ಶುಕ್ರವಾರ, ಜೂನ್ 25, 2021
23 °C

ಮೋದಿ ಮೋಡಿಗೆ ಮರುಳಾದ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಸದ್ಗುರು ಸಿದ್ಧಾರೂಢರ ಜಾತ್ರೆಯ ಶುಭ ದಿನದಂದು ಕರ್ನಾಟಕದ ಜನತೆಗೆ ಹಾರ್ದಿಕ ಶುಭಾಶಯಗಳು....’

‘ಸದ್ಗುರು ಸಿದ್ಧಾರೂಢರ ಆಶೀರ್ವಾದ ನಮಗೆಲ್ಲರಿಗೂ ಪ್ರಾಪ್ತವಾಗಲಿ....’ಹುಬ್ಬಳ್ಳಿಯಲ್ಲಿ ನಡೆದ ‘ಭಾರತ ಗೆಲ್ಲಿಸಿ’ ರ್‍ಯಾಲಿಯಲ್ಲಿ, ಹೀಗೆ ಕನ್ನಡದಲ್ಲಿ ಮಾತು ಆರಂಭಿಸಿದರು.ಭಾಷಣ ಆರಂಭಕ್ಕೆ ಮುನ್ನ ಜನಸಾಗರ ಕಂಡು ಭಾವುಕರಾದ ಮೋದಿ, ‘ಇದೇ ಜನಸಮೂಹ ನಾಳೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಸುನಾಮಿಯಾಗಿ ಬದಲಾಗಲಿದೆ. ಅದರ ರಭಸಕ್ಕೆ ಕಾಂಗ್ರೆಸ್‌ ಉಳಿಯಲು ಸಾಧ್ಯವಿಲ್ಲ’ ಎಂದರು. ಹಿಂದಿನ ಚುನಾವಣೆಗಳಲ್ಲಿ ಮತದಾನ ನಡೆದು, ಎಣಿಕೆಯಾದ ಮೇಲೆ ಫಲಿತಾಂಶ ಘೋಷಿಸಲಾಗುತ್ತಿತ್ತು. ಈ ಬಾರಿ ಚುನಾವಣೆ ಘೋಷಣೆಗೆ ಮುನ್ನವೇ ಫಲಿತಾಂಶ ಬಂದಿದೆ. ಜನತೆಯ ಆಶೀರ್ವಾದ ಬಿಜೆಪಿಯ ಪರವಾಗಿದೆ’ ಎಂದರು.ವೇದಿಕೆಯ ಎಡಭಾಗದಲ್ಲಿದ್ದ ಗುಂಡು ನಿರೋಧಕ ಗಾಜು ಅಳವಡಿಸಿದ್ದ ಪೋಡಿಯಂ ಇದ್ದರೂ ಬಲಭಾಗದಲ್ಲಿ ಅರಳಿ ನಿಂತ ತಾವರೆಯ ಮಧ್ಯೆ ಅಳವಡಿಸಿದ್ದ ಪೋಡಿಯಂನಲ್ಲಿಯೇ ನಿಂತು ಮೋದಿ ಮಾತು ಆರಂಭಿಸಿದರು.ಅವರ ಭಾವಲಹರಿಗೆ ಮರುಳಾದ ಜನಸ್ತೋಮ ‘ಮೋದಿ... ಮೋದಿ’ ಎಂದು ಒಕ್ಕೊರಲಿನಿಂದ ಎಬ್ಬಿಸಿದ ಧ್ವನಿ, ಮೌನದತ್ತ ಸರಿಯುತ್ತಿದ್ದಂತೆ ಮತ್ತೆ ಮಾತು ಮುಂದುವರಿಸುತ್ತಿದ್ದರು. ಕಾರ್ಯಕ್ರಮದುದ್ದಕ್ಕೂ ‘ಹರ ಹರ ಮೋದಿ... ಘರ್‌ ಘರ್‌ ಮೋದಿ..’ ಘೋಷಣೆ ಅಲೆ ಅಲೆಯಾಗಿ ಎದ್ದಿತು.ಮೈದಾನಕ್ಕೆ ಅವರು ಬಂದಾಗ ಬಾನಿನಲ್ಲಿ ಮೋಡ ಕವಿದ ವಾತಾವರಣ ಇತ್ತು. ಅಲ್ಲದೆ, ಗುಲ್ಬರ್ಗದಲ್ಲಿ ಕಾರ್ಯಕ್ರಮ ವಿಳಂಬವಾದುದರಿಂದ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಬೀದರ್‌ಗೆ ತೆರಳಿ, ಅಲ್ಲಿಂದ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಬಂದಿಳಿದರು. ನಂತರ ರಸ್ತೆ ಮೂಲಕ ರ್‍್ಯಾಲಿ ನಡೆದ ಸ್ಥಳಕ್ಕೆ ಬಂದರು.ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್‌ ಜೊತೆ 5.08ಕ್ಕೆ ವೇದಿಕೆ ಹತ್ತಿದ ಮೋದಿ, ಕಾರ್ಯಕ್ರಮ ಮುಗಿದ ನಂತರ ಮತ್ತೆ ರಸ್ತೆ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳಿ 6.45ಕ್ಕೆ ವಿಶೇಷ ವಿಮಾನದಲ್ಲಿ ಅಹಮದಾಬಾದಿಗೆ ಮರಳಿದರು.ವಿಶೇಷ ವಿಮಾನ ರ್‍್ಯಾಲಿ ನಡೆಯುತ್ತಿದ್ದ ಪ್ರದೇಶದಲ್ಲಿ ಸಂಜೆ 4.45ರ ಸುಮಾರಿಗೆ ಹಾದು ಹೋಗುತ್ತಿದ್ದಂತೆಯೇ ಪುಳಕಿತರಾದ ಜನಸಮೂಹ, ಒಮ್ಮೆಗೆ ‘ಮೋದಿ,.. ಮೋದಿ’ ಎಂದು ಉದ್ಗರಿಸಿದ್ದರು. ಈ ವೇಳೆ ಜಗದೀಶ ಶೆಟ್ಟರ್‌ ಭಾಷಣ ಮಾಡುತ್ತಿದ್ದರೂ ಜನ ಅದನ್ನು ಕೇಳಿಸಿಕೊಳ್ಳಲು ಸಿದ್ಧರಿರಲಿಲ್ಲ!ತಲೆಗೆ ಕೇಸರಿ ರುಮಾಲು ಸುತ್ತಿಕೊಂಡಿದ್ದ ಬಿಜೆಪಿ ಬೆಂಬಲಿಗರು, ‘ಪ್ರಧಾನಿ ಅಭ್ಯರ್ಥಿ ಮೋದಿ’ ಎಂದು ಮುದ್ರಿಸಿದ ಟೋಪಿ ಮತ್ತು ಟಿ –ಶರ್ಟ್‌ ಧರಿಸಿದ್ದರು.ಪಕ್ಷದ ಮೂಲಗಳ ಪ್ರಕಾರ ರ್‍್ಯಾಲಿಗೆ 248 ಬಸ್‌, 460 ಟ್ಯಾಕ್ಸಿ, 500 ಖಾಸಗಿ ವಾಹನಗಳಲ್ಲಿ ಜನರನ್ನು ಕರೆತರಲಾಗಿತ್ತು. ಅವಿಭಜಿತ ಧಾರವಾಡ ಜಿಲ್ಲೆಯಷ್ಟೇ ಅಲ್ಲ, ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಬಳ್ಳಾರಿಯಿಂದಲೂ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದಿದ್ದರು.ಆರು ವರ್ಷ ಪ್ರಾಯದ ಸಯ್ಯಾನ್‌ ಮೋದಿಯಂತೆ ಗಡ್ಡ, ಉಡುಗೆತೊಡುಗೆ ಧರಿಸಿದ್ದರೆ, ರೋಣ ತಾಲ್ಲೂಕಿನ ನೀರೆಗಲ್‌ ಗ್ರಾಮದ 92ರ ಹರೆಯದ ಶರಣಪ್ಪ ಯಲ್ಲಪ್ಪ ಜತೂರ್‌ ಮೊಮ್ಮಗನ ಜೊತೆ ಬಂದಿದ್ದರು. ನೂರಾರು ಸಂಖ್ಯೆ ಯುವಕರು, ಯುವತಿಯರೂ ಮುಖದಲ್ಲಿ ಪಕ್ಷದ ಚಿಹ್ನೆಯನ್ನು ಬಣ್ಣಗಳಲ್ಲಿ ಮೂಡಿಸಿ ಗಮನ ಸೆಳೆದರು.ಮೋದಿ ತಮ್ಮ ಬಾಲ್ಯವನ್ನು ನೆನಪಿಸಿಕೊಂಡಾಗ ಆ ಮಾತುಗಳನ್ನು ಜನರು ತದೇಕಚಿತ್ತದಿಂದ ಆಲಿಸಿದರು. ಈ ವೇಳೆ ಇಡೀ ಮೈದಾನದಲ್ಲಿ ಸೂಜಿ ಬಿದ್ದರೂ ಕೇಳಿಸುವಷ್ಟು ಮೌನವಾದುದು ವಿಶೇಷವಾಗಿತ್ತು.ಭಾಷಣದ ಮಧ್ಯೆ, ‘ಸ್ವಾತಂತ್ರ್ಯಾನಂತರ ಕಾಂಗ್ರೆಸ್‌ ಪಕ್ಷವನ್ನು ವಿಸರ್ಜಿಸಬೇಕು’ ಎಂಬ ಮಹಾತ್ಮಾಗಾಂಧಿ ಅವರ ಕೊನೆಯ ಆಸೆಯನ್ನು ಈಡೇರಿಸಲು ನೀವು ಸಾಥ್‌ ನೀಡುತ್ತೀರಾ?’ ಎಂದು ಮೋದಿ ಕೇಳಿದಾಗ ಆಸೆ ಏನೆಂಬುವುದನ್ನು ಹೇಳುವ ಮೊದಲೇ ಜನರ, ‘ನಾವು ಸಿದ್ಧ’ ಎಂದು ಕೂಗಿದರು. ‘ದೇಶವನ್ನು ಕಾಂಗ್ರೆಸ್‌ ಮುಕ್ತಗೊಳಿಸಲು ಜೊತೆ ಇರುತ್ತೀರಾ?’ ಎಂದು ಕೇಳಿದಾಗಲೂ ಜನ, ‘ನಾವು ಸಿದ್ಧ’ ಎಂದು ಒಕ್ಕೊರಲಿನಿಂದ ಕೂಗಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.