ಭಾನುವಾರ, ಆಗಸ್ಟ್ 9, 2020
21 °C
ಇಶ್ರತ್ ಜೆಹಾನ್ ನಕಲಿ ಎನ್‌ಕೌಂಟರ್‌ನ ಸಿಬಿಐ ಸಾಕ್ಷ್ಯ ಸಂಗ್ರಹ

ಮೋದಿ ಸರ್ಕಾರಕ್ಕೆ ಇಕ್ಕಟ್ಟು ಸಂಭವ

ಪ್ರಜಾವಾಣಿ ವಾರ್ತೆ / ಸ್ವಾತಿ ಭಾನ್ Updated:

ಅಕ್ಷರ ಗಾತ್ರ : | |

ಮೋದಿ ಸರ್ಕಾರಕ್ಕೆ ಇಕ್ಕಟ್ಟು ಸಂಭವ

ಅಹಮದಾಬಾದ್: ಇಶ್ರತ್ ಜೆಹಾನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಸಿಬಿಐ ಈವರೆಗೆ ಯಾವುದೇ ರಾಜಕೀಯ ನಾಯಕರು ಅಥವಾ ಗುಪ್ತಚರ ದಳದ ಅಧಿಕಾರಿಗಳನ್ನು ದೋಷಾರೋಪಿಗಳನ್ನಾಗಿ ಮಾಡಿಲ್ಲದಿರಬಹುದು. ಆದರೆ, ತನಿಖಾ ಸಂಸ್ಥೆ ಸಲ್ಲಿಸಿರುವ 1500 ಪುಟಗಳ ದೋಷಾರೋಪಗಳ ದಾಖಲೆಯು ಗುಜರಾತ್‌ನಲ್ಲಿನ ಆಡಳಿತಾರೂಢ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವಷ್ಟು ಶಕ್ತವಾಗಿದೆ.ನ್ಯಾಯಾಲಯವೊಂದಕ್ಕೆ ಸಿಬಿಐ ಸಲ್ಲಿಸಿರುವ ದಾಖಲೆಗಳಲ್ಲಿ ಪ್ರಮುಖ ಸಾಕ್ಷಿಯಾಗಿರುವ ಗುಜರಾತ್ ಪೊಲೀಸ್ ಅಧಿಕಾರಿಯೊಬ್ಬರ ತಪ್ಪೊಪ್ಪಿಗೆ ಹೇಳಿಕೆ ಸೇರಿದಂತೆ ಕೆಲವು ಸಂಗತಿಗಳು, ರಾಜ್ಯದ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಮಾಜಿ ಗೃಹ ಸಚಿವ ಅಮಿತ್ ಷಾ ಅವರಿಗೆ ಈ ನಕಲಿ ಎನ್‌ಕೌಂಟರ್‌ನ `ತಿಳಿವಳಿಕೆ' ಇತ್ತು ಎಂಬುದನ್ನು ದೃಢಪಡಿಸುತ್ತದೆ.ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿ ತನಿಖಾ ಸಂಸ್ಥೆ ಇನ್ನೂ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕಿದ್ದರೂ, ನಿವೃತ್ತ ಡಿವೈಎಸ್‌ಪಿ ಮತ್ತು ಎನ್‌ಕೌಂಟರ್ ಸಂದರ್ಭದಲ್ಲಿ ಅಪರಾಧ ವಿಭಾಗದ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ಡಿ.ಎಚ್. ಗೋಸ್ವಾಮಿ ಅವರು ನೀಡಿರುವ 10 ಪುಟಗಳ ಹೇಳಿಕೆಯು ರಾಜಕೀಯ ಸಂಚು ನಡೆದಿರುವುದಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತದೆ.ತಪ್ಪೊಪ್ಪಿಗೆ ಹೇಳಿಕೆ: ಮುಂಬೈನ ಮ್ಯಾಜಿಸ್ಟ್ರೇಟ್‌ರೊಬ್ಬರ ಮುಂದೆ ಸಿಆರ್‌ಪಿಸಿ ಸೆಕ್ಷನ್ 164ರಡಿ ಗೋಸ್ವಾಮಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಇದರಲ್ಲಿ ಅವರು ಅಪರಾಧ ವಿಭಾಗದ ಕೆಲವು ಪೊಲೀಸ್ ಅಧಿಕಾರಿಗಳ ವಿರುದ್ಧ ಹೇಳಿಕೆ ನೀಡಿರುವುದರ ಜತೆಗೆ, ದೊಡ್ಡ ಸಂಚು ನಡೆದಿದ್ದ ಸುಳಿವನ್ನೂ ನೀಡಿದ್ದಾರೆ. ರಾಜಕಾರಣಿಗಳಿಂದ ಅಧಿಕಾರಿಗಳಿಗೆ `ಮುಂದೆ ಸಾಗಿ' ಎಂಬ ಸೂಚನೆ ಬಂದಿತ್ತು ಎಂದೂ ಹೇಳಿದ್ದಾರೆ ಎನ್ನಲಾಗಿದೆ.ಸಿಬಿಐ ಮೂಲಗಳ ಪ್ರಕಾರ, ಎನ್‌ಕೌಂಟರ್‌ಗೂ ಎರಡು ದಿನ ಮುಂಚೆ ಅಪರಾಧ ವಿಭಾಗದ ಪೊಲೀಸ್ ಕಚೇರಿಯಲ್ಲಿ ರಾತ್ರಿ ನಡೆದ ಸಭೆಗೆ ಐಪಿಎಸ್ ಅಧಿಕಾರಿ ಜಿ.ಎಲ್. ಸಿಂಘಾಲ್ ಅವರೊಂದಿಗೆ ತಾವೂ ಹೋಗಿದ್ದಾಗಿ ಸಿಬಿಐಗೆ ಗೋಸ್ವಾಮಿ ತಿಳಿಸಿದ್ದಾರೆ.ಐಪಿಎಸ್ ಅಧಿಕಾರಿ ಡಿ.ಜಿ. ವಂಜಾರಾ, ಅವರ ಉನ್ನತಾಧಿಕಾರಿ ಪಿ.ಪಿ. ಪಾಂಡೆ ಹಾಗೂ ರಾಜ್ಯ ಗುಪ್ತಚರ ದಳದ ಅಧಿಕಾರಿ ರಾಜೀಂದರ್ ಕುಮಾರ್ ಅವರು ನಕಲಿ ಎನ್‌ಕೌಂಟರ್‌ಗೆ ಅಂತಿಮ ಸ್ವರೂಪ ನೀಡಿದ್ದಾಗಿ ಸಿಬಿಐಗೆ ಗೋಸ್ವಾಮಿ ಹೇಳಿರುವುದಾಗಿ ಮೂಲಗಳು ಹೇಳಿವೆ.ನಕಲಿ ಎನ್‌ಕೌಂಟರ್ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ವಂಜಾರಾ ಚರ್ಚಿಸಿದ್ದರು. ಈ ವಿಷಯವನ್ನು `ಬಿಳಿ ಮತ್ತು ಕಪ್ಪುಗಡ್ಡಧಾರಿ'ಗಳೊಡನೆ (ಮೋದಿ ಮತ್ತು ಷಾ) ಮಾತನಾಡಿರುವುದಾಗಿ ವಂಜಾರಾ ಹೇಳಿದ್ದನ್ನು ತಾನು ಕೇಳಿಸಿಕೊಂಡಿದ್ದಾಗಿ ಗೋಸ್ವಾಮಿ ತಪ್ಪೊಪ್ಪಿಗೆಯಲ್ಲಿ ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.ಹೆಚ್ಚುವರಿ ದೋಷಾರೋಪ ಪಟ್ಟಿ: ಸಿಬಿಐ ಈ ತಪ್ಪೊಪ್ಪಿಗೆ ಹೇಳಿಕೆ ಪಡೆದಿದ್ದರೂ, ದೋಷಾರೋಪ ಪಟ್ಟಿಯಲ್ಲಿ ಯಾವುದೇ ರಾಜಕೀಯ ನಾಯಕರು ಅಥವಾ ಗುಪ್ತಚರ ದಳದ ಅಧಿಕಾರಿಗಳ ಹೆಸರನ್ನು ಪ್ರಸ್ತಾಪಿಸಿಲ್ಲ. ಇದನ್ನು ಪುಷ್ಟೀಕರಿಸಲು ಇನ್ನಷ್ಟು ದಾಖಲೆಗಳನ್ನು ಸಂಗ್ರಹಿಸುವ ಅವಶ್ಯಕತೆ ಇರುವುದಾಗಿ ತನಿಖಾ ಸಂಸ್ಥೆ ಹೇಳಿದೆ. ಸಿಬಿಐ ಮುಂದಿನ ತಿಂಗಳು ಹೆಚ್ಚುವರಿ ದೋಷಾರೋಪಪಟ್ಟಿ ಸಲ್ಲಿಸುವ ನಿರೀಕ್ಷೆಯಿದ್ದು, ಇದರಲ್ಲಿ ಈ ಸಂಚನ್ನು ಪ್ರಸ್ತಾಪಿಸಬಹುದು ಎಂದೂ ಮೂಲಗಳು ನುಡಿದಿವೆ.2004ರ ಜೂನ್ 13ರ ಸಂಜೆ ವಂಜಾರಾ, ಪಾಂಡೆ ಹಾಗೂ ರಾಜೀಂದರ್ ಕುಮಾರ್ ಅವರು ಒಂದೆಡೆ ಸಭೆ ಸೇರಿ ಸಂಚು ರೂಪಿಸಿದ್ದರು. ಅಕ್ರಮ ಬಂಧನದಲ್ಲಿಟ್ಟಿದ್ದ ಜೈಶನ್ ಜೋಹರ್, ಅಮ್ಜದಾಲಿ, ಜಾವೇದ್ ಹಾಗೂ ಇಶ್ರತ್ ಅವರನ್ನು ಮುಗಿಸಲು ಮತ್ತು ಎನ್‌ಕೌಂಟರ್‌ನಲ್ಲಿ ಇವರೆಲ್ಲರೂ ಸತ್ತಂತೆ ತೋರಿಸಿ ಎಫ್‌ಐಆರ್ ದಾಖಲಿಸಲು ಚರ್ಚಿಸಿದ್ದರು ಎಂದು ಮೂಲಗಳು ತಿಳಿಸಿವೆ.ವಂಜಾರಾ ನಿರ್ದೇಶನದಂತೆ, ಐಪಿಎಸ್ ಅಧಿಕಾರಿ ಸಿಂಘಾಲ್ ಅವರು ವಿಶೇಷ ಗುಪ್ತಚರ ದಳ (ಸಿಬ್)ದಿಂದ ಶಸ್ತಾಸ್ತ್ರಗಳನ್ನು ಸಂಗ್ರಹಿಸಿದರು ಎಂದಿರುವ ಸಿಬಿಐ, ಜೂನ್ 14ರ ಮಧ್ಯಾಹ್ನ ವಂಜಾರಾ ಸಿದ್ಧಪಡಿಸಿದ ಕರಡು ದೂರಿನಲ್ಲಿ ಕೆಲವು ಅಂಶಗಳನ್ನು (ಹೆಸರುಗಳು, ಗುಂಡೇಟು ಸುತ್ತುಗಳ ಸಂಖ್ಯೆ ಇತ್ಯಾದಿ) ಖಾಲಿಯಾಗಿ ಬಿಡಲಾಗಿತ್ತು ಎಂದು ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.