ಮೋದಿ ಸರ್ಕಾರಕ್ಕೆ ಗುಜರಾತ್ ಹೈಕೋರ್ಟ್ ಚಾಟಿ

7

ಮೋದಿ ಸರ್ಕಾರಕ್ಕೆ ಗುಜರಾತ್ ಹೈಕೋರ್ಟ್ ಚಾಟಿ

Published:
Updated:

ಅಹಮದಾಬಾದ್ (ಪಿಟಿಐ):  2002ರ ಗೋಧ್ರಾ ನಂತರದ ಗಲಭೆಯಲ್ಲಿ ಅಪಾರ ಪ್ರಮಾಣದ ಧಾರ್ಮಿಕ ಕಟ್ಟಡಗಳು ಹಾನಿಗೀಡಾದ ಸಂದರ್ಭದಲ್ಲಿ ಯಾವುದೇ ನಿಯಂತ್ರಣ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತಾಳಿದ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಗುಜರಾತ್ ಹೈಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ.ಹಂಗಾಮಿ ಮುಖ್ಯ ನ್ಯಾಯಮೂರ್ತಿ ಭಾಸ್ಕರ್ ಭಟ್ಟಾಚಾರ್ಯ ಮತ್ತು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲ ಅವರನ್ನೊಳಗೊಂಡ ವಿಭಾಗೀಯ ಪೀಠವು ಗಲಭೆಯಲ್ಲಿ ಹಾನಿಗೊಂಡ ರಾಜ್ಯದ ಸುಮಾರು 500 ಧಾರ್ಮಿಕ ಕಟ್ಟಡಗಳಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶಿಸುತ್ತಾ ಈ ಚಾಟಿ ಬೀಸಿತು.ಗುಜರಾತ್ ಇಸ್ಲಾಮಿಕ್ ಪರಿಹಾರ ಸಮಿತಿ (ಐಆರ್‌ಸಿಜಿ) ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿ ಕೊಂಡ ನ್ಯಾಯಪೀಠವು, `ಗಲಭೆಯನ್ನು ತಡೆಯಲು ರಾಜ್ಯ ಸರ್ಕಾರ ನಿರ್ಲಕ್ಷ್ಯ, ನಿಷ್ಕ್ರಿಯತೆ ಹಾಗೂ ಅಸಮರ್ಥತೆ ತೋರಿದ್ದರಿಂದಾಗಿ ಅಪಾರ ಸಂಖ್ಯೆಯಲ್ಲಿ ಧಾರ್ಮಿಕ ಕಟ್ಟಡಗಳು ನಾಶಗೊಳ್ಳಲು ಕಾರಣವಾಗಿದೆ~ ಎಂದು ಟೀಕಿಸಿತು.`ಇಂತಹ ಸ್ಥಳ ಮತ್ತು ಕಟ್ಟಡಗಳ ದುರಸ್ತಿ ಮತ್ತು ಪರಿಹಾರಕ್ಕೆ ಸರ್ಕಾರವೇ ಹೊಣೆ ಹೊತ್ತುಕೊಳ್ಳ ಬೇಕಿದೆ. ಸರ್ಕಾರವು ಹಾನಿಗೀಡಾದ ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಪರಿಹಾರ ನೀಡಿದಾಗಲೇ ಧಾರ್ಮಿಕ ಕಟ್ಟಡಗಳಿಗೂ ಪರಿಹಾರ ನೀಡಬೇಕಿತ್ತು~ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿತು.ಆಯಾ ಜಿಲ್ಲೆಗಳಲ್ಲಿ ಹಾನಿಗೊಂಡ ಧಾರ್ಮಿಕ ಕಟ್ಟಡಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ರಾಜ್ಯದ 26 ಜಿಲ್ಲೆಗಳ ಪ್ರಧಾನ ನ್ಯಾಯಾಧೀಶರು ಅರ್ಜಿಗಳನ್ನು ಸ್ವೀಕರಿಸಿ, ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಆರು ತಿಂಗಳೊಳಗೆ ತೀರ್ಮಾನ ಮಾಡಿ, ಹೈಕೋರ್ಟ್‌ಗೆ ಅದನ್ನು ಕಳುಹಿಸು ವಂತೆ ಸಂಬಂಧಿಸಿದ ನ್ಯಾಯಾಧೀಶರಿಗೆ ನ್ಯಾಯಪೀಠ ನಿರ್ದೇಶನ ನೀಡಿತು.ಅರ್ಜಿದಾರರ ಪರ ಹಾಜರಿದ್ದ ವಕೀಲ ಎಂ.ಟಿ.ಎಂ. ಹಕೀಂ, `ದೇಶದಲ್ಲೇ ಮೊದಲ ಬಾರಿಗೆ ಧಾರ್ಮಿಕ ಕಟ್ಟಡಗಳಿಗೆ ಪರಿಹಾರ ನೀಡಲು ಆದೇಶಿಸುವ ಮೂಲಕ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ~ ಎಂದರಲ್ಲದೆ, `ರಾಜ್ಯ ಸರ್ಕಾರ ತನ್ನ ಹೊಣೆಗಾರಿಕೆ ಮರೆತು ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯ ತೋರಿದ್ದರ ವಿರುದ್ಧ ಹೊರಬಿದ್ದಿರುವ ಪ್ರಥಮ ತೀರ್ಪು ಇದು~ ಎಂದೂ ಪ್ರತಿಕ್ರಿಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry