ಭಾನುವಾರ, ಜೂನ್ 20, 2021
28 °C

ಮೋಡಿ ಮಾಡಿದ ‘ಸುಗ್ಗಿ–ಹುಗ್ಗಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಡೋಲು, ನಗಾರಿ, ತಮಟೆ, ತಾಳಗಳ ನಾದಕ್ಕೆ ವಿವಿಧ ಸಮುದಾಯಗಳ ಸಾಂಪ್ರದಾಯಿಕ ನೃತ್ಯ ಪ್ರದರ್ಶನದ ಮನರಂಜನೆಯ ಜೊತೆಗೆ ‘ಸುಗ್ಗಿ’ಯ ‘ಹುಗ್ಗಿ’ಯನ್ನು ಸವಿಯುವ ಭಾಗ್ಯ ಮಂಗಳವಾರ ಕಾರವಾರದ ಜನತೆಗೆ ಒದಗಿಬಂದಿತ್ತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ‘ಸುಗ್ಗಿ–ಹುಗ್ಗಿ’ ಜಾನಪದ ಕಾರ್ಯಕ್ರಮದಿಂದ ಇಲ್ಲಿನ ಜಿಲ್ಲಾ ರಂಗಮಂದಿರ ಅಕ್ಷರಶಃ ಹಳ್ಳಿ ಮನೆಯಾಗಿ ಮಾರ್ಪಟ್ಟಿತ್ತು. ಗುಡಿಸಲು, ಬಾವಿ, ದೇವರ ಕಟ್ಟೆ ಹೀಗೆ ಹಳ್ಳಿ ಸೊಗಡಿನ ಚಿತ್ರಣವಿದ್ದ ವೇದಿಕೆಯಲ್ಲಿ ನಡೆದ ಜಾನಪದ ಕಲೆಗಳ ಪ್ರದರ್ಶನ ನೆರೆದ ಪ್ರೇಕ್ಷಕರನ್ನು ಹಳ್ಳಿ ಜೀವನದ ಭಾವನಾ ಲೋಕದಲ್ಲಿ ತೇಲಿಸಿತು.ಮಂಡ್ಯ ಜಿಲ್ಲೆಯ ರಾಜೇಶ ತಂಡದ ಪೂಜಾ ಕುಣಿತದಿಂದ ಆರಂಭವಾದ ಜಾನಪದ ಕಾರ್ಯಕ್ರಮ ಮೊದಲ ಪ್ರದರ್ಶನದಲ್ಲಿಯೇ ಪ್ರೇಕ್ಷಕರನ್ನು ಸೆಳೆಯಿತು. ತಲೆ ಮೇಲೆ ಕಳಸ ಹೊತ್ತುಕೊಂಡೇ ಕಣ್ಣಿನಲ್ಲಿ ಸೂಜಿಯನ್ನು ಎತ್ತೆಸೆವ ಕಲಾವಿದರ ಸಾಹಸ ಮೈ ಜುಮ್‌ ಎನಿಸುವಂತಿತ್ತು.ಆಮ್ಚೆ ಮೂಲ ಸಿದ್ದಿ ಸಾಂಸ್ಕೃತಿಕ ಕಲಾ ತಂಡದ ‘ಸಿದ್ದಿ ಧಮಾಲ್‌’ ನೃತ್ಯ ವೇದಿಕೆಯಲ್ಲಿ ನವರಸಗಳ ಸಾಗರವನ್ನೇ ಹರಿಸಿತು. ಸಿದ್ದಿ ಜನಾಂಗವನ್ನು ಪರಿಚಯಿಸುವ ಕನ್ನಡ ಹಾಗೂ ಸಿದ್ದಿ ಭಾಷೆಯ ಹಾಡಿಗೆ ಸರಳ ಹೆಜ್ಜೆಯಿಂದಲೇ ಗಮನಸೆಳೆಯುತ್ತಿದ್ದ ಮಹಿಳಾ ಕಲಾವಿದರ ಅಭಿನಯ ಹಾಗೂ ಹಾವ, ಭಾವಕ್ಕೆ ವೇದಿಕೆಯ ಎದುರು ಚಪ್ಪಾಳೆಯ ಮಳೆಯೇ ಸುರಿಯಿತು.ಸಿದ್ದಿಗಳ ಕಾಡಿನ ಜೀವನದ ಕಥೆಯನ್ನು ಹೇಳುವ ‘ಧಮಾಮಿ ನೃತ್ಯ’ ಪ್ರೇಕ್ಷಕರಲ್ಲಿನ ಕಲೆಯನ್ನು ಕೆರಳಿಸುವಂತೆ ಮಾಡಿತು. ಕಾಡು ಪ್ರಾಣಿಗಳನ್ನು ಬೇಟೆಯಾಡಿ, ಅಡುಗೆ ಮಾಡಿ ಊಟ ಮಾಡುವ ಸಿದ್ದಿಗಳ ಜೀವನ ಕ್ರಮದ ಸಾರಾಂಶ ಹೊಂದಿದ್ದ ನೃತ್ಯಕ್ಕೆ ಮನಸೋಲದ ಪ್ರೇಕ್ಷಕನೇ ಇರಲಿಲ್ಲ. ಪ್ರೇಕ್ಷಕರ ಗ್ಯಾಲರಿಯಿಂದ ಹರಿದುಬಂದ ಸಿಳ್ಳೆ, ಚಪ್ಪಾಳೆಗಳೇ ಇವರ ಕಲಾ ಹಿರಿಮೆಗೆ ಸಾಕ್ಷಿಯಾಯಿತು.ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಬಸವರಾಜ ತಂಡದವರು ನಡೆಸಿಕೊಟ್ಟ ‘ಜನಪದ ಸಂಪದ’ ಗಮನ ಸೆಳೆಯಿತು. ಅವರು ಶಿಶುನಾಳ ಷರೀಫರ ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದವರ ಮನಗೆದ್ದರು. ಕಿನ್ನರದ ಮಹಾದೇವ ಹವ್ಯಾಸಿ ಯಕ್ಷಗಾನ ಮಂಡಳಿಯಿಂದ ನಡೆದ ‘ಅಶ್ವಮೇಧ ಯಾಗ’ ಯಕ್ಷಗಾನ ಪ್ರದರ್ಶನ ಒಂದು ಗಂಟೆಗಳ ಕಾಲ ಪ್ರೇಕ್ಷಕರ ಗಮನವನ್ನು ವೇದಿಕೆಯಲ್ಲಿ ಬಂಧಿಸಿತ್ತು.ಪುರುಷೋತ್ತಮ ಗೌಡ ತಂಡದ ಸುಗ್ಗಿ ಕುಣಿತ ಸುಗ್ಗಿ ಸೊಬಗನ್ನು ಮತ್ತೊಮ್ಮೆ ವೇದಿಕೆಯಲ್ಲಿ ಬಿಚ್ಚಿಟ್ಟಿತು. ಸೂರ್ಯಪ್ರಕಾಶ ತಂಡದ ಜಾನಪದ ನೃತ್ಯರೂಪಕ ಕಲಾಭಿಮಾನಿಗಳ ಮನ ಗೆದ್ದಿತು. ಚಂದ್ರಕಾಂತ ಆಗೇರ ತಂಡದ ಗೊಂಬೆ ಕುಣಿತ ನೆರೆದವರನ್ನು ನಗೆಗಡಲಲ್ಲಿ ತೇಲಿಸಿತು. ಹೊನ್ನಾವರದ ಗಜಾನನ ಭಂಡಾರಿ ಅವರ ಶಹನಾಯಿ ವಾದನ ಮಧ್ಯಾಹ್ನದ ಬಿಸಿಯಲ್ಲೂ ತಂಪೆರೆಯಿತು.ಗುಡ್ಡಪ್ಪ ಜೋಗಿ ತಂಡದ ‘ಕಿನ್ನರ ಜೋಗಿ’, ಜನಪದ ಗೀತೆಗಳ ಸರಮಾಲೆ ಹೆಣೆಯಿತು. ಉಷಾ ಕಳಸ ತಂಡದ ಜನಪದ ಗೀತೆಗಳು, ಪ್ರಭಾ ನಾಯ್ಕ ತಂಡದ ‘ಪುಗಡಿ ನೃತ್ಯ’, ಮಂಜುನಾಥ ತಂಡದ ‘ಜನಪದ ಸಂಗೀತ’, ಸುರೇಶ ನಾಯ್ಕ ತಂಡದ ‘ಗುಮಟೆ ಪಾಂಗ್‌’, ಉಷಾ ಗೌಡ ತಂಡದ ‘ಜಡೆ ಕೋಲಾಟ’ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕಲಾವಿದ ಎನ್‌. ದತ್ತಾ ಅವರು ನಿರ್ಮಿಸಿದ್ದ ವೇದಿಕೆಯ ವಿನ್ಯಾಸ ಎಲ್ಲರ ಗಮನಸೆಳೆಯಿತು.ಹುಗ್ಗಿ ಊಟ ಸವಿದ ಪ್ರೇಕ್ಷಕರು

ಸುಗ್ಗಿ–ಹುಗ್ಗಿ ಕಾರ್ಯಕ್ರಮದ ನಿಮಿತ್ತ ಹುಗ್ಗಿ ಊಟವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮನರಂಜನೆ ಆಸ್ವಾದಿಸಿದ ಪ್ರೇಕ್ಷಕರು, ಕಲಾವಿದರು, ಗೋಧಿಯ ಹುಗ್ಗಿಯನ್ನು (ಪಾಯಸ) ಸವಿದರು. ಇದರೊಂದಿಗೆ, ಅನ್ನ, ಸಾಂಬಾರ್‌, ಹಪ್ಪಳ, ಬಜ್ಜಿ, ಪೂರಿ, ಬಾಜಿಯ ಭರ್ಜರಿ ಭೋಜನ ಸವಿದು ಸಂತುಷ್ಟರಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.