ಶುಕ್ರವಾರ, ಮಾರ್ಚ್ 5, 2021
27 °C

ಮೋದಿ ವಿರುದ್ಧ ದ್ವೇಷಭಾಷಣ: ಇಮ್ರಾನ್ ಮಸೂದ್ ಸೆರೆ

ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಸಭೆ ರದ್ದು Updated:

ಅಕ್ಷರ ಗಾತ್ರ : | |

ಮೋದಿ ವಿರುದ್ಧ ದ್ವೇಷಭಾಷಣ: ಇಮ್ರಾನ್ ಮಸೂದ್ ಸೆರೆ

ಸಹರಾನ್ಪುರ (ಉತ್ತರ ಪ್ರದೇಶ): ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಅವರನ್ನು 'ದ್ವೇಷ ಭಾಷಣ'ದ ಆರೋಪದಲ್ಲಿ ಪೊಲೀಸರು ಶನಿವಾರ ನಸುಕಿನ ವೇಳೆಯಲ್ಲಿ ಬಂಧಿಸಿದರು.ನರೇಂದ್ರ ಮೋದಿ ಅವರನ್ನು 'ಕತ್ತರಿಸಿ ತುಂಡು ತುಂಡು' ಮಾಡುವುದಾಗಿ ಇಮ್ರಾನ್ ತಮ್ಮ ದ್ವೇಷಭಾಷಣದಲ್ಲಿ ಹೇಳಿದ್ದರೆನ್ನಲಾಗಿದ್ದು ಇದು ಭಾರೀ ವಿವಾದ ಹುಟ್ಟು ಹಾಕಿತ್ತು.ತಮ್ಮ ಮನೆಯಲ್ಲಿದ್ದ 40ರ ಹರೆಯದ ಮಸೂದ್ ಅವರನ್ನು ಶನಿವಾರ ನಸುಕಿನ ವೇಳೆಯಲ್ಲಿ ಪೊಲೀಸರು ಬಂಧಿಸಿದರು. ಈ ಸಂದರ್ಭದಲ್ಲಿ ಮಸೂದ್ ತಮ್ಮದೇನೂ ತಪ್ಪಿಲ್ಲ ಎಂದು ಹೇಳಿದರು.'ಇದೆಲ್ಲಾ ಬಿಜೆಪಿಯ ಫಿತೂರಿ. ನಾನು ಯಾವುದೇ ತಪ್ಪು ಮಾಡಿಲ್ಲ, ಆದ್ದರಿಂದ ಪಶ್ಚಾತ್ತಾಪ ಪಡುವಂತಹ ಪ್ರಮೇಯವೇನೂ ಇಲ್ಲ. ನರೇಂದ್ರ ಮೋದಿ ಅಥವಾ ಬಿಜೆಪಿ ಬಳಿ ನಾನು ಕ್ಷಮೆ ಯಾಚಿಸುವುದಿಲ್ಲ' ಎಂದು ಶುಕ್ರವಾರ ತಮ್ಮ ಹೇಳಿಕೆಗಾಗಿ ವಿಷಾದ ಸೂಚಿಸಿದ್ದ ಮಸೂದ್ ಪತ್ರಕರ್ತರಿಗೆ ತಿಳಿಸಿದರು.ಮಸೂದ್ ಅವರನ್ನು ದೇವಬಂದ್ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದರು.ಸಹರಾನ್ಪುರ ಕ್ಷೇತ್ರದ ಚುನಾವಣಾ ಸಭೆಯೊಂದರಲ್ಲಿ ಮಸೂದ್ ಮಾತನಾಡುತ್ತಾ ಮಸೂದ್ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮೇಲೆ ದಾಳಿ ನಡೆಸಿದ್ದನ್ನು ತೋರಿಸುವ ವಿಡಿಯೋ ಒಂದು ಅಂತರ್ಜಾಲದಲ್ಲಿ ಹರಿದಾಡಿತ್ತು.'ಮಸೂದ್ ಅವರ ಭಾಷಣದ ವಿಡಿಯೋ ದಾಖಲೆ ನಮಗೆ ಲಭಿಸಿದೆ. ಅದನ್ನು ಆಧರಿಸಿ ದೇವಬಂದ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ' ಎಂದು ಸಹರಾನ್ಪುರ ಎಸ್ ಎಸ್ ಪಿ ಮನೋಜ್ ಕುಮಾರ್ ಹೇಳಿದರು.ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 ಎ (ಧಾರ್ಮಿಕ ಭಾವನೆ ಕೆರಳಿಸಲು ಬೇರೆ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು, ವರ್ಗಗಳನ್ನು ಅವಮಾನಿಸುವ  ಉದ್ದೇಶಪೂರ್ವಕ ಕೃತ್ಯ ಎಸಗುವುದು), ಸೆಕ್ಷನ್ 504 (ಶಾಂತಿ ಭಂಗಕ್ಕೆ ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಅಪಮಾನ ಎಸಗುವುದು) ಸೆಕ್ಷನ್ 506 ಹಾಗೂ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 125, ಎಸ್ ಸಿ/ ಎಸ್ ಟಿ ಕಾಯ್ದೆಯ ಸೆಕ್ಷನ್ 310ರ ಅಡಿಯಲ್ಲಿ ಮಸೂದ್ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ನುಡಿದರು.ಈ ಮಧ್ಯೆ ರಾಹುಲ್ ಗಾಂಧಿ ಅವರು ಸಹರಾನ್ಪುರದ ತಮ್ಮ ಚುನಾವಣಾ ಪ್ರಚಾರ ಸಭೆಯನ್ನು ವಿವಾದದ ಹಿನ್ನೆಲೆಯಲ್ಲಿ ರದ್ದು ಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.