ಮೋದಿಗೆ ಪಟ್ಟನಿಶ್ಚಿತ

7
ಅಡ್ವಾಣಿ, ಸುಷ್ಮಾ ವಿರೋಧ * ಸೆ. 19ರೊಳಗೆ ಘೋಷಣೆ ಸಾಧ್ಯತೆ

ಮೋದಿಗೆ ಪಟ್ಟನಿಶ್ಚಿತ

Published:
Updated:
ಮೋದಿಗೆ ಪಟ್ಟನಿಶ್ಚಿತ

strong>ನವದೆಹಲಿ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್), ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಿಜೆಪಿ ನಾಯಕರ ಎರಡು ದಿನಗಳ ರಹಸ್ಯ ಸಭೆ ಭಾನುವಾರ ಇಲ್ಲಿ ಆರಂಭವಾಯಿತು. ಆದರೆ, ಬಿಜೆಪಿಯ ಒಂದು ಬಣ ಮೋದಿ ಅವರಿಗೆ ಪಟ್ಟ ಕಟ್ಟುವುದನ್ನು ದೃಢವಾಗಿ ವಿರೋಧಿಸಿದ್ದರಿಂದ ಸಭೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ.ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸೋಮವಾರದ ಸಭೆಯಲ್ಲಿ ಭಾಗವಹಿಸಲಿದ್ದು, ಆಗ ಈ ವಿಷಯ ಮತ್ತೆ ಚರ್ಚೆಗೆ ಬರಲಿದೆ. ಮೋದಿ ಅವರಿಗೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಈಗಾಗಲೇ ತನ್ನ ನಿಲುವನ್ನು ಬಿಜೆಪಿಗೆ ಮನದಟ್ಟು ಮಾಡಿಕೊಟ್ಟಿರುವುದರಿಂದ ಸೋಮವಾರದ ಸಭೆಯಲ್ಲಿ ತುರುಸಿನ ಚರ್ಚೆ, ವಾಗ್ವಾದ ನಡೆಯುವ ಸಾಧ್ಯತೆ ಇದೆ.ಸೆಪ್ಟೆಂಬರ್ 20ರಿಂದ ಪಿತೃಪಕ್ಷ ಆರಂಭವಾಗುವುದರಿಂದ ಬಿಜೆಪಿ ಸೆ. 19ರ ಒಳಗೆ ಈ ಕುರಿತು ನಿರ್ಧಾರ ಕೈಗೊಳ್ಳುವ ಒತ್ತಡದಲ್ಲಿದೆ. ಅಲ್ಲದೇ ಸೆ. 17ರಂದು ನರೇಂದ್ರ ಮೋದಿಯವರ ಹುಟ್ಟು ಹಬ್ಬವಿದ್ದು, ಅದಕ್ಕೂ ಮುನ್ನ ಪ್ರಧಾನಿ ಸ್ಥಾನದ ಅಭ್ಯರ್ಥಿಯಾಗಿ ಅವರ ಹೆಸರನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ಹೇಳಿವೆ. ಒಂದುವೇಳೆ ಈ ಅವಧಿಯಲ್ಲಿ ಯಾವುದೇ ತೀರ್ಮಾನಕ್ಕೆ ಬರದಿದ್ದಲ್ಲಿ ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಬಳಿಕ ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಘೋಷಿಸುವುದು ಅನಿವಾರ್ಯ ಆಗುತ್ತದೆ.ಭಾನುವಾರದ ಸಭೆಯಲ್ಲಿ... ಬಿಜೆಪಿ ಪ್ರಭಾವಿ ನಾಯಕಿ ಸುಷ್ಮಾ ಸ್ವರಾಜ್ ಅವರು ಪ್ರಧಾನಿ ಹುದ್ದೆಗೆ ಮೋದಿ ಅವರ ಹೆಸರನ್ನು ಘೋಷಿಸುವುದನ್ನು ಪ್ರಬಲವಾಗಿ ವಿರೋಧಿಸಿದರು ಎನ್ನಲಾಗಿದೆ. ಪಕ್ಷದ ಹಿರಿಯ ಮುಖಂಡ ಲಾಲಕೃಷ್ಣ ಅಡ್ವಾಣಿ ಅವರು ಇದೇ ನಿಲುವು ತಳೆದರು. ಅಲ್ಲದೇ ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಬೆದರಿಕೆ ಕೂಡ ಹಾಕಿದರು. ಆದರೆ, ರಾಜ್‌ನಾಥ್ ಸಿಂಗ್ ಸೇರಿದಂತೆ ಪಕ್ಷದ ಇತರ ನಾಯಕರು ಮೋದಿ ಅವರನ್ನು ಪ್ರಧಾನಿ ಸ್ಥಾನದಲ್ಲಿ ನೋಡಲು ಕಾರ್ಯಕರ್ತರೆಲ್ಲ ಕಾತುರರಾಗಿದ್ದಾರೆ ಎಂದು ವಾದ ಮಂಡಿಸಿದರು.

ಅಡ್ವಾಣಿ ಅವರು ಪಕ್ಷದಿಂದ ಹೊರನಡೆದಲ್ಲಿ ಮೋದಿ ಮತ್ತು ಅವರ ಬಣಗಳ ಮಧ್ಯೆ ಹಿಂದು ಮತಗಳು ಹಂಚಿ ಹೋಗಬಹುದು ಎಂಬ ಆತಂಕವನ್ನು ಈ ವೇಳೆ ಇತರ ನಾಯಕರು ವ್ಯಕ್ತಪಡಿಸಿದರು ಎನ್ನಲಾಗಿದೆ.ಕಾರ್ಯತಂತ್ರ:ಜನರ ಆಶೋತ್ತರಗಳಿಗೆ ಸ್ಪಂದಿಸುವಂತಹ ಕಾರ್ಯಕ್ರಮಗಳನ್ನು ಬ್ಲಾಕ್ ಮಟ್ಟದಿಂದ ಆರಂಭಿಸಬೇಕು. ಈ ನಿಟ್ಟಿನಲ್ಲಿ ಸಂಘ ಪರಿವಾರದ ಕಾರ್ಯಕರ್ತರ ನಡುವೆ ಉತ್ತಮ ಹೊಂದಾಣಿಕೆ ಇರುವಂತೆ ನೋಡಿಕೊಳ್ಳಬೇಕು. ಜೊತೆಗೆ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳು, ಮಹಿಳೆಯರು ಹಾಗೂ ಯುವಕರ ವಿಶ್ವಾಸ ಗಳಿಸುವಂತಹ ಕಾರ್ಯತಂತ್ರಗಳನ್ನು ಹಾಕಿಕೊಳ್ಳಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.ರಾಷ್ಟ್ರೀಯ ಭದ್ರತೆ ಮತ್ತು ದೇಶದ ಕುಸಿಯುತ್ತಿರುವ ಆರ್ಥಿಕ ಪರಿಸ್ಥಿತಿ ಕುರಿತೂ ಸಭೆಯಲ್ಲಿ ಕಳವಳ ವ್ಯಕ್ತವಾಯಿತು. ಯುಪಿಎ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಇಡುವುದು ಹೇಗೆ? ಮತ್ತು ಯುವಕರನ್ನು ಪಕ್ಷದತ್ತ ಸೆಳೆಯುವುದರ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ವಿಎಚ್‌ಪಿ ಆಯೋಜಿಸಿದ್ದ ಯಾತ್ರೆಗೆ ಉತ್ತರ ಪ್ರದೇಶ ಸರ್ಕಾರ ಅವಕಾಶ ನೀಡದಿದ್ದುದು, ಈಚೀನ ದಿನಗಳಲ್ಲಿ ಸಂಭವಿಸಿದ ಕೋಮು ಗಲಭೆಗಳಿಂದಾಗಿ ಸಮುದಾಯಗಳನ್ನು ಧ್ರುವೀಕರಣಗೊಳಿಸಲು ನಡೆದ ಬೆಳವಣಿಗೆಗಳ ಕುರಿತೂ ಸಭೆಯಲ್ಲಿ ಚರ್ಚೆನಡೆಯಿತು.ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರಾದ ಎಲ್.ಕೆ. ಅಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಮುರಳಿ ಮನೋಹರ್ ಜೋಷಿ, ರಾಜನಾಥ್ ಸಿಂಗ್, ನರೇಂದ್ರ ಮೋದಿ ಇನ್ನಿತರ ಮುಖಂಡರು, ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಷಿ, ಜಂಟಿ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಸೋನಿ ಮತ್ತು ದತ್ತಾತ್ರೇಯ ಹೊಸಬಾಳೆ, ವಿಎಚ್‌ಪಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಸಭೆಯಲ್ಲಿ ಭಾಗವಹಿಸಿದ್ದರು.ಚುನಾವಣಾ ಕಾರ್ಯತಂತ್ರಗಳಿಗೆ ಸಂಬಂಧಿಸಿದ ಕೆಲವು ಘೋಷಣೆಗಳು ಸೋಮವಾರ (ಸೆ. 9) ಹೊರಬೀಳುವ ಸಾಧ್ಯತೆ ಇದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಸೋಮವಾರದ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ನರೇಂದ್ರ ಮೋದಿ ಅವರು ಭಾನುವಾರ ರಾತ್ರಿ ಗುಜರಾತ್‌ಗೆ ಮರಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry