ಮೋದಿ ಮುಂದಿನ ನಡೆ ಏನು?

7

ಮೋದಿ ಮುಂದಿನ ನಡೆ ಏನು?

Published:
Updated:

 


ನವದೆಹಲಿ: ಗುಜರಾತಿನಲ್ಲಿ ಪುನಃ `ಮೋದಿ ಗಾಳಿ' ಬೀಸಿದೆ. ವಿಧಾನಸಭೆ ಚುನಾವಣೆಗೆ ಮೊದಲೇ ಬಿಜೆಪಿ ಗೆಲುವು ಖಚಿತವಾಗಿತ್ತು. ಎಷ್ಟು ಸ್ಥಾನ ಗೆಲ್ಲಬಹುದೆನ್ನುವ ಪ್ರಶ್ನೆ ಮಾತ್ರ ಇತ್ಯರ್ಥವಾಗಬೇಕಿತ್ತು. ರಾಜಕೀಯ ಪಂಡಿತರ ಲೆಕ್ಕಾಚಾರದಂತೆ ಎಲ್ಲವೂ ನಡೆದಿದೆ. ಸತತವಾಗಿ ಮೂರು ಚುನಾವಣೆ ಗೆದ್ದಿರುವ ನರೇಂದ್ರ ಮೋದಿ ಬಿಜೆಪಿಯೊಳಗೆ `ಪ್ರಶ್ನಾತೀತ ನಾಯಕ'ರಾಗಿ ಬೆಳೆದು ನಿಂತಿದ್ದಾರೆ.

 

ಸತತವಾಗಿ ಮೂರು ಚುನಾವಣೆ ಗೆಲ್ಲುವುದು ಸುಲಭದ ಕೆಲಸವಲ್ಲ. ಅದಕ್ಕೆ ತಾಕತ್ತು ಇರಬೇಕು. ಮೋದಿ ಅಂಥ ತಾಕತ್ತು ಪ್ರದರ್ಶಿಸಿದ್ದಾರೆ. ಸ್ವಂತ ಶಕ್ತಿಯ ಮೇಲೆ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಮೋದಿ ಹಿಂದೆ ಬಿಜೆಪಿ ಹೋಗಿದೆಯೇ ವಿನಾ ಬಿಜೆಪಿ ಹಿಂದೆ ಮೋದಿ ಹೋಗಿಲ್ಲ. ಸ್ವತಃ ಮುಖ್ಯಮಂತ್ರಿ ಹೋದ ವಾರ `ಇದು ಮೋದಿ ಮತ್ತು ಕಾಂಗ್ರೆಸ್ ನಡುವಿನ ಹೋರಾಟ' ಎಂದು ಹೇಳಿದ್ದರು. ಇಡೀ ಗುಜರಾತಿನ ವಾತಾವರಣವೂ ಹಾಗೇ ಇತ್ತು.

 

`ಮೋದಿ ಅವರಿಗೆ ಗುಜರಾತಿನಲ್ಲಿ ರಾಜಕೀಯ ಪರ್ಯಾಯವಿಲ್ಲ' ಎನ್ನುವ ಮಾತು ನಿರ್ವಿವಾದ. ಈ ಚುನಾವಣೆ ಮತ್ತೆ ಅದನ್ನು ಸಾಬೀತುಪಡಿಸಿದೆ. ಮೋದಿ ಎದುರಿಗೆ ಸರಿಸಮನಾಗಿ ತೊಡೆ ತಟ್ಟಿ ನಿಲ್ಲಬಲ್ಲ ಮತ್ತೊಬ್ಬ ನಾಯಕ ಇಲ್ಲದಿರುವುದು ಅವರ ಜನಪ್ರಿಯತೆ ಹೆಚ್ಚಲು ಕಾರಣವಾಗಿದೆ.`ಹೊರಗಿನ ಶತ್ರು'ಗಳನ್ನು ಸಮರ್ಥವಾಗಿ ಬಗ್ಗು ಬಡಿದಿರುವ ಮುಖ್ಯಮಂತ್ರಿ ತಮ್ಮದೇ ಪಕ್ಷದೊಳಗೆ ಅನೇಕರಿಗೆ `ಬಿಸಿ ತುಪ್ಪ' ಆಗಿದ್ದಾರೆ. ಅವರನ್ನು ಹಿಡಿದು ನಿಲ್ಲಿಸುವುದು ಬಿಜೆಪಿ ವರಿಷ್ಠರಿಗೆ ಇನ್ನು ಕಷ್ಟವಾಗಲಿದೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

 

ಗುಜರಾತಿಗಳು `ಮೋದಿ ಅಭಿವೃದ್ಧಿ ಮಂತ್ರ'ಕ್ಕೆ ಮನ್ನಣೆ ನೀಡಿದ್ದಾರೆ. ಆದಿವಾಸಿಗಳು, ಪರಿಶಿಷ್ಟರು, ಹಿಂದುಳಿದವರು ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದಾರೆ. ಬಹುತೇಕ ಮುಸ್ಲಿಮರು ಮತ್ತು ಲೇವಾ ಪಟೇಲರು ಕೂಡ ಬಿಜೆಪಿಗೆ `ಸಾಥ್' ನೀಡಿದ್ದಾರೆ. 

 

`ಮುಸ್ಲಿಮರು ನರೋಡ ಪಟಿಯಾ ಹತ್ಯಾಕಾಂಡ ಮರೆತಿಲ್ಲ. ಯಾವುದೇ ಪರಿಸ್ಥಿತಿಯಲ್ಲೂ ಮೋದಿ ಪರ ಅವರು ನಿಲ್ಲುವುದಿಲ್ಲ' ಎಂದು ಭಾವಿಸಲಾಗಿತ್ತು. `ಲೇವಾ ಪಟೇಲರು ಸಮಾಜದ ಹಿರಿಯ ಕೇಶುಭಾಯ್ ಪಟೇಲರ ಕೈ ಹಿಡಿಯಲಿದ್ದಾರೆ' ಎನ್ನುವ ಮಾತಿತ್ತು. ಚುನಾವಣೆಯ ಫಲಿತಾಂಶ ಎಲ್ಲ ನಂಬಿಕೆಗಳನ್ನು ತಲೆಕೆಳಗೆ ಮಾಡಿದೆ.

 

ಮುಸ್ಲಿಮರ ಪ್ರಾಬಲ್ಯವಿರುವ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಲೇವಾ ಪಟೇಲರು ಬಹುಸಂಖ್ಯಾತರಾಗಿರುವ ಸೌರಾಷ್ಟ್ರದಲ್ಲೂ ಮೋದಿ ಅತೀ ಹೆಚ್ಚು ಸ್ಥಾನ ಪಡೆದಿದ್ದಾರೆ. ಕೇಂದ್ರ, ದಕ್ಷಿಣ ಹಾಗೂ ಉತ್ತರ ಗುಜರಾತಿನಲ್ಲೂ ಕಾಂಗ್ರೆಸ್ ಹಿನ್ನಡೆ ಕಂಡಿದೆ. ಮುಖ್ಯಮಂತ್ರಿ ಜನಪ್ರಿಯತೆಗೆ ಕಡಿವಾಣ ಹಾಕಲು ಕಾಂಗ್ರೆಸ್ ಮತ್ತು ಜಿಪಿಪಿ ವಿಫಲವಾಗಿವೆ. ದೆಹಲಿಯಲ್ಲಿ ಕುಳಿತು ಪ್ರತಿಯೊಂದನ್ನೂ  ತೀರ್ಮಾನ ಮಾಡುವ ಕಾಂಗ್ರೆಸ್,ಗುಜರಾತಿನಲ್ಲಿ ಮತ್ತೆ ಎಡವಿದೆ.

 

ಗುಜರಾತ್ ಚುನಾವಣೆಯಲ್ಲಿ `ಪವಾಡ' ನಡೆಯಬಹುದು ಎನ್ನುವ ಭ್ರಮೆ ಕಾಂಗ್ರೆಸ್‌ಗೆ ಇರಲಿಲ್ಲ. ಕೇಶುಭಾಯ್ ಪಕ್ಷದಿಂದ ಅಲ್ಪಸ್ವಲ್ಪ ಲಾಭವಾಗಬಹುದೆಂದು ಆಸೆಗಣ್ಣಿನಿಂದ ನೋಡಿತ್ತು. ಈ ಆಸೆ ಕೈಗೂಡಲಿಲ್ಲ. ಆದರೆ, ಹಿಂದಿನ ಚುನಾವಣೆಗಿಂತ ಎರಡು ಸ್ಥಾನಗಳನ್ನು ಹೆಚ್ಚು ಪಡೆಯುವ ಮೂಲಕ ನೆಮ್ಮದಿ ಪಟ್ಟುಕೊಂಡಿದೆ. ಬಿಜೆಪಿಗೆ ಎರಡು ಸ್ಥಾನ ಕಡಿಮೆ ಆಗಿದೆ.

 

ಮೋದಿ ಗುಜರಾತಿನ ಜನರಿಗೆ ಸ್ವರ್ಗವನ್ನೇನೂ ಇಳಿಸದಿದ್ದರೂ ನಿರಾಸೆಯಂತೂ ಮಾಡಿಲ್ಲ. ಭ್ರಷ್ಟಾಚಾರರಹಿತ ಆಡಳಿತ ಕೊಡುವ ಪ್ರಯತ್ನ ಮಾಡಿದ್ದಾರೆ. ಉದ್ಯಮಗಳಿಗೆ ರಾಜ್ಯದ ಬಾಗಿಲು ತೆರೆದು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಪ್ರಯತ್ನಿಸಿದ್ದಾರೆ. ನಗರ ಪ್ರದೇಶಗಳ ಮಧ್ಯಮ ವರ್ಗದ ನೆಚ್ಚಿನ ನಾಯಕರಾದ ಮುಖ್ಯಮಂತ್ರಿ ಹಳ್ಳಿಗಳನ್ನು ಕಡೆಗಣಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಅಭಾವ ಬೆಳೆ ಹಾಗೂ ಬೆಲೆ ಸಮಸ್ಯೆ ನಡುವೆ ಕೃಷಿಕರು ಸಿಕ್ಕಿ ಒದ್ದಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಯಾವ ಸಮಸ್ಯೆಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಿಲ್ಲ.

 

ಸೌರಾಷ್ಟ್ರದ ನೀರಾವರಿ ಸಮಸ್ಯೆಯನ್ನು ಕಾಂಗ್ರೆಸ್ ನಾಯಕರು ಎತ್ತಿಕೊಳ್ಳಲಿಲ್ಲ. ದುಬಾರಿ ವಿದ್ಯುತ್ ದರ ಕುರಿತು ಚಕಾರ ತೆಗೆಯಲಿಲ್ಲ. ವಾಣಿಜ್ಯ ನಗರ ಅಹಮದಾಬಾದ್‌ಗೆ ಸಮನಾಗಿ ಬೆಳೆಯದೆ ಹಿಂದುಳಿದಿರುವ ನಗರಗಳ ಕಡೆ ಬೆರಳು ತೋರಲಿಲ್ಲ. ರಾಜ್ಯ ಸರ್ಕಾರದ ವೈಫಲ್ಯ ಬಯಲು ಮಾಡಲು ಸಿಕ್ಕ ಅವಕಾಶಗಳನ್ನು ವಿರೋಧ ಪಕ್ಷ ಕಳೆದುಕೊಂಡಿತು. ಅದಕ್ಕಾಗಿ ತಕ್ಕ ಬೆಲೆ ತೆತ್ತಿದೆ.

 

ರಾಜ್ಯ ಕಾಂಗ್ರೆಸ್ ಒಳಜಗಳದ ಪರಿಣಾಮ ಚುನಾವಣೆ ಮೇಲೆ ಆಗಿದೆ. ಎಷ್ಟರ ಮಟ್ಟಿಗೆ ಎಂದರೆ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅರ್ಜುನ ಮೋದ್ವಾಡಿಯ, ವಿರೋಧ ಪಕ್ಷದ ನಾಯಕ ಶಕ್ತಿಸಿಂಗ್ ಗೋಹಿಲ್ ಅವರಂಥ ಹಿರಿಯ ನಾಯಕರು ಸೋತಿದ್ದಾರೆ. ನಾಯಕರ ನಡುವಿನ ಕಿತ್ತಾಟ ಸರಿಪಡಿಸಿ ಎಲ್ಲರನ್ನು ಒಟ್ಟುಗೂಡಿಸಲು ಕಾಂಗ್ರೆಸ್ ಹೈಕಮಾಂಡ್ ತಲೆಕೆಡಿಸಿಕೊಳ್ಳಲಿಲ್ಲ. ನಾಯಕರ ಒಳಜಗಳ ಕಂಡು ಹೆದರಿದ ಕಾಂಗ್ರೆಸ್ ಯಾರನ್ನೂ `ಮುಖ್ಯಮಂತ್ರಿ ಅಭ್ಯರ್ಥಿ' ಎಂದು ಬಿಂಬಿಸುವ ಗೋಜಿಗೆ ಹೋಗಲಿಲ್ಲ. ಯಾರನ್ನಾದರೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದ್ದರೆ ಪರಿಸ್ಥಿತಿ ಬೇರೆ ಆಗಿರುತಿತ್ತೇನೋ!

 

ಗುಜರಾತಿನಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವ್ಯಾಪಕವಾಗಿ ಪ್ರಚಾರ ಮಾಡಲಿಲ್ಲ. ಉತ್ತರ ಪ್ರದೇಶದಲ್ಲಿ ಬಿರುಸಿನ ಪ್ರಚಾರ ಮಾಡಿದ್ದ ಕಾಂಗ್ರೆಸ್ ನಾಯಕರು ಯಾಕೋ ಏನೋ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. 

 

ಸೋನಿಯಾ ಆಗೊಮ್ಮೆ ಈಗೊಮ್ಮೆ ಗುಜರಾತಿಗೆ ಬಂದು ಹೋದರು. ರಾಹುಲ್ ಗಾಂಧಿ ಕೊನೆ ಗಳಿಗೆಯಲ್ಲಿ ಅತ್ತ ಕಡೆ ಮುಖ ಮಾಡಿದರು.

 

ಮೂರು ದಶಕಗಳ ಹಿಂದೆ ಕಾಂಗ್ರೆಸ್ ಪರ ನಿಂತಿದ್ದ `ಕ್ಷತ್ರೀಯ- ಹರಿಜನ- ಆದಿವಾಸಿ- ಮುಸ್ಲಿಮ್' (ಖಾಮ್) ಸಮುದಾಯ ಬೆನ್ನು ತಿರುಗಿಸಿವೆ. ಬಹುಶಃ ಮೋದಿಯವರು ಹಿಂದುಳಿದ ವರ್ಗಕ್ಕೆ ಸೇರಿರುವುದರಿಂದ ಅವರ ಹಿಂದೆ ಹೊರಟಿರಬಹುದು. ಗಾಣಿಗ ಸಮಾಜಕ್ಕೆ ಸೇರಿದ ಮೋದಿ ಅವರಿಗೂ ಹಿಂದುಳಿದ ವರ್ಗಗಳ `ಒಳಸುಳಿವು'ಗಳು ಚೆನ್ನಾಗಿ ಗೊತ್ತಿದೆ. ಎಲ್ಲ ವರ್ಗಗಳನ್ನು `ಮ್ಯಾನೇಜ್' ಮಾಡುವ ಜಾಣ್ಮೆಯೂ ಅವರಿಗಿದೆ.


 ಕೇಶುಭಾಯ್ ಪಟೇಲರ ಹಿಂದೆ ಲೇವಾ ಪಟೇಲರು ಹೋಗದಂತೆ ಮೋದಿ ತಡೆದಿದ್ದಾರೆ. ಲೇವಾ ಸಮಾಜದ ಅಭ್ಯರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಕೊಟ್ಟಿದ್ದರು. ಅವರ ರಾಜಕೀಯ ತಂತ್ರ ಯಶಸ್ವಿಯಾಗಿದೆ. ಮೋದಿ ಮತ್ತೊಮ್ಮೆ ಗುಜರಾತಿನ ಪ್ರಬಲ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಅವರ ಮುಂದಿನ ರಾಜಕೀಯ ಭವಿಷ್ಯಕ್ಕೆ ಗುಜರಾತ್ ಚುನಾವಣೆ ಮುನ್ನುಡಿ ಬರೆಯಬಹುದೇನೋ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry