ಶನಿವಾರ, ಮೇ 8, 2021
18 °C

ಮೋದಿ ಮಾಡಿದ ತಪ್ಪಾದರೂ ಏನು?: ರಾಜನಾಥ್ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ (ಪಿಟಿಐ): ನರೇಂದ್ರ ಮೋದಿ `ನಿರಂಕುಶವಾದಿ' ಹಾಗೂ `ಪ್ರತ್ಯೇಕತೆ ಪೋಷಿಸುವ' ನಾಯಕ ಎಂಬ ಜೆಡಿ(ಯು) ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್, 17 ವರ್ಷಗಳಿಂದ ಮಾಡಿಕೊಂಡು ಬಂದಿದ್ದ ಮೈತ್ರಿಯಿಂದ ದೂರವಾಗಲು ಮೋದಿ ಮಾಡಿದ ತಪ್ಪಾದರೂ ಏನು ಎಂದು ಪ್ರಶ್ನಿಸಿದ್ದಾರೆ.ಇಲ್ಲಿನ ಸಂಜಯ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಂಗ್ ಅವರು, ನರೇಂದ್ರ ಮೋದಿ ವಿರುದ್ಧ ಜೆಡಿ(ಯು) ಪಕ್ಷ ಮಾಡಿದ ಆಪಾದನೆಗಳನ್ನು ತಳ್ಳಿಹಾಕಿದರು.`2002ರಿಂದ 2013ರವರೆಗೆ ನರೇಂದ್ರ ಮೋದಿ ಕ್ರಮೇಣ ಬೆಳೆಯುತ್ತಿದ್ದಾಗ ಅವರೊಂದಿಗೆ ನಿಮಗೆ ಯಾವ ಸಮಸ್ಯೆಯೂ ಇರಲಿಲ್ಲ. ಈಗ ಒಮ್ಮಂದೊಮ್ಮೆಲೇ ಮೋದಿಯವರಲ್ಲಿ ತಪ್ಪು ಹುಡುಕಿ, ಅವರ ಜತೆ ಕೆಲಸ ಮಾಡುವುದು ಆಗದು ಎಂಬ ನೆಪವೊಡ್ಡಿ ದೂರ ಸರಿದಿದ್ದೀರಿ' ಎಂದು ಕಿಡಿ ಕಾರಿದರು. `ಮೋದಿ ಅವರನ್ನು ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾತ್ರ ಆಯ್ಕೆ ಮಾಡಲಾಗಿದೆಯೇ ಹೊರತೂ, ಪ್ರಧಾನಿ ಹುದ್ದೆ ಅಭ್ಯರ್ಥಿಯಾಗಿ ಅಲ್ಲ. ಇನ್ನೊಂದು ಪಕ್ಷದ ಜತೆ ಮೈತ್ರಿ ಬೆಳೆಸಿಕೊಳ್ಳಲು ಇಂಥ ನಿರ್ಧಾರ ತೆಗೆದುಕೊಂಡಿದ್ದೀರಿ' ಎಂದು ಜೆಡಿ(ಯು) ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.`ನರೇಂದ್ರ ಮೋದಿ ಅವರ ವರ್ಚಸ್ಸು ಹಾಗೂ ಜನಪ್ರಿಯತೆಯನ್ನು ಗಮನದಲ್ಲಿ ಇಟ್ಟುಕೊಂಡು, ಮತಗಳನ್ನು ಸೆಳೆಯಲು ನಾವು ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆವು. ಇದರಲ್ಲಿ ತಪ್ಪೇನು?' ಎಂದು ಸಿಂಗ್ ಪ್ರಶ್ನಿಸಿದರು.`ಮುಳುಗುವ ದೋಣಿ': ಕಾಂಗ್ರೆಸ್ ಪಕ್ಷದತ್ತ ಮುಖ್ಯಮಂತ್ರಿ ನಿತೀಶ ಕುಮಾರ್ ಒಲವು ತೋರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಸಿಂಗ್, `ಮುಂದಿನ ಚುನಾವಣೆಯಲ್ಲಿ ಮುಳುಗಲಿರುವ ದೋಣಿಯಲ್ಲಿ ಪಯಣಿಸಬೇಡಿ' ಎಂದು ಸಲಹೆ ಮಾಡಿದರು.

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.