ಭಾನುವಾರ, ಮೇ 9, 2021
27 °C
ಇದೇ ಮೊದಲ ಬಾರಿ ಕಾರ್ಯಕಾರಿಣಿಗೆ ಹಾಜರಾಗದ ಅಡ್ವಾಣಿ

ಮೋದಿಗೆ ಸಾರಥ್ಯ ಅನಿಶ್ಚಿತ

ಪ್ರಜಾವಾಣಿ ವಾರ್ತೆ/ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

ಮೋದಿಗೆ ಸಾರಥ್ಯ ಅನಿಶ್ಚಿತ

ಪಣಜಿ (ಗೋವಾ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಚುನಾವಣಾ ಪ್ರಚಾರ ಸಮಿತಿ ನೇತೃತ್ವ ವಹಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಗೋವಾ ಕಾರ್ಯಕಾರಿಣಿಗೆ ಕೊನೆಗೂ ಗೈರು ಹಾಜರಾದರು. ಇದರಿಂದಾಗಿ ಮೋದಿ ರಾಜಕೀಯ ಭವಿಷ್ಯ ಕುರಿತು ಕಾರ್ಯಕಾರಿಣಿ ಭಾನುವಾರ ಮಹತ್ವದ ತೀರ್ಮಾನ ಕೈಗೊಳ್ಳುವ ಬಗ್ಗೆ ಅನಿಶ್ಚಿತತೆ ತಲೆದೋರಿದೆ.ಅಡ್ವಾಣಿ ಗೈರು ಹಾಜರಾಗಿದ್ದರಿಂದ ಪಕ್ಷ ತೀವ್ರ ಮುಜುಗರ ಅನುಭವಿಸಿದೆ. `ಅನಾರೋಗ್ಯದಿಂದಾಗಿ ಅಡ್ವಾಣಿ ಮೊದಲ ದಿನದ ಸಭೆಗೆ ಬಂದಿಲ್ಲ. ಶನಿವಾರ ಖಂಡಿತ ಹಾಜರಾಗುತ್ತಾರೆ' ಎಂದು ಪಕ್ಷದ ವಕ್ತಾರರು ಶುಕ್ರವಾರ ಹೇಳಿದ್ದರು. ಅನಂತರ ರಾಗ ಬದಲಾಯಿತು. ಅನಾರೋಗ್ಯದ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯುವಂತೆ ಅಡ್ವಾಣಿ ಅವರಿಗೆ ವೈದ್ಯರು ಸಲಹೆ ಮಾಡಿದ್ದಾರೆ ಎಂದು ಕಾರಣ ಕೊಡಲಾಯಿತು.ಅಡ್ವಾಣಿ-  ಮೋದಿ ನಡುವಿನ `ಜಟಾಪಟಿ' ಹಿನ್ನೆಲೆಯಲ್ಲಿ ಇಬ್ಬರೂ ನಾಯಕರಿಗೂ ಒಪ್ಪಿಗೆಯಾಗುವಂತಹ ರಾಜಕೀಯ ಸೂತ್ರವೊಂದನ್ನು ಹಿರಿಯ ನಾಯಕರು ಸಿದ್ಧಪಡಿಸುತ್ತಿದ್ದಾರೆ ಎಂಬ ಮಾತುಗಳು ಶನಿವಾರ ಪಕ್ಷದ ವಲಯದಲ್ಲಿ ಕೇಳಿ ಬಂತು.ಆದರೆ, ಮೋದಿ ಅವರಿಗೆ ಪ್ರಚಾರ ಸಮಿತಿ ಸಾರಥ್ಯ ವಹಿಸುವ ಕುರಿತು ಕಾರ್ಯಕಾರಿಣಿಯಲ್ಲಿ ಯಾವುದೇ ಚರ್ಚೆ ಆಗಲಿಲ್ಲ ಎಂದು ಪಕ್ಷದ ಉನ್ನತ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.ಮೋದಿ ಅವರಿಗೆ ಪಟ್ಟ ಕಟ್ಟುವಂತೆ ಪಕ್ಷದೊಳಗೆ ಒತ್ತಡ ಹೆಚ್ಚುತ್ತಿದೆ. ಅಡ್ವಾಣಿ ವಿರೋಧದ ನಡುವೆಯೂ ಭಾನುವಾರ ಈ ಕುರಿತು ನಿರ್ಧಾರ ಆಗಬಹುದು ಎಂದು ಮೂಲಗಳು ಹೇಳಿವೆ. ಬಿಜೆಪಿ ವಕ್ತಾರರಾದ ನಿರ್ಮಲಾ ಸೀತಾರಾಮನ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರಾಜಕೀಯ ಸೂತ್ರದ ಬಗ್ಗೆ ಕೇಳಿದಾಗ, ತಮಗೇನೂ ಗೊತ್ತಿಲ್ಲ ಎಂದರು.`ಪಕ್ಷದ ಅಧ್ಯಕ್ಷ ರಾಜನಾಥ್‌ಸಿಂಗ್‌ರವರು ಅಡ್ವಾಣಿ ಅವರ ಜತೆ ಮಾತನಾಡಿದ್ದಾರೆ. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಜತೆಗೂ ಚರ್ಚಿಸಿದ್ದಾರೆ. ಅನಗತ್ಯ ತೊಂದರೆ ಮಾಡಿಕೊಳ್ಳಬಾರದು ಎಂದು ವೈದ್ಯರು ಸಲಹೆ ಮಾಡಿದ್ದಾರೆ. ಇದರಿಂದಾಗಿ ಅಡ್ವಾಣಿ ಗೋವಾಕ್ಕೆ ಬರುತ್ತಿಲ್ಲ. ನಾವೇ ಅವರ ಬಳಿ ಹೋಗುತ್ತೇವೆ' ಎಂದು ಮತ್ತೊಬ್ಬ ವಕ್ತಾರ ಪ್ರಕಾಶ್ ಜಾವಡೇಕರ್ ಪತ್ರಕರ್ತರಿಗೆ ತಿಳಿಸಿದರು.ಕಾರ್ಯಕಾರಿಣಿ ಬಳಿಕ ಪಕ್ಷದ ಮುಖಂಡರು ನವ ಚೈತನ್ಯ-ಉತ್ಸಾಹ-ವಿಶ್ವಾಸದೊಂದಿಗೆ ತಮ್ಮ ಊರುಗಳಿಗೆ ಹಿಂತಿರುಗಲಿದ್ದಾರೆ ಎಂದು ಅವರು ಹೇಳಿದರು. ಆದರೆ, ತಮ್ಮ ನಿಗೂಢ ಹೇಳಿಕೆಯ ಅರ್ಥವನ್ನು ವ್ಯಾಖ್ಯಾನಿಸಲಿಲ್ಲ. `ಅಂದರೆ ಮೋದಿ ಭವಿಷ್ಯ ತೀರ್ಮಾನ ಆಗುವುದೇ?' ಎಂದಾಗ, `ಸ್ವಲ್ಪ ತಾಳ್ಮೆಯಿಂದ ಕಾಯಿರಿ' ಎಂದು ಜಾರಿಕೊಂಡರು.`ಅಡ್ವಾಣಿ ಅವರನ್ನು ಹೊರಗಿಟ್ಟು ತೀರ್ಮಾನ ಮಾಡಲಾಗುವುದೇ?' ಎನ್ನುವ ಮತ್ತೊಂದು ಪ್ರಶ್ನೆಗೆ, `ಬಿಜೆಪಿಯಲ್ಲಿ ಏನೇ ನಿರ್ಧಾರ ಮಾಡುವ ಮೊದಲು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತದೆ. ಇದು ಬಿಜೆಪಿ ಸಂಸ್ಕೃತಿ. ಆ ಬಗ್ಗೆ ಅನುಮಾನ ಬೇಡ. ಭಾನುವಾರ ಏನು ತೀರ್ಮಾನ ಆಗಲಿದೆ ಎಂದು ಕಾದು ನೋಡಿ' ಎಂದು ತಿಳಿಸಿದರು.ಅಡ್ವಾಣಿ ಪಕ್ಷದ ಅತ್ಯಂತ ಹಿರಿಯ ನಾಯಕರು. ಅವರು ಪಕ್ಷಕ್ಕೆ ಇನ್ನು ಮುಂದೆಯೂ ಮಾರ್ಗದರ್ಶನ ಮಾಡಲಿದ್ದಾರೆ. ಪಕ್ಷದೊಳಗೆ ಗುಂಪುಗಾರಿಕೆ ಇಲ್ಲ. ಹಿಂದೆಯೂ ಪಕ್ಷದಲ್ಲಿ ವಾಜಪೇಯಿ ಹಾಗೂ ಅಡ್ವಾಣಿ ಅವರ ಗುಂಪುಗಳಿವೆ ಎಂದು ಪ್ರಚಾರ ಮಾಡಲಾಗಿತ್ತು. ಅವೆಲ್ಲವೂ ಸುಳ್ಳು ಎಂದು ಬಳಿಕ ಸಾಬೀತಾಯಿತು ಎಂದು ಸಮಜಾಯಿಷಿ ನೀಡಿದರು.ದೆಹಲಿಯಲ್ಲಿ ಅಡ್ವಾಣಿ ಅವರ ಮನೆ ಮುಂದೆ ನಡೆದಿರುವ ಪ್ರತಿಭಟನೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅವರ ಮನೆ ಬಳಿ ನಡೆದಿರುವ ಪ್ರತಿಭಟನೆ ಅತ್ಯಂತ ಖಂಡನೀಯ. ಯಾರು ಈ ಪ್ರತಿಭಟನೆ ಮಾಡಿದ್ದಾರೆಂದು ನಮಗೆ ಗೊತ್ತಿಲ್ಲ. ಪ್ರತಿಭಟನೆ ಮಾಡಿದವರು ನಮ್ಮ ಪಕ್ಷದ ಕಾರ್ಯಕರ್ತರಂತೂ ಅಲ್ಲ ಎಂದು ಸಂಜೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.ಪ್ರಮುಖರ ಗೈರು: ಗೈರು ಹಾಜರಾಗಿರುವ ಪಕ್ಷದ ಇತರ ಪ್ರಮುಖರಾದ ಉಮಾಭಾರತಿ, ವರುಣ್ ಗಾಂಧಿ, ಮೇನಕಾ ಗಾಂಧಿ, ಶತ್ರುಘ್ನ ಸಿನ್ಹಾ, ಯಶವಂತ ಸಿನ್ಹಾ, ಜಸ್ವಂತ್ ಸಿಂಗ್ ಅವರಿಗೂ ಅನಾರೋಗ್ಯವೇ ಎಂಬ ಪ್ರಶ್ನೆಗೆ, ಪಕ್ಷದ ಮುಖಂಡರಿಂದ ಸರಿಯಾದ ಉತ್ತರ ಬರಲಿಲ್ಲ. ಅಡ್ವಾಣಿ ಇದುವರೆಗೆ ಯಾವುದೇ ಕಾರ್ಯಕಾರಿಣಿಗೂ ಗೈರು ಹಾಜರಾಗಿರಲಿಲ್ಲ ಎಂದು ಮುಖಂಡರು ಖಚಿತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.