ಗುರುವಾರ , ಜೂನ್ 24, 2021
29 °C

ಮೋದಿ ವಿರುದ್ಧ ಶಾರೂಖ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದಿಂದ ಸ್ಪರ್ಧಿಸಲು ನಿರ್ಧರಿಸಿದರೆ ಅವರ ವಿರುದ್ಧ ತಾರೆಯೊಬ್ಬರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಚಿಂತಿಸುತ್ತಿದೆ.‘ಎಲ್ಲಿಂದ ಸ್ಪರ್ಧಿಸುವುದು ಎಂಬುದನ್ನು ಮೋದಿ ಮೊದಲು ನಿರ್ಧರಿಸಲಿ. ನಮ್ಮಿಂದ ಅವರಿಗೊಂದು ಅಚ್ಚರಿ ಕಾದಿದೆ. ಉತ್ತರ ಪ್ರದೇಶದ ವಾರಾಣಸಿ, ಲಖನೌ ಅಥವಾ ಇನ್ನಾವುದೇ ಕ್ಷೇತ್ರದಿಂದ ಸ್ಪರ್ಧಿಸಲಿ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. 1984ರ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎಚ್‌.ಎನ್‌. ಬಹುಗುಣ ವಿರುದ್ಧ ಬಾಲಿವುಡ್‌ ತಾರೆ ಅಮಿತಾಭ್‌ ಬಚ್ಚನ್‌ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು.ಚಲಾವಣೆಯಾದ ಮತಗಳಲ್ಲಿ ಶೇ 68 ಬಚ್ಚನ್‌ ಅವರಿಗೆ ಬಿದ್ದಿತ್ತು.  ಮೋದಿ ಅವರ ವಿರುದ್ಧ ಸಿನಿಮಾ ತಾರೆ ಶಾರೂಖ್‌ ಖಾನ್‌ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಚಿಂತಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಕಾಂಗ್ರೆಸ್‌ ಮುಖಂಡರು ನಿರಾಕರಿಸಿದ್ದಾರೆ.‘ನಮ್ಮಲ್ಲಿ ಒಬ್ಬರು ಅಭ್ಯರ್ಥಿ ಇದ್ದಾರೆ. ಆತ ಅಥವಾ ಆಕೆ ರಾಜಕೀಯ ವ್ಯಕ್ತಿ ಅಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮೋದಿ ಅವರು ಗುಜರಾತ್‌ನ ಹೊರಗೆ ಜಯ ಗಳಿಸುವ ವಿಶ್ವಾಸ ಹೊಂದಿಲ್ಲ. ಅದಕ್ಕಾಗಿ ಅವರು ಉತ್ತರ ಪ್ರದೇಶದಲ್ಲಿ ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಗುಜರಾತ್‌ನ ಯಾವ ಕ್ಷೇತ್ರದಿಂದ ಮೋದಿ ಸ್ಪರ್ಧಿಸಬಹುದು ಎಂಬ ಬಗ್ಗೆಯೂ ಊಹಾಪೋಹಗಳಿವೆ. ವಡೋದರ, ಅಹಮದಾಬಾದ್‌ ಪೂರ್ವ ಮತ್ತು ಸೂರತ್‌ ಕ್ಷೇತ್ರಗಳ ಬಗ್ಗೆ ಚಿಂತನೆ ನಡೆದಿದೆ.ಗುಜರಾತ್‌ನ ಹೊರಗೆ ಮೋದಿ ಅವರು ಸ್ಪರ್ಧೆಗಿಳಿದರೆ ಅವರ ವಿರುದ್ಧ ಸ್ಪರ್ಧಿಸುವುದಾಗಿ ಆಮ್‌ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್‌ ಈಗಾಗಲೇ ಘೋಷಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.