ಮೋದಿ ವಿರುದ್ಧ ಪಟೇಲರ ಮುನಿಸು

7

ಮೋದಿ ವಿರುದ್ಧ ಪಟೇಲರ ಮುನಿಸು

Published:
Updated:

ಸೂರತ್: ಜವಳಿ ಮತ್ತು ವಜ್ರದ ನಗರ ಸೂರತ್ ಹಲವು ರೋಚಕ ಕಥೆಗಳನ್ನು ಒಡಲಲ್ಲಿ ಇಟ್ಟುಕೊಂಡಿದೆ. ವಜ್ರ ವ್ಯಾಪಾರ ಕೇಂದ್ರವಾದ ನಗರಕ್ಕೆ ಹೊಟ್ಟೆ ಪಾಡಿಗೆ ಕೂಲಿಗೆ ಬಂದವರು 4 ದಶಕದಲ್ಲಿ ಅರಮನೆಗಳನ್ನು ಕಟ್ಟಿದ್ದಾರೆ. ಎತ್ತಿನ ಗಾಡಿ ಕೊಳ್ಳಲಾಗದೆ ಪರದಾಡಿದವರು ಹೆಲಿಕಾಪ್ಟರ್ ಮತ್ತು ವಿಮಾನ ಖರೀದಿಸುವಷ್ಟು ಹಣ ಮಾಡಿದ್ದಾರೆ. `ವಜ್ರ ವ್ಯಾಪಾರ'ದಲ್ಲಿ ವಿಶ್ವದಲ್ಲೇ ಶಾಶ್ವತ ಸ್ಥಾನ ಪಡೆದಿರುವ ಸೂರತ್ ಗುಜರಾತಿನ ಆರ್ಥಿಕ ರಾಜಧಾನಿ.ವಲಭ್ ಸವಾನಿ, ಗೋವಿಂದ್ ಭಾಯ್ ದೌಲಕಿಯ, ವಸಂತ್ ಭಾಯ್ ಗಜೇರ, ಗೋವಿಂದ ಭಾಯ್ ಅವರಂಥ ಬೆರಳೆಣಿಕೆ ಉದ್ಯಮಿಗಳು ವಜ್ರ ವ್ಯಾಪಾರ ನಿಯಂತ್ರಿಸುತ್ತಿದ್ದಾರೆ. ಪ್ರತಿಯೊಂದು ವಜ್ರದ ಕಂಪೆನಿಯಲ್ಲಿ ಕನಿಷ್ಠ ನಾಲ್ಕೈದು ಸಾವಿರ ಕಾರ್ಮಿಕರು ದುಡಿಯುತ್ತಿದ್ದಾರೆ. ಇಂಥ ನೂರಾರು ಕಂಪೆನಿಗಳು ಸೂರತ್‌ನಲ್ಲಿವೆ. 10ರಿಂದ 12 ಲಕ್ಷ ಜನ ಕಾರ್ಮಿಕರು ವಜ್ರದ ಉದ್ದಿಮೆ ಅವಲಂಬಿಸಿದ್ದಾರೆ. ಸೂರತ್ ಜವಳಿ ಉದ್ದಿಮೆಯಲ್ಲೂ ಏಷ್ಯಾದಲ್ಲೇ ಎರಡನೇ ಸ್ಥಾನದಲ್ಲಿದೆ.ನಾಲ್ಕು ವರ್ಷಗಳ ಹಿಂದೆ ಜಗತ್ತು ಆರ್ಥಿಕ ಹಿಂಜರಿಕೆಯಿಂದ ತತ್ತರಿಸಿದಾಗ ವಜ್ರ ವ್ಯಾಪಾರಕ್ಕೂ ಏಟು ಬಿದ್ದಿದೆ. ಅನೇಕರು ಮನೆ, ಮಠ ಮಾರಿಕೊಂಡು ಬೀದಿ ಪಾಲಾಗಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವರು ಬೇರೆ ವ್ಯಾಪಾರಗಳಿಗೆ ಹೋಗಿದ್ದಾರೆ ಎಂದು ಪ್ರಕಾಶ್ ದುಬೆ ಅಭಿಪ್ರಾಯಪಡುತ್ತಾರೆ.ಗುರುವಾರದ ಚುನಾವಣೆಗೆ ಸೂರತ್ ಸಿದ್ಧವಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜಿಪಿಪಿ ಅಭ್ಯರ್ಥಿಗಳು ಅಬ್ಬರದ ಪ್ರಚಾರ ಮುಗಿಸಿದ್ದಾರೆ. ಆರು ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ನಗರ ಸುಮಾರು 45 ಲಕ್ಷ ಜನರಿಗೆ `ಆಸರೆ' ನೀಡಿದೆ. ಆಗಾಗ್ಗೆ ಬರಗಾಲಕ್ಕೆ ಸಿಕ್ಕಿ ತತ್ತರಿಸಿದ ಬಳಿಕ ಬದುಕು ಕಟ್ಟಿಕೊಳ್ಳಲು ವಲಸೆ ಬಂದ ಸೌರಾಷ್ಟ್ರದ `ಲೇವಾ ಪಟೇಲರು' ನಗರವನ್ನು ಸಂಪೂರ್ಣ ವಶ ಮಾಡಿಕೊಂಡಿದ್ದಾರೆ.ಸೂರತ್ ವಜ್ರದ ವ್ಯಾಪಾರ ಯಾರ ನೆರವೂ ಇಲ್ಲದೆ ಸ್ವಂತವಾಗಿ ಬೆಳೆದಿದೆ. ಸರ್ಕಾರವೇ ನಮ್ಮಿಂದ ಅನುಕೂಲ ಪಡೆದುಕೊಳ್ಳುತ್ತಿದೆ ವಿನಾ ನಮಗೆ ಏನೂ ಮಾಡಿಲ್ಲ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೇಕೆಂಬ ಹಲವು ವರ್ಷಗಳ ಬೇಡಿಕೆ ಈಡೇರಿಲ್ಲ. ನರೇಂದ್ರ ಮೋದಿ ದೆಹಲಿ ಕಡೆ ಬೆಟ್ಟು ತೋರಿಸುತ್ತಾರೆ. ಎಂಟು ವರ್ಷಗಳ ಹಿಂದೆ `ಜ್ಯೂಯೆಲರಿ ಪಾರ್ಕ್' ಸ್ಥಾಪಿಸುವ ಭರವಸೆಯನ್ನು ಸರ್ಕಾರ ಕೊಟ್ಟಿದೆ. ಇದುವರೆಗೂ ಏನು ಆಗಿಲ್ಲ ಎಂದು ಧೀರೂಭಾಯ್ ಘೇವರಿಯ ಆರೋಪಿಸುತ್ತಾರೆ.ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದರೆ ಸೂರತ್ ಚಿತ್ರಣವೇ ಬದಲಾಗುತಿತ್ತು ಎಂದು ಅವರು ಹೇಳುತ್ತಾರೆ.

`ನಾವು ವಜ್ರದ ಕೆಲಸಗಾರರಿಗೆ ಮನೆ ಕಟ್ಟಿಕೊಡಲು ಸಿದ್ಧರಿದ್ದೇವೆ. ಅಗತ್ಯವಿರುವ ಜಮೀನು ಕೊಡುವಂತೆ ಮೋದಿ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿ ಹಗಲಲ್ಲೇ ಆಕಾಶದಲ್ಲಿ ತಾರೆಗಳನ್ನು ತೋರಬಲ್ಲ ಚತುರ' ಎಂದು ಕಾಕಡಿಯ ಸೂಕ್ಷ್ಮವಾಗಿ ಟೀಕಿಸುತ್ತಾರೆ. ಸೂರತ್ ಅಭಿವೃದ್ಧಿ ಆಗಿದ್ದರೆ ಕೇಂದ್ರ ಸರ್ಕಾರದ ಯೋಜನೆಯಿಂದ. ರಾಜ್ಯ ಸರ್ಕಾರ ಹತ್ತು ವರ್ಷಗಳಿಂದ ಬಹಳಷ್ಟು ಹೇಳಿದೆ. ಆದರೆ, ಮಾಡಿರುವುದು ಮಾತ್ರ ಕಡಿಮೆ..ಲೇವಾ ಪಟೇಲರು ರಾಜಕಾರಣಿಗಳಿಗೆ ಬೆಂಬಲವಾಗಿದ್ದಾರೆ. ಕಾಂಗ್ರೆಸ್, ಬಿಜೆಪಿಗೆ ಆರ್ಥಿಕ ಚೇತನವಾಗಿದ್ದಾರೆ. ತಮ್ಮ ಸಮುದಾಯದ ಮುಖಂಡ ಕೇಶುಭಾಯ್ ಅವರ `ಗುಜರಾತ್ ಪರಿವರ್ತನಾ ಪಕ್ಷ'ಕ್ಕೆ ತರೆಮರೆಯಲ್ಲಿ ಉಳಿದವರಿಗಿಂತ ಹೆಚ್ಚು ಬೆಂಬಲ ಕೊಡಬಹುದು. ಬಹಿರಂಗವಾಗಿ ಬೆಂಬಲ ಕೊಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಮೋದಿ ಕಂಡರೆ ವಜ್ರದ ಉದ್ಯಮಿಗಳಿಗೆ ಭಯ ಎಂದು ಡಾಕೇಚ ವಿಶ್ಲೇಷಣೆ ಮಾಡುತ್ತಾರೆ.ಸೂರತ್ ಚುನಾವಣೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂದು ಊಹಿಸುವುದು ಕಷ್ಟ ಎಂಬ ನಟವರ್ ಭಾಯ್ ಮಾತು ಸೂರತ್ ಮತದಾರನ ಮನಸಿಗೆ ಹಿಡಿದ ಕನ್ನಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry