`ಮೋದಿ ಬೇಡ, ನಿತೀಶ್ ಪ್ರಧಾನಿಯಾಗಲಿ'

ಭಾನುವಾರ, ಜೂಲೈ 21, 2019
26 °C
ಬಿಹಾರದಲ್ಲಿ ಬಂಡಾಯ: ಜೆಡಿಯು ಬೆಂಬಲಕ್ಕೆ ನಿಂತ ಬಿಜೆಪಿ ಶಾಸಕರು

`ಮೋದಿ ಬೇಡ, ನಿತೀಶ್ ಪ್ರಧಾನಿಯಾಗಲಿ'

Published:
Updated:

ಪಟ್ನಾ (ಪಿಟಿಐ/ಐಎಎನ್‌ಎಸ್):  ಬಿಹಾರ ಬಿಜೆಪಿಯಲ್ಲಿಯ ಭಿನ್ನಮತ ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದ್ದು ಒಬ್ಬರಾದ ನಂತರ ಒಬ್ಬ ಶಾಸಕರು ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿ ಎಂದು ಗುಣಗಾನ ಮಾಡತೊಡಗಿದ್ದಾರೆ. ಇದರ ಜೊತೆಗೆ ಬೆಂಕಿಗೆ ತುಪ್ಪ ಸುರಿಯುವಂತೆ ಬಿಜೆಪಿಯಲ್ಲಿ ಆಂತರಿಕ ಸ್ವಾತಂತ್ರ್ಯ ಇಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದರಿಂದ ಪಕ್ಷ ತೀವ್ರ ಮುಜುಗರಕ್ಕೆ ಒಳಗಾಗಿದೆ.ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಶಾಸಕನನ್ನು ಅಮಾನತು ಮಾಡಿದ ಬೆನ್ನಲ್ಲೇ ಬಿಜೆಪಿಯ ಮತ್ತೊಬ್ಬ ಶಾಸಕ ಪಕ್ಷಕ್ಕೆ ಮುಜುಗರವಾಗುವ ಹೇಳಿಕೆಯನ್ನು ನೀಡಿದ್ದಾರೆ.`ದೇಶದ ಮುಂದಿನ ಪ್ರಧಾನಿಯನ್ನಾಗಿ ನಿತೀಶ್ ಕುಮಾರ್ ಅವರನ್ನು ನೋಡಲು ಬಯಸುತ್ತೇನೆಯೇ ಹೊರತು ನರೇಂದ್ರ ಮೋದಿ ಅವರನ್ನು ಅಲ್ಲ' ಎಂದು ಸಮಷ್ಟಿಪುರ ಜಿಲ್ಲೆಯ ಮೊಹಿಯುದ್ದೀನ್ ಕ್ಷೇತ್ರದ ಬಿಜೆಪಿ ಶಾಸಕ ಗಂಗೇಶ್ವರ್ ಸಿಂಗ್ ಹೇಳಿದ್ದಾರೆ.

ಬಿಹಾರದ ಜನರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಪಕ್ಷವನ್ನು 40 ಕ್ಷೇತ್ರಗಳ ಪೈಕಿ ಕನಿಷ್ಠ ಪಕ್ಷ 30 ಸ್ಥಾನಗಳಲ್ಲಾದರೂ ಗೆಲ್ಲಿಸಬೇಕು. ಆ ನಂತರ ನಿತೀಶ್ ಕುಮಾರ್ ಪ್ರಧಾನಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅವರು ಪ್ರಧಾನಿಯಾಗುವುದು ಬಿಹಾರಕ್ಕೆ ಹೆಮ್ಮೆಯ ವಿಷಯ' ಎಂದು ಅವರು ಬಹಿರಂಗವಾಗಿ ನಿತೀಶ್ ಬೆಂಬಲಕ್ಕೆ ನಿಂತಿದ್ದಾರೆ.ಈ ಮೊದಲು ಇದೇ ರೀತಿಯ ಹೇಳಿಕೆ ನೀಡಿದ್ದ ದರ್ಭಾಂಗ ಜಿಲ್ಲೆಯ ಹಯಾಘಾಟ್ ಕ್ಷೇತ್ರದ ಶಾಸಕ ಅಮರನಾಥ ಗಾಮಿ ಅವರನ್ನು ಬಿಜೆಪಿ ಭಾನುವಾರ ಪಕ್ಷದಿಂದ ಅಮಾನತುಗೊಳಿಸಿತ್ತು. ಪಕ್ಷದ ಈ ಕ್ರಮವನ್ನು ಗಂಗೇಶ್ವರ್ ಸಿಂಗ್ ಮತ್ತು ಜಾಲೆ ಕ್ಷೇತ್ರದ ಶಾಸಕ ವಿಜಯ್ ಕುಮಾರ್ ಮಿಶ್ರಾ ಅವರು ಪ್ರಶ್ನಿಸಿದ್ದಾರೆ.`ಆಂತರಿಕ ಪ್ರಜಾಪ್ರಭುತ್ವ ಇಲ್ಲ': ಅಮರನಾಥ ಬೆಂಬಲಕ್ಕೆ ನಿಂತಿರುವ ಈ ಶಾಸಕರು, ಯಾವುದೇ ಶೋಕಾಸ್ ನೋಟಿಸ್ ನೀಡದೆ ಅವರನ್ನು ಅಮಾನತುಗೊಳಿಸಿರುವುದು ನ್ಯಾಯಯುತವಾದ ಕ್ರಮವಲ್ಲ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂಬುವುದಕ್ಕೆ ಇದು ತಾಜಾ ನಿದರ್ಶನ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಪಕ್ಷದಲ್ಲಿಯ ಉಸಿರುಗಟ್ಟಿಸುವ ವಾತಾವರಣ ಮತ್ತು ಸದ್ಯದ ದಯನೀಯ ಸ್ಥಿತಿಗೆ ಹಿರಿಯ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ  ಕಾರಣ ಎಂದು ಅವರು ಹರಿಹಾಯ್ದಿದ್ದಾರೆ.ತಮಗೆ ಪಕ್ಷ ಮುಖ್ಯವಲ್ಲ. ಕ್ಷೇತ್ರ, ರಾಜ್ಯದ ಅಭಿವೃದ್ಧಿ ಮತ್ತು ಜನತೆಯ ಹಿತ ಮುಖ್ಯ ಎಂದು ಈ ಶಾಸಕರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ರಾಜ್ಯ ಬಿಜೆಪಿ ಒಳಗೆ ಭಿನ್ನಮತ ಉಲ್ಬಣಿಸಿರುವುದನ್ನು ಉಪಾಧ್ಯಕ್ಷ ಸಿ.ಪಿ. ಠಾಕೂರ್ ಒಪ್ಪಿಕೊಂಡಿದ್ದಾರೆ. ರಾಜ್ಯ ನಾಯತ್ವದ ಬಗ್ಗೆ ಕೆಲವು ಶಾಸಕರಿಗೆ ಅಸಮಾಧಾನ ಇರುವುದು ನಿಜ ಎಂದು ಅವರು ಹೇಳಿದ್ದಾರೆ.

ಜೆಡಿಯು ಬಾಗಿಲು ಬಡೆಯುತ್ತಿರುವ ಶಾಸಕರು:  ಈ ನಡುವೆ ಬಿಜೆಪಿಯ 42 ಮತ್ತು ಆರ್‌ಜೆಡಿಯ 17 ಶಾಸಕರು ಜೆಡಿಯು ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಹಿರಿಯ ಸಚಿವ ನರೇಂದ್ರ ಸಿಂಗ್ ತಿಳಿಸಿದ್ದಾರೆ. ಜೆಡಿಯು ಜತೆ ಮೈತ್ರಿ ಕಡಿದುಕೊಂಡ ನಂತರ ಅನೇಕ ಬಿಜೆಪಿ ಶಾಸಕರು ಪಕ್ಷದ ನಾಯಕತ್ವದ ವಿರುದ್ಧ ಬಂಡೆದ್ದಿದ್ದು, ಪಕ್ಷ ತೊರೆಯುವ ಸೂಚನೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.ಭಿನ್ನಮತ ಶಮನಗೊಳಿಸುವ ನಿಟ್ಟಿನಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಇಲ್ಲಿಗೆ ಆಗಮಿಸಿದ್ದು ಶಾಸಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಸುಶೀಲ್ ಕುಮಾರ್ ಮೋದಿ ಮತ್ತು ಸಿ.ಪಿ ಠಾಕೂರ್ ಅವರ ನಡುವಿನ ಗುದ್ದಾಟ ಗುಟ್ಟಾಗಿ ಉಳಿದಿಲ್ಲ.

ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ನಿತೀಶ್ ಕುಮಾರ್ ಬಿಜೆಪಿಯನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಸುಶೀಲ್ ಕುಮಾರ್ ಮೋದಿ ಮತ್ತು ಪಕ್ಷದ ಅಧ್ಯಕ್ಷ ಮಂಗಲ್ ಪಾಂಡೆ ಆರೋಪಿಸಿದ್ದಾರೆ.ನಿತೀಶ್ ಕಾರ್ಯತಂತ್ರ

ಅತ್ತ ಬಿಜೆಪಿ ಭಿನ್ನಮತ ಶಮನಗೊಳಿಸುವ ಯತ್ನದಲ್ಲಿ ತೊಡಗಿದ್ದರೆ, ಇತ್ತ ನಿತೀಶ್ ಮುಂಬರುವ ಲೋಕಸಭಾ ಚುನಾವಣಾ ತಯಾರಿಯನ್ನು ಭರ್ಜರಿಯಾಗಿ ನಡೆಸಿದ್ದಾರೆ. ಎರಡು ದಿನಗಳಿಂದ ತಮ್ಮ ಅಧಿಕೃತ ನಿವಾಸದಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಶಾಸಕರ ಜೊತೆ ಸರಣಿ ಸಭೆಗಳನ್ನು ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry