ಮೋಸಂಬಿ: ಲಾಭ ಭರ್ಜರಿ

7

ಮೋಸಂಬಿ: ಲಾಭ ಭರ್ಜರಿ

Published:
Updated:
ಮೋಸಂಬಿ: ಲಾಭ ಭರ್ಜರಿ

ಆದಾಯಕ್ಕಿಂತ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ನಮ್ಮ ರೈತರು ಕೃಷಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವುದು ಸಹಜವೇ. ಆದರೆ ಅಂತಹ ವೆಚ್ಚ ಕಡಿಮೆ ಮಾಡಿ ಹೆಚ್ಚಿನ ಇಳುವರಿ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಮಾರ್ಗದಲ್ಲಿ ಸಾವಯವ ಕೃಷಿಯೂ ಒಂದು.

ಇಂತಹ ಸಾವಯವ ಕೃಷಿಯ ಮೂಲಕ ಜಿಲ್ಲೆಯ ಕಂದಕೂರಿನ ರೈತ ತಿಮ್ಮಾರೆಡ್ಡಿ ಚೆನ್ನನಾಗಿರೆಡ್ಡಿ ಮೋಸಂಬಿ ಮತ್ತು ಮಾವು ಬೆಳೆದು ಮಾದರಿಯಾಗಿದ್ದಾರೆ.ಸಾವಯವ ಕೃಷಿಯಲ್ಲಿ ಅವರ 15 ಎಕರೆ ಹೊಲದಲ್ಲಿ ಬೆಳೆದಿರುವ ಮೋಸಂಬಿ ಮತ್ತು ಮಾವು ಫಸಲು ಗಿಡಗಳನ್ನೇ ಬಾಗಿಸುವಷ್ಟು ಭರ್ಜರಿಯಾಗಿದೆ. ದುಬಾರಿ ದರದ ರಸಗೊಬ್ಬರ, ಔಷಧಿಗಳನ್ನು ಬಳಸಿ ಬೆಳೆದರೂ ಇಷ್ಟೊಂದು ಆರೋಗ್ಯಪೂರ್ಣ ಮತ್ತು ಸಮೃದ್ಧ ಫಸಲು ದೊರೆಯಲಾರದು ಎಂಬಂತಿದೆ ಈ ಹೊಲದಲ್ಲಿ ಬೆಳೆದ ಮಾವು ಮತ್ತು ಮೋಸಂಬಿ ಪೈರು.ತಿಮ್ಮಾರೆಡ್ಡಿ ಈ ಪೈರಿಗೆ ಯಾವುದೇ ರಸಗೊಬ್ಬರ ಮತ್ತು ಕೀಟನಾಶಕ ಬಳಸಿಲ್ಲ. ಅದರ ಬದಲು ಸಾವಯವ ಗೊಬ್ಬರ ಬಳಸಿದ್ದಾರೆ. ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಬೇವಿನ ಗೊಬ್ಬರಗಳನ್ನು ಉಪಯೋಗಿಸುತ್ತಿದ್ದಾರೆ.

ಮಾಧ್ವಾರ ಗ್ರಾಮದ ಬಳಿಯ ಅವರ ಹೊಲದಲ್ಲಿ 10 ಎಕರೆಯಲ್ಲಿ ಮೋಸಂಬಿ ಮತ್ತು 5 ಎಕರೆಯಲ್ಲಿ ಮಾವು ಬೆಳೆದಿದ್ದಾರೆ. ಈಗ್ಗೆ ಐದು ವರ್ಷಗಳ ಹಿಂದೆ ಬೆಳೆಯಲಾದ ಈ ಗಿಡಗಳು ಈಗ ಭರ್ಜರಿಯಾಗಿ ಕಾಯಿ ಬಿಟ್ಟಿವೆ.ಈ ತನಕ 10 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಸರ್ಕಾರದ ಸಹಾಯ ಧನದ `ಹನಿ ನೀರಾವರಿ' ಇದೆ. ಎರೆಹುಳು ಗೊಬ್ಬರವನ್ನು ಅವರು ಇನ್ನೂ ತಯಾರಿಸಲು ಆರಂಭಿಸಿಲ್ಲವಾದ್ದರಿಂದ ಬೇರೆಡೆಯಿಂದ ಅದನ್ನು ತರಿಸಿಕೊಳ್ಳುತ್ತಿದ್ದಾರೆ. ಇಲ್ಲಿಯೇ ಎರೆಹುಳು ಗೊಬ್ಬರ ತಯಾರಿಸಲು ಹೊಲದಲ್ಲಿ ಗುಂಡಿ ತೆಗೆಸಿದ್ದಾರೆ.

ತಮ್ಮ ಸಾವಯವ ಕೃಷಿಯ ಸಾಧನೆಯ ಹಾದಿಯನ್ನು ಖುಷಿಯಿಂದಲೇ ವಿವರಿಸಿದ ತಿಮ್ಮಾರೆಡ್ಡಿ, 10 ಎಕರೆಯಲ್ಲಿ 1500 ಮೋಸಂಬಿ ಗಿಡಗಳಿದ್ದು, ಪ್ರತಿಯೊಂದು ಗಿಡಗಳೂ 30-40 ದೊಡ್ಡದೊಡ್ಡ ಕಾಯಿ ಬಿಟ್ಟಿವೆ. ಈಗಿನ ದರದಲ್ಲಿ ಈ ಗಿಡಗಳಲ್ಲಿರುವ ಕಾಯಿಗಳನ್ನು ಮಾರಿದರೆ 3 ಲಕ್ಷ ರೂ. ಆದಾಯ ಬರಲಿದೆ ಎನ್ನುತ್ತಾರೆ.ಇದೇ ದರ ಮುಂದುವರೆದರೆ ವರ್ಷಕ್ಕೆ 6-7 ಲಕ್ಷ ರೂ. ಆದಾಯವಿದೆ. ಇದುವರೆಗೆ ಮಾಡಿದ ವೆಚ್ಚ ಎರಡು ವರ್ಷಗಳಲ್ಲಿ ಹಿಂದಿರುಗುತ್ತದೆ. ಮುಂದೆ ಅಂತಹ ಹೇಳಿಕೊಳ್ಳುವಂತಹ ವೆಚ್ಚ ಮಾಡಬೇಕಿಲ್ಲವಾದ್ದರಿಂದ ಬರುವುದೆಲ್ಲ ಆದಾಯವೇ.ವರ್ಷಕ್ಕೆ ಎರಡು ಬೆಳೆ. ಈ ಗಿಡಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿ ಆರೋಗ್ಯವಾಗಿರುವಂತೆ ನೋಡಿಕೊಂಡರೆ ಕನಿಷ್ಠ 20 ವರ್ಷ ಬೆಳೆ ನೀಡುತ್ತವೆ. ಈಗ ನಾಲ್ಕು ವರ್ಷ ಬಂಡವಾಳ ತೊಡಗಿಸಿ ಆರೈಕೆ ಮಾಡಿದ್ದಾಯಿತು. ಇನ್ನು ಫಲ ನೀಡಲಾರಂಭಿಸಿವೆ.ಗೊಬ್ಬರ ಕೊಡುತ್ತಾ ಮೇಲುಸ್ತುವಾರಿ ನೋಡಿಕೊಳ್ಳುತ್ತಿರಬೇಕು. ಇನ್ನು ಮುಂದೆ ಅಂತಹ ಹೆಚ್ಚಿನ ವೆಚ್ಚವೇನೂ ಬರುವುದಿಲ್ಲ ಎಂದರು. ಹೈದರಾಬಾದ್‌ನಲ್ಲಿ ಮಾರುಕಟ್ಟೆ ಇರುವುದರಿಂದ ಅಲ್ಲಿಗೇ ಹೋಗಿ ಮಾರಾಟ ಮಾಡಬಹದು. ವ್ಯಾಪಾರಿಗಳೇ ಇಲ್ಲಿಗೆ ಬಂದು ಗುತ್ತಿಗೆ ತೆಗೆದುಕೊಳ್ಳುತ್ತಾರೆ. ಒಂದು ಟನ್‌ಗೆ 30ರಿಂದ 40 ಸಾವಿರ ತನಕ ದರವಿದೆ.ಬೀಜೋಪಚಾರಸಾವಯವ ಕೃಷಿಯಲ್ಲಿ ಪ್ರಪ್ರಥಮವಾಗಿ ಬೀಜೋಪಚಾರ ಅತ್ಯಂತ ಮುಖ್ಯವಾದ ಕೆಲಸ. ಅತ್ಯಂತ ಕಟ್ಟುನಿಟ್ಟಾಗಿ ಬೀಜಾಮೃತ ಮಾಡುವುದರಿಂದ ಆ ಬೀಜದಿಂದ ಬರುವ ಫಸಲಿಗೆ ಯಾವುದೇ ರೀತಿಯ ರೋಗ ಬರುವುದಿಲ್ಲ ಎನ್ನುತ್ತಾರೆ ತಿಮ್ಮಾರೆಡ್ಡಿ.ಸಾವಯವ ಕೃಷಿ ಬೆಳೆಯಿಂದ ಭೂಮಿ ತಂಪಾಗಿರುತ್ತದೆ. ಸಾವಯವ ಕೃಷಿಯ ಉತ್ಪನ್ನಗಳಿಂದ ಮನುಷ್ಯರಿಗೆ ಯಾವುದೇ ರೋಗ ಬರುವುದಿಲ್ಲ. ಭೂಮಿಯೂ ಮೃದುವಾಗುತ್ತದೆ ಎನ್ನುತ್ತಾರೆ ಇನ್ನೊಬ್ಬ ಸಾವಯವ ಕೃಷಿಕ ಚಿನ್ನಾಕಾರದ ಗುಂಜಾಳಪ್ಪ ನಾಯಕ.ಅವರಿಗೆ ಸಾವಯವ ಕೃಷಿಯಲ್ಲಿ ಒಣ ಭೂಮಿಯಲ್ಲೇ ಹೆಸರು, ಉದ್ದು, ತೊಗರಿ, ಹುಣಸೆ, ಮಾವು, ಸುಬಾಬುಲ್ ಬೆಳೆದ ಅನುಭವಿದೆ. ಉತ್ಪಾದನಾ ವೆಚ್ಚ ಹೆಚ್ಚಾದ್ದರಿಂದ ಆದಾಯ ಕಡಿಮೆಯಾಗಿ ಈ ಭಾಗದ ಜನರ ಹತ್ತಾರು ಕೂರಿಗೆ ಹೊಲವಿದ್ದರೂ ಇನ್ನೊಬ್ಬರಲ್ಲಿ ಕೆಲಸ ಮಾಡಿ ಹೊಟ್ಟೆ ಹೊರೆಯಲು ವಲಸೆ ಹೋಗುತ್ತಿದ್ದಾರೆ. ಪ್ರತಿಯೊಬ್ಬ ಕೃಷಿಕರೂ ಸಾವಯವ ಕೃಷಿಯತ್ತ ಒಲವು ತೋರಿದರೆ ಕೃಷಿ ಬಹಳ ಲಾಭದಾಯಕ ಕಸುಬು ಆಗಲಿದೆ. ಹೆಚ್ಚಿನ ವಿವರಗಳಿಗೆ ಕಂದಕೂರಿನ ತಿಮ್ಮಾರೆಡ್ಡಿ 9741970206 ಮತ್ತು ಚಿನ್ನಾಕಾರದ ಗುಂಜಾಳಪ್ಪ ನಾಯಕ 9972437345 ಅವರನ್ನು ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry