವಾಗಿ ಜಾದುವನ್ನು ವಿಶೇಷ ಮಕ್ಕಳ ಎದುರು ರಾಮು ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.ನಂತರ ಉಷಸ್ ಶಾಲೆಯ ಮಕ್ಕಳು ವಂದೇ ಮಾತರಂ, ಜೈ ಹೋ, ವೈ ದಿಸ್ ಕೊಲೆವರಿ ಡಿ ಮೊದಲಾದ ಹಾಡುಗಳಿಗೆ ಹಮೀದ್ ಸೈಯ್ಯದ್ ನಿರ್ದೇಶನದಲ್ಲಿ ನರ್ತಿಸಿದರು. ಇದಕ್ಕೂ ಮೊದಲು ಉಷಸ್ ಶಾಲೆಯ ಮುಖ್ಯಸ್ಥೆ ರೂಪಾಕ ಓಕಡೆ ಮಾತನಾಡಿ, ಪತಿ ರಾಘವೇಂದ್ರ ಓಕಡೆ 15 ವರ್ಷಗಳ ಹಿಂದೆ ಉಷಸ್ ಶಾಲೆ ಆರಂಭಿಸಿದರು. ಉತ್ತರ ಕರ್ನಾಟಕದಲ್ಲಿಯ ಬುದ್ಧಿಮಾಂದ್ಯ ಮಕ್ಕಳಿಗೆ ಈ ಶಾಲೆ ನೆರವಾಗುತ್ತಿದೆ. ಇಲ್ಲಿ 21 ಬಗೆಯ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಮಲಗಿಕೊಂಡಿರುತ್ತಿದ್ದ ಮಕ್ಕಳು ಈಗ ಕುಳಿತುಕೊಳ್ಳುವ ಹಾಗಾಗಿದ್ದಾರೆ' ಎಂದರು.ಭಾರತ ವಿಕಾಸ ಪರಿಷತ್ತಿನ ಹುಬ್ಬಳ್ಳಿ ಶಾಖೆಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪರಿಷತ್ತಿನ ಪದಾಧಿಕಾರಿಗಳಾದ ಅಮೃತಭಾಯಿ ಪಟೇಲ್, ದಯಾಭಾಯಿ ಪಟೇಲ್ ಹಾಗೂ ನರೇಂದ್ರ ನಾಯಕ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry