ಮೋದಿ ಹೊಗಳಿಕೆ: ಈಗ ಅಡ್ವಾಣಿ ಸರದಿ

7

ಮೋದಿ ಹೊಗಳಿಕೆ: ಈಗ ಅಡ್ವಾಣಿ ಸರದಿ

Published:
Updated:
ಮೋದಿ ಹೊಗಳಿಕೆ: ಈಗ ಅಡ್ವಾಣಿ ಸರದಿ

ಅಹಮದಾಬಾದ್ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ `ಪ್ರಧಾನಿ ಹುದ್ದೆ'ಗೆ ಸೂಕ್ತ ಅಭ್ಯರ್ಥಿ ಎಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್, ಗೋಪಿನಾಥ್ ಮುಂಡೆ ಹಾಗೂ ಅರುಣ್ ಜೇಟ್ಲಿ ಹೊಗಳಿದ ಬೆನ್ನಲ್ಲೇ ಪಕ್ಷದ ಮತ್ತೊಬ್ಬ ಹಿರಿಯ ಧುರೀಣ ಎಲ್.ಕೆ. ಅಡ್ವಾಣಿ ಕೂಡಾ ಮೋದಿ ಶ್ಲಾಘನೆಯಲ್ಲಿ ಹಿಂದೆ ಬಿದ್ದಿಲ್ಲ.

ಗಾಂಧಿನಗರ ಜಿಲ್ಲೆಯ ಕಲೋಲ್ ಮತ್ತು ಮನ್ಸಾದಲ್ಲಿ ಭಾನುವಾರ ನಡೆದ ಚುನಾವಣಾ ರ‌್ಯಾಲಿಯಲ್ಲಿ ಅಡ್ವಾಣಿ, `ಅಭಿವೃದ್ಧಿ ಮತ್ತು ಆಡಳಿತದ ವಿಷಯದಲ್ಲಿ ಮೋದಿ ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಮಾದರಿ' ಎಂದು ಹಾಡಿ ಹೊಗಳಿದ್ದಾರೆ. ಇಷ್ಟಕ್ಕೆ ನಿಲ್ಲದ ಅವರು ಇತರ ರಾಜ್ಯಗಳ ಮುಖ್ಯಮಂತ್ರಿಗಳು ಅವರನ್ನು ಅನುಸರಿಸುವಂತೆ ಕಿವಿಮಾತು ಹೇಳಿದ್ದಾರೆ.

ಬುಡಕಟ್ಟು ಜನಾಂಗ, ಮೀನುಗಾರರ ಕಲ್ಯಾಣಕ್ಕೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವ ಮೋದಿ, ಕಡು ಬಡವರ ಬಗ್ಗೆ ಹೇಗೆ ಕಾಳಜಿವಹಿಸಬೇಕು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಬೆನ್ನುತಟ್ಟಿದ್ದಾರೆ.

ಪ್ರಧಾನಿ ಹುದ್ದೆಗೆ ಮೋದಿ ಸೂಕ್ತ ಅಭ್ಯರ್ಥಿ ಎಂಬ ಸುಷ್ಮಾ ಹೇಳಿಕೆಗೆ ಲೇವಡಿ ಮಾಡಿದ್ದ ಕಾಂಗ್ರೆಸ್ ಪಕ್ಷದ ದಿಗ್ವಿಜಯ ಸಿಂಗ್, ಇದಕ್ಕೆ ಅಡ್ವಾಣಿ ಅವರ ಸಹಮತ ಇದೆಯೇ ಎಂಬುವುದನ್ನು ಮೊದಲು ಸುಷ್ಮಾ ಖಚಿತಪಡಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದರು. ಆ ಬೆನ್ನಲ್ಲೇ ಅಡ್ವಾಣಿ ಅವರ ಈ ಹೇಳಿಕೆ ಹೊರಬಿದ್ದಿದೆ.

ನಿತೀಶ್‌ಗೆ ಲಾಲೂ ಸವಾಲು

ಪಟ್ನಾ ವರದಿ: ಬಿಜೆಪಿ ಹಿರಿಯ ನಾಯಕರು ಮೋದಿ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುತ್ತಿದ್ದು ಈ ಕುರಿತು ನಿಲುವನ್ನು ಸ್ಪಷ್ಟಪಡಿಸುವಂತೆ ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲೂ ಪ್ರಸಾದ್ ಅವರು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಸವಾಲು ಹಾಕಿದ್ದಾರೆ.

ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಿದಲ್ಲಿ ಬಿಜೆಪಿ ಸಖ್ಯ ತೊರೆಯುವುದಾಗಿ ಕೆಲವು ದಿನಗಳ ಹಿಂದೆ ಬಹಿರಂಗ ಹೇಳಿಕೆ ನೀಡಿದ್ದ ನಿತೀಶ್‌ಕುಮಾರ್ ಅವರ ಮಾತುಗಳನ್ನು ಲಾಲೂ ಇದೇ ವೇಳೆ ನೆನಪಿಸಿದ್ದಾರೆ. ಒಂದು ವೇಳೆ ಬಿಜೆಪಿ ತನ್ನ ನಿಲುವನ್ನು ಬದಲಿಸದಿದ್ದರೆ ನಿತೀಶ್ ತಮ್ಮ ಮಾತನ್ನು ಉಳಿಸಿಕೊಳ್ಳುವರೆ ಎಂದು ಮಾದೇಪುರದಲ್ಲಿ ನಡೆದ ಪರಿವರ್ತನಾ ಯಾತ್ರೆಯ ವೇಳೆ ಪ್ರಶ್ನಿಸಿದ್ದಾರೆ.

`ಮೋದಿ ಪ್ರಧಾನಿ ಅಭ್ಯರ್ಥಿಯಾದರೆ ನೀವು ಏನು ಮಾಡುತ್ತೀರಿ ಎಂಬುವುದನ್ನು ಜನರಿಗೆ ಮೊದಲು ಸ್ಪಷ್ಟಪಡಿಸಿ' ಎಂದು ಅವರು ನಿತೀಶ್ ಅವರನ್ನು ಕೆಣಕ್ಕಿದ್ದಾರೆ. ನೂರಾರು ಮುಸ್ಲಿಮರ ನರಮೇಧ ನಡೆಸಿದ ಮೋದಿ ಒಬ್ಬ ಕೋಮುವಾದಿ ನಾಯಕ ಎಂದೂ ಅವರು ದೂಷಿಸಿದ್ದಾರೆ.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಜೆಡಿಯು ವಕ್ತಾರ ನೀರಜ್ ಕುಮಾರ್, ಬಿಜೆಪಿ ಇನ್ನೂ ಅಧಿಕೃತವಾಗಿ ಮೋದಿ ಅವರ ಹೆಸರನ್ನು ಪ್ರಧಾನಿ ಹುದ್ದೆಗೆ ಘೋಷಿಸಿಲ್ಲ. ವ್ಯಕ್ತಿಗತ ನೆಲೆಯಲ್ಲಿ ಬಿಜೆಪಿ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದು ಪಕ್ಷದ ಅಭಿಪ್ರಾಯವಾಗಲಾರದು ಎಂದು ತಿರುಗೇಟು ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry