ಮೋದಿ ಸುಳ್ಳುಗಾರ, ನಾನವರ ಸ್ನೇಹ ಮಾಡಿಲ್ಲ

ನವದೆಹಲಿ (ಪಿಟಿಐ): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ತಮ್ಮ ಆಪ್ತ ಗೆಳೆಯ ಎಂಬ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಹ್ಮದ್ ಪಟೇಲ್, ‘ಅವರೊಬ್ಬ ಸುಳ್ಳುಗಾರ, ನಾನೆಂದೂ ಅವರ ಸ್ನೇಹ ಮಾಡಿಲ್ಲ’ ಎಂದಿದ್ದಾರೆ.
‘ಅವರ ಹೇಳಿಕೆ ಹಾಸ್ಯಾಸ್ಪದ, ನಿರಾಧಾರ ಮತ್ತು ಸಂಪೂರ್ಣ ಸುಳ್ಳು. ಇದು ಚುನಾವಣೆ ಸಂದರ್ಭದಲ್ಲಿ ಜನರಲ್ಲಿ ಗೊಂದಲ ಹುಟ್ಟುಹಾಕುವ ರಾಜಕೀಯ ತಂತ್ರ. ಒಂದು ವೇಳೆ ಗುಜರಾತ್ ಮುಖ್ಯಮಂತ್ರಿ ಅವರಿಂದ ನಾನೇನಾದರೂ ಉಪಕಾರ ಪಡೆದಿರುವುದಕ್ಕೆ ಪುರಾವೆ ನೀಡಿದರೆ ರಾಜಕೀಯವನ್ನೇ ತೊರೆಯುವೆ’ ಎಂದು ಅಹ್ಮದ್ ಸವಾಲು ಹಾಕಿದ್ದಾರೆ.
‘ತಮ್ಮ ಪಕ್ಷದವರ ಜೊತೆಗೇ ಸ್ನೇಹ ಮಾಡಿಕೊಳ್ಳಲು ಸಾಧ್ಯವಾಗದವರು ಹೇಗೆ ತಾನೆ ನನ್ನೊಂದಿಗೆ ಗೆಳೆತನ ಬೆಳೆಸಿಯಾರು? ಗುಜರಾತ್ ಮುಖ್ಯಮಂತ್ರಿ ಅವರನ್ನು ಅವರ ಕಚೇರಿಯಲ್ಲಾಗಲಿ, ಮನೆಯಲ್ಲಾಗಲಿ, ಯಾವತ್ತೂ ಭೇಟಿ ಮಾಡಿಲ್ಲ ಮತ್ತು ಅವರಿಂದ ಯಾವುದೇ ನೆರವು ಪಡೆದಿಲ್ಲ. ಹಾಗೆಯೇ ಅವರು ನಾನಿದ್ದ ಸ್ಥಳಕ್ಕೆ ಬಂದಲ್ಲ ಮತ್ತು ನಾವಿಬ್ಬರು ಒಟ್ಟಿಗೆ ಭೋಜನ ಮಾಡಿಲ್ಲ. ಗುಜರಾತ್ನಲ್ಲಿ 2002ರಲ್ಲಿ ನಡೆದ ಕೋಮು ಗಲಭೆಗೆ ಮೊದಲು ಅಥವಾ ನಂತರದಲ್ಲಿ ನಾನು ಅವರನ್ನು ಮುಖಾಮುಖಿ ಭೇಟಿಯಾಗಿಲ್ಲ’ ಎಂದು ಶುಕ್ರವಾರ ಅಹ್ಮದ್ ಸ್ಪಷ್ಟಪಡಿಸಿದರು.
ಹಿನ್ನೆಲೆ: ದೂರದರ್ಶನದಲ್ಲಿ ಪ್ರಸಾರವಾದ ಸಂದರ್ಶನದಲ್ಲಿ ಮೋದಿ, ‘ಕಾಂಗ್ರೆಸ್ನಲ್ಲಿರುವ ನನ್ನ ಆತ್ಮೀಯ ಗೆಳೆಯರ ಪೈಕಿ ಅಹ್ಮದ್ ಭಾಯ್ ಕೂಡ ಒಬ್ಬರು. ಇತ್ತೀಚಿನ ದಿನಗಳಲ್ಲಿ ಅವರಿಗೆ ಅದೇನು ಕಷ್ಟವಿದೆಯೋ ಗೊತ್ತಿಲ್ಲ. ನನ್ನಿಂದ ದೂರ ಇದ್ದಾರೆ. ದೂರವಾಣಿ ಕರೆಯನ್ನೂ ಸ್ವೀಕರಿಸುವುದಿಲ್ಲ. ಆದರೆ, ಮೊದಲು ಅವರು ಈ ರೀತಿ ಇರಲಿಲ್ಲ’ ಎಂದಿದ್ದರು.
‘ಅವರ ಮನೆಗೆ ಹೋಗುತ್ತಿದ್ದೆ. ಒಟ್ಟಿಗೆ ಊಟ ಮಾಡುತ್ತಿದ್ದವು. ನಾವಿಬ್ಬರೂ ಒಳ್ಳೆಯ ಸ್ನೇಹಿತರು. ‘ನಾವು ಗೆಳೆಯರು ಅವರನ್ನು ಬಾಬು ಭಾಯ್ ಎಂದೇ ಕರೆಯುತ್ತಿದ್ದೆವು. ಇದು ಹೊರಗಿನವರಿಗೆ ಗೊತ್ತಿಲ್ಲ. ಈಗ ಅವರನ್ನು ‘ಮಿಯಾ ಸಾಹೇಬ್’ ಎಂದೇ ಗೌರವದಿಂದ ಕರೆಯುತ್ತೇನೆ’ ಎಂದು ಮೋದಿ ಅವರು ಅಹ್ಮದ್ ಅವರನ್ನು ‘ಮಿಯಾ ಭಾಯ್’ ಎಂದೇಕೆ ಕರೆಯುವುದೆಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದರು.
‘ಮೋದಿ ಬಹುಸಂಸ್ಕೃತಿ ಪ್ರತಿನಿಧಿಸುವುದಿಲ್ಲ’
ವಾರಾಣಸಿ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಬಹು ಸಂಸ್ಕೃತಿಯನ್ನು ಅಭಿವ್ಯಕ್ತಿಸುವುದಿಲ್ಲ. ಶತಶತಮಾನಗಳಿಂದ ವಾರಾಣಸಿಯಲ್ಲಿ ಒಟ್ಟಿಗೆ ಬದುಕುತ್ತಿರುವ ಹಿಂದೂ–ಮುಸ್ಲಿಮರಲ್ಲಿನ ಸಾಮರಸ್ಯವನ್ನು ಅವರ ಉಮೇದುವಾರಿಕೆ ಹಾಳು ಮಾಡುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನು ಇಲ್ಲಿನ ಪ್ರಖ್ಯಾತ ಕಬೀರ್ ಮಠ ನೀಡಿದೆ.
ಮೋದಿ ಅವರು ವಾರಾಣಸಿಯನ್ನು ಹಿಂದೂಗಳ ಧಾರ್ಮಿಕ ಕೇಂದ್ರ ಎನ್ನುವಂತೆ ಬಿಂಬಿಸುತ್ತಿರುವುದನ್ನು ಕಬೀರ್ ಮಠದ ಮುಖ್ಯಸ್ಥ ಸಂತ ವಿವೇಕ ದಾಸ್ ಆಚಾರ್ಯ ತೀವ್ರವಾಗಿ ಟೀಕಿಸಿದ್ದಾರೆ. ಈಗ ನಡೆಯುತ್ತಿರುವ ರಾಜಕೀಯ ಮೇಲಾಟಗಳು ಈ ನಗರದ ‘ಅನನ್ಯತೆಯ ಜೀವಾಳ’ದ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಹೇಳಿದರು. ‘ಅವರು (ಮೋದಿ) ಇಲ್ಲಿಂದ ಸ್ಪರ್ಧಿಸಿರುವುದು ವಾರಾಣಸಿ ಪುರಜನರ ದುರದೃಷ್ಟ. ಒಡಕು ಉಂಟು ಮಾಡುವ ಅವರು, ಈ ನಗರದ ಬಹು ಸಂಸ್ಕೃತಿಯನ್ನು ಪ್ರತಿನಿಧಿಸಲಾರರು’ ಎಂದು ಸುದ್ದಿಸಂಸ್ಥೆಗೆ ತಿಳಿಸಿದರು.
‘ವಾರಾಣಸಿ ಹಲವು ಧರ್ಮ, ಸಂಪ್ರದಾಯ ಮತ್ತು ಸಿದ್ಧಾಂತಗಳ ನೆಲೆವೀಡು. ಕಬೀರ್ದಾಸರು ಈ ನಗರವನ್ನು ದೇಶದ ನಾಗರಿಕತೆ ಕೇಂದ್ರವನ್ನಾಗಿ ಮಾಡಿದರು. 2,500 ವರ್ಷಗಳ ಹಿಂದೆ ಬುದ್ಧ ಇಲ್ಲಿಗೆ ಭೇಟಿ ನೀಡಿದ್ದ. ಈ ನಗರ ಜೈನರಿಗೂ ಶ್ರದ್ಧಾಕೇಂದ್ರ. ಇಂತಹ ಬಹು ಸಂಸ್ಕೃತಿಯ ಸ್ಥಳವನ್ನು ‘ಹಿಂದೂ ಧರ್ಮದ ನರನಾಡಿ’ ಎನ್ನುವ ಮೂಲಕ ಮೋದಿ ಮತ್ತು ಬಿಜೆಪಿಯವರು ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾಗಿದ್ದಾರೆ’ ಎಂದು ದೂರಿದರು.
ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಮೇ 12ರಂದು ನಡೆಯುವ ಅಂತಿಮ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿದೆ. ಇಲ್ಲಿ ಬಿಜೆಪಿಯ ನರೇಂದ್ರ ಮೋದಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ನ ಅಜಯ್ ರಾಯ್ ಪ್ರಮುಖ ಅಭ್ಯರ್ಥಿಗಳು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.