ಮೋದಿ ಅಲೆ, ಯುವ ಹವಾ ನಡುವೆ ಜಾತಿ ಲೆಕ್ಕಾಚಾರ!

7

ಮೋದಿ ಅಲೆ, ಯುವ ಹವಾ ನಡುವೆ ಜಾತಿ ಲೆಕ್ಕಾಚಾರ!

Published:
Updated:

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಅವರು ಮೋದಿ ಅಲೆಯಲ್ಲಿ ತೇಲುತ್ತಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಅವರು ‘ಯುವಕ’ ಎನ್ನುವ ಅಲೆಯಲ್ಲಿ ಈಜಿ ದಡ ಸೇರುವ ತವಕದಲ್ಲಿದ್ದಾರೆ. ಪೊರಕೆ ಹಿಡಿದು ಅವ್ಯವಸ್ಥೆಯನ್ನು ಗುಡಿಸಿ ಹಾಕುವ ಆಪ್‌ನ ಪ್ರಯತ್ನಕ್ಕೆ ಫಲ ಸಿಗುವುದೇ ಅನುಮಾನ ಎನ್ನುವ ಸ್ಥಿತಿ ಇದೆ.ರಾಜಧಾನಿಯ ಹೃದಯ ಭಾಗದಲ್ಲಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಚಿತ್ರಣ ಇದು. ಒಟ್ಟು 26 ಮಂದಿ ಕಣದಲ್ಲಿ ಇದ್ದರೂ ನೇರ ಸರ್ಧೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆಯೇ.ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕಡೆ ಕಾಂಗ್ರೆಸ್‌ ಶಾಸಕರು ಇದ್ದಾರೆ. ಇವರಲ್ಲಿ ಮೂವರು ಸಚಿವರು. ಬಿಜೆಪಿಯ ಮೂವರು ಮತ್ತು ಜೆಡಿಎಸ್‌ನ ಒಬ್ಬರು ಶಾಸಕರು ಕೂಡ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ.

‘ಟಿಕೆಟ್‌ ಸಿಗಲಿಲ್ಲ’ ಎನ್ನುವ ಮುನಿಸು ಹಿರಿಯ ಕಾಂಗ್ರೆಸ್ಸಿಗ­ರನ್ನೂ ಬಿಟ್ಟಿಲ್ಲ. ಜೆಡಿಎಸ್‌ ಬಾಗಿಲು ತಟ್ಟಿ ವಾಪಸಾದ ಜಾಫರ್‌ ಷರೀಫ್‌ ಮತ್ತು ಎಚ್‌.ಟಿ.ಸಾಂಗ್ಲಿಯಾನ ಅವರ ಅಸಮಾಧಾನ ಇನ್ನೂ ಶಮನವಾಗಿಲ್ಲ.ಆತ್ಮೀಯರು ಮತ್ತು ಪಕ್ಷದ ವರಿಷ್ಠರ ಮಾತಿಗೆ ಮನಸೋತು ಜೆಡಿಎಸ್‌ ಸೇರುವುದನ್ನು ಸದ್ಯಕ್ಕೆ ಕೈಬಿಟ್ಟಿರುವ ಈ ಮುಖಂಡರು ಕಾಂಗ್ರೆಸ್‌ನಲ್ಲೂ ಸಕ್ರಿಯವಾಗಿಲ್ಲ.  ಮೆಕ್ಕಾ ಪ್ರವಾಸ ಮುಗಿಸಿ ವಾಪಸಾದ ಷರೀಫ್‌ ಅವರು ‘ವಿಶ್ರಾಂತಿ’ ನೆಪದಲ್ಲಿ ಊಟಿಗೆ ತೆರಳಿದ್ದಾರೆ. ‘ಕ್ರಿಶ್ಚಿಯನ್ನರಿಗೆ ಟಿಕೆಟ್ ಕೊಡದಿದ್ದರೆ ಹೇಗೆ’ ಎಂದು ಹೈಕಮಾಂಡನ್ನು ಪ್ರಶ್ನಿಸಿದ್ದ ಸಾಂಗ್ಲಿಯಾನ ಕೂಡ ಮೌನಕ್ಕೆ ಶರಣಾಗಿದ್ದಾರೆ. ಕ್ಷೇತ್ರದಲ್ಲಿ ಅವರ ಪ್ರಚಾರದ ಭರಾಟೆ ಎಲ್ಲಿಯೂ ಕಾಣಿಸುತ್ತಿಲ್ಲ.‘ಹಿರಿಯರ’ ಅಸಮಾಧಾನದ ನಡುವೆಯೇ ರಿಜ್ವಾನ್ ಅವರು ಯುವಕರ, ಮಧ್ಯವಯಸ್ಕರ ಕಣ್ಮಣಿಯಾಗಲು ಪ್ರಯತ್ನ ನಡೆಸಿದ್ದಾರೆ. ಸಚಿವರಾದ ಕೆ.ಜೆ.ಜಾರ್ಜ್‌, ಆರ್.­ರೋಷನ್‌ ಬೇಗ್‌ ಮತ್ತು ದಿನೇಶ್‌ ಗುಂಡೂರಾವ್‌ ಅವರಿಗೂ ರಿಜ್ವಾನ್‌ ಅವರನ್ನು ಗೆಲ್ಲಿಸುವುದು ಅಳಿವು– ಉಳಿವಿನ ಪ್ರಶ್ನೆ­ಯಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಸ್ಪಷ್ಟ ಸೂಚನೆ ಇರುವ ಕಾರಣ ಈ ಸಚಿವರೂ ಬೆವರು ಸುರಿಸಿ ದುಡಿಯುತ್ತಿದ್ದಾರೆ.

ರಿಜ್ವಾನ್‌ ಸ್ಥಳೀಯರಲ್ಲ ಎನ್ನುವ ಪ್ರಚಾರ ಬಿಜೆಪಿಯವರಿಂದ ನಡೆಯುತ್ತಿದ್ದರೂ ಅಲ್ಪಸಂಖ್ಯಾತರೇ (ಮುಸ್ಲಿಂ, ಕ್ರಿಶ್ಚಿಯನ್‌) ಹೆಚ್ಚು ಇರುವ ಈ ಕ್ಷೇತ್ರದಲ್ಲಿ ಅವರ ಮತಗಳ ಇಡುಗಂಟು ಚದುರದಂತೆ ಎಚ್ಚರವಹಿಸಲಾಗುತ್ತಿದೆ. ‘ಹಿಂದೆಲ್ಲ ಬೆಂಗಳೂ­ರಿಂದ ಅಲ್ಪಸಂಖ್ಯಾತರು ಒಬ್ಬರಾದರೂ ಸಂಸತ್ತಿಗೆ ಆಯ್ಕೆ­ಯಾ­ಗು­ತ್ತಿದ್ದರು.  ಇತ್ತೀಚಿನ ಚುನಾವಣೆಗಳಲ್ಲಾದ ಮತ ವಿಭಜನೆ­ಯಿಂ­ದಾಗಿ ಅದು ಗಗನಕುಸುಮವಾಗಿದೆ. ಕಳೆದ ಬಾರಿ ಜೆಡಿಎಸ್‌-­ನಿಂದ ಸ್ಪರ್ಧಿಸಿದ್ದ ಜಮೀರ್‌ ಅಹಮದ್‌ ಅವರಿಂದಾಗಿ ಬಿಜೆಪಿ ಅಭ್ಯರ್ಥಿ ಗೆದ್ದರು. ಈ ಸಲ ಆ ರೀತಿ ಆಗದಂತೆ ಗಮನ­ಹರಿಸ­ಬೇಕು’ ಎನ್ನುವುದೇ ಕಾಂಗ್ರೆಸ್ಸಿಗರ ಮೂಲಮಂತ್ರ.ರಾಜಾಜಿನಗರ, ಮಹದೇವಪುರ ಮತ್ತು ಸಿ.ವಿ.ರಾಮನ್‌­ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇದ್ದು, ಈ ಮೂರು ಕಡೆಯೂ ಮೋದಿ ಅಲೆಯ ಮಾತೇ ಹೆಚ್ಚಾಗಿ ಕೇಳಿಬರುತ್ತಿದೆ. ಹಾಲಿ ಸಂಸದ ಪಿ.ಸಿ. ಮೋಹನ್‌ ಅವರು ತಮ್ಮ ಬಡಾವಣೆಗೆ ಬರಲಿಲ್ಲ, ಕಷ್ಟ– ಸುಖ ಆಲಿಸಲಿಲ್ಲ ಎನ್ನುವ ಅಸಮಾಧಾನ ಅಲ್ಲಲ್ಲಿ ಇದ್ದರೂ ‘ವೋಟ್‌’ ಮಾತ್ರ ಮೋದಿಗೆ ಎನ್ನುವ ಮಾತು ಸಮೀಕ್ಷೆ ಸಂದರ್ಭದಲ್ಲಿ ಕೇಳಿಬಂತು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಿ, ಸೋಲುಂಡಿದ್ದ ಮೋಹನ್‌ ಅವರಿಗೆ ಆ ಭಾಗದಲ್ಲಿ ತುಸು ಅನುಕಂಪದ ಅಲೆಯೂ ಇದೆ. ಅದನ್ನು ಛಿದ್ರಗೊಳಿಸುವ ಪ್ರಯತ್ನ ಸಚಿವ ದಿನೇಶ್‌ ಗುಂಡೂರಾವ್‌ ಅವರಿಂದ ನಡೆದಿದೆ.ಶಿವಾಜಿನಗರ (ಆರ್‌.ರೋಷನ್‌ಬೇಗ್‌),  ಸರ್ವಜ್ಞನಗರ (ಕೆ.ಜೆ.ಜಾರ್ಚ್‌), ಶಾಂತಿನಗರ (ಎನ್‌.ಎ.ಹ್ಯಾರೀಸ್‌) ಮತ್ತು ­ಚಾಮರಾಜಪೇಟೆ (ಜಮೀರ್‌ ಅಹಮದ್‌) ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಾಗಿರುವ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿದ್ದು, ಅವುಗಳನ್ನು ಚದುರಿಸುವ ಪ್ರಯತ್ನ ಬಿಜೆಪಿಯಿಂದ ನಡೆಯುತ್ತಿದೆ. ‘ಮೋದಿ ಫಾರ್‌ ಪಿ.ಎಂ, ಮೋಹನ್‌ ಫಾರ್‌ ಎಂ.ಪಿ’ ಎನ್ನುವ ಬಿಜೆಪಿಯ ಧ್ಯೇಯ ವಾಕ್ಯ ಎಲ್ಲೆಡೆ ರಿಂಗಣಿಸುತ್ತಿದೆ.ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕ ಜಮೀರ್‌ ಅಹಮದ್‌ ಅವರು ತಮ್ಮ ಪಕ್ಷದ ಅಭ್ಯರ್ಥಿ ನಂದಿನಿ ಆಳ್ವ ಅವರಿಗೆ ಅತಿ ಹೆಚ್ಚು ವೋಟ್‌ ಕೊಡಿಸುವ ತವಕದಲ್ಲಿದ್ದಾರೆ. ‘ಷರೀಫ್‌ ಬಂದಿದ್ದರೆ ಈ ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತಿದ್ದೆವು’ ಎನ್ನುವ ಜೆಡಿಎಸ್‌ ಮುಖಂಡರಿಗೆ ಕೊನೆ ಕ್ಷಣದಲ್ಲಿ ಸಿಕ್ಕಿದ್ದು ದಿವಂಗತ ಜೀವರಾಜ್‌ ಆಳ್ವ ಅವರ ಪತ್ನಿ ನಂದಿನಿ. ಕ್ಷೇತ್ರ ಪರಿಚಯವೂ ಇಲ್ಲದ ಅವರಿಗೆ ಇನ್ನೂ ಎಲ್ಲ ಕಡೆ ಹೋಗು­ವುದಕ್ಕೂ ಸಾಧ್ಯವಾಗಿಲ್ಲ. ಜಮೀರ್‌ ಅವರೇ ಹಲವು ಕಡೆ ಹೋಗಿ ಕಾರ್ಯಕರ್ತರನ್ನು ಸಂಘಟಿಸುವ ಕೆಲಸ ಮಾಡುತ್ತಿ­ದ್ದಾರೆ. ಕಾಂಗ್ರೆಸ್‌ನಿಂದ ಮುಸ್ಲಿಂ ಅಭ್ಯರ್ಥಿ ಕಣಕ್ಕೆ ಇಳಿದಿರು­ವುದರಿಂದ ಅವರ ಪ್ರಯತ್ನಕ್ಕೆ ಎಷ್ಟರಮಟ್ಟಿಗೆ ಫಲ ಸಿಗುತ್ತದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.‘ಜಮೀರ್‌ ಸ್ಪರ್ಧಿಸಿದ್ದರೆ ನಮ್ಮ ವೋಟ್‌ ಅವರಿಗೇ ಬೀಳುತ್ತಿತ್ತು. ಆದರೆ, ಈಗ ಪರಿಸ್ಥಿತಿ ಭಿನ್ನವಾಗಿರುವ ಕಾರಣ ಬೇರೆ ದೃಷ್ಟಿಕೋನದಿಂದಲೇ ಎಲ್ಲವನ್ನೂ ಪರಾಮರ್ಶಿಸ­ಬೇಕಾಗುತ್ತದೆ’ ಎಂಬುದು ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿಸಿದ್ದ ಮುಸ್ಲಿಂ ಮುಖಂಡರೊಬ್ಬರ ವಾದ.ಪರಿಣಾಮ ಬೀರದ ಆಪ್‌

ಇನ್ಫೋಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಿ.ಬಾಲಕೃಷ್ಣನ್‌ ಅವರು ಆಮ್‌ ಆದ್ಮಿ ಪಕ್ಷದ (ಆಪ್‌) ಅಭ್ಯರ್ಥಿ. ಅವರು ಭ್ರಷ್ಟಾಚಾರದ ವಿರುದ್ಧ ತಮ್ಮ ಮಾತು ಝಳಪಿಸುತ್ತಲೇ ಮತ ಬೇಡುತ್ತಿದ್ದಾರೆ. ಪತ್ನಿ, ಪುತ್ರಿ ಮತ್ತು ಬೆಂಬಲಿಗರ ಜತೆ ಮತಬೇಟೆಗೆ ಇಳಿದಿದ್ದರೂ ಕ್ಷೇತ್ರದ ಎಲ್ಲ ಕಡೆಗೆ ಭೇಟಿ ನೀಡಲು ಇನ್ನೂ ಸಾಧ್ಯವಾಗಿಲ್ಲ. ದೆಹಲಿ­ಯಲ್ಲಿನ ಕೇಜ್ರಿವಾಲ್‌ ಸರ್ಕಾರದ ನಡೆ–ನುಡಿ ಬಗ್ಗೆ ಮಾತನಾಡುವ ಕ್ಷೇತ್ರದ ಮತದಾರರು, ಅದನ್ನು ನೋಡಿ ಇವರಿಗೆ ‘ವೋಟ್‌’ ಹೇಗೆ ಹಾಕುವುದು ಎನ್ನುವ ಪ್ರಶ್ನೆ­ಯನ್ನೂ ಎತ್ತುತ್ತಾರೆ. ‘ರಾಜ್ಯವನ್ನೇ ನಡೆಸದ ಆಪ್‌­ನವರು ದೇಶವನ್ನು ಹೇಗೆ ಮುನ್ನಡೆಸುತ್ತಾರೆ’ ಎಂದು ಕೇಳುತ್ತಾರೆ. ದೆಹಲಿಯ ಬೆಳವಣಿಗೆಗಳು ಈ ಕ್ಷೇತ್ರದ ಮತದಾರರ ಮೇಲೆ ಪ್ರಭಾವ ಬೀರಿರುವುದು ಹಲವರನ್ನು ಮಾತಿಗೆಳೆ­ದಾಗ ಸ್ಪಷ್ಟವಾಯಿತು.

ಬಿಎಸ್‌ಪಿಯಿಂದ ಆರ್‌.ಮೋಹನ್‌ರಾಜ್‌, ಆಲ್‌ ಇಂಡಿಯಾ ತೃಣಮೂಲ ಕಾಂಗ್ರೆಸ್‌ನಿಂದ ಇಸ್ಮಾಯಿಲ್‌ ಖಾನ್‌ ಸೈಫ್‌ ಆಲಿ, ಸೋಷಿಯಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾದ (ಕಮ್ಯೂನಿಸ್ಟ್‌) ಝಹೀದಾ ಶೆರೀನ್‌, ಕರುನಾಡು ಪಕ್ಷದಿಂದ ಬುದಯ್ಯ ಬಿ.ಪೂಜೇರಿ, ಕನ್ನಡ ಚಳವಳಿ ವಾಟಾಳ್‌ ಪಕ್ಷದಿಂದ ಎಚ್‌.ಎಲ್‌.­ಮಂಜುನಾಥ್‌, ಆರ್‌ಪಿಐನಿಂದ ಕಾಡುಗೋಡಿ ಸೊನ್ನಪ್ಪ ಮತ್ತು ಇತರ 16 ಮಂದಿ ಪಕ್ಷೇತರರು ಕಣದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry