ಮೋದಿಗೆ ಕೇಶುಭಾಯ್ ಸೆಡ್ಡು

7

ಮೋದಿಗೆ ಕೇಶುಭಾಯ್ ಸೆಡ್ಡು

Published:
Updated:

ಅಹಮದಾಬಾದ್: ವಿಧಾನಸಭೆ ಚುನಾವಣೆಗೆ ಗುಜರಾತ್ ಅಣಿಯಾಗಿದೆ. ಯಾರಿಗೆ ಮತ ಹಾಕಬೇಕೆಂಬ ಖಚಿತ ತೀರ್ಮಾನ ಮಾಡಿರುವ ಗುಜರಾತಿಗಳಿಗಿದು ಅನೇಕ ದೃಷ್ಟಿಯಿಂದ ಅಪರೂಪದ ಸಂದರ್ಭ. ದೆಹಲಿಯತ್ತ ಮುಖ ಮಾಡಿರುವ ನರೇಂದ್ರ ದಾಮೋದರದಾಸ್ ಮೋದಿ ಅವರಿಗೆ ಗೆಲುವಿನ ಬಗೆಗೆ ಅನುಮಾನವಿಲ್ಲದಿದ್ದರೂ, ಕೇಶುಭಾಯ್ ಪಟೇಲ್ ದಿಗಿಲು ಹುಟ್ಟಿಸಿದ್ದಾರೆ. ಬಿಜೆಪಿಗೆ `ಸೆಡ್ಡು' ಹೊಡೆದಿರುವ ಈ ಮಾಜಿ ಮುಖ್ಯಮಂತ್ರಿ `ಬ್ಯಾಟ್' ಹಿಡಿದು `ಕ್ರೀಡಾಂಗಣ'ಕ್ಕೆ ಇಳಿಯುತ್ತಿರುವುದರಿಂದ ಮುಖ್ಯಮಂತ್ರಿ ನೆಮ್ಮದಿಗೆಟ್ಟಿದ್ದಾರೆ.ಕಾಂಗ್ರೆಸ್ ಎರಡು ದಶಕದಿಂದ ಸೋತು ಸುಣ್ಣವಾಗಿದೆ. ಮಾಧವಸಿಂಗ್ ಸೋಳಂಕಿ 85ರಲ್ಲಿ ಉತ್ತಮ ಇನಿಂಗ್ಸ್ ಕಟ್ಟಿದ್ದರು. 149ಸ್ಥಾನ ಪಡೆದು ಸರ್ಕಾರ ನಡೆಸಿದ್ದರು. ಅದೇ ಕೊನೆಯ ಅತ್ಯುತ್ತಮ ಇನಿಂಗ್ಸ್. ಅಲ್ಲಿಂದಾಚೆಗೆ ಸತತ ಸೋಲು ಕಾಣುತ್ತಿರುವ `ಕೈ' ಪಾಳೆಯಕ್ಕೆ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಚುನಾವಣೆಯಲ್ಲೂ `ಪವಾಡ' ನಡೆಯಬಹುದು ಎನ್ನುವ ನಿರೀಕ್ಷೆ ಇಲ್ಲದಿದ್ದರೂ, ಕೇಶುಭಾಯ್ ಒಳ್ಳೆ ಆಟವಾಡಬಹುದೆಂದು ಆಸೆಗಣ್ಣಿನಿಂದ ನೋಡುತ್ತಿದೆ.ತ್ರಿಕೋನ ಸ್ಪರ್ಧೆ ನಡೆಯುತ್ತಿದೆ. ಬೆರಳೆಣಿಕೆಯ ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕಡೆ ಬಿಜೆಪಿ, ಕಾಂಗ್ರೆಸ್ ಮತ್ತು ಕೇಶುಭಾಯ್ ಪಟೇಲರ `ಗುಜರಾತ್ ಪರಿವರ್ತನಾ ಪಕ್ಷ'ದ (ಜಿಪಿಪಿ) ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಿಧಾನಸಭೆಯ 182 ಸ್ಥಾನಗಳಿಗೆ 1666 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.ಮೋದಿ ಗುಜರಾತಿನ ಚುನಾವಣೆ ಬಳಿಕ ರಾಷ್ಟ್ರ ರಾಜಕಾರಣಕ್ಕೆ ಜಿಗಿಯಲಿದ್ದಾರೆ; ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮುಖ್ಯ ಪಾತ್ರ ವಹಿಸಲಿದ್ದಾರೆ. ಬಿಜೆಪಿ ವರಿಷ್ಠರ ಒಂದು ಗುಂಪು ಈಗಾಗಲೇ `ಮೋದಿ ಬಿಜೆಪಿ ಪ್ರಧಾನಿ' ಎಂದು ಪ್ರಕಟಿಸಿದೆ. ಇದೇ ಕಾರಣಕ್ಕೆ ಬಿಜೆಪಿ ಪ್ರಚಾರ ಭರಾಟೆಯಿಂದ ನಡೆದಿದೆ. `ಮೋದಿ ರಾಷ್ಟ್ರ ರಾಜಕಾರಣಕ್ಕೆ ಬಡ್ತಿ ಪಡೆಯಲಿದ್ದಾರೆ' ಎನ್ನುವ ಚರ್ಚೆ ಚುನಾವಣೆಗೆ ಇನ್ನಷ್ಟು ರಂಗು ತಂದಿದೆ.

ದೇಶದ ರಾಜಕಾರಣದಲ್ಲಿ ಮೋದಿ ಮಿಂಚಲಿದ್ದಾರೆಂಬ ನಿರೀಕ್ಷೆ ಗುಜರಾತಿನಲ್ಲಿ ಉತ್ಸಾಹದ ವಾತಾವರಣ ಸೃಷ್ಟಿಸಿದೆ. ಕಟ್ಟಾ ಹಿಂದುಗಳು ಬಿಜೆಪಿ ಗೆಲುವಿಗೆ ಪಣ ತೊಟ್ಟಿದ್ದಾರೆ.ಇದರಾಚೆಗೆ `ರಾಜ್ಯದಲ್ಲಿ ಬಿಜೆಪಿ ಗೆಲ್ಲುವುದೇ ಬೇಡ' ಎಂದು ಹೇಳುವವರೂ ಇದ್ದಾರೆ. ಹೊರಗಡೆ ಮಾತ್ರವಲ್ಲ, ಕೇಸರಿ ಪಕ್ಷದೊಳಗೆ ಇಂಥ ಜನರ ಕೊರತೆಯಿಲ್ಲ. ವಿಧಾನಸಭೆ ಚುನಾವಣೆ ಮೋದಿ ಆಡಳಿತದ ಮೇಲಿನ `ಜನಮತಗಣನೆ'. ದೇಶ-ವಿದೇಶಗಳ ಗಮನ ಸೆಳೆದಿರುವ ಈ ಚುನಾವಣೆಯಲ್ಲಿ ಮೋದಿ ಗೆದ್ದರೆ ಬಡ್ತಿಯೇನೋ ಸಿಗಬಹುದು. ಅಕಸ್ಮಾತ್ ಸೋತರೆ ಮಡಿಲ ಕೆಂಡದಂತಿರುವ `ಹಿತಶತ್ರು'ಗಳು ಅವರನ್ನು ರಾಜಕೀಯವಾಗಿ ತಲೆ ಎತ್ತಲು ಬಿಡುವುದಿಲ್ಲ.`ವಿಕಾಸ ಪುರುಷ' ಮೋದಿಗೆ ಅಭಿವೃದ್ಧಿ ಕಾರ್ಯಗಳೇ `ಅಜೆಂಡಾ'. ಕೇಂದ್ರ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ, ಸಬ್ಸಿಡಿ ಸಿಲಿಂಡರ್ ಸಂಖ್ಯೆ ಇಳಿಕೆ `ರಾಮಬಾಣ' ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ರಾಜ್ಯದ ಮತದಾರರಿಗೂ ಬಿಜೆಪಿ ನಿಲುವು ಒಪ್ಪಿಗೆಯಾಗಿದೆ. `ಬಿಜೆಪಿ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಇದುವರೆಗೆ ಆಳಿ ಹೋಗಿರುವ ಬೇರೆ ಪಕ್ಷಗಳ ಸರ್ಕಾರ ಏನು ಸಾಧನೆ ಮಾಡಿವೆ?' ಎಂದು ಕೇಳುತ್ತಿದ್ದಾರೆ.ಮುಖ್ಯಮಂತ್ರಿ ವಿರೋಧಿಗಳೂ ಅವರ ಕೆಲಸದ ಬಗ್ಗೆ ಚಕಾರ ಎತ್ತುವುದಿಲ್ಲ. ಕಾಂಗ್ರೆಸ್ ನಾಯಕರು ಮಾತ್ರ ಗುಜರಾತ್ ಅಭಿವೃದ್ಧಿಗೆ ಮೋದಿ ಕಾರಣವೆನ್ನುವ ವಾದ ಒಪ್ಪುವುದಿಲ್ಲ. `ಗುಜರಾತ್ ಅನೇಕ ಶತಮಾನಗಳ ಹಿಂದಿನಿಂದಲೇ ಅಭಿವೃದ್ಧಿ ಕಾಣುತ್ತಾ ಬಂದಿದೆ. ಆಗಲೇ ವ್ಯಾಪಾರ- ವಹಿವಾಟು ನಡೆಸಿದೆ. ಮೋದಿ ಈ ಪರಂಪರೆ ಮುಂದುವರಿಸಿದ್ದಾರೆ. ಅದರಲ್ಲೇನು ಹೆಚ್ಚುಗಾರಿಕೆ ಇದೆ' ಎಂದು ಪ್ರಶ್ನಿಸುತ್ತಿದ್ದಾರೆ.ಎಡವಟ್ಟು: ಮೋದಿ, ಗೋದ್ರಾ- ನರೋಡ ಪಟಿಯಾ ಹತ್ಯಾಕಾಂಡದ `ಕಳಂಕ'ದಿಂದ ಹೊರಬರಲು ಪ್ರಯತ್ನಿಸಿದ್ದಾರೆ. ಮುಸ್ಲಿಮರ ವಿಶ್ವಾಸ ಪಡೆಯಲು `ಸದ್ಭಾವನಾ ಯಾತ್ರೆ' ಮಾಡಿದ್ದಾರೆ. ಅಲ್ಪಸಂಖ್ಯಾತರು ಅವರ ಕೈಹಿಡಿಯಲು ತಯಾರಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಬಿಜೆಪಿ ಎಡವಟ್ಟು ಮಾಡಿಕೊಂಡಿದೆ. ಮುಸ್ಲಿಮರನ್ನು ಮತ್ತೆ ದೂರವಿಟ್ಟು ನಿಜವಾದ ಬಣ್ಣ ಬಯಲು ಮಾಡಿಕೊಂಡಿದೆ.`ಮೋದಿ ಸದ್ಭಾವನಾ ಯಾತ್ರೆ ಬಳಿಕ ಮುಸ್ಲಿಮರನ್ನು ನೋಡುವ ರೀತಿ ಬದಲಾಗಬಹುದು ಎಂದು ಭಾವಿಸಲಾಗಿತ್ತು. ಹಾಗಾಗಲಿಲ್ಲ. ಈಗ ರಾಗ ಬದಲಾಗಿದೆ. ದಾರಿ ಬೇರೆಯಾಗಿದೆ. ಚುನಾವಣೆಯಲ್ಲಿ ಒಂದೇ ಒಂದೂ ಸ್ಥಾನವನ್ನು ನಮಗೆ ಕೊಡದೆ ಅನ್ಯಾಯ ಮಾಡಲಾಗಿದೆ' ಎಂದು ಅಹಮದಾಬಾದಿನ ಆಟೋ ಚಾಲಕ ಮುಕ್ತಿಯಾರ್ ಹೇಳುತ್ತಾರೆ. ಮುಕ್ತಿಯಾರ್ ಮಾತು ಸುಳ್ಳಲ್ಲ. 182 ಕ್ಷೇತ್ರಗಳಲ್ಲಿ ಬಿಜೆಪಿಗೆ ಹೇಳುವುದಕ್ಕೆ ಒಂದು ಮುಸ್ಲಿಂ ಅಭ್ಯರ್ಥಿ ಹೆಸರಿಲ್ಲ. ಮೊದಲ ಸಲ ಗುಜರಾತಿನಲ್ಲಿ ಪ್ರಾದೇಶಿಕ ಪಕ್ಷವೊಂದು ಕಾಣಿಸಿಕೊಳ್ಳುತ್ತಿದೆ. ಪ್ರಬಲ `ಲೇವಾ ಪಟೇಲ'ರ ಸಮುದಾಯದ ಕೇಶುಭಾಯ್, ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟಿದ್ದಾರೆ. ಅದೇ `ಗುಜರಾತ್ ಪರಿವರ್ತನಾ ಪಕ್ಷ'. ಹೊಸ ಪಕ್ಷ ಯಾರಿಗೆ ಹಾನಿ ಮಾಡಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.ಕೇಶುಭಾಯ್ ತಮ್ಮ ಮೂಲ ಪಕ್ಷವಾದ ಬಿಜೆಪಿಯ ಸುಲಭದ ಗೆಲುವಿಗೆ ಕಲ್ಲುಮುಳ್ಳಾಗಬಹುದು. ಕಾಂಗ್ರೆಸ್‌ಗೂ ಅಲ್ಪಸ್ವಲ್ಪ ಪ್ರಮಾಣದಲ್ಲಿ ಏಟು ಕೊಡಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.ಕಾಂಗ್ರೆಸ್‌ನ ಕಷ್ಟ: ಗುಜರಾತಿನ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ, ಒಳಜಗಳವಿದೆ. ಈ ಗುಂಪುಗಾರಿಕೆ ಪರಿಣಾಮವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಎರಡೆರಡು ಸಲ ಹಿಂದಕ್ಕೆ ಪಡೆದು ಹೈಕಮಾಂಡ್ ಮುಜುಗರ ಅನುಭವಿಸಿದೆ. ಟಿಕೆಟ್ ಸಿಗದೆ ಸಿಟ್ಟಾಗಿರುವ ಕೆಲ ಮುಖಂಡರು ಮೋದಿ `ಕ್ಯಾಂಪ್' ಸೇರಿದ್ದಾರೆ. ಪ್ರಮುಖ ನಾಯಕ ನರಹರಿ ಅಮೀನ್ ಕಾಂಗ್ರೆಸ್ ಮೇಲೆ ಬಂಡಾಯ ಸಾರಿದ್ದಾರೆ. ಕಾಂಗ್ರೆಸ್ ಯಾರನ್ನೂ `ಮುಖ್ಯಮಂತ್ರಿ ಅಭ್ಯರ್ಥಿ' ಎಂದು ಬಿಂಬಿಸುವ ಗೋಜಿಗೆ ಹೋಗಿಲ್ಲ. ಪಕ್ಷದ ಹಿತದೃಷ್ಟಿಯಿಂದ ಇದೊಂದು ಜಾಣ್ಮೆ ಹೆಜ್ಜೆ. ಪಕ್ಷ ಅಕಸ್ಮಾತ್ ಅಧಿಕಾರಕ್ಕೆ ಬಂದರೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಶಕ್ತಿಸಿಂಗ್ ಗೋಯಲ್, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅರ್ಜುನ್ ಮೋಧ್ವಾಡಿಯಾ, ಮಾಜಿ ಮುಖ್ಯಮಂತ್ರಿ ಶಂಕರಸಿಂಗ್ ವಘೇಲ ಇವರಲ್ಲಿ ಯಾರಾದರೂ ಮುಖ್ಯಮಂತ್ರಿ ಆಗಬಹುದು. ಬಿಜೆಪಿ, ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲರ ಹೆಸರನ್ನು ತೇಲಿ ಬಿಟ್ಟಿದೆ. ಬಹುಶಃ ಹಿಂದು ಮತಗಳನ್ನು ಕಬಳಿಸಲು ತಂತ್ರ ಮಾಡಿರಬಹುದು.ಆದಿವಾಸಿಗಳು, ಹಿಂದುಳಿದ ವರ್ಗ, ದಲಿತರು ಮತ್ತು ಮುಸ್ಲಿಮರದ್ದೇ ಗುಜರಾತಿನಲ್ಲಿ ಪ್ರಾಬಲ್ಯ. ಕಾಂಗ್ರೆಸ್ ಪಕ್ಷಕ್ಕೆ ಈ ಸಮುದಾಯಗಳು ಸಾಂಪ್ರಾದಾಯಿಕ ಮತ ಬ್ಯಾಂಕುಗಳು ಎಂದು ಹೇಳುವ ಸ್ಥಿತಿ ಈಗಿಲ್ಲ. ಈ ಪಕ್ಷ ಎರಡು ದಶಕದಿಂದ ಸೋತು ಸೊರಗಿರುವುದಕ್ಕೆ ಇದೇ ಕಾರಣ. ಆದಿವಾಸಿಗಳು ಮತ್ತು ಹಿಂದುಳಿದ ವರ್ಗ ನರೇಂದ್ರ ಮೋದಿ ಅವರನ್ನೂ ಬೆಂಬಲಿಸುತ್ತಿವೆ. ಮೋದಿ ಹಿಂದುಳಿದ ವರ್ಗದ ನಾಯಕನಾದ್ದರಿಂದ ಅವರನ್ನು ಬಿಟ್ಟುಕೊಟ್ಟಿಲ್ಲ.ಗುಜರಾತಿನಲ್ಲಿ ಕಾಂಗ್ರೆಸ್ ಸರ್ಕಾರವೇ ಹೆಚ್ಚು ಕಾಲ ಅಧಿಕಾರ ನಡೆಸಿದೆ. 17 ವರ್ಷಗಳಿಂದ ಆಡಳಿತ ನಡೆಸಿರುವ ಬಿಜೆಪಿ ಮುಷ್ಟಿಯಿಂದ ಅಧಿಕಾರ ಕಿತ್ತುಕೊಳ್ಳಲಾಗದೆ ಒದ್ದಾಡುತ್ತಿದೆ. ಮೊದಲ ಸಲ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ್ದು 90ರಲ್ಲಿ. ಆಗ ಕೇವಲ 33 ಸ್ಥಾನ ಪಡೆಯಲು ಸಾಧ್ಯವಾಯಿತು. ಕಾಂಗ್ರೆಸ್ ಕೋಟೆಗೆ ಜನತಾದಳ, ಬಿಜೆಪಿ ಲಗ್ಗೆ ಹಾಕಿದವು. ಇದಾದ ಐದು ವರ್ಷದಲ್ಲಿ ವಿಧಾನಸಭೆ ಮೇಲೆ ಕೇಸರಿ ಬಾವುಟ ಹಾರಾಡಿತು.

ಮೂರೇ ವರ್ಷದಲ್ಲಿ ಮತ್ತೆ ವಿಧಾನಸಭೆ ಚುನಾವಣೆ ನಡೆದಾಗ ಬಿಜೆಪಿ ಪುನಃ ಅಧಿಕಾರ ಹಿಡಿಯಿತು. ಆಗ ಬಿಜೆಪಿ 117 ಕಾಂಗ್ರೆಸ್ 53 ಸ್ಥಾನ ಗೆದ್ದವು. 2002 ಮತ್ತು 2007ರಲ್ಲೂ ಬಿಜೆಪಿ ಅಧಿಕಾರ ಬಿಡದಿದ್ದರೂ ಶಾಸಕರ ಸಂಖ್ಯಾ ಬಲದಲ್ಲಿ ಏರುಪೇರಾಯಿತು. ಹೋದ ಚುನಾವಣೆಯಲ್ಲಿ ಬಿಜೆಪಿಗೆ ಅದರ ಹಿಂದಿನದಕ್ಕಿಂತ 10 ಸೀಟು ಕಡಿಮೆಯಾಗಿದೆ. ಕಾಂಗ್ರೆಸ್ ಎಂಟು ಸ್ಥಾನ ಹೆಚ್ಚಿಸಿಕೊಂಡಿದೆ.ಕೇಶುಭಾಯ್ ಪ್ರತ್ಯೇಕವಾಗಿ ಬ್ಯಾಟ್ ಹಿಡಿದಿರುವುದರಿಂದ `ಬಿಜೆಪಿ ಬಲ ಕುಗ್ಗಲಿದೆ; ತಮ್ಮ ಬಲ ಹೆಚ್ಚಲಿದೆ' ಎಂಬ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿದೆ. ಆದರೆ, ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಹಾದಿಗೂ ಅಡ್ಡಿ ಮಾಡಲಿದ್ದಾರೆಂದು ಬಿಜೆಪಿ ನಾಯಕರು ಪ್ರತಿಪಾದಿಸುತ್ತಿದ್ದಾರೆ. ಮತದಾರನ ತಲೆಯೊಳಗೆ ಏನಿದೆಯೋ ಎಂದು ಚುನಾವಣೆ ತೀರ್ಮಾನಿಸಲಿದೆ.

(ಗುರುವಾರದ ಸಂಚಿಕೆಯಲ್ಲಿ ಭಾಗ 2)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry