ಮೋದಿ ಹ್ಯಾಟ್ರಿಕ್

7

ಮೋದಿ ಹ್ಯಾಟ್ರಿಕ್

Published:
Updated:

 


ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ನಿರೀಕ್ಷೆಯಂತೆ ಗೆಲುವಿನ ಹ್ಯಾಟ್ರಿಕ್ ಬಾರಿಸಿದ್ದಾರೆ. ಬಿಜೆಪಿಗೆ ಇದು ಸತತ ಐದನೆ ಗೆಲುವು. ಹತ್ತು ವರ್ಷಗಳ ಅವಧಿಯ ಆಡಳಿತ ವಿರೋಧಿ ಅಲೆ, ಪಕ್ಷ ತ್ಯಜಿಸಿ ಹೊಸ ಪಕ್ಷ ರಚಿಸುವ ಮೂಲಕ ಹಿರಿಯ ನಾಯಕ ಕೇಶುಭಾಯಿ ಪಟೇಲ್ ಘೋಷಿಸಿದ ಬಂಡಾಯ ಮತ್ತು ಸಂಘಪರಿವಾರದ ಅಂಗ ಸಂಸ್ಥೆಗಳ ಅಸಮಾಧಾನಕ್ಕೆ ಕೂಡಾ ಮೋದಿಯವರ ಗೆಲುವಿನ ಓಟವನ್ನು ತಡೆಯಲು ಸಾಧ್ಯವಾಗಿಲ್ಲ. ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೇಕಡಾ 15ರಷ್ಟಿರುವ ಪಟೇಲರು ತಿರುಗಿಬಿದ್ದಿರುವುದರಿಂದ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂಬ ಭವಿಷ್ಯವಾಣಿ ಸುಳ್ಳಾಗಿದೆ. ಗೆಲುವಿಗೆ ಕಾರಣಗಳು ಹಲವಾರು.ಮುಖ್ಯಮಂತ್ರಿಯಾಗಿ ನರೇಂದ್ರಮೋದಿಯವರ ರಾಜ್ಯಭಾರ ಬರ್ಬರವಾದ ಕೋಮುಗಲಭೆಯ ಮೂಲಕ ಪ್ರಾರಂಭವಾದರೂ ಬಹುಬೇಗ ಅವರು ರಾಜ್ಯದ ಅಭಿವೃದ್ದಿಯ ಕಡೆ ಗಮನಹರಿಸಿ ಜನಮನವನ್ನು ಗೆಲ್ಲಲು ಮಾಡುತ್ತಾ ಬಂದ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ. ಮೋದಿಯವರ ಅಭಿವೃದ್ದಿ ಮಾದರಿ ಬಗ್ಗೆ ವಿವಾದಗಳಿದ್ದರೂ ಒಂದು ವರ್ಗದ ಮುಖ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿರುವ ನಗರವಾಸಿ ಮತದಾರರು ಅದನ್ನು ಮೆಚ್ಚಿಕೊಂಡಿದ್ದಾರೆ.ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಸ್ವಜನಪಕ್ಷಪಾತ ಮುಕ್ತ ವೈಯಕ್ತಿಕ ಬದುಕು ಕೂಡಾ ಜನ ಅವರನ್ನು ಇಷ್ಟಪಡಲು ಕಾರಣ ಇರಬಹುದು. ಇದರ ಜತೆಗೆ ಮೋದಿಯವರು ಜಾಣತನದಿಂದ ನಡೆಸಿದ `ಸೋಷಿಯಲ್ ಎಂಜಿನಿಯರಿಂಗ್'ನ ಫಲವಾದ ಜಾತಿ ಧ್ರುವೀಕರಣ ಕೂಡಾ ನೆರವಾಗಿದೆ. ಮೇಲ್ನೋಟಕ್ಕೆ ಇದು ಬಿಜೆಪಿಯ ಗೆಲುವಿನಂತೆ ಕಂಡರೂ ವಾಸ್ತವವಾಗಿ ಇದು ನರೇಂದ್ರಮೋದಿ ಸ್ವಂತ ಸಾಧನೆ ಮತ್ತು ವರ್ಚಸ್ಸಿನಿಂದ ಸಂಪಾದಿಸಿದ ಗೆಲುವು ಎನ್ನುವುದರಲ್ಲಿ ಎರಡು ಮಾತಿಲ್ಲ.

 

ಸತತ ಮೂರನೆ ಗೆಲುವು ನರೇಂದ್ರಮೋದಿಯವರನ್ನು ನಿಸ್ಸಂಶಯವಾಗಿ ಬಿಜೆಪಿಯ ಮೊದಲ ಸಾಲಿನ ನಾಯಕರ ಜತೆ ಕೊಂಡೊಯ್ದು ನಿಲ್ಲಿಸಿದೆ. ಆದರೆ ರಾಷ್ಟ್ರನಾಯಕನಾಗಲು ಹೊರಟ ಅವರ ದಾರಿಯಲ್ಲಿ ಹಲವಾರು ತೊಡಕುಗಳಿವೆ. ತಮ್ಮ ನಿಯಂತ್ರಣ ತಪ್ಪಿ ಬೆಳೆಯಬಹುದೆಂಬ ಆತಂಕ ಸಂಘ ಪರಿವಾರದ ಹಿರಿಯರಿಗಿದ್ದರೆ, ತಮ್ಮನ್ನು ಮೂಲೆಗುಂಪು ಮಾಡಬಹುದೆಂಬ ಭೀತಿ ಬಿಜೆಪಿಯ ಹಿರಿಯ-ಕಿರಿಯ ನಾಯಕರಲ್ಲಿದೆ. ಜೆಡಿ (ಯು) ಸೇರಿದಂತೆ ಎನ್‌ಡಿಎನಲ್ಲಿರುವ ಬಹುತೇಕ ಮಿತ್ರಪಕ್ಷಗಳು ಕೂಡಾ ಮೋದಿ ನಾಯಕತ್ವವನ್ನು ಒಪ್ಪಿಕೊಳ್ಳುವುದು ಕಷ್ಟಮೋದಿ ಸಖ್ಯದಿಂದ ಮುಸ್ಲಿಮ್ ಮತಗಳನ್ನು ಕಳೆದುಕೊಳ್ಳಬಹುದೆಂಬ ಲೆಕ್ಕಾಚಾರ ಆ ಪಕ್ಷಗಳಲ್ಲಿದೆ. ಈ ಅಡೆತಡೆಗಳನ್ನೆಲ್ಲ ಮೀರಿ ನರೇಂದ್ರಮೋದಿ ದೆಹಲಿ ಸೇರಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕು.ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷದ ಸರಣಿಸೋಲು ಮುಂದುವರಿದಿದೆ. ಕಳೆದ ಇಪ್ಪತ್ತುವರ್ಷಗಳಿಂದ ವನವಾಸ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಕೂಡಾ ತಲೆ ಎತ್ತಲು ಸಾಧ್ಯವಾಗಿಲ್ಲ. ನರೇಂದ್ರಮೋದಿಯವರಂತಹ ಬಲಿಷ್ಠ ನಾಯಕತ್ವವನ್ನು, ಸ್ಥಳೀಯ ನಾಯಕತ್ವವನ್ನು ಬೆಳೆಸುವ ಮೂಲಕ ಮಾತ್ರ ಎದುರಿಸಲು ಸಾಧ್ಯ ಎಂಬ ಸತ್ಯದ ಅರಿವು ಆ ಪಕ್ಷಕ್ಕೆ ಇನ್ನೂ ಆಗಿಲ್ಲ.ರಾಹುಲ್‌ಗಾಂಧಿ ಮ್ಯಾಜಿಕ್ ಬಿಹಾರ, ಉತ್ತರಪ್ರದೇಶಗಳಂತೆ ಇಲ್ಲಿಯೂ ನಡೆಯದಿರುವುದು ಯುವನಾಯಕನ ಸಾಮರ್ಥ್ಯವನ್ನೇ ಸಂಶಯದಿಂದ ನೋಡುವಂತೆ ಮಾಡಿದೆ. ಸೋಲುಗಳಿಂದ ಬಳಲಿರುವ ಕಾಂಗ್ರೆಸ್ ಪಕ್ಷಕ್ಕೆ ಹಿಮಾಚಲಪ್ರದೇಶದ ಗೆಲುವು ಒಂದಿಷ್ಟು ಹುಮ್ಮಸ್ಸನ್ನು ತಂದುಕೊಟ್ಟಿರಬಹುದು. ಆದರೆ ನರೇಂದ್ರ ಮೋದಿಯವರ ಗೆಲುವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಎದುರಿಸುವುದು ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವನ್ನಾಗಿ ಮಾಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry