ಮಂಗಳವಾರ, ಮಾರ್ಚ್ 2, 2021
29 °C
ಮುಂದಿನ ವರ್ಷದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಚಾಲನೆ

ಮೋದಿ ಕ್ಷೇತ್ರದಲ್ಲಿ ಸೋನಿಯಾ ರ‍್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿ ಕ್ಷೇತ್ರದಲ್ಲಿ ಸೋನಿಯಾ ರ‍್ಯಾಲಿ

ವಾರಾಣಸಿ (ಪಿಟಿಐ): ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣಾ ಪ್ರಚಾರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು  ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಕ್ಷೇತ್ರ ವಾರಾಣಸಿಯಲ್ಲಿ ಆರಂಭಿಸುವ ಮೂಲಕ ಪ್ರಧಾನಿ ಅವರಿಗೆ ಸವಾಲೆಸೆದಿದ್ದಾರೆ.ಪ್ರವಾಸಿ ಮಂದಿರದಿಂದ ಇಂಗ್ಲಿಷಿಯಾ ಲೇನ್‌ವರೆಗೆ ಎಂಟು ಕಿ. ಮೀ. ಉದ್ದಕ್ಕೆ ನಡೆದ ಸೋನಿಯಾ ಅವರ ರೋಡ್ ಷೋನಲ್ಲಿ ಸಹಸ್ರಾರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಪ್ರವಾಸಿ ಮಂದಿರದ ಎದುರು ಇರುವ ಅಂಬೇಡ್ಕರ್ ಪುತ್ಥಳಿಗೆ  ಮಾಲಾರ್ಪಣೆ ಮಾಡುವ ಮೂಲಕ ಸೋನಿಯಾ ಅವರು ರೋಡ್  ಷೋಗೆ ಚಾಲನೆ ನಿಡಿದರು.ದೇವಸ್ಥಾನಗಳ ನಗರದ ಕಿರಿದಾದ ರಸ್ತೆಗಳಲ್ಲಿ ಕಾಂಗ್ರೆಸ್‌ನ ಬಲ ಪ್ರದರ್ಶನದ ಮೆರವಣಿಗೆ ನಡೆಯಿತು. ಆರಂಭದಲ್ಲಿ ಕಾರಿನಲ್ಲಿ ಇದ್ದ ಸೋನಿಯಾ ಅವರು ನಂತರ ತೆರೆದ ಜೀಪಿನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಸೋನಿಯಾ ಅವರು ಜನರತ್ತ ಕೈಬೀಸಿದ ಕೂಡಲೇ ಕಾರ್ಯಕರ್ತರು ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜನರ ಅಭಿನಂದನೆ ಸ್ವೀಕರಿಸಲು ಸೋನಿಯಾ ಅವರು ಅನೇಕ ಬಾರಿ ಜೀಪಿನಿಂದ ಇಳಿದರು.ಅನೇಕ ಕಡೆಗಳಲ್ಲಿ ಜನರು ಸೋನಿಯಾ ಮೇಲೆ ಗುಲಾಬಿ ಹೂವನ್ನು ಎರಚಿದರು. ‘27 ವರ್ಷ ಉತ್ತರಪ್ರದೇಶ ಬೇಗುದಿಯಲ್ಲಿ’ ಎಂಬ ಘೋಷಣೆಗಳ ಭಿತ್ತಿಪತ್ರವನ್ನು ಕಾರ್ಯಕರ್ತರು ಪ್ರದರ್ಶಿಸಿದರು. ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಶೀಲಾ ದೀಕ್ಷಿತ್, ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್, ರಾಜ್ಯ ಘಟಕದ ಅಧ್ಯಕ್ಷ ರಾಜ್ ಬಬ್ಬರ್, ಹಿರಿಯ ಮುಖಂಡರಾದ ಪ್ರಮೋದ್ ತಿವಾರಿ ಮತ್ತು ಸಂಜಯ್ ಸಿಂಗ್ ಸಹ ಸೋನಿಯಾ ಜತೆ ಇದ್ದರು.ಸೋನಿಯಾ ಅವರನ್ನು ಪಕ್ಷದ ಕಾರ್ಯಕರ್ತರು ವಿಮಾನ ನಿಲ್ದಾಣದಿಂದ ಬೈಕ್ ರ‍್ಯಾಲಿಯ ಮೂಲಕ ನಗರಕ್ಕೆ ಕರೆತಂದರು. ಮೋದಿ ಅವರು ಪ್ರಧಾನಿ ಆದ ಮೇಲೆ ಇದೇ ಮೊದಲ ಬಾರಿಗೆ ಸೋನಿಯಾ ವಾರಾಣಸಿಗೆ ಭೇಟಿ ನೀಡಿದ್ದಾರೆ. ಮೋದಿ ಪ್ರತಿನಿಧಿಸುವ ವಾರಾಣಸಿಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಬಿಂಬಿಸಲು ‘ದರ್ದ್– ಎ– ಬನಾರಸ್’ ಆಂದೋಲನವನ್ನು ಕಾಂಗ್ರೆಸ್ ಆರಂಭಿಸಿದೆ.ಅನಿರೀಕ್ಷಿತ ಫಲಿತಾಂಶ ನಿರೀಕ್ಷೆ: ವಿಧಾನ ಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಬರುವ ವಿಶ್ವಾಸವಿದೆ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರಾಜ್ ಬಬ್ಬರ್ ತಿಳಿಸಿದ್ದಾರೆ. ‘ಉತ್ತರ ಪ್ರದೇಶದ ಜನರು ಪ್ರತಿ ಬಾರಿ ಅಚ್ಚರಿ ಫಲಿತಾಂಶ ನೀಡುತ್ತಾ ಬಂದಿದ್ದಾರೆ.  2004, 2007, 2012 ರಂತೆ  2017ರಲ್ಲೂ ಇದು ಸಾಧ್ಯವಾಗಬಹುದು.ಈ ಬಾರಿ ಕಾಂಗ್ರೆಸ್ ಪರವಾಗಿ ಮತದಾರರು ಅಚ್ಚರಿ ಸೃಷ್ಟಿಸಲಿದ್ದಾರೆ’ ಎಂದು ಬಬ್ಬರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಪ್ರಧಾನಿ ಮೋದಿ ಅವರ ಕ್ಷೇತ್ರ ವಾರಾಣಸಿಯಲ್ಲಿ ಸೋನಿಯಾ ಗಾಂಧಿ ಅವರು ನಡೆಸಿದ ಭಾರಿ ರೋಡ್‌ಶೋನಲ್ಲಿ  ರಾಜ್ ಬಬ್ಬರ್ ಭಾಗಿಯಾಗಿದ್ದರು. ರೋಡ್ ಶೋ ಕಾಂಗ್ರೆಸ್‌ಗೆ ಸಹಕಾರಿ ಯಾಗಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ಜನರೊಂದಿಗೆ ನಾವು ಬೆರೆತಿದ್ದೇವೆ. ಸೋನಿಯಾ ಅವರು ಪವಿತ್ರ ಶ್ರಾವಣ ಮಾಸದಲ್ಲಿ ಬಾಬಾ ವಿಶ್ವನಾಥ ಅವರ ದರ್ಶನ ಮತ್ತು ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದಾರೆ’ ಎಂದು ಅವರು ಹೇಳಿದ್ದಾರೆ.ಕೆಲವು ದಿನಗಳ ಅಂತರದಲ್ಲಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಮೂರನೇ ಕಾರ್ಯಕ್ರಮ ಇದಾಗಿದೆ. ಮಂಗಳವಾರ ಬೆಳಗ್ಗೆ ಇಲ್ಲಿಗೆ ಆಗಮಿಸಿದ ಸೋನಿಯಾ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿತು. ರೋಡ್‌ ಶೋನಲ್ಲಿ ಐದು ಸಾವಿರ ಬೈಕ್ ಸವಾರರ ರೋಡ್‌ ಶೋನಲ್ಲಿ ಭಾಗಿಯಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.